ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಲು ಕೇಂದ್ರ ಸರ್ಕಾರ ಹವಣಿಸುತ್ತಿದೆ ಎಂಬ ಚರ್ಚೆ ಹಲವು ವರ್ಷಗಳಿಂದ ಮುನ್ನೆಲೆಯಲ್ಲಿದೆ. ಇದೀಗ, ಎನ್‌ಇಪಿ ಜಾರಿಯೊಂದಿಗೆ ಹಿಂದಿ ಹೇರಿಕೆ ಮಾಡಲು ಕೇಂದ್ರ ಯತ್ನಿಸುತ್ತಿದೆ ಎಂದು ಆರೋಪಿಸಲಾಗಿದೆ. ಎನ್‌ಇಪಿ ವಿರುದ್ಧ ದಕ್ಷಿಣದ ರಾಜ್ಯಗಳು ಹೋರಾಟ ನಡೆಸುತ್ತಿವೆ. ಇದೇ ಹೊತ್ತಿನಲ್ಲಿ, ‘ಇದೇ ವರ್ಷದ ಡಿಸೆಂಬರ್‌ನಲ್ಲಿ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳೊಂದಿಗೆ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಯಲ್ಲಿಯೇ ಪತ್ರ ವ್ಯವಹಾರ ನಡೆಸುತ್ತೇವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಹಿಂದಿ ಹೇರಿಕೆ ವಿಚಾರದ ಬಗ್ಗೆ ಮಾತನಾಡಿದ ಅಮಿತ್ ಶಾ, “ಕರ್ನಾಟಕ ಸರ್ಕಾರದ ಜೊತೆ ಕನ್ನಡದಲ್ಲಿಯೇ, ತಮಿಳುನಾಡು ಸರ್ಕಾರದ ಜೊತೆ ತಮಿಳಿನಲ್ಲೇ, ಕೇರಳದ ಜೊತೆ ಮಲಯಾಳಂನಲ್ಲೇ ಹಾಗೂ ಇತರ ರಾಜ್ಯಗಳ ಜೊತೆ ಅವುಗಳ ಪ್ರಾದೇಶಿಕ ಭಾಷೆಯಲ್ಲೇ ಕೇಂದ್ರ ಸರ್ಕಾರವು ಪತ್ರ ವ್ಯವಹಾರ ನಡೆಸಲಿದೆ” ಎಂದು ಹೇಳಿದ್ದಾರೆ.
“ಈ ಕ್ರಮವು ತಮ್ಮ ಭ್ರಷ್ಟಾಚಾರವನ್ನು ಮರೆಮಾಚಲು ಭಾಷೆ ಹೆಸರಿನಲ್ಲಿ ರಾಜಕೀಯ ನಡೆಸುವವರಿಗೆ ಪ್ರತ್ಯುತ್ತರವಾಗಿದೆ. ನಾವು ದಕ್ಷಿಣದ ಭಾಷೆಗಳನ್ನು ವಿರೋಧಿಸುತ್ತಿಲ್ಲ. ನಾನು ಗುಜರಾತ್ ಮೂಲದವನು. ನಿರ್ಮಲಾ ಸೀತಾರಾಮನ್ ತಮಿಳುನಾಡಿನಿಂದ ಬಂದವರು. ಹೀಗಿರುವಾಗ ನಾವು ಪ್ರಾದೇಶಿಕ ಭಾಷೆಗಳನ್ನು ಹೇಗೆ ವಿರೋಧಿಸುತ್ತೇವೆ. ಅದು ಹೇಗೆ ಸಾಧ್ಯ” ಎಂದು ಅಮಿತ್ ಶಾ ಹೇಳಿದ್ದಾರೆ.
ಅಮಿತ್ ಶಾ ಅವರ ಹೇಳಿಕೆ, ಮೂಗಿಗೆ ತುಪ್ಪ ಸವರಿ ಜನರನ್ನು ಯಾಮಾರಿಸುವ ಹುನ್ನಾರವೆಂದು ಭಾಷಾ ಹೋರಾಟಗಾರರು ಹೇಳಿದ್ದಾರೆ. ಸರ್ಕಾರಗಳ ಜೊತೆ ಪ್ರಾದೇಶಿಕ ಭಾಷೆಯಲ್ಲಿ ಪತ್ರ ವ್ಯವಹಾರ ನಡೆಸಿದರೆ, ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಆಗುತ್ತಿಲ್ಲ ಅಥವಾ ಆಗುವುದಿಲ್ಲ ಎಂದರ್ಥವಲ್ಲ. ಆ ಪತ್ರಗಳಿಗೆ ಮಾತ್ರವೇ ಸೀಮಿತವಾಗುತ್ತದೆ. ಎನ್‌ಇಪಿಯಲ್ಲಿ ತ್ರಿಭಾಷ ಸೂತ್ರ ಅಳವಡಿಸಿ, ಹಿಂದಿ ಕಲಿಸುವುದನ್ನು ಕಡ್ಡಾಯಗೊಳಿಸುವುದೇ ಹಿಂದಿ ಹೇರಿಕೆ ಪ್ರಬಲ ಅಸ್ತ್ರ. ಎನ್‌ಇಪಿಯಲ್ಲಿ ತ್ರಿಭಾಷ ಸೂತ್ರ ತೆಗೆದು, ದ್ವಿಭಾಷ ಸೂತ್ರವನ್ನು ಅಳವಡಿಸಲಿ. ಆ ನಂತರ, ಹಿಂದಿ ಹೇರಿಕೆ ಮಾಡುತ್ತಿಲ್ಲ ಎಂದು ಹೇಳಲಿ. ಆಗ ಒಪ್ಪಿಕೊಳ್ಳಬಹುದು ಎಂದು ಭಾಷಾ ಹೋರಾಟಗಾರರು ಹೇಳಿದ್ದಾರೆ.