ಬಿಹಾರದಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆಡಳಿತಾರೂಢ ಜೆಡಿಯು ಮತ್ತು ಬಿಜೆಪಿ, ವಿಪಕ್ಷ ಆರ್‌ಜೆಡಿ ಮತ್ತು ಕಾಂಗ್ರೆಸ್ ಚುನಾವಣಾ ಸಿದ್ದತೆಯನ್ನು ಆರಂಭಿಸಿವೆ. ಈ ನಡುವೆ, ಬಿಹಾರ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್ ಕುಮಾರ್ ಅವರ ನಿವಾಸದ ಮುಂದೆ ‘ನಾನು ನಾಯಕನಲ್ಲ, ಖಳನಾಯಕ’ ಎಂಬ ಬರಹವಿರುವ ಬೃಹತ್ ಬ್ಯಾನರ್ ಹಾಕಲಾಗಿದೆ. ಅದರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬ್ಯಾನರ್‌ಅನ್ನು ಆರ್‌ಜೆಡಿ ಹಾಕಿದೆ ಎಂದು ಹೇಳಲಾಗಿದೆ. ಬ್ಯಾನರ್‌ನಲ್ಲಿ ‘ನಾನು ನಾಯಕನಲ್ಲ, ಖಳನಾಯಕ’ ಎಂದು ಬರೆದಿರುವುದು ಮಾತ್ರವಲ್ಲದೆ, ‘ನಿತೀಶ್ ಕುಮಾರ್ ಮಹಿಳೆಯರನ್ನು ಅವಮಾನಿಸಿದ್ದಾರೆ. ನಿತೀಶ್ ಕುಮಾರ್ ಅವರು ಮಹಾತ್ಮ ಗಾಂಧಿ ಮತ್ತು ರಾಷ್ಟ್ರಗೀತೆಯನ್ನು ಅಪಮಾನಿಸಿದ್ದಾರೆ’ ಎಂದೂ ಬರೆಯಲಾಗಿದೆ.
#WATCH | Bihar: A new poster comes up in front of the residence of former Chief Minister and RJD leader Rabri Devi, targeting CM Nitish Kumar.
— ANI (@ANI) March 22, 2025
The poster reads 'Nayak nahi khalnayak hoon main' (not a hero, I am a villain), accusing him of insulting women and disrespecting… pic.twitter.com/9aX0cj7EH8
ಗುರುವಾರ ‘ಪಾಟ್ಲಿಪುತ್ರ ಕ್ರೀಡಾ ಸಂಕೀರ್ಣ’ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಿತೀಶ್ ಕುಮಾರ್ ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದ ಸಮಯದಲ್ಲಿ ತಮ್ಮ ಪ್ರಧಾನ ಕಾರ್ಯದರ್ಶಿಯೊಂದಿಗೆ ನಗುತ್ತಾ ಮಾತನಾಡಿದ್ದರು. ಆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಿತೀಶ್ ಕುಮಾರ್ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಶುಕ್ರವಾರ ರಾಜ್ಯ ಅಧಿವೇಶನದಲ್ಲಿಯೂ ಚರ್ಚೆಯಾಗಿತ್ತು. ವಿಪಕ್ಷಗಳು ತೀವ್ರವಾಗಿ ಟೀಕಿಸಿದ್ದವು.
ಅಧಿವೇಶನದಲ್ಲಿ ವಿಪಕ್ಷವಾದ ಆರ್‌ಜೆಡಿ ಶಾಸಕರು ಪೋಸ್ಟರ್ ಮತ್ತು ಬ್ಯಾನರ್ ಹಿಡಿದು ನಿತೀಶ್ ಕುಮಾರ್ ವರ್ತನೆಯನ್ನು ಖಂಡಿಸಿದ್ದರು. ‘ಭಾರತದಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡುವುದವನ್ನು ಸಹಿಸಲಾಗುವುದಿಲ್ಲ’ ಎಂದು ಘೋಷಣೆ ಕೂಗಿದ್ದರು. ರಾಷ್ಟ್ರಗೀತೆಗೆ ಅವಮಾನಿಸಿದ್ದರ ಬಗ್ಗೆ ಚರ್ಚೆ ನಡೆಸಬೇಕೆಂದು ವಿಪಕ್ಷ ನಾಯಕ ತೇಜಸ್ವಿ ಯಾದವ್ ಒತ್ತಾಯಿಸಿದ್ದರು.