ಕರಾವಳಿಯಲ್ಲಿ ಮೀನಿಗೂ ತಟ್ಟಿದ ‘ಬರಗಾಲ’: ಉದ್ಯಮಿಗಳ ಸಹಿತ ಸಂಕಷ್ಟದಲ್ಲಿ ಲಕ್ಷಾಂತರ ಕುಟುಂಬ

Date:

Advertisements

“ಸಾಮಾನ್ಯವಾಗಿ ಮಧ್ಯಾಹ್ನದವರೆಗೆ ಚಟುವಟಿಕೆಯಿಂದ ಕೂಡಿರುತ್ತಿದ್ದ ನಮ್ಮ ಬಂದರಿನಲ್ಲಿ ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಸ್ಟಾಕ್ ಖಾಲಿಯಾಗುತ್ತಿದೆ. ಕಡಿಮೆ ಮೀನು ಹಿಡಿಯುತ್ತಿರುವುದರಿಂದ, ಬೇಡಿಕೆ ಹೆಚ್ಚಾಗಿದೆ ಮತ್ತು ಬರುವ ಸ್ವಲ್ಪ ಮೀನು ಕೆಲವೇ ನಿಮಿಷಗಳಲ್ಲಿ ಮಾರಾಟವಾಗುತ್ತಿದೆ, ನಮಗೆ ಕೈ ತುಂಬಾ ಸಿಗುತ್ತಿದ್ದ ಕೂಲಿ ಕೂಡ ಈಗ ಕಡಿಮೆಯಾಗಿದೆ”…

ಹೀಗಂತ ಈದಿನ ಡಾಟ್ ಕಾಮ್ ಜೊತೆಗೆ ನೋವು ತೋಡಿಕೊಂಡದ್ದು ಮಂಗಳೂರು ಬಂದರು ಪ್ರದೇಶದಲ್ಲಿ ಮೀನು ಕೂಲಿ ಕಾರ್ಮಿಕನಾಗಿ ದುಡಿಯುತ್ತಿರುವ ಉಳ್ಳಾಲದ ನಿವಾಸಿ ಮೊಹಮ್ಮದ್ ಸಿರಾಜ್.

ಹೌದು. ಇದು ಕೇವಲ ಒಬ್ಬನ ನೋವಲ್ಲ. ಕರಾವಳಿಯಲ್ಲಿ ಮೀನಿನ ಕ್ಷಾಮ ಉಂಟಾಗಿದ್ದು, ಉದ್ಯಮಿಗಳ ಸಹಿತ ಸಂಕಷ್ಟದಲ್ಲಿ ಲಕ್ಷಾಂತರ ಕುಟುಂಬ ಇಂದು ಸಂಕಷ್ಟಕ್ಕೆ ಸಿಲುಕಿದೆ.  

Advertisements

ಸಾಮಾನ್ಯವಾಗಿ ಜನರಿಗೆ ‘ಬರಗಾಲ’ ಎಂದ ತಕ್ಷಣ ನೆನಪಾಗುವುದು ಕೃಷಿ ಕ್ಷೇತ್ರ ಮಾತ್ರ. ಅದಕ್ಕೂ ಹೊರತಾಗಿಯೂ ಬರಗಾಲ ಈಗ ಬಂದಿದೆ. ಈ ಬಾರಿ ಮಾತ್ರ ‘ಮೀನುಗಾರಿಕೆ ಕ್ಷೇತ್ರ’.

ರಾಜ್ಯದಲ್ಲಿ ಕಳೆದ ವರ್ಷ ಭೀಕರ ಬರಗಾಲ ಎದುರಾದ ಬೆನ್ನಲ್ಲೇ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕಡಲಿನಲ್ಲಿಯೂ ಕಳೆದ ಕೆಲವು ವರ್ಷಗಳಿಂದ ಮತ್ಸ್ಯಕ್ಕೆ ಬರ ಎದುರಾಗಿದೆ. ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುತ್ತಿದ್ದ ಬಹುತೇಕ ಬೋಟ್​​ಗಳು ಮೀನಿಲ್ಲದೇ ಬರಿಗೈಯಲ್ಲಿ ಮರಳುತ್ತಿವೆ. ಇದರಿಂದ ಬೋಟ್​​ಗಳನ್ನು ಬಂದರು ಪ್ರದೇಶದಲ್ಲೇ ಲಂಗರು ಹಾಕತೊಡಗಿದೆ. ಕಡಿಮೆ ಮೀನು ದೊರೆಯುತ್ತಿರುವುದಿಂದ ಮಾರುಕಟ್ಟೆಯಲ್ಲಿ ಮೀನಿನ ದರದಲ್ಲೂ ವಿಪರೀತ ಏರಿಕೆ ಕಾಣುವಂತಾಗಿದೆ.

“ಇಂದು(ಮಾ.21) ಬಂದರಿನಲ್ಲಿ ಬಂಗುಡೆ ಮೀನಿನ ದೊಡ್ಡ ಸೈಝಿಗೆ ಕೆಜಿಗೆ 150ರಿಂದ 200ರಂತೆ ಮಾರಾಟವಾಗುತ್ತಿತ್ತು. ಈ ಹಿಂದೆ ಇದು ನೂರು ರೂಪಾಯಿಯ ಒಳಗೆ ಸಿಗುತ್ತಿತ್ತು. ಅಂಜಲ್ ಮೀನು ಈ ವರ್ಷ ಕೆಜಿಗೆ ಸುಮಾರು 800ಕ್ಕಿಂತಲೂ ಮೇಲೆ ಹೋಗಿದೆ. ಅದನ್ನು ಖರೀದಿಸುವುದಕ್ಕೆ ಜನರು ಹಿಂದೇಟು ಹಾಕುತ್ತಿದ್ದಾರೆ. ಮೀನನ್ನೆ ನಂಬಿರುವ ಮಾಲೀಕರು, ಸರಿಯಾಗಿ ಮೀನು ಸಿಗದ ಕಾರಣ ಕೂಲಿ ಕಾರ್ಮಿಕರಿಗೆ ನೀಡುತ್ತಿರುವ ಕೂಲಿಯ ದರ ಕೂಡ ಕಡಿಮೆಯಾಗಿದೆ” ಎಂದು ನೋವು ತೋಡಿಕೊಂಡಿದ್ದಾರೆ.

