ವಾಶಿಂಗ್ಟನ್ ಸ್ಟೇಟ್ ವಿಶ್ವವಿದ್ಯಾಲಯದ ವಿಶ್ರಾಂತಗೌರವ ಪ್ರಾಧ್ಯಾಪಕರಾದ ಫ಼್ರಿಟ್ಜ಼್ ಬ್ಲ್ಯಾಕ್‌ವೆಲ್ (Fritz Blackwell) ಅವರು ಪ್ರಧಾನವಾಗಿ ಭಾರತದ ಕುರಿತಾಗಿ ಬರೆಯುತ್ತಾರೆ. ಅವರ ‘ಭಾರತದ ಮೇಲೆ ಬ್ರಿಟಿಷರ ಪ್ರಭಾವ, 1700-1900’ ಎಂಬ ಲೇಖನದಲ್ಲಿ ಹೀಗೆ ಹೇಳುತ್ತಾರೆ:[1]
1700ರಿಂದ 1900ರ ಅವಧಿ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಹುಟ್ಟು ಮತ್ತು ಬೆಳವಣಿಗೆಯನ್ನು ಕಂಡಿತು. ಸಾಮ್ರಾಜ್ಯವು ಕಡೆಯ ಪಕ್ಷ ಅದರ ಮೊದಲಿನ ಹಂತಗಳಲ್ಲಾದರೂ ಯೋಜಿತವಾಗಿ ಕಟ್ಟಿದ್ದಾಗಿರಲಿಲ್ಲ. ಒಂದರ್ಥದಲ್ಲಿ ಅದು ತನ್ನಿಂದ ತಾನೇ ಆಗಿಹೋಯಿತು. ಭಾರತಕ್ಕೆ ಮೊದಲು ಬಂದ ಬ್ರಿಟಿಷರು ವ್ಯಾಪಾರಕ್ಕಾಗಿ ಬಂದವರೇ ಹೊರತು ರಾಜ್ಯಕ್ಷೇತ್ರಕ್ಕಾಗಿಯಲ್ಲ; ಅವರು ವರ್ತಕರಾಗಿದ್ದರು, ದಾಳಿಕೋರರಾಗಿರಲಿಲ್ಲ… ಬ್ರಿಟಿಷರು ಮತ್ತು ಭಾರತೀಯರು ಒಬ್ಬರಿನ್ನೊಬ್ಬರ ಮೇಲೆ ಗಹನವಾದ ಪರಿಣಾಮ ಬೀರಿದರು. ಅವು ಇಂದಿಗೂ ಪ್ರಸ್ತುತವಾಗಿವೆ… ಭಾರತದಲ್ಲಿ ಮೊಘಲ್ ಸಾಮ್ರಾಜ್ಯದ ಪ್ರಬಲ ಅಧಿಕಾರವಿತ್ತು. ಸಾಹಸಿ ಬ್ರಿಟಿಷ್ ಅನ್ವೇಷಕರು (ಈಸ್ಟ್ ಇಂಡಿಯಾ) ಕಂಪನಿಯ ಬರವಿಗೂ ಮುಂಚೆಯೇ ಭಾರತಕ್ಕೂ ಮೊಘಲ್ ದರಬಾರಿಗೂ ತಲುಪಿದ್ದರು. ಕಂಪನಿಯು ಭಾರತಕ್ಕೆ ಬಂದ ಉದ್ದೇಶ ವ್ಯಾಪಾರವೇ ಆಗಿತ್ತು ಎಂದು ಒತ್ತಿಹೇಳಬೇಕಾದ ಅಗತ್ಯವಿದೆ. ಆದರೆ ಕೆಲವು ಸಂದರ್ಭಗಳು ಮತ್ತು ಘಟನೆಗಳ ಸಂಯೋಗವು ಕಂಪನಿಯನ್ನು ಭಾರತದ ರಾಜಕಾರಣದೊಳಗೆ ಸೆಳೆದಿತ್ತು. ವಿಶೇಷತಃ, ಮೊಘಲ್ ಸಾಮ್ರಾಜ್ಯದ ಅವನತಿ ಹಾಗೂ ಅದರೊಟ್ಟಿಗೆಯೇ ಮತ್ತು ಅದರ ಪರಿಣಾಮದಿಂದಾದ — ಬ್ರಿಟಿಷರೂ ಸೇರಿದಂತೆ — ಪ್ರಬಲ ಪ್ರಾದೇಶಿಕ ಗುಂಪುಗಳ ಉನ್ನತಿ…
ನಾವು ಈ ಮೊದಲು ಉಲ್ಲೇಖಿಸಿದ್ದ ಜಾಫ಼ರ್ ಜ಼ಟಲ್ಲಿ ಸರಿಯಾಗಿ ಇದೇ ಸಮಯದಲ್ಲಿ ಆಡುನುಡಿಯ ಮಾತೃಕೆಯಲ್ಲಿ ಪರ್ಷಿಯನ್ ಪದಗಳನ್ನು ಹದಬೆರೆಸಿ ಅದನ್ನು ‘ಹಿಂದಿ’ ಎಂದು ಕರೆದು ಅದರಲ್ಲಿ ಮೊದಲ ಗ಼ಜ಼ಲ್ ಬರೆದಿದ್ದ. ಆ ಭಾಷೆಗೆ ಈ ನಾಡಿನೊಂದಿಗೆ ಬಿಗಿಯಾದ ನಂಟಿದೆ ಎಂದು ಒತ್ತಿ ಹೇಳಲೋ ಎಂಬಂತೆ. ಜ಼ಟಲ್ಲಿ ಹುಟ್ಟಿದ್ದು ದೆಹಲಿಯ ಹತ್ತಿರದ ನರ್‍ನಾವ್ಲ್ ಎಂಬ ಪಟ್ಟಣದಲ್ಲಿ. ಒಂದು ಸಯ್ಯಿದ್ ಕುಟುಂಬದಲ್ಲಿ ಹುಟ್ಟಿದ್ದ ಅವನ ಮೊದಲಿನ ಹೆಸರು ಮೀರ್ ಮುಹಮ್ಮದ್ ಜಾಫ಼ರ್. ಅವನ ಜೀವಿತದ ಆರಂಭಿಕ ಕಾಲವನ್ನು ದೆಹಲಿಯಲ್ಲಿ ಕಳೆದ ಅವನು ನಂತರದಲ್ಲಿ ದಖನ್‌ನ ಹಾದಿ ಕಂಡುಕೊಂಡ.[2] ರಾಜಕೀಯದಿಂದ ದೂರವಿದ್ದ, ಹಾಗೆ ನೋಡಿದರೆ ಆಡಳಿತಕ್ಕೆ ಅನುರೂಪನಾಗಿದ್ದುಕೊಂಡು ಒಬ್ಬರಾದ ಮೇಲೊಬ್ಬರು ಬಂದ ಏಳು ವಿಭಿನ್ನ ಆಳರಸರೆಲ್ಲರ ಜೊತೆಗೂ ಸ್ನೇಹದಿಂದಿದ್ದನೆಂದು ಹೇಳಲಾಗುವ ಖುಸ್ರೋನಂತಲ್ಲದೇ, ಜ಼ಟಲ್ಲಿ ಮೊಘಲ್ ರಾಜಪ್ರಭುತ್ವವನ್ನು ಕಟುವಾಗಿ ಟೀಕಿಸುತ್ತಿದ್ದ. ಮೊನಚಾದ, ಹಲವು ಸಲ ಅಶ್ಲೀಲವಾದ, ವಿಡಂಬನೆಯನ್ನು ಬರೆಯುತ್ತಿದ್ದ. ಅವನ ದೃಷ್ಟಿಯಲ್ಲಿ ಸರಕಾರವು ಪ್ರಜೆಗಳೊಂದಿಗೆ ಹೇಗೆ ನಡೆದುಕೊಳ್ಳುತ್ತಿದೆ ಎಂಬುದನ್ನು ಕುರಿತು ‘ಗಾಂಡುನಾಮಾ’ (‘ಕುಂಡಿಯ ವೃತ್ತಾಂತ’) ಎಂಬಂಥ ಆಘಾತಕಾರಿ ಶೀರ್ಷಿಕೆಯ ಮೊನಚಾದ ಟಿಪ್ಪಣಿ ಬರೆದು ಪ್ರಬಲ ಮೊಘಲ್ ಸಾಮ್ರಾಟರಲ್ಲಿ ಕೊನೆಯವನಾದ ಔರಂಗಜ಼ೇಬನ ಕ್ರೋಧದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದ.
