‘ನಿಮಗೆ ಗಂಡು ಮಗು ಬೇಕೆ? ಹಾಗಿದ್ದರೆ ಸಮ ಸಂಖ್ಯೆಯ ದಿನಾಂಕಗಳಂದು ಲೈಂಗಿಕ ಕ್ರಿಯೆ ನಡೆಸಿ’
ಇಂಥದ್ದೊಂದು ಪ್ರವಚನ ನೀಡುತ್ತಿದ್ದವನ ಹೆಸರು ನಿವೃತ್ತಿ ಕಾಶಿನಾಥ್ ದೇಶಮುಖ್ ಇಂದೂರಿಕರ್. ಈತನನ್ನು ನಿವೃತ್ತಿ ಮಹಾರಾಜ್ ಎಂದೂ ಕೂಡ ಕರೆಯುತ್ತಾರೆ.
‘ಕಾಮಿಡಿ ಕೀರ್ತನೆಕಾರ’ ಎಂದೇ ಜನಪ್ರಿಯನಾಗಿರುವ ಈ ನಿವೃತ್ತಿ ಮಹಾರಾಜ್ ಗಂಡು ಹೆಣ್ಣು ಹೇಗೆ ಸೇರಿದರೆ ಎಂಥ ಮಗು ಹುಟ್ಟುತ್ತದೆ ಎನ್ನುವ ‘ಸಂಶೋಧನೆ’ಯ ಮೂಲಕವೇ ಪ್ರಸಿದ್ಧನಾದವನು. ಈತನ ಪ್ರಕಾರ ಗಂಡ ಹೆಂಡತಿ ಸಮ ಸಂಖ್ಯೆಯ ದಿನಗಳಂದು ಸೇರಿದರೆ ಗಂಡು ಸಂತಾನವಾಗುತ್ತದೆ, ಬೆಸ ಸಂಖ್ಯೆಯ ದಿನಾಂಕಗಳಂದು ಸೇರಿದರೆ ಹೆಣ್ಣು ಮಗು ಹುಟ್ಟುತ್ತದೆ. ಹೀಗೆಂದು ಹೇಳಿಕೊಂಡು ತಿರುಗುತ್ತಿದ್ದ ನಿವೃತ್ತಿ ಮಹಾರಾಜ್‌ಗೆ ಈಗ ಜೈಲು ಸೇರುವ ಆತಂಕ ಎದುರಾಗಿದೆ. ಈತನ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.
ಈ ನಿವೃತ್ತಿ ಮಹಾರಾಜ್‌ನ ಉಪದ್ವ್ಯಾಪ ಒಂದೆರಡಲ್ಲ. ಈತ ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಅಕೋಲೆ ಗ್ರಾಮದವನು. ಬಿಎಡ್ ಮಾಡಿಕೊಂಡು ಶಾಲೆಯೊಂದರಲ್ಲಿ ಮೇಷ್ಟರಾಗಿದ್ದ ಈತ ತನ್ನ 22ನೇ ವಯಸ್ಸಿನಲ್ಲಿ ಕೀರ್ತನೆಗಳನ್ನು ಹೇಳತೊಡಗಿದ. ಕೀರ್ತನೆಗಳನ್ನು ಹಾಸ್ಯಮಿಶ್ರಿತ ಶೈಲಿಯಲ್ಲಿ ಪ್ರಸ್ತುತ ಪಡಿಸುತ್ತ ಬಹಳ ಬೇಗನೇ ಜನಪ್ರಿಯನಾದ. ಅದೂ ಸಾಲದು ಎಂಬಂತೆ, ಪ್ರವಚನಗಳನ್ನು ನೀಡತೊಡಗಿದ. ಜನಪ್ರಿಯ ಸಿನಿಮಾಗಳ ಅಶ್ಲೀಲ ಸಂಭಾಷಣೆಗಿಂತಲೂ ಕಳಪೆಯಾಗಿರುವ ಈತನ ಕೀರ್ತನೆಗಳು, ಪ್ರವಚನಗಳ ಬಗ್ಗೆ ಇತರೆ ಕೀರ್ತನಕಾರರು, ಅಧ್ಯಾತ್ಮ ಜೀವಿಗಳು ತೀವ್ರವಾಗಿ ಟೀಕಿಸುತ್ತಾರೆ. ಆದರೆ, ಕೋತಿಗೆ ಹೆಂಡ ಕುಡಿಸಿದಂತೆ, ಈತ ಮಾತ್ರ ಓತಪ್ರೋತವಾಗಿ ಬಾಯಿಗೆ ಬಂದದ್ದನ್ನೆಲ್ಲ ಪ್ರವಚನದ ಹೆಸರಿನಲ್ಲಿ ವದರುತ್ತಾನೆ.