mangalore fish1

ಪ್ರಸಕ್ತ ಸಾಲಿನಲ್ಲಿ ಮೀನುಗಾರಿಕೆ ಸಮಯಕ್ಕೆ ಸರಿಯಾಗಿ ಆರಂಭವಾಗಿತ್ತು. ಮೀನು ಸಿಗುವ ನಿರೀಕ್ಷೆಯೂ ಇತ್ತು. ಆದರೆ ಮೀನುಗಾರಿಕಾ ಹಂಗಾಮು ಶುರುವಾಗಿ ಮೂರು ತಿಂಗಳು ಕಳೆದರೂ ಇಳುವರಿ ವಿರಳವಾಗಿದೆ. ಮೀನುಗಾರಿಕೆಗೆ ತೆರಳಿದ ಬೋಟ್‌ಗಳಿಗೆ ಲಾಭಕ್ಕಿಂತ ಖರ್ಚೇ ಹೆಚ್ಚಾಗತೊಡಗಿದೆ. ನಷ್ಟವನ್ನು ಸರಿದೂಗಿಸಿಕೊಳ್ಳಲು ಬೇರೆ ದಾರಿ ಕಾಣದ ಮೀನಿನ ಉದ್ಯಮಿಗಳು, ವ್ಯಾಪಾರಸ್ಥರು ಇದೇ ಕಾರಣಕ್ಕೆ ಮೀನುಗಾರಿಕೆಯನ್ನು ಬಂದ್ ಮಾಡಿದ್ದಾರೆ. ಇದರಿಂದಾಗಿ, ಉದ್ಯಮಿಗಳ ಸಹಿತ ಮೀನುಗಾರಿಕೆ ಕ್ಷೇತ್ರವನ್ನೇ ನಂಬಿಕೊಂಡಿರುವ ಲಕ್ಷಾಂತರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

ಕೆಲ ವರ್ಷಗಳ ಹಿಂದೆ ಉತ್ತಮ ಮೀನುಗಾರಿಕೆ ನಡೆಸಿದ್ದ ಪರ್ಶಿಯನ್ ಬೋಟ್‌ಗಳಿಗೂ ಕೂಡ ಇದೀಗ ಮೀನು ಸಿಗದಂತಾಗಿದೆ. ಇದರಿಂದ ಬಹುತೇಕರು ಬಂದರುಗಳಲ್ಲಿ ಮಾಲೀಕರು ತಮ್ಮ ಬೋಟುಗಳನ್ನು ಲಂಗರು ಹಾಕಿಸುತ್ತಿದ್ದಾರೆ.

WhatsApp Image 2025 03 21 at 11.14.44 AM
ಉಡುಪಿ ಜಿಲ್ಲೆಯ ಮಲ್ಪೆಯ ಬಂದರ್‌ನಲ್ಲಿ ಲಂಗರು ಹಾಕಿರುವ ಹಲವಾರು ಬೋಟ್‌ಗಳು

ಲಂಗರು ಹಾಕಿದ ಬೋಟ್ ರಿಪೇರಿ, ಮೀನಿನ ಬಲೆಗಳನ್ನು ಜೋಪಾನವಾಗಿ ನೋಡಿಕೊಳ್ಳುತ್ತಿದ್ದು, ಖಾಲಿ ಇರುವ ಕಾರ್ಮಿಕರಿಗೆ ಕೂಲಿ ಪಾವತಿ ಮಾಡುವುದಕ್ಕೂ ಮಾಲೀಕರು ಸಂಕಷ್ಟ ಎದುರಿಸುವಂತಾಗಿದೆ. ಇನ್ನು ಬಹುತೇಕ ಮೀನುಗಾರರು ಸಾಲ ಮಾಡಿಕೊಂಡಿದ್ದು, ಸಾಲ ಮರುಪಾವತಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಮಾರ್ಚ್ ಆರ್ಥಿಕ ವರ್ಷಾಂತ್ಯವಾಗಿರುವುದರಿಂದ ಬ್ಯಾಂಕ್‌ನ​​ನವರು ನಿತ್ಯವೂ ಕರೆ ಮಾಡಿ, ಸಾಲ ಮರುಪಾವತಿಗೆ ಒತ್ತಾಯಿಸುತ್ತಿದ್ದಾರೆ ಎಂದು ಕೆಲವು ಬೋಟ್‌ಗಳ ಮಾಲೀಕರು ನೋವು ತೋಡಿಕೊಳ್ಳುತ್ತಿದ್ದಾರೆ.

ಸರ್ಕಾರ ಮೀನುಗಾರಿಕೆಯ ಬಗ್ಗೆ ಗಮನ ಹರಿಸಬೇಕು. ಅಲ್ಲದೇ ಕೃಷಿ ಕ್ಷೇತ್ರವನ್ನು ಬರವೆಂದು ಘೋಷಣೆ ಮಾಡಿದಂತೆ ಮೀನುಗಾರಿಕಾ ಕ್ಷೇತ್ರದಲ್ಲಿಯೂ ಎದುರಾಗಿರುವ ಬರಕ್ಕೆ ಪರಿಹಾರವಾಗಿ ಮೀನುಗಾರರ ಸಾಲ ಮನ್ನಾ ಮಾಡಲು ಮುಂದಾಗಬೇಕು ಎಂದು ಮೀನುಗಾರರು ಆಗ್ರಹಿಸುತ್ತಿದ್ದಾರೆ.

ಮೀನಿನ ಕ್ಷಾಮಕ್ಕೆ ಕಾರಣಗಳೇನು?

ಕರ್ನಾಟಕದ ಕರಾವಳಿಯಲ್ಲಿ ಏರುತ್ತಿರುವ ತಾಪಮಾನವು ಮೀನುಗಾರಿಕೆ ಉದ್ಯಮದ ಮೇಲೆ ಗಮನಾರ್ಹವಾದ ಪರಿಣಾಮ ಬೀರಿದೆ. ಸುಮಾರು ಶೇ.80ರಷ್ಟು ಮೀನುಗಾರಿಕಾ ದೋಣಿಗಳು ತೀರದಲ್ಲಿಯೇ ಲಂಗರು ಹಾಕಿವೆ. ತೀವ್ರ ಬಿಸಿ ಹವಾಮಾನವು ಮೀನುಗಾರಿಕೆ ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸಿದೆ. ಮಂಗಳೂರು ಮತ್ತು ಇತರ ಕರಾವಳಿ ಪ್ರದೇಶಗಳು ಇತರ ರಾಜ್ಯಗಳಿಂದ ಮೀನು ಆಮದನ್ನು ಅವಲಂಬಿಸಬೇಕಾದಂತಹ ಪರಿಸ್ಥಿತಿ ಸದ್ಯ ಬಂದೊದಗಿದೆ.