ಗಯಾ ಇಖ್ಲಾಸ್ ಆಲಮ್ ಸೇ, ಅಜಬ್ ಯೇ ದೌರ್ ಆಯಾ ಹೈ
ಡರೇ ಹೈ ಖ಼ಲಕ್ ಜ಼ಾಲಿಮ್ ಸೆ, ಅಜಬ್ ಯೇ ದೌರ್ ಆಯಾ ಹೈ
ನಾ ಯಾರೋಂ ಮೇಂ ರಹೀ ಯಾರೀ, ನಾ ಭಾಯಿಯೋಂ ಮೇಂ ವಫ಼ಾದಾರೀ
ಮೊಹಬ್ಬತ್ ಉಠ್ ಗಯೀ ಸಾರೀ, ಅಜಬ್ ಯೇ ದೌರ್ ಆಯಾ ಹೈ
ಸಿಪಾಹೀ ಹಕ಼್ ನಹೀಂ ಪಾವೇಂ, ನೀ ಉಠ್-ಉಠ್ ಚೌಕಿಯಾಂ ಜಾವೇಂ
ಕರ್ಜ಼್ ಬನಿಯೋಂ ಸೇ ಲೇ ಖಾವೇಂ, ಅಜಬ್ ಯೇ ದೌರ್ ಆಯಾ ಹೈ
ಪ್ರಾಮಾಣಿಕತೆ ತೊಲಗಿದೆ ಜಗದಿಂದ, ಎಂಥ ವಿಚಿತ್ರ ಯುಗವಿದು
ದೇವಸೃಷ್ಟಿ ಬೆದರಿದೆ ನಿರಂಕುಶ ಪ್ರಭುತ್ವಕ್ಕೆ, ಎಂಥ ವಿಚಿತ್ರ ಯುಗವಿದು
ಗೆಳೆಯರಲ್ಲುಳಿದಿಲ್ಲ ಗೆಳೆತನ, ಸೋದರರ ನಡುವಿಲ್ಲ ನಂಬಿಕೆ
ಒಲವು ಕಳೆದುಹೋಗಿದೆ ಎಲ್ಲೋ, ಎಂಥ ವಿಚಿತ್ರ ಯುಗವಿದು
ಸಿಪಾಯಿಗೆ ಸಲ್ಲಬೇಕಾದ್ದು ಸಲ್ಲದೆ ಹೋದನವ ತನ್ನ ನೆಲೆಯ ತೊರೆದು
ಬಡ್ಡಿವ್ಯಾಪಾರಿಯಿಂದ ಪಡೆದು ತಿನಲು, ಎಂಥ ವಿಚಿತ್ರ ಯುಗವಿದು
ಹಿಂದಿ ಕಾವ್ಯವು ಅದುವರೆಗೂ ನಿಭಾಯಿಸುತ್ತ ಬಂದಿದ್ದ ಲಘುವಾದ ಸುಗಮವಾದ ಕಲ್ಪನೆಗಳನ್ನು ಮೀರಿ ಕವಿಗಳು ಆಳವಾದ, ಯಥಾಸ್ಥಿತಿಯನ್ನು ಬುಡಮೇಲು ಮಾಡುವ ಸಾಧ್ಯತೆಯುಳ್ಳ, ವಿಚಾರಗಳೊಂದಿಗೆ ತೊಡಗಿಕೊಳ್ಳುತ್ತಿದ್ದಂತೆಯೇ ಭಾಷೆಯ ಸ್ವರೂಪದಲ್ಲಿ ಹೆಚ್ಚಿನ ಸಂಕೀರ್ಣತೆಯು ಸದ್ದಿಲ್ಲದೆ ನುಸುಳಿಕೊಳ್ಳುವುದು ಅನಿವಾರ್ಯವಾಗಿತ್ತು. ಇದು ನಾವು ಅಧ್ಯಾಯ 3ರಲ್ಲಿ ನೋಡಿದ್ದುದರ ಮರುಕಳಿಕೆ: ಹನ್ನೆರಡನೆಯ ಶತಮಾನದ ಕೇರಳದಲ್ಲಿ ನಂಬೂದಿರಿ ಬ್ರಾಹ್ಮಣರ ಕೈವಾಡದಿಂದಾಗಿ ಸಾಹಿತ್ಯಿಕ ಮಲಯಾಳದಲ್ಲಿ ಸಂಸ್ಕೃತ ಹಾದಿ ಕಂಡುಕೊಂಡಂತೆ. ತೇಘ್ ಚಂದ್ ‘ಬಹಾರ್’ 1740ರಲ್ಲಿ ‘ರೇಖ್ತಾ’ ಎಂಬ ಪದವನ್ನು ಟಂಕಿಸಿದನು. ಪರ್ಷಿಯನ್‌ನಲ್ಲಿ ಅದರರ್ಥ ‘ಒಟ್ಟಿಗೆ ಸೇರಿದ್ದು’: ಹಿಂದಿ ಮತ್ತು ಪರ್ಷಿಯನ್‌ನ ಈ ಹೊಸ ಸಾಹಿತ್ಯಿಕ ಬೆಸುಗೆಯನ್ನು ಅವನು ಹೀಗೆ ಹೆಸರಿಸಿದ್ದ.[3]
ಈಗಾಗಲೇ ಪರ್ಷಿಯನ್‌ನಲ್ಲಿ ಗ಼ಜ಼ಲ್‌ಗಳನ್ನು ಬರೆಯುತ್ತಿದ್ದ ಕವಿಗಳಿಗೆ ರೇಖ್ತಾನಲ್ಲಿ ಬರೆಯುವುದು ಸಮಸ್ಯೆಯಾಗಿರಲಿಲ್ಲ. ಮೊದಲಿಗೆ ಪರ್ಷಿಯನ್ ಮೂಲಕ ಮಾತ್ರ ವ್ಯಕ್ತಪಡಿಸುತ್ತಿದ್ದುದನ್ನು ಇದೀಗ ಪದಕೋಶವಿನ್ನೂ ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿಯಾಗಿರದ ಒಂದು ಹೊಸ ಭಾಷೆಯಲ್ಲಿ ವ್ಯಕ್ತಪಡಿಸಲಾರಂಭಿಸಿದ್ದರು. ರೇಖ್ತಾವನ್ನು ಬಳಸಿಕೊಂಡು ಪರ್ಷಿಯನ್‌ನಿಂದ ದೂರ ಸಾಗುತ್ತಿದ್ದರು. ಒಂದರ್ಥದಲ್ಲಿ ಮಧ್ಯ ಏಷ್ಯಾದಲ್ಲಿ ಪರ್ಷಿಯನ್ ಮತ್ತು ಉಜ಼್ಬೆಕ್‌ಗಳನ್ನು ಒಟ್ಟಿಗೇ ತಂದಿದ್ದ ಒತ್ತರಗಳೇ ದಖನ್‌ನಲ್ಲೂ ಕೆಲಸ ಮಾಡುತ್ತ ಹೊಸದಾದ ಈ ಸಮ್ಮಿಶ್ರ ಸಾಹಿತ್ಯಿಕ ಭಾಷೆಯನ್ನು ಸೃಷ್ಟಿಸುತ್ತಿದ್ದುವು. ಮುಂದೆ 1780ರಲ್ಲಿ ಮುಶಾಫ಼ಿಯಿಂದಾಗಿ ಈ ಭಾಷೆಗೆ ಹೆಸರೂ ಸಿಕ್ಕಿತ್ತು: ಉರ್ದು.
ಇದು ಹೇಗಿತ್ತೆಂದರೆ ಸುದೀರ್ಘ ಬಸಿರಿನ ನಂತರ ಹುಟ್ಟಿ ನಿಧಾನಕ್ಕೆ ಬೆಳೆಯುತ್ತಿದ್ದ ಈ ಸರಳ ಆಡುನುಡಿಯು ಉರ್ದು ಎಂಬ ಹೆಸರು ಬಂದ ಕೂಡಲೇ ಮಳೆಹುಳದಂತೆ ರೆಕ್ಕೆ ಮೊಳೆಯಿಸಿಕೊಂಡು ಹಾರತೊಡಗಿತ್ತು. ತಾತ್ಕಾಲಿಕವಾಗಿಯಾದರೂ ಆ ಸೊಗಸಾದ ಜೀವಿ ಎತ್ತರೆತ್ತರ ಹಾರುತ್ತ ಯಾರ ಕೈಗೂ ಸಿಗದಂತಿತ್ತು.
ಇದನ್ನು ಓದಿದ್ದೀರಾ?: ಹೊಸ ಓದು | ಜೆ.ಎಂ. ಕಟ್‌ಸೇ ಅವರ ʼಕಲ್ಲುನೆಲದ ಹಾಡುಪಾಡುʼ: ಕೊನೆಯಿರದ ನಿಟ್ಟುಸಿರು…
ಈ ಹದಬೆರೆಯುವಿಕೆಯಿಂದಾದ ಒಂದು ಪರಿಣಾಮವೆಂದರೆ ಉರ್ದುವಿನಲ್ಲಿ ಬರೆದ ಕಾವ್ಯದಲ್ಲಿ ಪರ್ಷಿಯನ್ ಪದಗಳನ್ನು ಸೇರಿಸಲು ಕವಿಗಳು ಸಂಕೋಚ ಪಡಲಿಲ್ಲ. ಇದು ಸಾಹಿತ್ಯಿಕ ಮಲಯಾಳದಲ್ಲಿ ಸಂಸ್ಕೃತವನ್ನು ಧಾರಾಳವಾಗಿ ಸೇರಿಸುವ ಆಯ್ಕೆಯನ್ನು ಮಣಿಪ್ರವಾಳಂ ಒದಗಿಸಿದಂತಿತ್ತು; ಅಥವಾ ಇಂಗ್ಲಿಷ್ ಬರುವವರು ಕನ್ನಡದಲ್ಲಿ ಮಾತಾಡುವಾಗ ಇಂಗ್ಲಿಷ್ ಶಬ್ದಗಳನ್ನು ತೂರಿಸುವ ಸಾಧ್ಯತೆಯನ್ನು ಕಂಗ್ಲಿಷ್ ಕೊಟ್ಟಂತಿತ್ತು. ಈ ಆಯ್ಕೆ ಇರದಿದ್ದರೆ ಅವರು ಕನ್ನಡದಲ್ಲಿ ಇಂಥ ವಿಷಯಗಳ ಕುರಿತು ಚರ್ಚೆಯನ್ನೇ ಮಾಡಲಾಗುತ್ತಿರಲಿಲ್ಲ. ಆದರೆ ಬರುಬರುತ್ತ ಜನಸಾಮಾನ್ಯರನ್ನು ತಲುಪಬೇಕು, ಎಲ್ಲರನ್ನೂ ಒಳಗೊಳ್ಳಬೇಕು ಎಂದು ಮೊದಲಿನ ರೇಖ್ತಾ ಕವಿಗಳಿಗಿದ್ದ ಉರವಣೆ ಕಡಿಮೆಯಾಗುತ್ತ ಬಂತು. ಬ್ರಿಟಿಷ್ ಸ್ವಾಧೀನದ ಅವಧಿಯಲ್ಲಿ ಕವಿಗಳು ತಮ್ಮ ಕವಿತೆಗಳನ್ನು ಬರೆಯಲು ಬೇಕಾದ ರಹಸ್ಯ ಸಾಧನವನ್ನಾಗಿ ಮಾತ್ರ ರೇಖ್ತಾ ಉಳಿದುಕೊಂಡಿತು. ಮುಂದಿನ ದಿನಗಳಲ್ಲಿ ಉರ್ದು ಕಾವ್ಯದಲ್ಲಿ ಎಷ್ಟು ಪ್ರಮಾಣದಲ್ಲಿ ಪರ್ಷಿಯನ್ ತುಂಬಬಹುದು ಎನ್ನುವುದಕ್ಕೆ ಯಾವ ಮಿತಿಯೂ ಉಳಿಯಲಿಲ್ಲ. ಗ಼ಾಲಿಬ್‌ನಂಥ ಕವಿಗಳು ಅದನ್ನು ಯಾರಿಗೂ ಎಟುಕದಷ್ಟು ಎತ್ತರಕ್ಕೆ ಒಯ್ದರು.
