ಇಂದು ಮಹಿಳೆ ಅಬಲೆಯಲ್ಲ. ಒಬ್ಬ ಮಹಿಳೆ ಮಾಡುವ ಕೆಲಸ ನೂರು ಗಂಡಸರ ಕೆಲಸಕ್ಕೆ ಸಮಾನಾಗಿರುತ್ತದೆ. ಮಹಿಳೆಯು ಮಾನಸಿಕ ಒತ್ತಡಗಳನ್ನು ಮೀರಿ ತನ್ನ ಜವಬ್ದಾರಿಗಳನ್ನು ನಿರ್ವಹಿಸುತ್ತಾಳೆ ಎಂದು ಎಐಎಮ್‌ಎಸ್‌ಎಸ್‌ನ ರಾಜ್ಯ ಕಾರ್ಯದರ್ಶಿ ಶೋಭಾ ಎಸ್ ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ತಾಪಂ ಆವರಣದಲ್ಲಿರುವ ಕೃಷಿ ವಿಸ್ತರಣಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೊಪ್ಪಳ ಜಿಲ್ಲಾ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಸತ್ಯ ಹೇಳುವವರು ಕಡಿಮೆ ಜನ ಇರುತ್ತಾರೆ. ಆದರೆ, ಸಮಾಜ ಬೇಗ ಅದನ್ನು ಒಪ್ಪಿಕೊಳ್ಳಲ್ಳ. ಒಂದು ಕಾಲದಲ್ಲಿ ಭೂಮಿಯೇ ಕೇಂದ್ರ ಅದರ ಸುತ್ತ ಎಲ್ಲಾ ಗ್ರಹಗಳು ಸುತ್ತತ್ತವೆ ಅಂತಿದ್ರು.. ಈಗ ಅದರ ಸತ್ಯ ಗೊತ್ತಾದ ಮೇಲೆ ಸೂರ್ಯ ಕೇಂದ್ರ, ಭೂಮಿ ಮೂರನೇ ಗ್ರಹವಾಗಿ ಅದರ ಸುತ್ತ ಎಲ್ಲಾ ಗ್ರಹಗಳು ಸುತ್ತುತ್ತವೆ ಎಂಬ ಸತ್ಯ ಅರಿವಾಗಿದೆ. ಅದೇ ರೀತಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ ಎಸ್) ಪ್ರತಿ ಹಳ್ಳಿಗೂ ಭೇಟಿ ನೀಡಿ ಮಹಿಳೆಯರಲ್ಲಿ ಸತ್ಯದ ತಿಳಿವು ಹಾಗೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ” ಎಂದರು.

ಎಐಎಮ್‌ಎಸ್‌ಎಸ್‌ನ ರಾಜ್ಯ ಸೆಕ್ರೆಟರಿಯಟ್ ಸದಸ್ಯೆ ವಿಜಯಲಕ್ಷ್ಮಿ ಮಾತನಾಡಿ, “ಸಾವಿತ್ರಿ ಬಾಯಿ ಫುಲೆ ಅಂತ ಒಬ್ಬ ಮಹಿಳೆ ಸಮಾಜದ ಮಹಿಳಾ ವರ್ಗವನ್ನು ಜಾಗೃತಗೊಳಿಸಲು ಗಂಡ ಜ್ಯೋತಿಬಾ ಅವರಿಂದ ಸ್ವತಃ ಅಕ್ಷರ ಕಲಿತು ವಿಶೇಷವಾಗಿ ಹೆಣ್ಮಕ್ಕಳಿಗೆ ಓದು-ಬರಹ ಕಲಿಸಿದರು. ಆಗ ಸಾವಿತ್ರಿ ಬಾಯಿ ಪ್ರತಿ ಮನೆಗೆ ಹೋಗಿ ‘ನಿಮ್ಮ ಮನೆಯ ಹೆಣ್ಮಕ್ಕಳನ್ನು ಶಾಲೆಗೆ ಕಳಿಸಿ’ ಎಂದು ಮನೆಮನೆಗೆ ಕೇಳಲು ಹೋದಾಗ ಆವತ್ತು ಅವರಿಗೆ ಆದ ಅವಮಾನ, ನಿಂದನೆ, ನೋವು ಇವತ್ತು ಯಾರೂ ಅನುಭವಿಸಿಲ್ಲ. ಮಕ್ಕಳಿಗೆ ಪಾಠ ಹೇಳಲು ಹೋಗುವಾಗ ಅವರ ಮೈ ಮೇಲೆ ಗಂಜಲು ಎಸೆಯುತ್ತಿದ್ದರು, ಮೈಮೇಲೆ ಎಂಜಲು ಉಗುಳುತ್ತಿದ್ದರು. ಹೀಗೆ ಮಹಿಳೆಯರು ಎಚ್ಚೆತ್ತುಕೊಂಡಾಗಲೆಲ್ಲ ವೈಯಕ್ತಿಕ ನಿಂದನೆ, ಟೀಕೆ, ಅವಮಾನಗಳು ಆಗುತ್ತವೆ. ಆದರೆ, ನಾವು ಮಹಿಳೆಯರು ಜಾಗೃತರಾಗಬೇಕು ಎಚ್ಚೆತ್ತುಕೊಳ್ಳಬೇಕು” ಎಂದು ತಿಳಿಸಿದರು.
ಕೊಪ್ಪಳ ಜಿಲ್ಲಾ ಹೊಸ ಸಂಘಟನಾ ಸಮಿತಿ ರಚನೆಯಾಯಿತು. ಸಮಿತಿಯ ಅಧ್ಯಕ್ಷರಾಗಿ ಮಂಜುಳಾ ಮಜ್ಜಿಗಿ, ಕಾರ್ಯದರ್ಶಿಯಾಗಿ ಶಾರದಾ ಗಡ್ಡಿ, ಜಂಟಿ ಕಾರ್ಯದರ್ಶಿಯಾಗಿ ಹುಸೇನಬೀ, ಕಾರ್ಯಕಾರಿ ಸಮಿತಿಗೆ 10 ಜನ ಸದಸ್ಯರು ಹಾಗೂ ಕೌನ್ಸಿಲ್ ಸಮಿತಿಗೆ 6 ಜನ ಸದಸ್ಯರು ಸೇರಿದಂತೆ ಒಟ್ಟು 19 ಜನರ ಹೊಸ ಸಮಿತಿ ರಚನೆಯಾಯಿತು.
ಇದನ್ನೂ ಓದಿ: ಕೊಪ್ಪಳ | ಕರ್ತವ್ಯ ಲೋಪ ಆರೋಪ : ಆನೆಗೊಂದಿ ಗ್ರಾ.ಪಂ. ಪಿಡಿಒ ಅಮಾನತು
ಸಮಾವೇಶದಲ್ಲಿ ಎಐಎಮ್‌ಎಸ್‌ಎಸ್ ನ ಜಿಲ್ಲಾ ಸಂಘಟಕಿ ಮಂಜುಳಾ ಮಜ್ಜಿಗಿ ಸೇರಿದಂತೆ ವಿವಿಧ ಬಡಾವಣೆ, ಹಳ್ಳಿಯ ಮಹಿಳೆಯರು, ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಇತರರು ಭಾಗವಹಿಸಿದ್ದರು.