WhatsApp Image 2025 03 21 at 11.05.13 AM
ಮಲ್ಪೆಯ ಬಂದರಿನಲ್ಲಿ ಸಿಗಡಿ ಮೀನು ಹಾಯುತ್ತಿರುವ ಕೂಲಿ ಕಾರ್ಮಿಕ ಮಹಿಳೆಯರು. (ಫೋಟೋ: ಶಾರೂಕ್ ತೀರ್ಥಹಳ್ಳಿ, ಈದಿನ ಡಾಟ್ ಕಾಮ್)

ಸಾಮಾನ್ಯವಾಗಿ ಮಾನ್ಸೂನ್ ವಿರಾಮದ ನಂತರ ಆಗಸ್ಟ್‌ನಲ್ಲಿ ಪುನರಾರಂಭವಾಗುವ ಮೀನುಗಾರಿಕೆ, ಡಿಸೆಂಬರ್ ಮತ್ತು ಜನವರಿಯಲ್ಲಿ ನಿಧಾನಗತಿಯನ್ನು ಕಾಣುತ್ತಿದೆ. ಮೀನುಗಾರಿಕೆ ಋತುವಿನ ಎರಡನೇ ಹಂತವು ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಪ್ರಾರಂಭವಾಗುತ್ತದೆ. ಇದು ಉದ್ಯಮಕ್ಕೆ ನಿರ್ಣಾಯಕ ಅವಧಿಯಾಗಿದೆ. ಆದಾಗ್ಯೂ, ಈ ವರ್ಷ, ಹೆಚ್ಚುತ್ತಿರುವ ತಾಪಮಾನದಿಂದಾಗಿ ಮೀನುಗಾರರು ಕಷ್ಟಪಡುತ್ತಿದ್ದಾರೆ. ಏಕೆಂದರೆ ನಿರೀಕ್ಷಿತ ಸಂಖ್ಯೆಯಲ್ಲಿ ಮೀನುಗಳು ಸಿಗುತ್ತಿಲ್ಲ. ಕೇವಲ 20% ದೋಣಿ ಮಾಲೀಕರು ಮಾತ್ರ ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಇದರಿಂದಾಗಿ ಬೇಡಿಕೆ ಹಾಗೂ ಪೂರೈಕೆಗೆ ಅಜಗಜಾಂತರ ವ್ಯತ್ಯಾಸ ಉಂಟಾಗುತ್ತಿದೆ ಎಂದು ಈದಿನ ಡಾಟ್ ಕಾಮ್ ಜತೆಗೆ ಮಾತನಾಡಿದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಿಂದೆಲ್ಲ ಆಳ ಸಮುದ್ರ ಮೀನುಗಾರಿಕೆಗೆ ಕನಿಷ್ಠ ನಾಲ್ಕು ತಿಂಗಳು ರಜೆ ಇರುತ್ತಿತ್ತು. ಮೀನುಗಳು ಸಂತಾನಾಭಿವೃದ್ಧಿ ನಡೆಸುವ ಮಳೆಗಾಲದಲ್ಲಂತೂ ಮೀನುಗಾರಿಕೆಗೆ ಆಡಳಿತ ಕೂಡ ಅನುಮತಿ ನೀಡುತ್ತಿರಲಿಲ್ಲ. ಈ ಸಂಪ್ರದಾಯ ಈಗ ಉಲ್ಲಂಘನೆಯಾಗಿದ್ದು, ರಜಾ ಅವಧಿ ಎರಡು ತಿಂಗಳಿಗೆ ಮೊಟಕುಗೊಂಡಿದೆ. ಲೈಟ್‌ ಫಿಶಿಂಗ್‌, ಬುಲ್‌ಟ್ರಾಲ್‌ ಕೂಡ ಮೀನಿನ ಉದ್ಯಮಕ್ಕೆ ಪೆಟ್ಟು ನೀಡುತ್ತಿದೆ. ಇದರಿಂದಾಗಿ ಮೀನುಗಳ ಸಂತಾನಾಭಿವೃದ್ಧಿಗೆ ಪೆಟ್ಟು ಬಿದ್ದಿದ್ದು, ಮತ್ಸ್ಯಕ್ಷಾಮಕ್ಕೆ ದಾರಿ ಮಾಡಿಕೊಟ್ಟಿದೆ ಎನ್ನುತ್ತಾರೆ ತಜ್ಞರು. ಈ ನಡುವೆ ಬಿಸಿ ಶಾಖ ಸೇರಿದಂತೆ ಹವಾಮಾನ ವೈಪರೀತ್ಯವೂ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮತ್ಸ್ಯ ಕ್ಷಾಮಕ್ಕೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಪಟ್ಟಿ ಮಾಡಿಕೊಂಡಿರುವ ಕಾರಣಗಳು ಹೀಗಿದೆ.

  1. ʼಎಲ್‌ನಿನೊʼ ಚಂಡಮಾರುತದ ಪರಿಣಾಮ ಹಾಗೂ ತಾಪಮಾನ ವ್ಯತ್ಯಾಸವೂ ಹೆಚ್ಚಿನ ಪ್ರಮಾಣದಲ್ಲಿ ಮೀನುಗಳು ವಲಸೆ ಹೋಗಲು ಕಾರಣವಾಗಿದೆ.
  2. ಅತಿಯಾದ ಮೀನುಗಾರಿಕೆ ಕೂಡ ಮೀನಿನ ಬರ ಉಂಟಾಗುವುದಕ್ಕೆ ಕಾರಣವೆಂದು ಗಮನಿಸಿದ್ದಾರೆ. ಆದಾಗ್ಯೂ, ಪ್ರತಿ ವರ್ಷ ನವೆಂಬರ್ ಅಂತ್ಯದಲ್ಲಿ ಮೀನು ಹಿಡಿಯುವಿಕೆ ಕಡಿಮೆಯಾಗುವುದು ಸಾಮಾನ್ಯ. ಆದರೆ ಈ ಬಾರಿ ಅದು ನವೆಂಬರ್ 2ನೇ ವಾರದಿಂದಲೇ ಪರಿಣಾಮ ಬೀರಿದೆ.

ಅಗ್ಗದಲ್ಲಿ ಸಿಗುತ್ತಿದ್ದ ‘ಬಂಗುಡೆ’ ಮೀನು ಕೂಡ ದುಬಾರಿ!

ಬಡವರ ಸಹಿತ ಹಲವರಿಗೆ ಕಡಿಮೆ ದರದಲ್ಲಿ ಕೈಗೆ ಸಿಗುತ್ತಿದ್ದ ಬಂಗುಡೆ(ಇಂಡಿಯನ್ ಮ್ಯಾಕೆರೆಲ್) ಮೀನು ಕೂಡ ಈಗ ದುಬಾರಿಯಾಗಿಬಿಟ್ಟಿದೆ. ಈ ಹಿಂದೆ ಮೀನುಗಾರರು ಬಹಳಷ್ಟು ಬಂಗುಡೆ ಮೀನುಗಳನ್ನು ಹಿಡಿದು ತಂದಿದ್ದರಿಂದ ಮಾರುಕಟ್ಟೆಯಲ್ಲಿ ಸಾಧಾರಣ ಬೆಲೆಗೆ ಮಾರಾಟವಾಗುತ್ತಿದ್ದವು. ಈಗ ಬಂಗುಡೆ ಮೀನಿನ ಪೂರೈಕೆ ಕಡಿಮೆಯಾಗುತ್ತಿರುವುದರಿಂದ ದೋಣಿ ಮಾಲೀಕರು ಕೂಡ ನಷ್ಟ ಎದುರಿಸುತ್ತಿದ್ದಾರೆ. ಜತೆಗೆ, ಮಾರುಕಟ್ಟೆಯಲ್ಲಿ ಬಂಗುಡೆ ಮೀನಿನ ದರವೂ ಹೆಚ್ಚಳವಾಗಿದೆ.