ಆರು ತಿಂಗಳ ಗರ್ಭಾವಸ್ಥೆಯ ನಂತರ ಭ್ರೂಣವು ಬಲಭಾಗಕ್ಕೆ ತಿರುಗಿದರೆ, ಅದು ಗಂಡು ಮಗು ಮತ್ತು ಅದು ಎಡಭಾಗಕ್ಕೆ ತಿರುಗಿದರೆ ಅದು ಹೆಣ್ಣು ಮಗು.. ಇದೂ ಈತನ ಒಂದು ಉವಾಚ. ಹೀಗೆ ಬಾಯಿಗೆ ಬಂದದ್ದನ್ನು ಕೀರ್ತನೆ, ಪ್ರವಚನಗಳ ನೆಪದಲ್ಲಿ ಹೇಳಿಕೊಂಡು ತಿರುಗುತ್ತಿದ್ದವನ ಹೆಡೆಮುರಿ ಕಟ್ಟಲು ಹೊರಟಿದ್ದು ಮಹಾರಾಷ್ಟ್ರದ ‘ಅಂಧಶ್ರದ್ಧಾ ನಿರ್ಮೂಲನಾ ಸಮಿತಿ’.
ಈ ಸುದ್ದಿ ಓದಿದ್ದೀರಾ: ಪ್ರತಿಪಕ್ಷಗಳಲ್ಲಿ ಪ್ರಧಾನಿ ಮೋದಿಗಿಂತ ಅನುಭವಿ ನಾಯಕರಿದ್ದಾರೆ: ತೇಜಸ್ವಿ ಯಾದವ್
ಮೊದಲು ನಿವೃತ್ತಿ ಕಾಶಿನಾಥ್ ದೇಶಮುಖ್ ವಿರುದ್ಧ 2020ರಲ್ಲಿ ‘ಗರ್ಭಧಾರಣೆಯ ಪೂರ್ವ ಮತ್ತು ಪ್ರಸವಪೂರ್ವ ಲಿಂಗ ಆಯ್ಕೆಯ ನಿಷೇಧ ಕಾಯ್ದೆ’ 1994 (ಪಿಸಿಪಿಎನ್‌ಡಿಟಿ ಕಾಯ್ದೆ) ಅನ್ವಯ ಅಹಮದ್‌ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಯಿತು. ಮಾರ್ಚ್ 2021ರಲ್ಲಿ ಅದೇ ಜಿಲ್ಲೆಯ ಸೆಷನ್ಸ್ ಕೋರ್ಟ್ ಪ್ರಕರಣವನ್ನು ರದ್ದುಪಡಿಸಿತು. ‘ಅತಿ ಹೆಚ್ಚಿನ ಸಂಖ್ಯೆಯ ಅನುಯಾಯಿಗಳನ್ನು ಹೊಂದಿರುವ ಕಾರಣಕ್ಕೆ ನಿವೃತ್ತಿ ಮಹಾರಾಜ್ ವಿರುದ್ಧ ಮಾಧ್ಯಮಗಳ ವಿಚಾರಣೆಯನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ’ ಎಂದು ಸೆಷನ್ಸ್ ಕೋರ್ಟ್ ಅಭಿಪ್ರಾಯ ಪಟ್ಟಿತ್ತು. ಆದರೆ, ಪ್ರಕರಣ ರದ್ದು ಮಾಡಿದ್ದನ್ನು ಪ್ರಶ್ನಿಸಿ ‘ಅಂಧಶ್ರದ್ಧಾ ನಿರ್ಮೂಲನಾ ಸಮಿತಿ’ಯ ರಂಜನಾ ಪಗಾರ್ ಮತ್ತು ಗಾವಡೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದರು. ಇದೀಗ ಸೆಷನ್ಸ್ ಕೋರ್ಟ್‌ನ ಆದೇಶವನ್ನು ರದ್ದು ಮಾಡಿರುವ ಬಾಂಬೆ ಹೈಕೋರ್ಟ್, ‘ಇದು ಲಿಂಗ ಪತ್ತೆಗಾಗಿ ನೀಡುವ ಜಾಹೀರಾತಿಗೆ ಸಮವಾಗಿದೆ’ ಎಂದು ಹೇಳಿದೆ. ನಿವೃತ್ತಿ ಕಾಶಿನಾಥ ದೇಶ್‌ಮುಖ್ ವಿರುದ್ಧದ ಪ್ರಕರಣಗಳ ವಿಚಾರಣೆ ಮುಂದುವರೆಸಲು ಸೂಚಿಸಿದೆ.
