ಹನಿಟ್ರ್ಯಾಪ್ ಬಗೆಗಿನ ಹಸಿ ಹಸಿ ಚರ್ಚೆ... ಇಡೀ ಶಾಸನಸಭೆಯೇ ಎಸಗಿದ ಅಪಚಾರ. ರಾಜ್ಯದ ಜನತೆಗೆ ಮಾಡಿದ ಅವಮಾನ. ಮುಖ್ಯಮಂತ್ರಿ ಆದಿಯಾಗಿ ಆಡಳಿತ-ವಿರೋಧ ಪಕ್ಷಗಳ ಪ್ರತಿಯೊಬ್ಬರು ಇದರ ಹೊಣೆ ಹೊತ್ತುಕೊಳ್ಳಬೇಕಿದೆ.
ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ಪರಸ್ಪರ ಕೆಸರೆರಚಾಟದಲ್ಲಿಯೇ ಕರ್ನಾಟಕ ಬಜೆಟ್ ಅಧಿವೇಶನ ಮುಗಿದುಹೋಗಿದೆ. ಅಧಿವೇಶನದ ಕೊನೆಯ ದಿನ ಸಭಾಧ್ಯಕ್ಷರಿಗೆ ಅಗೌರವ ತೋರಿದ ಆರೋಪದಲ್ಲಿ ಬಿಜೆಪಿ 18 ಶಾಸಕರನ್ನು ಆರು ತಿಂಗಳ ಅವಧಿಗೆ ಸದನದಿಂದ ಅಮಾನತು ಮಾಡಲಾಗಿದೆ. ಇಲ್ಲಿ ಅಗೌರವ ತೋರಿದ್ದು ಯಾರು? ಸ್ಪೀಕರ್ಗೆ ಮಾತ್ರವೇ ಅವಮಾನ ಆಗಿದೆಯಾ? ಎಂಬ ನೈತಿಕ ಪ್ರಶ್ನೆಗಳಿವೆ. ಈ ಪ್ರಶ್ನೆಗಳಿಗೆ ರಾಜ್ಯದ ಆಡಳಿತ-ವಿರೋಧ ಪಕ್ಷಗಳ ಬಳಿ ಉತ್ತರವಿಲ್ಲ. ಆದರೆ, ಇದು ಸ್ಪೀಕರ್ಗೆ ಮಾತ್ರವೇ ಅಪಮಾನವಲ್ಲ, ಇಡೀ ಕರ್ನಾಟಕಕ್ಕೆ ವಿಧಾನ ಮಂಡಲ ಮಾಡಿದ ಅವಮಾನ.
ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕರ್ನಾಟಕ ತನ್ನದೇ ಆದ ಹಿರಿಮೆ ಹೊಂದಿದೆ. ನಾನಾ ಮೈಲಿಗಲ್ಲುಗಳನ್ನು ಹಾಕಿಕೊಂಡಿದೆ. ಹಲವಾರು ವಿಷಯಗಳಲ್ಲಿ ದೇಶಕ್ಕೆ ಮಾದರಿಯೂ ಆಗಿದೆ. ಆದರೆ, ಪ್ರಸ್ತುತ ದಿನಮಾನಗಳಲ್ಲಿ ರಾಜ್ಯ ರಾಜಕಾರಣವು ಪಕ್ಷಾಂತರ, ಆಪರೇಷನ್ ಕಮಲ, ಹನಿಟ್ರ್ಯಾಪ್ಗಳಂತಹ ವಿಕೃತಿಗಳೊಂದಿಗೆ ಕರ್ನಾಟಕದ ಹಿರಿಮೆಗೆ ಕಪ್ಪುಚುಕ್ಕೆಯಾಗುತ್ತಿದೆ.
ಭಾರತದಲ್ಲಿ ರಾಜ್ಯ ಚುನಾವಣೆಗಳು ಆರಂಭವಾದ ಸಮಯದಲ್ಲಿ ಇಡೀ ದೇಶದಲ್ಲಿಯೇ ವಿಧಾನಸಭೆಯ ಕಲಾಪಗಳು ಮತ್ತು ಕಾರ್ಯನಿರ್ವಹಣೆಗಾಗಿ ವಿಧಾನಸೌಧ ಎಂಬುದು ಇದ್ದದ್ದು ಕರ್ನಾಟಕದಲ್ಲಿ ಮಾತ್ರ. 1956ರಲ್ಲಿಯೇ ಕರ್ನಾಟಕವು ವಿಧಾನಸೌಧವನ್ನು ಹೊಂದಿತ್ತು. ಆನಂತರವೇ ಉಳಿದ ರಾಜ್ಯಗಳು ವಿಧಾನಸೌಧವನ್ನು ಕಟ್ಟಿಕೊಂಡವು.