***
ಗ಼ಾಲಿಬ್ 1797ರಲ್ಲಿ ಆಗ್ರಾದಲ್ಲಿ ಹುಟ್ಟಿದ್ದನು. ಅವನ ಪೂರ್ವಾಶ್ರಮದ ಹೆಸರು ಮಿರ್ಜ಼ಾ ಅಸದುಲ್ಲಾ ಬೇಗ್ ಖಾನ್. ಅವನ ತಂದೆಯ ಕುಟುಂಬದವರು ಮೂಲತಃ ಇಂದಿನ ಉಜ಼್ಬೆಕಿಸ್ತಾನದ ಸಮರ್‍ಕ಼ಂದ್‌ನ ಐಬಕ್ ಟರ್ಕರು. ಅವನ ತಾಯಿ ಕಾಶ್ಮೀರಿ. ಹೀಗಾಗಿ ಅವನೂ ಅಮೀರ್ ಖುಸ್ರೋನಂತೆ ಟರ್ಕಿಕ್-ದೇಶೀಯ ಮಿಶ್ರತಳಿ. ಮದುವೆಯ ನಂತರ ಅವನು ದೆಹಲಿಯಲ್ಲಿ ನೆಲಸಿ ರಾಜದರಬಾರಿಗೆ ಸೇರಿಕೊಂಡನು. ಮೊಘಲ್ ಸಾಮ್ರಾಜ್ಯದ ಮುಸ್ಸಂಜೆಯ ಕಾಲದಲ್ಲಿ ಸ್ವತಃ ಕವಿಯಾಗಿದ್ದ ಸಾಮ್ರಾಟ ಬಹದೂರ್ ಶಾಹ್ ಜ಼ಫ಼ರ್ ಅವನನ್ನು ತನ್ನ ಖಾಸಗಿ ಶಿಕ್ಷಕನಾಗಿ ಸಂತೋಷದಿಂದ ನೇಮಿಸಿಕೊಂಡಿದ್ದ. ಅವನು ಗ಼ಾಲಿಬ್, ಎಂದರೆ ‘ವಿಜಯಶಾಲಿ’, ಎಂಬ ‘ತಖಲ್ಲುಸ್’ ಇಟ್ಟುಕೊಂಡಿದ್ದ. ಹಿಂದೊಮ್ಮೆ ಯಾರೋ ಹೆಸರಿಲ್ಲದ ಸಣ್ಣ ಕವಿ ಇವನ ಮೊದಲಿನ, ಅವನ ಹೆಸರಿನದೇ ಹೃಸ್ವರೂಪವಾದ, ‘ಅಸದ್’ (‘ಸಿಂಹ’), ಎಂಬ ತಖಲ್ಲುಸನ್ನು ತಾನು ಬಳಸಿಕೊಂಡಿದ್ದನಂತೆ. ಅದಕ್ಕೇ ಏನೋ ಈಗ ಒಂದು ಭಯಹುಟ್ಟಿಸುವ ಹೆಸರನ್ನು ಇಟ್ಟುಕೊಂಡಿದ್ದ.
ಗ಼ಾಲಿಬ್ ಪರ್ಷಿಯನ್‌ನಲ್ಲಿ 11,340 ದ್ವಿಪದಿಗಳನ್ನು ಬರೆದ, ಉರ್ದುವಿನಲ್ಲಿ ಕೇವಲ 1,792. ಅವನು ತನ್ನ ಪರ್ಷಿಯನ್ ಕಾವ್ಯ ರಚನೆಯ ಬಗ್ಗೆ ಹೆಮ್ಮೆ ಪಡುತ್ತಿದ್ದರೂ ಅವನನ್ನು ನಾವಿಂದು ನೆನೆಸಿಕೊಳ್ಳುವುದು ಬಹುತೇಕ ಅವನ ಉರ್ದು ಕಾವ್ಯದಿಂದಾಗಿ. ‘ದಿವಾನ್-ಎ ಗ಼ಾಲಿಬ್’ ಎಂಬ ಅವನ ಹೆಸರುವಾಸಿ ಗ಼ಜ಼ಲ್‌ನ ಮೊದಲ ಎರಡು ಸಾಲುಗಳು ಕೆಳಗಿವೆ. ಪ್ರತಿ ದ್ವಿಪದಿ ‘ಆಲಿಫ಼್’ ಎಂದರೆ ‘ಆ’ ಸ್ವರದಿಂದ ಕೊನೆಗೊಳ್ಳುತ್ತದೆ:
ನಕ಼್ಷ್ ಫ಼ರ್ಯಾದೀ ಹೈ ಕಿಸ್ ಕೀ ಶೊಖೀ-ಎ ತಹ್‌ರೀರ್ ಕಾ
ಕಾಗ಼ಜ಼ೀ ಹೈ ಪೈರಹಾನ್ ಹರ್ ಪೈಕಾರ್-ಎ ತಸವೀರ್ ಕಾ
ಇದಕ್ಕೆ ಅರ್ಥ ವಿವರಣೆ ಕೊಡಬೇಕೆಂದರೆ ಶುರು ಮಾಡುವುದಾದರೂ ಎಲ್ಲಿಂದ? ಅನುವಾದಿಸಿದರೆ ಸಂಕ್ಷೇಪಿಸಿದಂತಾಗಿ ಗ಼ಾಲಿಬ್ ಸುಳುಹು ಕೊಡುತ್ತಿರುವ ಪೂರ್ವಕಥೆಗಳನ್ನು ಕಳೆದುಕೊಂಡಂತಾಗುತ್ತದೆ: ಪರ್ಷಿಯನ್ ಕತೆಗಳಲ್ಲಿ ಬರುವ, ನ್ಯಾಯಾಪೇಕ್ಷಿಯಾಗಿ ಅರಸನ ಎದುರು ನಿಂತಿರುವ ಫಿರ್ಯಾದಿ (‘ಫ಼ರ್ಯಾದೀ’) ತೊಟ್ಟುಕೊಂಡಿರುವ ಕಾಗದದಂಥ ತೆಳುವಾದ ಮೇಲಂಗಿ; ಚೌಕಟ್ಟು ಹಾಕಿದ ಒಂದು ಚಿತ್ರವನ್ನು ಆ ಕಾಗದದ ಅರಿವೆಗಳಿಗೆ ಹೋಲಿಸುವುದು; ಎಂದರೆ ಅದು ಕೂಡ ಬರಿದಾದದ್ದು ಮತ್ತು ಹೆಚ್ಚು ಕಾಲ ಬಾಳದೇ ಇರುವಂಥದ್ದು, ಎಂದು ಹೇಳುವುದು ಇದರ ಒಟ್ಟಾರೆ ಆಶಯ.
ಕಳೆಗೆಟ್ಟ ಈ ಇಡೀ ಸೃಷ್ಟಿಯ ರಚಿಸಿದವನಾರು ಆ ಕಿಡಿಗೇಡಿ ಫಿರ್ಯಾದಿ?
ಪ್ರತಿ ರಚನೆಯಲೂ ಏಕರೂಪದ ಚಿತ್ರ ಖಾಲಿ ಕಾಗದದ ಮೇಲಂಗಿ.
ಗ಼ಾಲಿಬ್‌ನ ಪ್ರಕಾರ ಬದುಕು ಆಳವಾಗಿ ಮತ್ತು ಆದ್ಯಂತವಾಗಿ ದುರಂತಮಯ. ಈ ವಿಶ್ವನನ್ನು ಸೃಷ್ಟಿ ಮಾಡಿದವನಿಗೆ ಮನುಷ್ಯರ ಬಗ್ಗೆ ಒಂದಿನಿತೂ ಸಹಾನುಭೂತಿಯಿಲ್ಲವೆಂದು ಅವನ ನಿಲುವು. ಮೇಲಿನ ದ್ವಿಪದಿಯ ಅರ್ಥ ಒಡನೆಯೇ ನಮಗೆ ದಕ್ಕುವುದಿಲ್ಲ. ಅಡೆತಡೆಯೊಡ್ಡುತ್ತಿರುವುದು ಭಾಷೆಯ ಸಾಂದ್ರತೆಯಷ್ಟೇ ಅಲ್ಲ. ಗ಼ಾಲಿಬ್‌ನೇ ನಮ್ಮನ್ನು ತಡೆಯುತ್ತಿದ್ದಾನೆ. ಇದು ವ್ಯಾಕುಲತೆಗೊಳಗಾದ ಆತ್ಮವೊಂದರ ಅಹವಾಲು. ಆ ದಾರಿಯಲ್ಲಿ ಅವನಿಗಿಂತ ಮೊದಲು ನಡೆದಿದ್ದ ಅವನಂತೆ ಹತಾಶೆ ಅನುಭವಿಸಿದ್ದ ಯಾರಾದರೂ ಇದ್ದರೆ ಅಂಥವರನ್ನು ಅವನು ಅರಸುತ್ತಿದ್ದಾನೆ.
