ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಬುಧವಾರ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಭೇಟಿಯಾಗಿ ಕೇಂದ್ರದ ನೀತಿಯಿಂದ ಬಡವರ ಆಹಾರಕ್ಕೆ ಸಮಸ್ಯೆ ಆಗಿರುವ ಸಂಗತಿಯನ್ನು ಚರ್ಚಿಸಿದರು.
ಸೌಹಾರ್ದ ಭೇಟಿಯ ವೇಳೆ, “ಕೇಂದ್ರದ ಇತ್ತೀಚಿನ ನೀತಿ ಆಹಾರ ಭದ್ರತಾ ಕಾಯ್ದೆಗೆ ವಿರುದ್ಧವಾಗಿದೆ. ಇದು ನೇರವಾಗಿ ಬಡವರ ಎರಡು ಹೊತ್ತಿನ ಊಟಕ್ಕೂ ತೊಂದರೆ ಕೊಡುತ್ತದೆ. ಆದ್ದರಿಂದ ರಾಜ್ಯಗಳಿಗೆ ಆಹಾರ ಧಾನ್ಯಗಳನ್ನು ಕೊಡದಿರುವ ಧೋರಣೆ ಬದಲಾದರೆ ಒಳ್ಳೆಯದು” ಎಂಬ ಅಭಿಪ್ರಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಗುರುವಾರ ಬೆಳಗ್ಗೆ ಕೇಂದ್ರ ಆಹಾರ ಸಚಿವ ಪಿಯೂಶ್ ಗೋಯಲ್ ಅವರ ಜತೆ ಚರ್ಚಿಸುವುದಾಗಿ ಅಮಿತ್ ಶಾ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಭರವಸೆ ನೀಡಿದ್ದಾರೆ.
ಚುನಾವಣೆಗೂ ಮೊದಲು ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳಿಗೆ ಯೋಜನೆಯ ರೂಪ ನೀಡಿ ಜಾರಿಗೊಳಿಸಲು ಮುಂದಾಗಿದೆ. ಈಗಾಗಲೇ ಜಾರಿಯಾಗಿರುವ ಶಕ್ತಿ ಯೋಜನೆಗೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಅನ್ನಭಾಗ್ಯ ಯೋಜನೆ ಅಡಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರ ಕುಟುಂಬದ ವ್ಯಕ್ತಿಗೆ ತಲಾ ಹತ್ತು ಕೆ.ಜಿ ಉಚಿತ ಅಕ್ಕಿ ನೀಡುವ ಯೋಜನೆ ಜಾರಿ ಮಾತ್ರ ವಿಳಂಬವಾಗಿದೆ.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅಕ್ಕಿ ನೀಡಲು ನಿರಾಕರಿಸಿದ್ದರಿಂದ ಅನ್ನ ಭಾಗ್ಯ ಯೋಜನೆ ಜಾರಿಗೆ ತೊಡಕಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರವಾಗಿ ಪ್ರಧಾನಿ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಲು ಮುಂದಾಗಿದ್ದರು. ಆದರೆ, ಪ್ರಧಾನಿ ನೇಂದ್ರ ಮೋದಿ ಅವರು ಅಮೆರಿಕ ಪ್ರವಾಸದಲ್ಲಿ ಇರುವ ಕಾರಣ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರನ್ನು ಭೇಟಿ ಮಾಡಿ, ಕೇಂದ್ರದ ನೀತಿಯಿಂದ ಬಡವರ ಊಟಕ್ಕೆ ತೊಂದರೆ ಆಗುತ್ತಿರುವ ಬಗ್ಗೆ ಮನವರಿಕೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪೊಳ್ಳು ಭರವಸೆ ಕೊಟ್ಟು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದೆಷ್ಟು ಸರಿ: ಎಚ್‌ಡಿಕೆ