ಕೆಲ ಕಿಡಿಗೇಡಿಗಳು ಸಿಗರೇಟು ಹೊಗೆಯನ್ನು ವಾಯು ವಿಹಾರಕ್ಕೆಂದು ಬಂದಿದ್ದ ಯುವತಿಯರು, ಮಹಿಳೆಯರ ಮುಖದ ಮೇಲೆ ಬಿಟ್ಟು ದುಷ್ಟತನ ಮೆರೆದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಎಂಎನ್ಎಂ ಶಾಲೆಯ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ವಾಯು ವಿಹಾರದಲ್ಲಿ ತೊಡಗಿದ್ದ ಮಹಿಳೆಯರು, ಪುರುಷರು ಗುಂಪಾಗಿ ಕಿಡಿಗೇಡಿ ಯುವಕರನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದು, ಬಳಿಕ ಕೂಡಿ ಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಯುವಕರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಆತಂಕಕಾರಿ ವಾತಾವರಣ ನಿರ್ಮಾಣವಾಗಿತ್ತು.
ಕುವೆಂಪು ಬಡಾವಣೆ ಮತ್ತು ಜಯನಗರದ ಮಧ್ಯೆ ಇರುವ ಮಳೆಮಲ್ಲೇಶ್ವರ-ಗಾಯತ್ರಿ ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯದ ಜನ ವಸತಿ ಪ್ರದೇಶದಲ್ಲಿ ನೂತನ ವಸತಿ ಲೇಔಟ್ ನಿರ್ಮಾಣವಾಗಿದೆ. ಸಂಜೆ ಮತ್ತು ಬೆಳಿಗ್ಗೆ ವಾಯು ವಿಹಾರಕ್ಕೆ ಹೋಗುವ ಜನರಿಗೆ ಈ ಲೇಔಟ್ನ ರಸ್ತೆಗಳು ಹೇಳಿ ಮಾಡಿಸಿದಂತಿವೆ. ಹೀಗಾಗಿ ಎಂದಿನಂತೆ ಶುಕ್ರವಾರ ರಾತ್ರಿ 9 ಗಂಟೆಯ ನಂತರ ಮಹಿಳೆಯರು ವಾಯು ವಿಹಾರದಲ್ಲಿ ತೊಡಗಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ರಸ್ತೆಯ ಬದಿಯಲ್ಲಿ ಕುಳಿತಿದ್ದ ಯುವಕರು ಸಿಗರೇಟು ಸೇದಿ, ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಮಹಿಳೆಯರ ಮುಖಕ್ಕೆ ಸಿಗರೇಟಿನ ಹೊಗೆ ಬಿಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಹಿಳೆಯರು ಪ್ರಶ್ನಿಸಿದ್ದಕ್ಕೆ “ನಮ್ಮ ಹಣದಲ್ಲಿ ನಾವು ಸೇದುತ್ತೇವೆ. ನೀವ್ಯಾರು ಕೇಳಲು. ಮುಖಕ್ಕೆ ಹೊಗೆ ಬರಬಾರದು ಎಂದರೆ ಈ ರಸ್ತೆಯಲ್ಲಿ ಓಡಾಡಬಾರದು” ಎಂದು ಯುವಕರು ತಾಕೀತು ಮಾಡಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ತಿಳಿದುಬಂದಿದೆ. ಇದರಿಂದ ಕೋಪಗೊಂಡ ಮಹಿಳೆಯರು, ಯುವಕರನ್ನು ತರಾಟೆಗೆ ತೆಗೆದುಕೊಳ್ಳುತಿದ್ದಂತೆಯೇ ಜನ ಜಮಾಯಿಸಿ ಯುವಕರನ್ನು ಹಿಡಿಯಲು ಯತ್ನಿಸಿದ್ದಾರೆ. ಈ ಪೈಕಿ ಇಬ್ಬರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ ಬಳಿಕ 112 ವಾಹನ ಸ್ಥಳಕ್ಕೆ ಬಂದು ಯುವಕರನ್ನು ಕರೆದೊಯ್ದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶನಿವಾರ ಜಯನಗರ, ಕುವೆಂಪು ಬಡಾವಣೆ, ಸತ್ಯನಾರಾಯಣ ಪೇಟೆಯ ಸುಮಾರು 150ಕ್ಕೂ ಹೆಚ್ಚು ಜನ ಆಗಮಿಸಿ ನಗರ ಠಾಣೆಯ ಪೊಲೀಸರಿಗೆ ದೂರು ನೀಡಿದರು.