70ರ ದಶಕದಲ್ಲಿ ಭೂಸುಧಾರಣೆಗಾಗಿ ‘ಉಳುವವನೆ ಭೂ ಒಡೆಯ’ ಎಂಬ ಘೋಷಣೆಯೊಂದಿಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ’20 ಅಂಶಗಳ ಕಾರ್ಯಕ್ರಮ’ವನ್ನು ಜಾರಿಗೆ ತಂದರು. ಅದರಂತೆ, ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು 1974ರಲ್ಲಿ ‘ಭೂ ಸುಧಾರಣಾ ತಿದ್ದುಪಡಿ ಕಾಯ್ದೆ’ಯನ್ನು ಅನುಷ್ಠಾನಗೊಳಿಸಿದರು. ಭೂರಹಿತ ರೈತರಿಗೆ ಭೂಮಿ ದೊರೆಯುವಂತೆ ಮಾಡಿದರು. ಭೂಸುಧಾರಣೆ ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.
ಭೂ ಹಂಚಿಕೆಯೊಂದಿಗೆ ಒಬಿಸಿ ಸಮುದಾಯದ ಸಂಖ್ಯೆ ಹೆಚ್ಚಾಯಿತು. ತೀರಾ ಹಿಂದುಳಿದ ಸಮುದಾಯಗಳಿಗೂ ಭೂಹಿಡುವಳಿ ದೊರೆಯಿತು. ಹಿಂದುಳಿದ ಮತ್ತು ತಳ ಸಮುದಾಯಗಳು ಸ್ವಾವಲಂಬಿಗಳಾಗಲು ಅವಕಾಶ ಮಾಡಿಕೊಟ್ಟಿತು.
ಭಾರತದಲ್ಲಿ ಈಗಲೂ ಬೆರಳೆಣಿಕೆಯಷ್ಟು ರಾಜ್ಯಗಳು ಮಾತ್ರವೇ ವಿಧಾನ ಪರಿಷತ್ಅನ್ನು ಹೊಂದಿವೆ. ರಾಜ್ಯದ ಆಡಳಿತದಲ್ಲಿ ತಜ್ಞರು, ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವವರು ಸರ್ಕಾರಕ್ಕೆ ಸಲಹೆಗಳನ್ನು ನೀಡಬೇಕು, ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂಬ ಕಾರಣಕ್ಕಾಗಿ ಮೊದಲಿಗೆ ವಿಧಾನ ಪರಿಷತ್ಅನ್ನು ರಚಿಸಿಕೊಂಡ ರಾಜ್ಯಗಳಲ್ಲಿಯೂ ಕರ್ನಾಟಕ ಮೊದಲನೆಯದು.
ಅಂತೆಯೇ, ಅಧಿಕಾರ ವಿಕೇಂದ್ರೀಕರಣದಲ್ಲಿಯೂ ಕರ್ನಾಟಕವು ಭಾರತಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ. 1983ರಲ್ಲಿ ರಾಜ್ಯದಲ್ಲಿ ಅಂದಿನ ಜನತಾ ಪಕ್ಷ ಸರ್ಕಾರವು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸಿತು. ಆಗ ಕೇಂದ್ರ ಅಧಿಕಾರದಲ್ಲಿದ್ದ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕರ್ನಾಟಕವನ್ನು ಶ್ಲಾಘಿಸಿತು. ವಿರೋಧ ಪಕ್ಷವೊಂದರ ಕೆಲಸವನ್ನು ಮತ್ತೊಂದು ಪಕ್ಷ ಶ್ಲಾಘಿಸುವ ಅಪರೂಪದ ನಿದರ್ಶನಕ್ಕೆ ಅಂದಿನ ಜನತಾ ಪಕ್ಷದ ರಾಜ್ಯ ಸರ್ಕಾರ ಮತ್ತು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಸಾಕ್ಷಿಯಾದವು. ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿಗಳನ್ನು ತಂದು, ಸ್ಥಳೀಯ ಆಡಳಿತ ಸಂಸ್ಥೆಗಳನ್ನು ಬಲಪಡಿಸಲು ಸಾಧ್ಯವಾಗುವಂತೆ ಮಾಡಿತು.
