ಹೊಸನಗರ ತಾಲೂಕಿನ ಪುಣಜೆ ಗ್ರಾಮದ ಬ್ರಹ್ಮೇಶ್ವರದಲ್ಲಿ ಕೆಲ ದಿನಗಳಿಂದ ಚಿರತೆ ಸಂಚರಿಸುತ್ತಿದ್ದು ಗ್ರಾಮದ ಜಾನುವಾರುಗಳು ಚಿರತೆ ದಾಳಿಗೆ ಬಲಿಯಾಗಿವೆ.
ಇಲ್ಲಿನ ಅಂಬೇಡ್ಕರ್ ಕಾಲೋನಿ ಸಮೀಪದ ಅರಣ್ಯ ಪ್ರದೇಶದಲ್ಲಿ 4 ದನಗಳ ಶವದ ಅವಶೇಷಗಳು ದೊರಕಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆಯ ಹೆಜ್ಜೆ ಗುರುತುಗಳನ್ನು ಗ್ರಾಮಸ್ಥರು ಪತ್ತೆ ಮಾಡಿರುವುದು, ಈ ಭಾಗದಲ್ಲಿ ಚಿರತೆಯ ಇರುವಿಕೆಯನ್ನು ದೃಢಪಡಿಸಿದೆ. ಕೆಲ ದಿನಗಳಿಂದ ಕಾಡಿಗೆ ಮೇಯಲು ಬಿಟ್ಟ ಜಾನುವಾರುಗಳು ಮನೆಗೆ ಮರಳಿ ಬಂದಿರಲಿಲ್ಲ.
ಇದನ್ನೂ ಓದಿ: ಹೊಸನಗರ | ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
ಆದರೆ ಇತ್ತೀಚೆಗೆ ಅರಣ್ಯ ಪ್ರದೇಶದಲ್ಲಿ ಜಾನುವಾರುಗಳ ಕಳೇಬರಗಳು ಪತ್ತೆಯಾಗಿವೆ. ಜನನಿಬಿಡ ಪ್ರದೇಶವಾಗಿರುವ ಈ ಭಾಗದಲ್ಲಿ ದಟ್ಟ ಕಾಡಿಲ್ಲ. ನಾಗರಿಕ ಪ್ರದೇಶದಲ್ಲಿ ಚಿರತೆ ದಾಳಿ ನಡೆಸಿದ ಹಲವು ಘಟನೆಗಳು ರಾಜ್ಯದಲ್ಲಿ ಆಗಾಗ್ಗೆ ಕೇಳಿ ಬರುತ್ತಿವೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಪತ್ತೆ ಮಾಡಿ ಅಭಯಾರಣ್ಯಕ್ಕೆ ಸಾಗಿಸಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.