ದೂರು ಸ್ವೀಕರಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, “ಖಾಸಗಿ ಲೇಔಟ್ಗಳಲ್ಲಿ ಸಿಸಿ ಕ್ಯಾಮರಾ ಹಾಕಿಸುವಂತೆ ನಗರಸಭೆಗೆ ಸೂಚನೆ ನೀಡಲಾಗುವುದು. ಹೆಚ್ಚಿನ ಭದ್ರತೆ ನೀಡಲು ಪೊಲೀಸ್ ಗಸ್ತು ನಿಯೋಜಿಸಲಾಗುವುದು” ಎಂದು ಭರವಸೆ ನೀಡಿದರು.
ಇದೇ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಗಂಗಾವತಿ ತಾಲೂಕಿನ ಸಾಣಾಪುರ ಕೆರೆ ಬಳಿಯಿರುವ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ವಾಯುವಿಹಾರಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ವಿದೇಶಿಯರಿದ್ದ ಗುಂಪಿನ ಮೇಲೆ ಮೂವರು ಯುವಕರು ಹಲ್ಲೆ ನಡೆಸಿ, ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಬೆಳಕಿಗೆ ಬಂದಿತ್ತು. ಅಲ್ಲದೆ, ಆರೋಪಿಗಳನ್ನು ಪುರುಷ ಪ್ರವಾಸಿಗರನ್ನು ಕಾಲುವೆಗೆ ತಳ್ಳಿದ್ದು, ಒಡಿಶಾ ಮೂಲದ ಪ್ರವಾಸಿ ಯುವಕ ಬಿಬಾಸ್ ಮೃತಪಟ್ಟಿದ್ದರು. ಅಮೆರಿಕದ ಪ್ರವಾಸಿಗ ಡೇನಿಯಲ್ ಹಾಗೂ ಇಸ್ರೇಲ್ ಮೂಲದ ಮಹಿಳೆ, ಗಂಗಾವತಿ ತಾಲೂಕಿನ ಆನೆಗೊಂದಿಯ ಹೋಂ ಸ್ಟೇವೊಂದರ ಮಾಲಕಿ, ಮಹಾರಾಷ್ಟ್ರದ ನಾಸಿಕ್ನ ಪಂಕಜ್ ಪಟೇಲ್ ಹಲ್ಲೆಗೊಳಗಾಗಿದ್ದರು.
ಈ ಸುದ್ದಿ ಓದಿದ್ದೀರಾ? ಗಂಗಾವತಿ ಪ್ರಕರಣ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ; ಹೋಂ ಸ್ಟೇ, ರೆಸಾರ್ಟ್ಗಳ ಮೇಲೆ ದಾಳಿ
ಇದೀಗ ತಾಲೂಕಿನ ಎಂಎನ್ಎಂ ಶಾಲೆಯ ಬಳಿ ಶುಕ್ರವಾರ ರಾತ್ರಿ 9 ಗಂಟೆಯ ನಂತರ ವಾಯು ವಿಹಾರದಲ್ಲಿ ನಿರತರಾಗಿದ್ದ ಮಹಿಳೆಯರ ಮುಖದ ಮೇಲೆ ಕಿಡಿಗೇಡಿಗಳು ಸಿಗರೇಟಿನ ಹೊಗೆ ಬಿಟ್ಟು ನೀಚತನ ಮೆರೆದಿರುವುದಾಗಿ ವರದಿಯಾಗಿದ್ದು, ಸ್ಥಳೀಯ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ರಾತ್ರಿವೇಳೆ ಸ್ವತಂತ್ರವಾಗಿ ತಿರುಗಾಡದಂತ ಪರಿಸ್ಥಿತಿ ಬಂದೊದಗಿದೆ.