ನಗರಗಳ ಅಭಿವೃದ್ದಿಯಲ್ಲಿಯೂ ಕರ್ನಾಟಕವು ಮಾದರಿ ರಾಜ್ಯವಾಗಿದೆ. ರಾಜ್ಯಗಳ ಪುನರ್ರಚನೆಯ ಸಮಯದಲ್ಲಿ ರಾಜ್ಯ ರಾಜಧಾನಿಯಾಗಿ ಬೆಂಗಳೂರನ್ನು ವಿಶಿಷ್ಟವಾಗಿ ಅಭಿವೃದ್ಧಿ ಮಾಡಲಾಯಿತು. ನಗರಾಭಿವೃದ್ಧಿಗೆ ಬೆಂಗಳೂರು ವಿವಿಧ ರಾಜ್ಯಗಳಿಗೆ ಮಾದರಿಯಾಯಿತು. ಬೆಂಗಳೂರಿನ ಮಾದರಿಯಲ್ಲಿ ಹೈದರಾಬಾದ್ ಸೇರಿದಂತೆ ಹಲವು ನಗರಗಳು ನಿರ್ಮಾಣವಾದವು. ಅಭಿವೃದ್ಧಿಗೊಂಡವು.
ಇಂತಹ ಹತ್ತಾರು ಹಿರಿಮೆಗಳನ್ನು ಕರ್ನಾಟಕ, ಕರ್ನಾಟಕ ಸರ್ಕಾರ, ಕರ್ನಾಟಕದ ಶಾಸನಸಭೆಗಳು ಪಡೆದುಕೊಂಡಿವೆ. ಆದರೆ, ಕಳೆದ 20 ವರ್ಷಗಳಿಂದೀಚೆಗೆ ಕರ್ನಾಟಕವು ರಾಜಕಾರಣದಲ್ಲಿ ಏನೆಲ್ಲ ನಡೆಯಬಾರದು ಎಂಬುದಕ್ಕೂ ಮಾದರಿಯಾಗುತ್ತಿದೆ. ಈ ಎರಡು ದಶಕಗಳ ರಾಜಕಾರಣವು ಕರ್ನಾಟಕಕ್ಕೆ ಕಪ್ಪು ಚುಕ್ಕೆಯಾಗಿ ಕಾಣಿಸಿಕೊಂಡಿದೆ.
ಹಸಿ ಹಸಿಯಾಗಿ ಭ್ರಷ್ಟಾಚಾರ ನಡೆಸಿ, ಹಗರಣಗಳ ಆರೋಪ ಹೊತ್ತು ಜೈಲು ಸೇರಿದ ಮೊದಲ ಮುಖ್ಯಮಂತ್ರಿ ಕರ್ನಾಟಕದವರೇ ಆಗಿದ್ದಾರೆ. ಬಿಜೆಪಿ ಈ ಕೊಡುಗೆ ಕೊಟ್ಟಿದೆ. ಜೊತೆಗೆ, ಆಪರೇಷನ್ ಕಮಲದಂತಹ ಅಸಹ್ಯವನ್ನೂ ಕರ್ನಾಟಕದ ಮೂಲಕ ಬಿಜೆಪಿಯೇ ದೇಶಕ್ಕೆ ಪರಿಚಯಿಸಿದೆ. ಹಿಂದೆಯೂ ಉತ್ತರ ಭಾರತದಲ್ಲಿ ಪಕ್ಷಾಂತರ ಎಗ್ಗಿಲ್ಲದೆ ನಡೆಯುತ್ತಿತ್ತು. ಆ ಕಾರಣಕ್ಕಾಗಿಯೇ ಪಕ್ಷಾಂತರ ನಿಷೇಧ ಕಾಯ್ದೆಯೂ ಜಾರಿಯಾಯಿತು. ಆದರೆ, ಹಣ ಕೊಟ್ಟು ಖರೀದಿಸಿ, ಆಮಿಷವೊಡ್ಡಿ ಶಾಸಕರನ್ನು ಹೊತ್ತೊಯ್ಯುವ, ಇಡೀ ಸರ್ಕಾರವನ್ನೇ ಉರುಳಿಸುವ ಅಪಸವ್ಯವನ್ನು ಬಿಜೆಪಿ ಕರ್ನಾಟಕದಲ್ಲಿ ಪ್ರಯೋಗಿಸಿ, ಯಶಸ್ವಿಯಾಯಿತು. ಆ ನಂತರ, ಹಲವು ರಾಜ್ಯಗಳಿಗೆ ‘ಆಪರೇಷನ್ ಕಮಲ’ವನ್ನು ವಿಸ್ತರಿಸಿತು.