ಈ ಬಗ್ಗೆ ಈದಿನ ಡಾಟ್ ಕಾಮ್ ಜತೆಗೆ ಮಾತನಾಡಿದ ಮಂಗಳೂರು ಬಂದರು ಪ್ರದೇಶದಲ್ಲಿ ಮೀನು ಕೂಲಿ ಕಾರ್ಮಿಕನಾಗಿ ದುಡಿಯುತ್ತಿರುವ ಉಳ್ಳಾಲದ ನಿವಾಸಿ ಮೊಹಮ್ಮದ್ ಸಿರಾಜ್, “ಸಾಮಾನ್ಯವಾಗಿ ಮಧ್ಯಾಹ್ನದವರೆಗೆ ಚಟುವಟಿಕೆಯಿಂದ ಕೂಡಿರುತ್ತಿದ್ದ ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಬೆಳಿಗ್ಗೆ 9-10 ಗಂಟೆಯ ಹೊತ್ತಿಗೆ ಎಲ್ಲ ಮೀನಿನ ಸ್ಟಾಕ್ ಖಾಲಿಯಾಗುತ್ತಿದೆ. ಕಡಲಿನಲ್ಲಿ ಕಡಿಮೆ ಮೀನು ಸಿಗುತ್ತಿರುವುದರಿಂದ ಬೇಡಿಕೆ ಹೆಚ್ಚಾಗಿದೆ ಮತ್ತು ಬರುವ ಸ್ವಲ್ಪ ಮೀನು ಕೆಲವೇ ನಿಮಿಷಗಳಲ್ಲಿ ಮಾರಾಟವಾಗುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ.

malpe

“ಇಂದು(ಮಾ.21) ಬಂದರಿನಲ್ಲಿ ದೊಡ್ಡ ಗಾತ್ರದ ಬಂಗುಡೆ ಮೀನುಗಳು ಕೆಜಿಗೆ ₹150ರಿಂದ ₹200ರಂತೆ ಮಾರಾಟವಾಗುತ್ತಿತ್ತು. ಈ ಹಿಂದೆ ಇದು ನೂರು ರೂಪಾಯಿಯ ಒಳಗೆ ಸಿಗುತ್ತಿತ್ತು. ಅಂಜಲ್ ಮೀನು ಈ ವರ್ಷ ಕೆಜಿಗೆ ಸುಮಾರು ₹800ಕ್ಕಿಂತಲೂ ಮೇಲೆ ಹೋಗಿದೆ. ಅದನ್ನು ಖರೀದಿಸುವುದಕ್ಕೆ ಜನರು ಹಿಂದೇಟು ಹಾಕುತ್ತಿದ್ದಾರೆ. ಹೊಟೇಲ್ ಮಾಲೀಕರು ತಮ್ಮ ಉದ್ಯಮ ನಡೆಸಬೇಕಿರುವುದರಿಂದ ಖರೀದಿಸುತ್ತಿದ್ದಾರೆ. ಮೀನನ್ನೇ ನಂಬಿರುವ ಬೋಟ್‌ಗಳ ಮಾಲೀಕರು, ಸರಿಯಾಗಿ ಮೀನು ಸಿಗದ ಕಾರಣ ಕೂಲಿ ಕಾರ್ಮಿಕರಿಗೆ ನೀಡುತ್ತಿರುವ ಕೂಲಿಯ ದರ ಕೂಡ ಕಡಿಮೆ ಕೊಡುತ್ತಿದ್ದಾರೆ. ಇದರಿಂದ ನಮ್ಮ ಕುಟುಂಬವನ್ನು ಸಾಗಿಸುವುದೂ ಕೂಡ ಕಷ್ಟವಾಗುತ್ತಿದೆ” ಎಂದು ನೋವು ತೋಡಿಕೊಂಡಿದ್ದಾರೆ.

ಸದ್ಯ ಮೀನಿನ ಕೊರತೆಯಿಂದಾಗಿ ಮೀನಿನ ಬೆಲೆ ಏರಿಕೆಯಾಗಿದ್ದು, ಕರಾವಳಿಯ ವ್ಯಾಪಾರಿಗಳು ಒಡಿಶಾ, ಮುಂಬೈ, ಗೋವಾ, ರತ್ನಗಿರಿ, ವಿಶಾಖಪಟ್ಟಣಂ ಮತ್ತು ಕೇರಳದಿಂದ ಮೀನುಗಳನ್ನು ಆಮದು ಮಾಡಿಕೊಳ್ಳಲು ಮುಂದಾಗಿದ್ದಾರೆ. ಪ್ರಸ್ತುತ, ಪ್ರತಿಯೊಂದೂ 10 ಟನ್‌ಗಳಷ್ಟು ಮೀನುಗಳನ್ನು ಹೊತ್ತ ಸುಮಾರು 50 ಟ್ರಕ್‌ ಲೋಡ್‌ಗಳನ್ನು ಮಂಗಳೂರಿಗೆ ಸಾಗಿಸಲಾಗುತ್ತಿದೆ.

ice

ಮೀನುಗಾರಿಕೆಗೆ ಸೂಕ್ತವಾದ ಸಮುದ್ರ ತಾಪಮಾನವು 27°C ಮತ್ತು 32°C ನಡುವೆ ಇರುತ್ತದೆ. ಆದಾಗ್ಯೂ, ಪ್ರಸ್ತುತ ತಾಪಮಾನವು 35°C ಗಿಂತ ಹೆಚ್ಚಿದ್ದು, ಮೀನುಗಳಿಗೆ ಪರಿಸ್ಥಿತಿಗಳು ಪ್ರತಿಕೂಲವಾಗಿ ಪರಿಣಮಿಸಿವೆ. ಅತಿಯಾದ ಶಾಖವು ಮೀನುಗಳನ್ನು ಆಳವಾದ ನೀರಿನತ್ತ ತೆರಳುತ್ತಿವೆ. ಅಲ್ಲದೇ, ಬಂಡೆಗಳ ಮರೆಯಲ್ಲಿ ನೆರಳಿಗಾಗಿ ಆಶ್ರಯ ಪಡೆದುಕೊಂಡಿವೆ. ಇದರಿಂದಾಗಿ ಅವುಗಳನ್ನು ಹಿಡಿಯುವುದು ಕಷ್ಟಕರವಾಗುತ್ತಿದೆ ಎಂದು ಮಾಲೀಕರು ಹಾಗೂ ಆಳಸಮುದ್ರಕ್ಕೆ ತೆರಳಿದ್ದ ಮೀನುಗಾರರು ಮಾಹಿತಿ ನೀಡಿದ್ದಾರೆ. ಆಳ ಸಮುದ್ರದ ಟ್ರಾಲರ್‌ಗಳಲ್ಲಿ, ಹಿಂದೆ 12 ದಿನಗಳ ಕಾಲ ಇದ್ದ ಐಸ್ ಬ್ಲಾಕ್‌ಗಳು ಈಗ ಎಂಟು ದಿನಗಳಲ್ಲಿ ಕರಗುತ್ತಿವೆ. ಇದರಿಂದಾಗಿ ಬೇಗನೆ ದಡಕ್ಕೆ ಮರಳಬೇಕಾಗದಂತಹ ಪರಿಸ್ಥಿತಿ ಉಂಟಾಗುತ್ತಿದೆ.