ಅವನು ಸರಳ ಮತ್ತು ನೇರ ಅರ್ಥದ ಕವಿತೆಗಳನ್ನು ಬರೆದಾಗಲೂ ಅವುಗಳ ಮೇಲೆ ಕಪ್ಪುಮೋಡಗಳು ಒಟ್ಟು ಸೇರತೊಡಗುತ್ತವೆ. ಅವು ಅವನ ಕವಿತೆಗಳಿಗೆ ಅರ್ಥಗಳ ಪದರಗಳನ್ನು ಪೇರಿಸುತ್ತವೆ. ಅವನ ಪ್ರಸಿದ್ಧ ಗ಼ಜ಼ಲ್ ಒಂದರ ಮೊದಲ ಐದು ದ್ವಿಪದಿಗಳು ಇಲ್ಲಿವೆ. ಅದು ಶುರುವಾಗುವುದು ಬಹುತೇಕ ಮಕ್ಕಳಾಟದ ನೋಟ ನೋಡುವವನ ಸರಳ ಸ್ಪಂದಿಸುವಿಕೆಯಂತೆ. ಆದರೆ ಮರುಗಳಿಗೆಯೇ ಮಬ್ಬು ಕವಿಯುವುದು; ಆಮೇಲೆ ಬರುವುದು ಅಚ್ಚರಿ ಮೂಡಿಸುವ ಅಂತ್ಯ:
ಬಾಜ಼ೀಚಾ-ಎ-ಅತ್‌ಫ಼ಾಲ್ ಹೈ ದುನಿಯಾ ಮೇರೇ ಆಗೇ
ಹೋತಾ ಹೈ ಶಬ್-ಓ-ರೋಜ಼್ ತಮಾಶಾ ಮೇರೇ ಆಗೇ
ಮಕ್ಕಳಾಟದ ಬಯಲಂತಿದೆ ಜಗತ್ತು ನನ್ನ ಮುಂದೆ
ಹಗಲಿರುಳು ನಡೆಯುತ್ತದೆ ತಮಾಷೆ ನನ್ನ ಮುಂದೆ
ಇಕ್ ಖೇಲ್ ಹೈ ಔರಂಗ್-ಏ-ಸುಲೇಮಾಂ ಮೇರೇ ನಜ಼ದೀಕ್
ಇಕ್ ಬಾತ್ ಹೈ ಇಜಾಜ಼್-ಏ-ಮಸೀಹಾ ಮೇರೇ ಆಗೇ
ಸುಲೇಮಾನನ ದೊರೆತನದ ತೋರಿಕೆ ನಡೆವುದು ನನ್ನ ಮಗ್ಗುಲು
ಪ್ರವಾದಿಯ ಪವಾಡವೆನ್ನುವುದು ಹೇಳಿಕೆಯ ಮಾತಷ್ಟೇ ನನ್ನ ಮುಂದೆ
ಜುಜ಼್ ನಾಮ್ ನಹೀಂ ಸೂರತ್-ಏ-ಆಲಮ್ ಮುಝೆ ಮಂಜ಼ೂರ್
ಜುಜ಼್ ವಹ್ಮ್ ನಹೀಂ ಹಸ್ತೀ-ಏ-ಅಶಿಯಾ ಮೇರೇ ಆಗೇ
ಜಗದ ದರ್ಶನವಲ್ಲ ಬರಿಯ ಹೆಸರಿದು ನನಗೊಪ್ಪದು
ಕೃತಕ ಸರಕುಗಳಿವು ಬರಿಯ ಕಣ್ಕಟ್ಟು ನನ್ನ ಮುಂದೆ
ಹೋತಾ ಹೈ ನಿಹಾಂ ಗರ್ದ್ ಮೇಂ ಸೆಹರಾ ಮೇರೇ ಹೋತೇ
ಘಿಸತಾ ಹೈ ಜಬೀನ್ ಖಾಕ್ ಪೆ ದರಿಯಾ ಮೇರೇ ಆಗೇ
ಹುಡಿಯ ಮುಸುಕು ಹೊದೆಯುತ್ತದೆ ಮರುಭೂಮಿ ನನ್ನಿರುವಿನಲ್ಲಿ
ಕೆಸರಲ್ಲಿ ಹಣೆಯ ತೇಯುತ್ತದೆ ಕಡಲು ನನ್ನ ಮುಂದೆ
ಮತ್ ಪೂಛ್ ಕಿ ಕ್ಯಾ ಹಾಲ್ ಮೇರಾ ತೇರೇ ಪೀಛೇ
ತೂ ದೇಖ್ ಕಿ ಕ್ಯಾ ರಂಗ್ ಹೈ ತೇರಾ ಮೇರೇ ಆಗೇ
ನನ್ನ ದೆಸೆಯೇನೆಂದು ಕೇಳದಿರು ಉಳಿದಿರುವೆ ನಾ ನಿನ್ನ ಹಿಂದೆ
ನಿನ್ನ ಬಣ್ಣ ಹೇಗೇರುತ್ತದೆ ನೋಡಿಕೋ ನೀ ನನ್ನ ಮುಂದೆ
ಈ ಸಾಲುಗಳನ್ನು ಒಂದು ‘ಮುಶಾಇರಾ’ (ಕವಿಗೋಷ್ಠಿ) ನಡೆದಾಗ ಎಲ್ಲರ ಮುಂದಿಟ್ಟ ಒಗಟೆಂದು ಊಹಿಸಿಕೊಳ್ಳಿ. ಗ಼ಾಲಿಬ್‌ನ ಈ ಗ಼ಜ಼ಲ್ ಮೊದಲಿಗೆ ಕೇಳುಗರನ್ನು ಮಕ್ಕಳಾಟದ ಬಯಲಿನಗುಂಟ ಕರೆದುಕೊಂಡು ಹೋಗಿ, ನಂತರ ಅವರನ್ನು ಆಧ್ಯಾತ್ಮಿಕ ಗ್ಲಾನಿಗೆ ತಳ್ಳಿ, ಕಡೆಗೆ ಒಮ್ಮೆಲೇ ಎಲ್ಲ ತಿರುವುಮುರುವು ಮಾಡಿ ಪ್ರಿಯನ ಕಣ್ಣಲ್ಲಿ ಪ್ರಿಯತಮೆಯ ರಂಗು ಹೇಗೆ ಕಾಣುವುದು ಎಂದು ಕಲ್ಪಿಸಿಕೊಳ್ಳಲು ಹೇಳಿ, ಎಲ್ಲರೂ ಅಚ್ಚರಿಯಿಂದ ಒಟ್ಟಿಗೇ ನಿಟ್ಟುಸಿರು ಬಿಡುವಂತೆ ಮಾಡಿ ನಿರುಮ್ಮಳವಾಗುತ್ತದೆ!
ಆದರೆ ದೆಹಲಿಯ ‘ಮೆಹೆಫ಼ಿಲ್’ಗಳಲ್ಲಿ (ಸಮ್ಮೇಳನ) ಗ಼ಾಲಿಬ್ ತನ್ನ ಕವಿತೆಗಳನ್ನು ವಾಚಿಸಿದಾಗ ಅವನ ಸಾಂದ್ರ ಮತ್ತು ನಿಗೂಢ ಶೈಲಿಯ ಉರ್ದು ನೆರೆದವರ ಆಸೆಗೆ ತಣ್ಣೀರೆರಚುತ್ತಿತ್ತು. ಆ ಯುಗದ ಇನ್ನೊಬ್ಬ ಕವಿಯಾಗಿದ್ದ ಹಕೀಮ್ ಆಘಾ ಜಾನ್ ಐಶ್ ಒಮ್ಮೆ ಒಂದು ಮುಶಾಇರಾದಲ್ಲಿ ಇದರ ಬಗ್ಗೆ ಹೀಗೆ ಟಿಪ್ಪಣಿ ಮಾಡಿದ್ದ:
ಅಗರ್ ಅಪನಾ ಕಹಾ ತುಮ್ ಆಪ್ ಹೀ ಸಮಝೆ ತೊ ಕ್ಯಾ ಸಮಝೆ?
ಮಜ಼ಾ ಕಹನೆ ಕಾ ಜಬ್ ಏಕ್ ಕಹೇ ಔರ್ ದೂಸರಾ ಸಮಝೇ!
ನೀನು ಹೇಳುವ ಮಾತು ನಿನಗಷ್ಟೇ ತಿಳಿದರೆ ಹೇಳಿಯೇನು ಬಂತು?
ಒಬ್ಬ ಹೇಳಿ ಇನ್ನೊಬ್ಬ ತಿಳಿದಲ್ಲಿಯೇ ಹೇಳುವುದರ ಆನಂದವುಂಟು!
ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ಮಧ್ಯ ಪ್ರಾಚ್ಯ, ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದ ಅಧ್ಯಯನಗಳ ವಿಭಾಗದಲ್ಲಿ ವಿಶ್ರಾಂತಗೌರವ ಪ್ರಾಧ್ಯಾಪಕರಾದ ಫ಼್ರ್ಯಾನ್ಸೆಸ್ ಪ್ರಿಚೆಟ್ (Frances Pritchett) ಗ಼ಾಲಿಬ್‌ನ ಕಾವ್ಯದ ಸೂಚಿಯನ್ನು ಮಾಡಿದ್ದಾರೆ.[4] ಅವರ ಪ್ರಕಾರ, ”ಗ಼ಾಲಿಬ್‌ನನ್ನು ‘ಕ್ಲಿಷ್ಟತೆಯ ಪ್ರಿಯ’ (‘ಮುಶ್ಕಿಲ್-ಪಸಂದ್’) ಕವಿ ಎಂದು ಕರೆಯಲಾಗಿದೆ. ಅದಕ್ಕೆ ಕಾರಣವಿಲ್ಲದಿಲ್ಲ. ಒಂದು ದೊಡ್ಡ ವ್ಯಾಖ್ಯಾನ ಪರಂಪರೆ ಬೆಳೆಯಲು ಸ್ಫೂರ್ತಿದುಂಬಿದ ಒಬ್ಬನೇ ಉರ್ದು ಕವಿ ಅವನು. ಕಳೆದ ಶತಮಾನದಲ್ಲಿ ಸುಮಾರು ನೂರರಷ್ಟು ವ್ಯಾಖ್ಯಾನಕಾರರು ಉರ್ದು ಓದುಗರು ಅವನ ಕಾವ್ಯವನ್ನು ಬಿಡಿಸಿ ಓದಲು ಅನುವಾಗುವಂತೆ ತಮ್ಮ ಸೇವೆಯನ್ನು ಒದಗಿಸಿದ್ದಾರೆ.”[5]
ಇಪ್ಪತ್ತನೆಯ ಶತಮಾನದ ಮೊದಲ ಭಾಗದ ಶ್ರೇಷ್ಠ ಉರ್ದು ಸಾಹಿತಿಯಾಗಿದ್ದ ಮುನ್ಶಿ ಪ್ರೇಮ್‌ಚಂದ್ ಅವರ ಮಗ ಹಾಗೂ ಸ್ವತಃ ಹಿಂದೂಸ್ತಾನಿ ಭಾಷೆಯ ಕವಿಯಾಗಿದ್ದ ಅಮೃತ್ ರಾಯ್ ಅವರಿಗೆ ಇದರ ಬಗ್ಗೆ ಕಿರಿಕಿರಿಯಿತ್ತು. ಬಹಳ ಜನರಲ್ಲಿ ಇದೇ ಭಾವನೆಯಿದ್ದರೂ ಅವರು ಈ ಅಭೇದ್ಯ ಹೊಸ ಉರ್ದುವನ್ನು ಅರ್ಥೈಸಿಕೊಳ್ಳಲಾಗದಿರುವ ಅಸಾಮರ್ಥ್ಯದ ಬಗ್ಗೆ ತಮ್ಮನ್ನೇ ಹಳಿದುಕೊಳ್ಳುತ್ತ ಸುಮ್ಮನಿದ್ದರು. ಎಲ್ಲರ ಮುಜುಗರದ ಮೌನವನ್ನು ಮೊನಚು ಮಾತಿನಿಂದ ಮುರಿಯಬೇಕೆಂದು ಅಮೃತ್ ರಾಯ್ ನಿರ್ಣಯಿಸಿದರು. ರೇಖ್ತಾದ ದೆಸೆಯಿಂದ ಅವರ ಪ್ರೀತಿಯ ಎಲ್ಲರಿಗೂ ಲಭ್ಯವಿದ್ದ ಉರ್ದು ಹೆಚ್ಚು ಹೆಚ್ಚು ಕ್ಲಿಷ್ಟವಾಗುತ್ತ ಅವರಂಥವರಿಗೂ ದಕ್ಕದಂತಾಗಿದೆಯೆಂದು ಅವರಿಗೆ ಅನ್ನಿಸಿತ್ತು. ತಮ್ಮ ತಲ್ಲಣದ ಕಾರಣಗಳನ್ನು ಅರಸುತ್ತ, ತಾವು ಕಂಡುಕೊಂಡದ್ದನ್ನು ದಾಖಲಿಸುತ್ತ, ಏಳು ವರ್ಷಗಳ ಪ್ರಯಾಸದ ನಂತರ 1984ರಲ್ಲಿ ಅವರು ‘ಒಂದು ಬೇರ್ಪಟ್ಟ ಭಾಷೆ: ಹಿಂದಿ/ಹಿಂದವೀಯ ಹುಟ್ಟು ಮತ್ತು ಬೆಳವಣಿಗೆ’ ಎಂಬ ಪುಸ್ತಕವನ್ನು ಹೊರತಂದರು.[6]
ಸರಳವಾದ ಉರ್ದು ರೇಖ್ತಾ ಆಗಿ ರೂಪಾಂತರಗೊಂಡದ್ದರ ಬಗ್ಗೆ ರಾಯ್ ಅವರಲ್ಲಿ ತೀವ್ರ ಅಸಂತುಷ್ಟಿಯಿತ್ತು. ‘ಪರ್ಷಿಯಾದಿಂದ ಬಂದ ಮೊದಲ ವಲಸಿಗರ ನೆನಪುಗಳು, ಆ ದೇಶದೊಂದಿಗಿನ ಮತ್ತು ಸಂಸ್ಕೃತಿಯೊಂದಿಗಿನ ಸಂಪರ್ಕ ಮಾಸದೇ ಹೊಚ್ಚಹೊಸದಾಗಿ ಉಳಿದುಕೊಂಡಿದೆ.’ ರೇಖ್ತಾದೊಳಗೆ ಪರ್ಷಿಯನ್ ತುಂಬಿಕೊಂಡಿರುವುದು ಅವರಿಂದಾಗಿಯಲ್ಲ. ಅಪಾರ ‘ಕೀಳರಿಮೆ’ಯ ಕೈಹಿಡಿತಕ್ಕೆ ಸಿಲುಕಿ ‘ಪರ್ಷಿಯನ್ ಭಾಷೆಯ ಬಗ್ಗೆ ಅನಾರೋಗ್ಯಕರ ಆಕರ್ಷಣೆ’ ಬೆಳೆಸಿಕೊಂಡಿರುವ ಭಾರತೀಯರ ಕೈವಾಡವಿದು. ಅವರ ಪರ್ಷಿಯನ್ ಶೈಲಿ ಮುಕ್ತವೂ ಸಹಜವೂ ಆಗಿರದೆ ‘ಗ್ರಾಂಥಿಕ’ವಾಗಿದೆ ಎಂದವರು ಹೇಳಿದ್ದರು.[7] ಇದು ‘ಮುಸಲ್ಮಾನರ ಮಾನಸಿಕ ಮತ್ತು ಭಾವನಾತ್ಮಕ ಕ್ಷೇತ್ರದಲ್ಲಿ, ಅವರ ಭಾಷಿಕ ಸ್ವಾಮಿನಿಷ್ಠೆಯ ಹೆಸರಿನಲ್ಲಿ’ ಹೊಸದೊಂದು ಉರ್ದು ಭಾಷೆಯನ್ನು ಸೃಷ್ಟಿಸುವ ಪ್ರಯತ್ನ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.[8] ದೆಹಲಿ ಸುಲ್ತಾನರು ಮತ್ತು ಮೊಘಲ್ ಸಾಮ್ರ್ಯಾಜ್ಯದ ಅವಧಿಯುದ್ದಕ್ಕೂ ವಿಸ್ಮೃತಿಯಿಂದ ಮಲಗಿದ್ದ ಮತೀಯ ಜೀನೀ ಕೊನೆಗೂ ಎಚ್ಚತ್ತು ಬಾಟಲಿಯಿಂದ ಹೊರಬಂದಿತ್ತು. ಮೊಘಲರ ಪ್ರಾಬಲ್ಯ ಇಳಿಮುಖವಾಗುತ್ತಿದ್ದಂತೆ ಸಾಹಿತ್ಯಿಕ ಮತ್ತು ಮೇಲ್ವರ್ಗದ ಮುಸಲ್ಮಾನರ ವಲಯಗಳಲ್ಲಿ ‘ಉದ್ದೇಶಪೂರ್ವಕ ಪರ್ಷಿಯನೀಕರಣ’ ಶುರುವಾಗಿತ್ತು.[9] ತೀರ ಸೌಮ್ಯವಾಗಿ ಹೇಳುವುದಾದರೆ ರಾಯ್ ಅವರು ಬಹಳ ನೊಂದಿದ್ದರು. ತಾವು ಮತ್ತು ಉಳಿದ ಅನೇಕ ಕಾವ್ಯಪ್ರಿಯರು ಇದುವರೆಗೂ ಯಾವುದರ ಭಾಗವಾಗಿದ್ದರೋ ಆ ಪ್ರೀತಿಪಾತ್ರವಾದುದರಿಂದ ಬೇಕೆಂದಲೇ ತಮ್ಮನ್ನು ದೂರ ಸರಿಸುತ್ತಿದ್ದರು ಎಂದವರಿಗೆ ಅನ್ನಿಸಿತ್ತು.