ನಿವೃತ್ತಿ ಕಾಶಿನಾಥ ದೇಶ್‌ಮುಖ್ ಒಬ್ಬ ಸ್ತ್ರೀವಿರೋಧಿ. ಮಹಿಳೆಯರ ಕುರಿತ ಈತನ ಹೇಳಿಕೆಗಳಂತೂ ಆಘಾತಕಾರಿಯಾಗಿವೆ. ಈತನ ಪ್ರಕಾರ, ‘ಹೆಂಡತಿ ಎಂದರೆ ಕಾಲಿಗೆ ಮೆಟ್ಟಿಕೊಳ್ಳುವ ಚಪ್ಪಲಿ ಇದ್ದಂತೆ. ಚಪ್ಪಲಿ ಎಷ್ಟೇ ದುಬಾರಿಯಾದರೂ ಅವನ್ನು ಕೊರಳಿಗೆ ಹಾಕಿಕೊಳ್ಳಲು ಆಗುವುದಿಲ್ಲ’. ತನ್ನ ಪ್ರವಚನಗಳಲ್ಲಿ ಇಂಥ ಹೇಳಿಕೆಗಳನ್ನು ಉದುರಿಸುವ, ಅಗ್ಗದ ಡೈಲಾಗ್ ಹೊಡೆದು ನೆರೆದ ಜನರನ್ನು ನಗಿಸಲು ಯತ್ನಿಸುವ ಈತ ಅದರಿಂದ ಅಪಾರ ಜನಪ್ರಿಯತೆಯನ್ನೂ ಗಳಿಸಿದ್ದಾನೆ. ಅದೇ ಜನಪ್ರಿಯತೆ ಆಧಾರದಲ್ಲಿ ಈತ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸುತ್ತಾನೆ ಎನ್ನುವ ಸುದ್ದಿಯೂ ಇತ್ತು. ಹೀಗೆಲ್ಲ ಪ್ರವಚನ ನೀಡಿಕೊಂಡು ಬದುಕುವ ಈತ ಅವಿವಾಹಿತನೇನಲ್ಲ; ಮದುವೆಯಾಗಿ ಇಬ್ಬರು ಮಕ್ಕಳನ್ನೂ ಪಡೆದಿದ್ದಾನೆ. ಮಕ್ಕಳ ಪೈಕಿ ಒಬ್ಬ ಮಗ, ಇನ್ನೊಬ್ಬಳು ಮಗಳು.
ನಿವೃತ್ತಿ ಕಾಶಿನಾಥ್ ದೇಶಮುಖ್‌ನಂಥವರು ಎಲ್ಲೆಲ್ಲೂ ಇದ್ದಾರೆ. ಮಹಾರಾಷ್ಟ್ರದ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯಿಂದ ಈತನ ಕಾಮಿಡಿ ಕೀರ್ತನೆಗಳಿಗೆ, ಅಶ್ಲೀಲ ಪ್ರವಚನಗಳಿಗೆ ಪೂರ್ಣವಿರಾಮ ಬೀಳುವ ಸೂಚನೆ ಸಿಕ್ಕಿದೆ. ಅದೇ ರೀತಿ ಎಲ್ಲ ಕಡೆಯೂ ಇಂಥವರ ವಿರುದ್ಧ ವೈಚಾರಿಕವಾದ ಆಲೋಚನೆಯುಳ್ಳವರು, ವಿಚಾರವಾದಿ ಸಂಘಟನೆಗಳು ಬೀದಿಗಿಳಿದರೆ ಮಾತ್ರ ಇಂಥವರ ಸಂತತಿ ಕೊನೆಯಾಗಲಿದೆ.