ಮೀನುಗಾರಿಕಾ ಇಲಾಖೆ ನೀಡಿರುವ ಅಂಕಿ-ಅಂಶಗಳೇನು?

ಹಿಂದಿನ ವರ್ಷ ಜನವರಿಯಿಂದ ಕೊನೆಯ ಅವಧಿಯವರೆಗೆ ಬಹಳಷ್ಟು ಮೀನು ಇತ್ತು. ಈ ಸಲ ಜನವರಿಯಿಂದ ಬಹಳ ಮೀನು ಕಡಿಮೆ ಆಗಿದೆ. ಹಾಗಾಗಿ ಎರಡು ದಿನ ಮೂರು ದಿನದಲ್ಲಿ ಮೀನು ತುಂಬಿಕೊಂಡು ವಾಪಸ್​ ಬರುವ ಬೋಟ್​ಗಳು, ಈಗ ಹತ್ತು ದಿನವಾದರೂ 20ರಿಂದ 40 ಬಾಕ್ಸ್​ನಷ್ಟು ಮೀನು ತರಲು ಕಷ್ಟಪಡುತ್ತಿದ್ದಾರೆ.

ರಾಜ್ಯದ ಮೀನುಗಾರಿಕೆ ಇಲಾಖೆಯ ನಿರ್ದೇಶಕ ದಿನೇಶ್ ಕುಮಾರ್ ಕಳ್ಳೇರ ಅವರು ಈದಿನ ಡಾಟ್‌ ಕಾಮ್‌ಗೆ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಕಳೆದ ವರ್ಷಕ್ಕಿಂತ ಈ ವರ್ಷ ಫೆಬ್ರವರಿ ಅಂತ್ಯದವರೆಗೆ ರಾಜ್ಯದಲ್ಲಿ ಸಿಕ್ಕಿರುವ ಮೀನಿನಲ್ಲಿ ದುಪ್ಪಟ್ಟು ಕಡಿಮೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಭಾಗದಲ್ಲಿ 2023-24ರ ಅವಧಿಯ ಫೆಬ್ರವರಿಯಲ್ಲಿ 2,32,966 ಮೆಟ್ರಿಕ್ ಟನ್ ಕಡಲ ಮೀನು ಉತ್ಪಾದನೆಯಾಗಿದ್ದರೆ, ಈ ವರ್ಷ 1,64,905 ಮೆಟ್ರಿಕ್ ಉತ್ಪಾದನೆಯಾಗಿದೆ. ಕಳೆದ ವರ್ಷ ಹಾಗೂ ಈ ವರ್ಷಕ್ಕೆ 68,061 ವ್ಯತ್ಯಾಸ ಕಂಡುಬಂದಿದೆ. ಉಳಿದಂತೆ ಉಡುಪಿಯಲ್ಲಿ ಕಳೆದ ಫೆಬ್ರವರಿವರೆಗಿನ ಅವಧಿಯಲ್ಲಿ 3,50,648 ಇದ್ದ ಉತ್ಪಾದನೆ, ಈ ವರ್ಷ ಕೇವಲ 2,10,383 ಮೆಟ್ರಿಕ್ ಟನ್‌ಗಳಷ್ಟೇ ಉತ್ಪಾದನೆಯಾಗಿದ್ದು, ಬರೋಬ್ಬರಿ 1,40,265 ಮೆಟ್ರಿಕ್ ಟನ್ ವ್ಯತ್ಯಾಸ ಕಂಡುಬಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 2023-24 ಹಾಗೂ 2024-25ರ ಅವಧಿಯಲ್ಲೂ 5882 ಮೆಟ್ರಿಕ್ ಟನ್ ವ್ಯತ್ಯಾಸ ಉಂಟಾಗಿರುವುದಾಗಿ ಮೀನುಗಾರಿಕೆ ಇಲಾಖೆ ಮಾಹಿತಿ ನೀಡಿದೆ.

Marine Fish Production Report

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2023-24ರ ಫೆಬ್ರವರಿಯಲ್ಲಿ 8058 ಮೆಟ್ರಿಕ್ ಟನ್, ಮಾರ್ಚ್‌ನಲ್ಲಿ 6792 ಮೆಟ್ರಿಕ್ ಟನ್ ಕಡಲ ಮೀನು ಉತ್ಪನ್ನ ದೊರಕುವ ಮೂಲಕ ವಾರ್ಷಿಕವಾಗಿ 2,39,758 ಮೆಟ್ರಿಕ್ ಟನ್ ಮೀನು ಉತ್ಪನ್ನಗಳು ದೊರಕಿತ್ತು. ಈ ವರ್ಷ(2024-25)ದ ಜನವರಿಯಲ್ಲಿ 6665 ಮೆಟ್ರಿಕ್ ಟನ್ ಹಾಗೂ ಫೆಬ್ರವರಿಯಲ್ಲಿ 7665 ಮೆಟ್ರಿಕ್ ಟನ್ ಕಡಲ ಮೀನು ಉತ್ಪನ್ನ ದೊರಕಿದೆ. ಮಾರ್ಚ್ ತಿಂಗಳು ಇನ್ನೂ ಕೊನೆಗೊಂಡಿಲ್ಲವಾದ್ದರಿಂದ ಸರಿಯಾದ ಅಂಕಿ-ಅಂಶ ಇನ್ನಷ್ಟೇ ದೊರಕಬೇಕಿದೆ. ಆದರೂ, ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಮೀನು ಸಿಕ್ಕಿರುವುದಾಗಿ ಮಂಗಳೂರಿನ ಮೀನುಗಾರಿಕಾ ಉಪನಿರ್ದೇಶಕ ಸಿದ್ದಯ್ಯ ಈದಿನ ಡಾಟ್‌ ಕಾಮ್‌ಗೆ ಮಾಹಿತಿ ನೀಡಿದ್ದಾರೆ.