ಚುನಾವಣಾ ಖರ್ಚಿನಲ್ಲಿಯೂ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ. ಚುನಾವಣೆಗಳಲ್ಲಿ ಹೆಚ್ಚು ಖರ್ಚು ಮಾಡುವ ರಾಜ್ಯವು ಕರ್ನಾಟಕವೇ ಆಗಿದೆ. ಈಗ ಕರ್ನಾಟಕಕ್ಕೆ ತೆಲಂಗಾಣ ಪೈಪೋಟಿ ನೀಡುತ್ತಿದೆ. ವಿಧಾನಸಭೆಯಲ್ಲಿ ನೀಲಿಚಿತ್ರ ನೋಡಿ ಶಾಸಕರು ‘ರೆಡ್ಹ್ಯಾಂಡ್’ ಆಗಿ ಸಿಕ್ಕಿಕೊಂಡ ದುರದೃಷ್ಟ ಘಟನೆಗಳಿಗೂ ಕರ್ನಾಟಕವೇ ಸಾಕ್ಷಿಯಾಗಿದೆ. ಹಲವಾರು ಶಾಸಕರು ಸದನಗಳಲ್ಲಿ ನೀಲಿಚಿತ್ರಗಳನ್ನು ವೀಕ್ಷಿಸಿ ಸದನದ ಮಾನ ಹರಾಜು ಹಾಕಿದ್ದಾರೆ.
ಈ ವರದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಸ್ಯಾಂಕಿ ಕೆರೆಯಲ್ಲಿ ಸರ್ಕಾರಿ ಪ್ರಾಯೋಜಿತ ಮೌಢ್ಯಾರತಿ, ಯಾರಿಗಾಗಿ?
ಹನಿಟ್ರ್ಯಾಪ್ ಎಂಬ ವಿಕೃತ, ಅಸಹ್ಯಕರ ಕೃತ್ಯಗಳಿಗೂ ಕರ್ನಾಟಕ ಮೊದಲನೆಯದ್ದಾಗಿದೆ. 2018ರಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿದ 17 ಮಂದಿ ‘ಬಾಂಬೆ ಬಾಯ್ಸ್’ಗಳ ಮೇಲೆ ಬಿಜೆಪಿಯೇ ಹನಿಟ್ರ್ಯಾಪ್ ಮಾಡಿದೆ, ಆ ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದೆ ಎಂಬ ಆರೋಪಗಳಿವೆ. 17 ಮಂದಿಯ ನೇತೃತ್ವ ವಹಿಸಿದ್ದ ರಮೇಶ್ ಜಾರಕಿಹೊಳಿಯ ವಿಡಿಯೋಗಳು ಈಗಾಗಲೇ ಹೊರಬಂದಿವೆ. ಈ ಹನಿಟ್ರ್ಯಾಪ್ ವಿಕೃತಿಯು ಮಾಜಿ ಮುಖ್ಯಮಂತ್ರಿಗಳ ಮೇಲೂ ನಡೆದಿದೆ. ಓರ್ವ ಮಾಜಿ ಮುಖ್ಯಮಂತ್ರಿಯ ಅಶ್ಲೀಲ ವಿಡಿಯೋ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡಿ, ಹಿನ್ನೆಲೆಗೆ ಸರಿದಿದೆ.
ಇದೀಗ, ಮತ್ತೆ ಇದೇ ಹನಿಟ್ರ್ಯಾಪ್ ಪಾಶವನ್ನು ಆಡಳಿತ ಪಕ್ಷದ ಹಾಲಿ ಸಚಿವರ ಮೇಲೂ ಪ್ರಯೋಗಿಸಲಾಗಿದೆ ಎಂಬ ಆರೋಪ ಮುನ್ನೆಲೆಯಲ್ಲಿದೆ. ಈ ಆರೋಪ ವಿಧಾನಸಭೆಯಲ್ಲಿ ಭಾರೀ ಗದ್ದಲವನ್ನು ಸೃಷ್ಟಿಸಿದೆ. ಹನಿಟ್ರ್ಯಾಪ್ ನಡೆಸಿರುವ ಪ್ರಕರಣದ ಆರೋಪಿ ಶಾಸಕ ಸದನದಲ್ಲಿ ರಾಜಾರೋಷವಾಗಿ ಮಾತನಾಡಿದ್ದಾರೆ. ಇಡೀ ಕಲಾಪವೇ ಮಧುಬಲೆಯ ಗದ್ದಲದಲ್ಲಿ ಕಳೆದುಹೋಗಿದೆ. ರಂಪಾಟಗಳ ನಡುವೆಯೂ ಶಾಸಕರ ವೇತನವನ್ನು 100% ಏರಿಕೆ ಮಾಡುವ ಮಸೂದೆಯನ್ನು ಮಂಡಿಸಿ, ಅಂಗೀಕರಿಸಲಾಗಿದೆ.