ಜ಼ಟಲ್ಲಿ ಮತ್ತು ಅವನ ಸಂಗಡಿಗರು ಕಟ್ಟೆಯೊಡೆದು ಭಾಷೆಗಳನ್ನು ಮುಕ್ತವಾಗಿ ಹರಿಯಲು ಬಿಟ್ಟಮೇಲೂ ರೇಖ್ತಾ ಅಸ್ಪಷ್ಟತೆಯತ್ತ ಜಾರುತ್ತ ಹೋಗಲು ಏನಾದರೂ ಕಾರಣವಿತ್ತೇ? ಇತ್ತೆಂದು ನನಗೆನ್ನಿಸುತ್ತದೆ. 1707ರಲ್ಲಿ ಔರಂಗಜ಼ೇಬನ ಮರಣಾನಂತರ ಮೊಘಲ್ ಸಾಮ್ರಾಜ್ಯ ಅಳಿವಿನತ್ತ ಸಾಗುತ್ತಿದ್ದುದು ಗೋಚರವಾಗುತ್ತಿತ್ತು. ಅದೇ ಸಮಯಕ್ಕೆ ಅದುವರೆಗೂ ವ್ಯಾಪಾರ ಮಾಡಿಕೊಂಡಿದ್ದು ಇಲ್ಲಿಯ ರಾಜಕೀಯ ಬೆಳವಣಿಗೆಗಳನ್ನು ದೂರದಿಂದ ಗಮನಿಸುತ್ತಿದ್ದ ಬ್ರಿಟಿಷರು ಪೂರ್ಣ ಪ್ರಮಾಣದ ರಾಜಕೀಯ ದಳವಾಗಿ ರೂಪುಗೊಳ್ಳುತ್ತಿದ್ದರು. ಪ್ಲಾಸೀ ಕದನದ ನಂತರ 1757ರ ಹೊತ್ತಿಗೆ ರಣಕಹಳೆಯು ಎಲ್ಲರಿಗೂ ಕೇಳಿಸುವಂತೆ ಮೊಳಗಿತ್ತು: ಮೊಘಲರ ಅಧಿಕಾರ ಕೇಂದ್ರವಾಗಿದ್ದ ದೆಹಲಿಯ ಮೇಲೆ ಬ್ರಿಟಿಷರ ಕಣ್ಣು ಬಿದ್ದಿತ್ತು.
1803ರಲ್ಲಿ ದೆಹಲಿಯನ್ನು ವಶಪಡಿಸಿಕೊಂಡು ಬೆಕ್ಕು ಚೆಲ್ಲಾಟವಾಡುತ್ತ ಇಲಿಯನ್ನು ಪೀಡಿಸುವಂತೆ ಕೊನೆಯ ಮೊಘಲ ಸಾಮ್ರಾಟ ಬಹದೂರ್ ಶಾಹ್ ಜ಼ಫ಼ರ್‌ನನ್ನು ಅಲ್ಲಿಯೇ ಇರಿಸಿಕೊಂಡು ಆಟವಾಡತೊಡಗಿದರು. ಗ಼ಾಲಿಬ್‌ನ ರೇಖ್ತಾ ಕವಿತೆಗಳ ವೈಪರೀತ್ಯ ಶುರುವಾದದ್ದು ಮೊಘಲ್ ಸಾಮ್ರಾಜ್ಯದ ಉಚ್ಛ್ರಾಯದಲ್ಲಲ್ಲ. ಅದಾದದ್ದು ಬ್ರಿಟಿಷರು ದೆಹಲಿಯನ್ನು ಆಕ್ರಮಿಸಿಕೊಂಡ ನಂತರದಲ್ಲಿ. ಗ಼ಾಲಿಬ್‌ನ ಆಶ್ರಯದಾತ ಸಾಮ್ರಾಟನೇ ಬ್ರಿಟಿಷರಿಂದ ಪಿಂಚಣಿ ಪಡೆಯುವ ಮಟ್ಟಕ್ಕಿಳಿದು ಅವನ ಆಳ್ವಿಕೆಯು ಕೆಂಪುಕೋಟೆಯ ಆವರಣಕ್ಕಷ್ಟೇ ಸೀಮಿತವಾಗಿದ್ದ ಆತಂಕದ ವಾತಾವರಣದಲ್ಲಿ. ವ್ಹಿಸ್ಕಿಯ ಸರಬರಾಯಿಯ ಹೊರತಾಗಿ ಅವನಿಗೆ ಸಿಗುತ್ತಿದ್ದ ಧನಸಹಾಯವೂ ಅತ್ಯಲ್ಪವಾಗಿತ್ತು. ಬ್ರಿಟಿಷರು ದೆಹಲಿಯ ಮೇಲೆ ತಮ್ಮ ಅಧಿಕಾರ ಸ್ಥಾಪಿಸುತ್ತಿದ್ದಂತೆಯೇ ತೀವ್ರ ಸಂಕಷ್ಟದ, ಅತ್ಯಂತ ಹಿಂಸೆಯ ವಿದ್ಯಮಾನಗಳಿಗೆ, ಅವನ ಆತ್ಮೀಯ ಗೆಳೆಯರ ಹವೇಲಿಗಳ ಧ್ವಂಸಕ್ಕೆ ಅವನು ಸಾಕ್ಷಿಯಾಗಬೇಕಾಯಿತು.
ಇದನ್ನು ಓದಿದ್ದೀರಾ?: ‘ಸಾಬರ ಬಜೆಟ್’ ಎಂದವರಿಗೆ ನಮ್ಮ ಹಳ್ಳಿಗಳ ಆರ್ಥಿಕ ಚಲನಶೀಲತೆಯ ಅರ್ಥ ಗೊತ್ತಿದೆಯೇ?
1857ರ ದಂಗೆಯ ನಂತರ ಬ್ರಿಟಿಷರು ಕೇವಲ ದೆಹಲಿ ನಗರದಲ್ಲಿ ಸುಮಾರು 27,000 ಜನರಿಗೆ ಗುಂಡಿಕ್ಕಿದ್ದರು ಇಲ್ಲವೇ ಗಲ್ಲಿಗೇರಿಸಿದ್ದರು.[10] ಗ಼ಾಲಿಬ್ ತೀರಿಕೊಂಡ ಐವತ್ತು ವರ್ಷಗಳ ನಂತರ ಸಂಗ್ರಹಿಸಿ ಪ್ರಕಟಿಸಿದ ಅವನ ‘ಖುತೂತ್’ — ಎಂದರೆ ಅವನು ತನ್ನ ಗೆಳೆಯರಿಗೆ ಬರೆದಿದ್ದ ಪತ್ರಗಳ ಸಂಗ್ರಹದಲ್ಲಿ — ತನ್ನ ಪ್ರೀತಿಯ ದೆಹಲಿಯ ವಿನಾಶದಿಂದಾದ ಯಾತನೆಯನ್ನು ತೋಡಿಕೊಂಡಿದ್ದಾನೆ. ಅವನ್ನು ಓದಿದರೆ ತಿಳಿಯಾದ ಲಲಿತವಾದ ಉರ್ದುವನ್ನು ಈ ಪತ್ರಗಳ ಬರೆವಣಿಗೆಗಷ್ಟೇ ಅವನು ಕಾಯ್ದಿರಿಸಿದ್ದನೇನೋ ಎನ್ನಿಸುತ್ತದೆ. ಕೆಳಗಿನ ಪತ್ರ ಅವನ ಸ್ನೇಹಿತ ಮೀರ್ ಮೆಹದೀ ಮಜ್ರೂವಿಗೆ ಬರೆದದ್ದು:[11]
ಭಾಯೀ! ಕ್ಯಾ ಪೂಛತೇ ಹೈಂ? ಕ್ಯಾ ಲಿಖೂಂ? ದಿಲ್ಲೀ ಕೀ ಹಸ್ತೀ ಮುಂಹಾಸಿರ್ ಕಯೀ ಹಂಗಾಮೋಂ ಪರ್ ಥೀ; ಕ಼ಿಲಾ, ಚಾಂದನಿ ಚೌಕ್, ಹರ್ ರೋಜ಼್ ಮಜ್ಮಾ ಬಜ಼ಾರ್-ಎ ಜಾಮಾ ಮಸ್ಜಿದ್ ಕಾ, ಹರ್ ಹಫ಼್ತೇ ಸೈರ್ ಜಮ್ನಾ ಕೆ ಪುಲ್ ಕೀ, ಹರ್ ಸಾಲ್ ಮೇಲಾ ಫೂಲ್ ವಾಲೋಂ ಕಾ — ಯೇ ಪಾಂಚೋಂ ಬಾತೇಂ ಅಬ್ ನಹೀಂ — ಫಿರ್ ಕಹೋ, ದಿಲ್ಲೀ ಕಹಾಂ? ಹಾಂ, ಕೋಯೀ ಶಹರ್ ಕ಼ಲಮ್ರಾವ್-ಎ-ಹಿಂದ್ ಮೇಂ ಇಸ್ ನಾಮ್ ಕಾ ಥಾ …
ಸೋದರನೇ! ಏನಂತ ಕೇಳುತ್ತೀಯೆ? ಏನಂತ ಹೇಳಲಿ? ದೆಹಲಿ ಕೆಲವು ಸಂಗತಿಗಳ ಆಸರೆಯ ಮೇಲೆ ನಿಂತಿತ್ತು, ಅವು ಒಂದು ಬಗೆಯ ಸಡಗರದ ಭಾವವನ್ನು ಎಬ್ಬಿಸುತ್ತಿದ್ದುವು; ಕೋಟೆ, ಚಾಂದನಿ ಚೌಕ್, ಜಾಮಾ ಮಸೀದಿಯ ಪೇಟೆಯ ನಿತ್ಯದ ಗೌಜಿ ಗದ್ದಲ, ಜಮುನಾ ಸೇತುವೆಯ ಮೇಲೆ ವಾರಕ್ಕೊಮ್ಮೆ ತಿರುಗಾಟ, ವರ್ಷಕ್ಕೊಮ್ಮೆ ನಡೆಯುತ್ತಿದ್ದ ಹೂವಿನ ಮೇಳ — ಈ ಐದೂ ಇನ್ನಿಲ್ಲ — ಈಗ ಹೇಳು, ಎಲ್ಲಿದೆ ದೆಹಲಿ? ಹಾಂ, ಒಂದೊಮ್ಮೆ ಹಿಂದುಸ್ತಾನದ ನೆಲದ ಮೇಲೆ ಆ ಹೆಸರಿನ ಒಂದು ಶಹರವಿತ್ತು…