WhatsApp Image 2025 03 21 at 10.47.27 AM

ಇನ್ನುಳಿದಂತೆ ಉಡುಪಿ ಜಿಲ್ಲೆಯ ಮೀನುಗಾರಿಕೆ ಉಪ ನಿರ್ದೇಶಕಿ ಟಿ. ಅಂಜನಾದೇವಿ ನೀಡಿರುವ ಮಾಹಿತಿಯ ಪ್ರಕಾರ, ಕಡಲ ಮೀನು ಉತ್ಪಾದನೆ ಈ ವರ್ಷದ ಫೆಬ್ರವರಿ ಅಂತ್ಯದವರೆಗೆ 2,10,383 ಮೆಟ್ರಿಕ್ ಟನ್ ಆಗಿದ್ದರೆ, ಕಳೆದ ವರ್ಷ 3,30,000 ಲಕ್ಷ ಮೆಟ್ರಿಕ್ ಟನ್ ಆಗಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲೂ ಇದೇ ರೀತಿಯಲ್ಲಿ ಮೀನು ಕುಂಠಿತವಾಗಿದೆ ಎನ್ನುತ್ತಾರೆ ಕಾರವಾರದ ಮೀನುಗಾರಿಕೆ ಉಪ ನಿರ್ದೇಶಕರಾದ ಪ್ರತೀಕ್ ಶೆಟ್ಟಿ.

ಕರಾವಳಿಯಲ್ಲಿ ಮೀನಿನ ಬೇಡಿಕೆ ಹೆಚ್ಚಾಗಲು ‘ಬೀಫ್ ಬ್ಯಾನ್’ ಕೂಡ ಕಾರಣ!

ಕರ್ನಾಟಕದಲ್ಲಿ ಕಳೆದ ಬಾರಿ ಆಡಳಿತ ನಡೆಸಿದ್ದ ಬಿಜೆಪಿ ಸರ್ಕಾರವು ಜನವರಿ 2021ರಲ್ಲಿ ಕಟ್ಟುನಿಟ್ಟಾದ ಗೋಹತ್ಯೆ ವಿರೋಧಿ ಕಾನೂನನ್ನು ಜಾರಿಗೆ ತಂದಿತ್ತು. ಈ ಕಾನೂನಿನ ಅನ್ವಯ ಜಾನುವಾರುಗಳ(ಹಸು, ಗೂಳಿ, ಎತ್ತು) ಸಾಗಣೆ, ಮಾರಾಟ ಹಾಗೂ ವಧಿಸುವುದು ಕಾನೂನು ಬಾಹಿರವಾಗಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋಮಾಂಸ ನಿಷೇಧ ಕರಾವಳಿ ಜಿಲ್ಲೆಗಳಲ್ಲಿ ಆರ್‌ಎಸ್‌ಎಸ್‌ ಹಾಗೂ ಸಂಘಪರಿವಾರವು ಪ್ರಾಬಲ್ಯ ಹೆಚ್ಚಿರುವ ಪರಿಣಾಮ ಕಡ್ಡಾಯವಾಗಿ ಬೀಫ್, ಗೋಮಾಂಸ ನಿಷೇಧವಾಗಿದೆ. ಹೀಗಾಗಿ, ಕರಾವಳಿಯ ಮುಸ್ಲಿಮರು, ದಲಿತ ಸಮುದಾಯದ ಮಂದಿ ಹೆಚ್ಚಾಗಿ ಸೇವಿಸಲು ಇಷ್ಟಪಡುತ್ತಿದ್ದ ಬೀಫ್, ಮುಕ್ತ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಹಾಗಾಗಿ, ಅನಿವಾರ್ಯವಾಗಿ ಮೀನನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಅಲ್ಲದೇ, ಸಭೆ-ಸಮಾರಂಭಗಳಿಗೂ ಮೀನಿನ ಉತ್ಪನ್ನಗಳ ಆಹಾರ ಪದಾರ್ಥವನ್ನು ನೀಡುತ್ತಿರುವುದರಿಂದ ಮೀನಿನ ಬೇಡಿಕೆ ಸ್ಥಳೀಯವಾಗಿಯೂ ಹೆಚ್ಚಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

fishing mark

ಬೀಫ್ ತಿನ್ನಲು ಇಷ್ಟಪಡುವವರು ಕೇರಳ-ಕರ್ನಾಟಕ ಗಡಿಭಾಗವಾದ ಹೊಸಂಗಡಿ, ಮಂಜೇಶ್ವರ ಕಡೆಗೆ ಹೋಗುವುದು ಸಾಮಾನ್ಯವಾಗಿದೆ. ಉಡುಪಿ ಭಾಗದಲ್ಲಂತೂ ಬೀಫ್ ಸಿಗುವುದು ಕನಸಿನ ಮಾತು. ಏಕೆಂದರೆ ಹುಡುಕಿದರೂ ಕೂಡ ಸಿಗದಂಥ ಪರಿಸ್ಥಿತಿ ಇದೆ.

ಪರಿಹಾರ ಏನೆಲ್ಲ ಇದೆ?

ಅವೈಜ್ಞಾನಿಕ ಮೀನುಗಾರಿಕೆ ನಿಲ್ಲಿಸುವಂತೆ ಆದೇಶವಿದ್ದರೂ ಪಾಲನೆಯಾಗುತ್ತಿಲ್ಲ. ಇದು ದುರಂತ. ದುರಾಸೆಗೆ ಬಿದ್ದು ಜಲಸಂಪತ್ತನ್ನು ಖಾಲಿ ಮಾಡುತ್ತಿದ್ದೇವೆ. 5-6 ವರ್ಷಗಳಿಂದ ಮತ್ಸ್ಯ ಸಂಪತ್ತು ಬರಿದಾಗುತ್ತಿದ್ದು, ಭವಿಷ್ಯದ ದೃಷ್ಟಿಯಿಂದ ಮೀನುಗಾರಿಕೆ ಇಲಾಖೆ ಮತ್ತು ಮೀನುಗಾರರು ಸಮನ್ವಯತೆಯಿಂದ ಕಾನೂನು ಪಾಲನೆ ಮಾಡುವುದು ಅನಿವಾರ್ಯವಾಗಿದೆ.

ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಪ್ರಕಾರ,

  1. ನಿಷೇಧದ ಅವಧಿಯಲ್ಲಿ ಮೀನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಿರುವುದು.
  2. ನಿಷೇಧದ ಅವಧಿಯನ್ನು ಮೂರು ತಿಂಗಳಿಗೆ ಹೆಚ್ಚಿಸುವುದು.
  3. ಉತ್ತಮ ಮೀನುಗಾರಿಕೆ ವಿಧಾನಗಳನ್ನು ಅಭ್ಯಾಸ ಮಾಡುವುದು.
  4. ಸಣ್ಣ ಗಾತ್ರದ ಮೀನುಗಳನ್ನು ಹಿಡಿಯುವುದನ್ನು ತಪ್ಪಿಸಿ ಮತ್ತು ಅದರ ಮೇಲಿನ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಮೀನುಗಾರರು ಪಾಲಿಸುವುದು.
  5. ಬುಲ್ ಟ್ರಾಲಿಂಗ್ ಮತ್ತು ಲೈಟ್ ಫಿಶಿಂಗ್‌ನಂತಹ ನಿಷೇಧಿತ ಮೀನುಗಾರಿಕೆ ವಿಧಾನಗಳನ್ನು ಅಭ್ಯಾಸ ಮಾಡುವುದನ್ನು ಕಡ್ಡಾಯವಾಗಿ ನಿಲ್ಲಿಸುವುದು.

ಮೀನುಗಾರಿಕೆಯಿಂದ ರಾಜ್ಯಕ್ಕೆ ಬರುವ ಆದಾಯವೆಷ್ಟು?

ಕರ್ನಾಟಕ ರಾಜ್ಯವು ಕರಾವಳಿ, ಹಿನ್ನೀರು ಹಾಗೂ ಒಳನಾಡು ಮೀನುಗಾರಿಕೆ ಸಂಪನ್ಮೂಲಗಳನ್ನು ಹೊಂದಿದ್ದು, ಕೃಷಿಯ ಒಟ್ಟು ಅಂತರಿಕ ಉತ್ಪನ್ನಕ್ಕೆ ಈ ವಲಯದ ಕೊಡುಗೆ ಶೇ.4ರಿಂದ 5ರಷ್ಟಿರುತ್ತದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಶೇ.0.7ರಷ್ಟಿದೆ. ಕರ್ನಾಟಕ ಒಳನಾಡು ಮೀನು ಉತ್ಪಾದನೆಯಲ್ಲಿ7ನೇ ಸ್ಥಾನ ಹಾಗೂ ಕರಾವಳಿ ಮೀನು ಉತ್ಪಾದನೆಯಲ್ಲಿ3ನೇ ಸ್ಥಾನದಲ್ಲಿದ್ದು, ಒಟ್ಟು ಉತ್ಪಾದನೆಯಲ್ಲಿ 3ನೇ ಸ್ಥಾನದಲ್ಲಿದೆ.

2022-23 ನೇ ಸಾಲಿನಲ್ಲಿ12.25 ಲಕ್ಷ ಮೆಟ್ರಿಕ್‌ ಟನ್‌ ಮೀನು ಉತ್ಪಾದಿಸಲಾಗಿದೆ. ರಾಜ್ಯದಿಂದ 3761.55 ಕೋಟಿ ಮೌಲ್ಯದ 2.27 ಲಕ್ಷ ಮೆಟ್ರಿಕ್‌ ಟನ್‌ ಸಮುದ್ರ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಒಟ್ಟಾರೆಯಾಗಿ, 2023-24ನೇ ಸಾಲಿನಲ್ಲಿ 9.75 ಲಕ್ಷ ಮೆಟ್ರಿಕ್ ಟನ್ ಮೀನು ಉತ್ಪಾದನೆಯಾಗಿ, 2.48 ಲಕ್ಷ ಮೆಟ್ರಿಕ್ ಟನ್ ಕಡಲ ಮೀನು ಉತ್ಪನ್ನಗಳನ್ನು ರಫ್ತು ಮಾಡಿ, ₹4048.99 ಕೋಟಿ ಮೌಲ್ಯದ ವಿದೇಶಿ ವಿನಿಮಯ ಗಳಿಸಿದ್ದವು.

ಮೇಳ

ಕರಾವಳಿಯಲ್ಲಿ ಸರ್ಕಾರಿ ಅಂಕಿ ಅಂಶದ ಪ್ರಕಾರ, 4765 ಯಾಂತ್ರೀಕೃತ ದೋಣಿಗಳು, 10770 ಮೋಟರೀಕೃತ ದೋಣಿಗಳು ಹಾಗೂ 15,122 ನಾಡದೋಣಿಗಳು ಕಾರ್ಯಾಚರಿಸುತ್ತಿವೆ. ರಾಜ್ಯದಲ್ಲಿ9 ಮೀನುಗಾರಿಕೆ ಬಂದರುಗಳು ಮತ್ತು 25 ಮೀನುಗಾರಿಕೆ ಇಳಿದಾಣ ಕೇಂದ್ರಗಳಿವೆ.

ಹೊಟೇಲ್ ಉದ್ಯಮ ಕೂಡ ಸಂಕಷ್ಟದಲ್ಲಿ

ಮಂಗಳೂರು, ಉಡುಪಿ, ಮಲ್ಪೆ, ಕಾರವಾರ ಸೇರಿದಂತೆ ಕರಾವಳಿ ಜಿಲ್ಲೆಗಳ ಹಲವು ಪ್ರಮುಖ ಪ್ರದೇಶಗಳಲ್ಲಿ ಮೀನುಗಾರಿಕೆಯನ್ನೇ ನಂಬಿಕೊಂಡು ಹಲವಾರು ಉದ್ಯಮಗಳು ನಡೆಯುತ್ತಿವೆ. ಅವುಗಳ ಪೈಕಿ ಮೊದಲ ಸಾಲಿನಲ್ಲಿ ನಿಲ್ಲುವುದು ಹೊಟೇಲ್ ಉದ್ಯಮವೆಂದರೆ ತಪ್ಪಲ್ಲ. ಮಂಗಳೂರು, ಉಡುಪಿ ಸೇರಿದಂತೆ ಹಲವು ಕಡೆಗಳಿಗೆ ಮೀನನ್ನು ಸವಿಯಲೆಂದೇ ಪ್ರವಾಸಕ್ಕೆ ಬರುವ ಹಲವಾರು ಪ್ರವಾಸಿಗರು, ಮೀನಿನ ಹೊಟೇಲ್ ‘ಗೂಗಲ್’ ಮಾಡಿಕೊಂಡು, ಯೂಟ್ಯೂಬ್, ಇನ್ಸ್ಟಾಗ್ರಾಮ್ ರೀಲ್ಸ್ ನೋಡಿಕೊಂಡು ಹೋಗುತ್ತಾರೆ. ಬಗೆಬಗೆಯ ಮೀನನ್ನು ಕೂಡ ಆಸ್ವಾದಿಸುತ್ತಾರೆ. ಆದರೆ, ಸದ್ಯ ಮೀನಿಗೆ ಬರಗಾಲ ಬಂದಿರುವ ಪರಿಣಾಮ ಹೊಟೇಲ್‌ಗಳಲ್ಲಿ ಸಂಜೆಯವರೆಗೆ ದೊರೆಯುತ್ತಿದ್ದ ಮೀನಿನ ಖಾದ್ಯಗಳು ಮಧ್ಯಾಹ್ನ 2.30ರಿಂದ 3ರ ವೇಳೆಗೆ ಖಾಲಿಯಾಗುತ್ತಿವೆ.