ವಿರೋಧ ಪಕ್ಷಗಳ ಶಾಸಕರು ಮಸೂದೆಗಳನ್ನು ಹರಿದು, ಸ್ಪೀಕರ್ ಆಸನದೆಡೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಸಭಾಪತಿಯನ್ನು ಎಳೆದು ಬಿಸಾಡಲಿಲ್ಲ ಎಂಬುದೊಂದು ಬಿಟ್ಟರೆ, ಉಳಿದೆಲ್ಲ ಕೃತ್ಯಗಳನ್ನು ಕರ್ನಾಟಕ ಕಂಡಿದೆ. ಈ ಹಿಂದೆ, ವಿಧಾನ ಪರಿಷತ್ನಲ್ಲಿಯೂ ಇಂತಹ ಕೃತ್ಯಗಳು ನಡೆದಿವೆ. ಸಭಾಧ್ಯಕ್ಷರನ್ನೇ ಅಪಮಾನಿಸಿ, ಅವಮಾನಿಸುವ ಕೃತ್ಯಗಳಲ್ಲಿಯೂ ಕರ್ನಾಟಕವೇ ಮೊದಲನೆಯದ್ದಾಗಿದೆ.
ಶಾಸಕ ಬಿ.ಆರ್ ಪಾಟೀಲ್ ಅವರು ಹಲವಾರು ನೈತಿಕ ಪ್ರಶ್ನೆಗಳನ್ನು ಸದನದ ಮುಂದಿಟ್ಟಿದ್ದರು. ಶಾಸಕ ವೇತನ ಹೆಚ್ಚಿಸಬೇಡಿ ಎಂದು ಪ್ರತಿಪಾದಿಸಿದರು. ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಆದರೆ, ಅವರ ಮಾತಿಗೆ ಮನ್ನಣೆ ಕೊಡದ ಆಡಳಿತ-ವಿರೋಧ ಪಕ್ಷಗಳು ಸದನದಲ್ಲಿ ದಾಂಧಲೆ ನಡೆಸಿದವು, ಹನಿಟ್ರ್ಯಾಪ್ ಕೃತ್ಯಗಳ ಬಗ್ಗೆ ಹಸಿ ಹಸಿಯಾಗಿ ಚರ್ಚಿಸಿದವು. ರಂಪ-ರಾದ್ಧಾಂತ-ದಾಂಧಲೆಗಳನ್ನು ನಡೆಸಿದವು. ಈಗ ಇವುಗಳ ಹೊಣೆಯನ್ನು ಬಿಜೆಪಿ ತಲೆಗೆ ಕಟ್ಟಲು ಕಾಂಗ್ರೆಸ್, ಕಾಂಗ್ರೆಸ್ ತಲೆಗೆ ಕಟ್ಟಲು ಬಿಜೆಪಿ ಹವಣಿಸುತ್ತಿವೆ. ಆದರೆ, ಇವು ಒಬ್ಬರದ್ದು ಅಥವಾ ಒಂದು ಪಕ್ಷದ ಕೃತ್ಯಗಳಲ್ಲ. ಇವು ಇಡೀ ಶಾಸನಸಭೆಯೇ ಎಸಗಿದ ಕೃತ್ಯ. ಶಾಸನಸಭೆಯು ರಾಜ್ಯಕ್ಕೆ ಅಪಮಾನಿಸಿದೆ. ಮುಖ್ಯಮಂತ್ರಿ ಆದಿಯಾಗಿ ಆಡಳಿತ-ವಿರೋಧ ಪಕ್ಷಗಳ ಪ್ರತಿಯೊಬ್ಬರು ಇದರ ಹೊಣೆ ಹೊತ್ತುಕೊಳ್ಳಬೇಕಿದೆ.