ಮಲ್ಪೆ ಬಂದರಿನ ನಿರ್ವಹಣೆಯನ್ನು ಸಂಘ ಸಂಸ್ಥೆಗೆ ಕೊಡಬೇಕು. ಸಂಘ ಸಂಸ್ಥೆಗಳ ಕೈಗೆ ನೀಡಿದರೆ ನಿಸ್ವಾರ್ಥ ಸೇವೆ ಮಾಡುತ್ತಾರೆ. ಖಾಸಗಿಯವರಿಗೆ ನೀಡುವುದರಿಂದ ಕೇವಲ ಲಾಭ ಮಾತ್ರ ನೋಡುತ್ತಾರೆ. ಮಲ್ಪೆ ಬಂದರಿನಲ್ಲಿ 30 ಸೆಕ್ಯುರಿಟಿ ಗಾರ್ಡ್ ಇರಬೇಕಿತ್ತು. ಆದರೆ ಇಲ್ಲ. ಸರಿಯಾದ ಸಿಸಿ ಕ್ಯಾಮರ ಕೂಡ ಇಲ್ಲ. ಪ್ರತಿದಿನ ಬೋಟ್ ಬ್ಯಾಟರಿ ಕಳ್ಳತನ, ಮೀನು ಕಳ್ಳತನ ನಡೆಯುತ್ತಲೇ ಇರುತ್ತದೆ. ಇದರ ಬಗ್ಗೆ ಹಲವಾರು ಬಾರಿ ಪೊಲೀಸ್ ಕೇಸುಗಳು ಕೂಡ ದಾಖಲಾಗಿದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ್ ಸುವರ್ಣ ಹೇಳಿದರು.

ಅವರು ಇಂದು ಮಲ್ಪೆ ಬಂದರಿನಲ್ಲಿ ನಡೆದ ಮಲ್ಪೆ ಬಂದರಿನ ಮೀನುಗಾರರ ಬಗ್ಗೆ ಆದ ಅಪಪ್ರಚಾರದ ವಿರುದ್ಧ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಮೊನ್ನೆ ನಡೆದ ಘಟನೆಯನ್ನು ಸಂಘವಾಗಲಿ, ಮೀನುಗಾರರಾಗಲಿ ಯಾರೂ ಕೂಡ ಸಮರ್ಥನೆ ಮಾಡುವುದಿಲ್ಲ. ಆ ಘಟನೆಯಲ್ಲಿ ಬೋಟಿನ ಮಾಲೀಕನ ಯಾವುದೇ ಪಾತ್ರವಿಲ್ಲ, ಆದರೂ ಇದರಲ್ಲಿ ಸಿಕ್ಕಿಸಿದ್ದಾರೆ.

ಮೊದಲನೇ ದಿನ ರಾಜಿಪಂಚಾಯ್ತಿ ಮೂಲಕ ಮಲ್ಪೆ ಪೊಲೀಸ್ ಠಾಣೆಯಲ್ಲಿ ಇತ್ಯರ್ಥ ಆಗಿತ್ತು. ಆದರೆ ಮಾರನೇ ದಿನ ಯಾವುದೋ ಕಾಣದ ಕೈಗಳು ವೀಡಿಯೋವನ್ನು ವೈರಲ್ ಮಾಡಿ ಹರಿಯ ಬಿಟ್ಟರು. ಕೇವಲ ವೀಡಿಯೋ ನೋಡಿ ಕಾನೂನು ಕ್ರಮ ಮಾಡುವುದಾ? ಸಣ್ಣ ಪುಟ್ಟ ಕಾನೂನು ಕ್ರಮ ಆದರೆ ಓಕೆ, ಆದರೆ ಇದು ದೊಡ್ಡ ಮಟ್ಟದ ಕ್ರಮ ಸರಿಯಲ್ಲ. ವಿಡಿಯೋದಲ್ಲಿ ಒಂದು ಮುಖ ಮಾತ್ರ ನೋಡಬಹುದು. ಆದರೆ ನಿಜವಾಗಿ ಮಲ್ಪೆ ಬಂದರಿನಲ್ಲಿ ಇರುವ ಸೌಹಾರ್ದತೆ ಬಗ್ಗೆ ಯಾರು ತೋರಿಸುತ್ತಿಲ್ಲ.
ಮೊನ್ನೆ ಆದ ಘಟನೆಯಿಂದ ಮೀನುಗಾರರ ಸಮುದಾಯಕ್ಕೆ ಒಂದು ಕಳಂಕ ತರುವಂತೆ ಬಿಂಬಿಸಿದ್ದಾರೆ. ಇದು ನಮಗೆ ಬಹಳಷ್ಟು ಬೇಸರವಾಗಿದೆ ಎಂದು ಹೇಳಿದರು.