girimanjas

ಈ ಬಗ್ಗೆ ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡಿದ ಮಂಗಳೂರಿನ ಅಝೀಝುದ್ದೀನ್ ರಸ್ತೆಯ ಸಮೀಪವಿರುವ ‘ಗಿರಿಮಂಜಾಸ್ ಹೊಟೇಲ್‌ನ ಮಾಲಕಿ ನಂದಿನಿ ಪೈ, “ಬಂಗುಡೆ ಮೀನು ಸದ್ಯ ನಮ್ಮಲ್ಲಿ ಒಂದಕ್ಕೆ 100 ರೂಪಾಯಿಯಂತೆ ಗ್ರಾಹಕರಿಗೆ ಕೊಡುತ್ತಿದ್ದೇವೆ. ಇದು ಕೆಜಿಯಲ್ಲಿ ನಮಗೆ 5ರಿಂದ 6 ಅಷ್ಟೇ ದೊರಕುತ್ತದೆ. ಅಂಜಲ್ ಮೀನಿನ ತುಂಡೊಂದಕ್ಕೆ 300 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದೇವೆ. ಕರಾವಳಿಯಲ್ಲಿ ಮೀನು ಶಾರ್ಟೇಜ್ ಆಗಿರುವುದರಿಂದ ನಮಗೂ ಸ್ವಲ್ಪಮಟ್ಟಿಗೆ ತೊಂದರೆಯಾಗಿದೆ. ಮೊದಲು ಬಂದ ಗ್ರಾಹಕರಿಗೆ ಮೊದಲ ಆದ್ಯತೆಯಂತೆ ನೀಡುತ್ತಿದ್ದೇವೆ” ಎಂದು ತಿಳಿಸಿದರು.

ಮಂಜುಗಡ್ಡೆ ಉದ್ಯಮಕ್ಕೂ ತಾಗಿದ ‘ಬಿಸಿ ಹವಾಮಾನ’!

ಮೀನುಗಾರಿಕೆಯನ್ನು ನಂಬಿಕೊಂಡು ಕೇವಲ ಮೀನುಗಾರ ಕುಟುಂಬಗಳು, ಹೊಟೇಲ್ ಉದ್ಯಮ ಮಾತ್ರವಲ್ಲದೇ, ಮಂಜುಗಡ್ಡೆ ಉದ್ಯಮ ಕೂಡ ನಡೆಯುತ್ತಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 176ಕ್ಕೂ ಅಧಿಕ ಮಂಜುಗಡ್ಡೆ ಸ್ಥಾವರಗಳಿವೆ. ಕಳೆದ ಮೂರು ವರ್ಷಗಳ ಹಿಂದೆ ಇವುಗಳ ಸಂಖ್ಯೆ 200 ಆಗಿತ್ತು. ಮತ್ಸ್ಯಕ್ಷಾಮ, ವಿದ್ಯುತ್‌ ಬಿಲ್‌, ಕಚ್ಛಾವಸ್ತುಗಳ ಬೆಲೆಯೇರಿಕೆಯಿಂದಾಗಿ ಮಂಜುಗಡ್ಡೆ ಸ್ಥಾವರಗಳ ಸಂಖ್ಯೆಯೂ ಕುಗ್ಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ice factory

ಒಟ್ಟಾರೆ ಕೃಷಿ ಕ್ಷೇತ್ರದಂತೆ ಮೀನುಗಾರಿಕೆ ಕ್ಷೇತ್ರ ಕೂಡ ಬರದಿಂದಾಗಿ ತತ್ತರಿಸಿದೆ. ಮೀನುಗಾರರು ಬೋಟ್ ನಡೆಸಲು ಆಗದೇ ಬಂದರುಗಳಲ್ಲಿ ಲಂಗರು ಹಾಕತೊಡಗಿವೆ.‌ ಸರ್ಕಾರ ಈ ಬಗ್ಗೆ ಗಮನ‌ಹರಿಸಿ ಕೃಷಿಕರಂತೆ ಮೀನುಗಾರಿಕಾ ಕ್ಷೇತ್ರವನ್ನು ಮತ್ಸ್ಯಕ್ಷಾಮ ಎಂದು ಘೋಷಣೆ ಮಾಡಿ ಪರಿಹಾರ ಒದಗಿಸುವಂತೆ ಮೀನುಗಾರಿಕೆಯನ್ನೇ ನಂಬಿಕೊಂಡಿರುವವರು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಏನಾದರೂ ಕ್ರಮಕ್ಕೆ ಮುಂದಾಗುತ್ತದೆಯೇ? ಎಂಬುದನ್ನು ಕಾದುನೋಡಬೇಕಿದೆ.

ಮೀನಿನ ಕ್ಷಾಮದಿಂದಾಗಿ ಸಂಕಷ್ಟದಲ್ಲಿರುವ ಮೀನುಗಾರರ ಸಾಲಮನ್ನಾ ಮಾಡುವ ಬಗ್ಗೆ ಏನಾದರೂ ಸರ್ಕಾರದ ಮುಂದೆ ಪ್ರಸ್ತಾಪಗಳಿವೆಯಾ? ಎಂದು ಮೀನುಗಾರಿಕಾ ಇಲಾಖೆಯ ನಿರ್ದೇಶಕರಲ್ಲಿ ಈದಿನ ಡಾಟ್‌ ಕಾಮ್ ಕೇಳಿದಾಗ,, “ಸದ್ಯಕ್ಕೆ ಆ ರೀತಿಯ ಯಾವುದೇ ಪ್ರಸ್ತಾಪಗಳಿಲ್ಲ” ಎಂದು ತಿಳಿಸಿದ್ದಾರೆ.

Irshad Venoor
Website |  + posts

ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ‌.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಇರ್ಷಾದ್ ವೇಣೂರು
ಇರ್ಷಾದ್ ವೇಣೂರುhttps://eedina.com
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ‌.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

ಬಾಗಲಕೋಟೆ | ಬಿಜೆಪಿ ಮತಗಳ್ಳತನ ವಿರುದ್ಧ ವ್ಯಾಪಕ ಹೋರಾಟ: ಮಾಜಿ ಸಚಿವ ವಿನಿಯಕುಮಾರ್

ಬಿಜೆಪಿ ಮತಗಳ್ಳತನ ನಡೆಸಿ ಚುನಾವಣೆ ಅಕ್ರಮ ಎಸಗಿರುವ ಬಗ್ಗೆ ವ್ಯಾಪಕವಾಗಿ ಹೋರಾಟ...

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

Download Eedina App Android / iOS

X