ಇದೆಲ್ಲ ಇದ್ದರೂ, ಉರ್ದು ವಿದ್ವಾಂಸ ಮತ್ತು ಭಾಷಾಶಾಸ್ತ್ರಜ್ಞ ಗೋಪಿಚಂದ್ ನಾರಂಗ್ ಅವರು ಹೇಳುವಂತೆ, ಬ್ರಿಟಿಷರ ಬಗ್ಗೆ ಗ಼ಾಲಿಬ್‌ನ ಭಾವನೆಗಳು ಮೇಲಿನ ಪತ್ರದಲ್ಲಿ ಕಾಣುವಷ್ಟು ನೇರವಲ್ಲದೇ ಬಹಳಷ್ಟು ತೊಡಕಿನವಾಗಿದ್ದುವು. ಅವನ ಪತ್ರಗಳಲ್ಲೂ ದ್ವಿಪದಿಗಳಲ್ಲೂ ‘ಇನಾಮು’ ಎಂಬ ಪದ ಮರುಕಳಿಸುತ್ತಿರುತ್ತದೆ. ಅದಕ್ಕೊಂದು ನಿರ್ದಿಷ್ಟ ಅರ್ಥವೂ ಇದೆ. ಬ್ರಿಟಿಷರು ಬಂದ ನಂತರ ರಾಜದರಬಾರಿನಿಂದ ಅವನಿಗೆ ಬರುತ್ತಿದ್ದ ವೇತನ ತಪ್ಪಿ ಹೋಗಿ ಅವನಿಗೆ ಸಾಲ ಮಾಡಿ ಬದುಕುವ ಪರಿಸ್ಥಿತಿ ಬಂದಿತ್ತು. ಹತಾಶ ಸ್ಥಿತಿಯಲ್ಲಿ ಅವನು ಪರ್ಷಿಯನ್‌ನಲ್ಲಿ ಬರೆದಿದ್ದ ಆ ಅವಧಿಯ ಕಾಲಾನುಕ್ರಮ ದಾಖಲೆಯಾಗಿದ್ದ ‘ದಸ್ತಾಂಬೂ’ನ ಮೂಲಪ್ರತಿಯನ್ನು ನಾಶ ಮಾಡಿದ. ಇನ್ನು ಮುಂದೆ ಬ್ರಿಟಿಷ್ ಸ್ವಾಮ್ಯದ ಕುರಿತು ಸಕಾರಾತ್ಮಕ ವಿಷಯಗಳನ್ನಷ್ಟೇ ಬರೆಯುವ ನಿರ್ಧಾರ ಮಾಡಿದ. ಹಾಗೆ ಮಾಡಿದರೆ ತನ್ನ ಪಿಂಚಣಿ ಮತ್ತೆ ಚಾಲ್ತಿಗೆ ಬರಬಹುದು ಎಂಬ ಹುಸಿ ಭರವಸೆ ತಳೆದ. ಬ್ರಿಟಿಷರಿಂದ ಅವನು ನಿಜಕ್ಕೂ ಬಯಸಿದ್ದು ನಿಯಮಿತ ಭತ್ಯೆಯೊಂದಿಗೆ ಆಸ್ಥಾನ ಕವಿಯೆಂಬ ಸ್ಥಾನದ ಅನುದಾನ. ಕಾಲಮಾನ ಸ್ಥಿರವಾಗಿದ್ದಲ್ಲಿ ಅದು ಸಾಧ್ಯವೂ ಇದ್ದಿತೇನೋ. ‘ದಸ್ತಾಂಬೂ’ ಪ್ರಕಟಿಸಿದ್ದು ಮುಂದೆ ಅದರಿಂದ ಯಾವುದೋ ರೀತಿ ಅನುಕೂಲವಾಗಬಹುದೆಂಬ ಕಾರಣದಿಂದ ಮಾತ್ರ. ದಂಗೆಕೋರರು ದೆಹಲಿಯನ್ನು ವಶಪಡಿಸಿಕೊಂಡು ನಾಲ್ಕು ತಿಂಗಳಗಳ ಕಾಲ ಅದನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದರೂ ಗ಼ಾಲಿಬ್ ದಂಗೆಕೋರರ ಆಕ್ರಮಣದ ವರ್ಣನೆಯನ್ನು ಐದಾರು ಪುಟಗಳಷ್ಟರಲ್ಲಿಯೇ ಮುಗಿಸಿಬಿಟ್ಟಿದ್ದ; ಬಹುತೇಕ ವಿದ್ವಾಂಸರು ಹೇಳುವುದೇನೆಂದರೆ, ಗ಼ಾಲಿಬ್ ಮೊದಲಿನ ಘಟನೆಗಳನ್ನು ವಿಸ್ತಾರವಾಗಿ ನಿರೂಪಿಸಿದ್ದರೂ, (ಬ್ರಿಟಿಷರು) ದೆಹಲಿಯನ್ನು ಗೆದ್ದುಕೊಂಡ ನಂತರ ಮೂಲ ಹಸ್ತಪ್ರತಿಯನ್ನು ಪ್ರಕಟಿಸುವುದು ಸೂಕ್ತವಾಗಿರಲಿಲ್ಲ. ವಾಸ್ತವದಲ್ಲಿ, ‘ದಸ್ತಾಂಬೂ’ವನ್ನು ಹೊರ ತಂದದ್ದೇ ಅದನ್ನು ಬ್ರಿಟಿಷರಿಗೆ ಪ್ರಸ್ತುತಪಡಿಸಬೇಕೆನ್ನುವ ಉದ್ದೇಶದಿಂದ. ಗ಼ಾಲಿಬ್‌ನ ಟಿಪ್ಪಣಿಯನ್ನೇ ಗಮನಿಸಬಹುದು: ”ಮನವಿದಾರನು ಈಸ್ಟ್ ಇಂಡಿಯಾ ಕಂಪನಿಯ ಸಾಗರೋತ್ತರ ಇಲಾಖೆಗೆ (ಅದರ ನಿರ್ದೇಶಕ ಮಂಡಳಿಗೆ) ತನ್ನ ಹಕ್ಕು ಮಾನ್ಯತೆಯ ಬಗ್ಗೆ ನೆನಪಿಸುತ್ತ ಸರಕಾರದಿಂದ ಮನ್ನಣೆಯನ್ನು ಬಯಸುತ್ತಾನೆ.”[12]
ಶತಮಾನಗಳ ಕಾಲ ಅಧಿಕಾರ ನಡೆಸಿದ ನಂತರ ಬ್ರಿಟಿಷ್ ಇಂಡಿಯಾದಲ್ಲಿ ಕೇವಲ ಅಲ್ಪಸಂಖ್ಯಾತ ಗುಂಪಿನ ಸ್ಥಾನಕ್ಕಿಳಿದು ಮೂಲೆಗುಂಪಾದದ್ದು ಮೊಘಲ್ ಗಣ್ಯವರ್ಗದವರ ಪಾಲಿಗೆ ಕಟ್ಟಕಡೆಯ ಹೊಡೆತವಾಗಿತ್ತು. ಅಧಿಕಾರದ ಜೊತೆ ಆತ್ಮಸ್ಥೈರ್ಯವೂ ಇದ್ದಾಗ ಅದು ಎಲ್ಲೆಡೆ ತಲುಪಿ ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನ ಮಾಡುತ್ತದೆ. ಭಾಷೆಗೂ ಇದು ಅನ್ವಯವಾಗುತ್ತದೆ. ನಾಡಿನ ಜನರನ್ನು ಒಗ್ಗೂಡಿಸುವ ಮೂಲ ಉದ್ದೇಶದಿಂದ ಹುಟ್ಟಿದ್ದ ರೇಖ್ತಾ ಆತ್ಮವಿಶ್ವಾಸ ಕಳೆದುಕೊಂಡು ತನ್ನ ಸುತ್ತಲೂ ಪರ್ದಾ ಸುತ್ತಿಕೊಂಡು ತನ್ನ ಮೇಲೆ ಅಪರಿಚಿತರ ಕಣ್ಣು ಬೀಳಬಾರದೆಂದು ಮುಖ ಮುಚ್ಚಿಕೊಂಡಿತು.
ಗ಼ಾಲಿಬ್ ತನ್ನ ಗೆಳೆಯ ಹಕೀಮ್ ಗ಼ುಲಾಮ್ ನಜಾಫ಼್ ಖಾನ್‌ನಿಗೆ 1857ರ ಡಿಸೆಂಬರ್ 26ರಂದು ಬರೆದ ಪತ್ರದ ಒಕ್ಕಣೆ ಹೀಗಿತ್ತು:[13]
ಇನ್‌ಸಾಫ಼್ ಕರೋ, ಲಿಖೂಂ ತೊ ಕ್ಯಾ ಲಿಖೂಂ? ಕುಛ್ ಲಿಖ್ ಸಕ್ತಾ ಹೂಂ? ಕುಛ್ ಕ಼ಾಬಿಲ್ ಲಿಖನೇ ಕೆ ಹೈ? ತುಮ್ ನೇ ಜೋ ಮುಝ್ ಕೋ ಲಿಖಾ ತೊ ಕ್ಯಾ ಲಿಖಾ? ಔರ್ ಅಬ್ ಜೊ ಮೈಂ ಲಿಖತಾ ಹೂಂ ತೊ ಕ್ಯಾ ಲಿಖಾ ಹೂಂ? ಬಸ್, ಇತನಾ ಹೀ ಹೈ ಕಿ ಅಬ್ ತಕ್ ಹಮ್-ತುಮ್ ಜೀತೇ ಹೈಂ. ಜ಼್ಯಾದಾ ಇಸ್ ಸೆ ನ ತುಮ್ ಲಿಖೋಗೆ, ನ ಮೈಂ ಲಿಖೂಂಗಾ.
ಔಚಿತ್ಯವನ್ನು ತೋರು. ಬರೆಯುವುದಾದರೆ ಏನನ್ನು ಬರೆಯಲಿ? ಏನಾದರೂ ಬರೆಯಲು ಸಾಧ್ಯವಾದೀತೇ? ಬರೆಯಲು ಯೋಗ್ಯವಾದುದು ಏನಿದರೂ ಇದೆಯೇ? ನೀನು ನನಗೆ ಬರೆದಿದ್ದೀಯಲ್ಲ, ನಿಜಕ್ಕೂ ಏನು ಬರೆದಿದ್ದೀಯ? ಮತ್ತೆ ನಾನೀಗ ಬರೆಯುತ್ತಿದ್ದೀನಲ್ಲ, ಏನು ಬರೆದಿದ್ದೇನೆ? ಇದುವರೆಗೂ ನಾನು ನೀನು ಬದುಕಿದ್ದೀವಲ್ಲ, ಅಷ್ಟು ಸಾಕು. ಅದಕ್ಕಿಂತ ಹೆಚ್ಚಿನದು ನೀನೂ ಬರೆಯುವುದಿಲ್ಲ, ನಾನೂ ಬರೆಯುವುದಿಲ್ಲ.
[1] Blackwell 2008: 34. The British Impact on India, 1700–1900. Volume 13:2 (Fall 2008): Asia in World History: 1750-1914.
[2] DELHI – Conversation about the controversial Mughal poet Jafar Zatalli: About the man who wrote gandunama and much more. Published in the blog ‘Delhi. Bombay. Goa’ on June 19th, 2013.
[3] ಅಲಿಗಢದಲ್ಲಿ ನಾನು ಇರ್ಫಾನ್ ಹಬೀಬ್ ಅವರನ್ನು ಭೇಟಿಯಾದಾಗ ಅವರು ಉರ್ದುವಿನ, ಎಂದರೆ ಸಾಹಿತ್ಯಿಕ ರೇಖ್ತಾದ, ಹುಟ್ಟಿದ ಕಾಲವನ್ನು ನಿಯಮಿಸಿದ್ದು ಈ ರೀತಿಯಲ್ಲಿ — ಲೇ
[4] Divan-e Ghalib — Ghazal Index, available on Frances Pritchett’s website.
[5] Ibid.
[6] A Language Divided: The Origin and Development of Hindi/Hindavi. Rai 1984.
[7] Ibid.: 232-34.
[8] Ibid.: 288.
[9] Ibid.: 275.
[10] Narang and Abel (1968-69). ನಾರಂಗ್ ಮತ್ತು ಏಬೆಲ್ ಅವರ ಲೇಖನದ ಟಿಪ್ಪಣಿ 4ನ್ನು ಗಮನಿಸಿ.
[11] Urdu-e-Mualla: 136 (TBD)
[12] Ibid.: 48.
[13] Khutūt-e-Ghalib, Vol. 2: 624.
ಪರಿಚಯ:
ಪೆಗ್ಗಿ ಮೋಹನ್: ವೆಸ್ಟ್ ಇಂಡೀಸ್‌ನ ಟ್ರಿನಿಡ್ಯಾಡ್ ಮತ್ತು ಟೊಬೇಗೋನಲ್ಲಿ ಹುಟ್ಟಿ ಬೆಳೆದ ಪೆಗ್ಗಿ ಮೋಹನ್ ಮುಂದೆ ಅಮೆರಿಕಾದ ಮಿಶಿಗನ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ ಪಡೆದಿದ್ದಾರೆ. ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತು ವಾಷಿಂಗ್ಟನ್ ಡಿ.ಸಿ.ಯ ಹಾವರ್ಡ್ ವಿಶ್ವವಿದ್ಯಾಲಯಗಳಲ್ಲಿ ಭಾಷಾಶಾಸ್ತ್ರವನ್ನು ಹಾಗೂ ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನವನ್ನು ಬೋಧಿಸಿದ್ದಾರೆ. ಮೂರು ಕಾದಂಬರಿಗಳನ್ನು ರಚಿಸಿದ್ದಲ್ಲದೇ, ‘ಲ್ಯಾಂಗ್‌ವೇಜ್’, ‘ಇಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್‌ಲಿ’ ಮತ್ತು ‘ಐಐಎಸ್‌ಸಿ ಕ್ವಾರ್ಟರ್‍ಲಿ’ಯಂಥ ಖ್ಯಾತ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಮಕ್ಕಳಿಗಾಗಿ ಶಿಕ್ಷಣವನ್ನು ಕುರಿತ ಕಾರ್ಯಕ್ರಮಗಳನ್ನು ಸಿದ್ಧಪಡಿಸಿರುವ ಅವರು ಕಾರ್ಟೂನ್ ಆ್ಯನಿಮೇಶನ್ ಕಲೆ ಮತ್ತು ಓಪರಾ ಗಾಯನವನ್ನೂ ಕಲಿತಿದ್ದಾರೆ. ಪ್ರಸ್ತುತ ನವದೆಹಲಿಯ ವಸಂತ್ ವ್ಯಾಲಿ ಶಾಲೆಯಲ್ಲಿ ಸಂಗೀತದ ಶಿಕ್ಷಕಿಯಾಗಿದ್ದಾರೆ.
ಸಂಕೇತ ಪಾಟೀಲ: ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಬೆಟಗೇರಿಯವರು. ಬೆಂಗಳೂರಿನಲ್ಲಿ ನೆಲೆಸಿರುವ ಇವರು ಗಣಕ ವಿಜ್ಞಾನ ಕ್ಷೇತ್ರದಲ್ಲಿ ಪಿಎಚ್.ಡಿ ಪದವಿ ಪಡೆದು, ಸಣ್ಣ ಸಾಫ್‌ವೇರ್ ಕಂಪನಿ ಕಟ್ಟಿ ಬೆಳೆಸುತ್ತಿದ್ದಾರೆ. ಕನ್ನಡ ಸಾಹಿತ್ಯದೊಂದಿಗೆ ವಿಶ್ವಸಾಹಿತ್ಯದ ಬಗ್ಗೆಯೂ ಇವರಿಗೆ ವಿಶೇಷ ಒಲವು. ಅನುವಾದ ಕಲೆಯೂ ಆಪ್ತ. ಇದುವರೆಗೂ ಅನೇಕ ಭಾಷೆಗಳ ಬಿಡಿ ಕವಿತೆ, ಕಥೆಗಳನ್ನು ಅನುವಾದಿಸಿದ್ದಾರೆ. ಸ್ನೇಹಿತರೊಂದಿಗೆ ‘ಕೊನರು’ ಸಾಹಿತ್ಯಿಕ ಸಾಂಸ್ಕೃತಿಕ ಆನ್ಲೈನ್ ಕಿರುಪತ್ರಿಕೆ ಆರಂಭಿಸಿದ್ದಾರೆ. ಇವರ ಮೊದಲ ಅನುವಾದಿತ ಕೃತಿ ಪ್ರಕಟಣೆಯ ಹಂತದಲ್ಲಿದೆ.
(ಪುಸ್ತಕಕ್ಕಾಗಿ: 99726 73611, 98866 94580)

ಪೆಗ್ಗಿ ಮೋಹನ್ ಅವರು ತಿಳಿಸಿಕೊಡುವ ಭಾಷೆಗಳ ಹುಟ್ಟು, ಸಂಕರ, ಮೇಲುಗೈ ಸಾಧಿಸುವ ಬಗೆ , ಮಡಿವಂತಿಕೆ, ಶುದ್ಧತೆ ಇವೆಲ್ಲವೂ ನಾವು ನಂಬಿರುವ ವಿಚಾರಗಳಿಗೆ ಹೋಲಿಸಿದರೆ ಅವು ತಲೆಕೆಳಗಾಗಿ ಕಂಡುಬಂದರೆ ಅದು ಅವರು ತಪ್ಪಲ್ಲ…. ಜಗತ್ತಿನಲ್ಲಿ ಶುದ್ಧವಾದ ಭಾಷೆ ಯಾವುದೆಂದರೆ, ಅದು ಸಹಸ್ರಾರು ವರ್ಷಗಳಿಂದ ಎಲ್ಲದರಿಂದ ದೂರವೇ ಉಳಿದಿರುವ ಅಂಡಮಾನ್ ದ್ವೀಪ ವಾಸಿಗಳು ಭಾಷೆ ಎಂದು ಹೇಳಲು ಹಿಂಜಯರಿದ ವಿದ್ವಾಂಸೆ…!
ಈ ದಿನ ವೆಬ್ ತಾಣಕ್ಕೆ ಭೇಟಿ ನೀಡಿ, ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಸರ್
ಹೊಸ ವಿಚಾರಗಳಿಗೆ, ನವೋನ್ಮೇಷಶಾಲಿಯಾಗಿ ತನ್ನನ್ನು ತೆರೆದುಕೊಳ್ಳುತ್ತಿರುವ ಈದಿನ ಪತ್ರಿಕಾ ತಂಡಕ್ಕೆ ಅಭಿನಂದನೆಗಳು