- ಸಚಿವರ ಪುತ್ರಿಯಿಂದ ಸರ್ಕಾರಿ ಕಾರು ದುರ್ಬಳಕೆ ಆರೋಪ
- ಮಗಳಿಗೆ ಎಚ್ಚರಿಕೆ ನೀಡಲಾಗುವುದು; ಸಚಿವ ಶಿವಾನಂದ ಪಾಟೀಲ್
ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರ ಪುತ್ರಿ ಸಂಯುಕ್ತಾ ಪಾಟೀಲ್ ಅವರು ತಮ್ಮ ತಂದೆಗೆ ನೀಡಿರುವ ಸರ್ಕಾರಿ ಕಾರಿನಲ್ಲಿ ಕುಳಿತು ಬೆಂಗಳೂರಿನಲ್ಲಿ ಸಂಚರಿಸಿರುವುದನ್ನು ನೋಡಿ ಸಾರ್ವಜನಿಕರು ಟೀಕೆ ಮಾಡಿದ್ದಾರೆ.
ಈ ಘಟನೆ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಸಚಿವರು ಪ್ರತಿಕ್ರಿಯೆ ನೀಡಿ, ತಮ್ಮ ಪುತ್ರಿಗೆ ಎಚ್ಚರಿಕೆ ನೀಡುವುದಾಗಿ ತಿಳಿಸಿದ್ದಾರೆ.
ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಪಡೆದಿರುವ ಸಚಿವ ಶಿವಾನಂದ ಪಾಟೀಲ್ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ಸಹಜವಾಗಿ ಸಿಗುವ ಎಲ್ಲ ಸೌಲಭ್ಯಗಳ ಜೊತೆಗೆ ಅವರ ಸಂಚಾರಕ್ಕಾಗಿ ಐಶಾರಾಮಿ ಕಾರೊಂದನ್ನು ನೀಡಲಾಗಿದೆ.
ನಿಯಮಗಳ ಪ್ರಕಾರ, ಸಚಿವರು ಸಹ ಸರ್ಕಾರಿ ನೌಕರರ ಸಾಲಿಗೆ ಸೇರುತ್ತಾದ್ದರಿಂದ ಸರ್ಕಾರದ ಕಾರನ್ನು ಅವರು ಮಾತ್ರ ಬಳಸಬೇಕು. ಬೇರೆಯವರು ಬಳಸಬಾರದು ಅಥವಾ ತಮಗೆ ನೀಡಲಾಗಿರುವ ಸೌಕರ್ಯಗಳನ್ನು ಬಳಸುವಂತೆ ಬೇರೆಯವರಿಗೆ ನೀಡಲೂಬಾರದು.
ಸಚಿವರ ಪುತ್ರಿ ಸಂಯುಕ್ತಾ ಪಾಟೀಲ್ ಅವರು ತಮ್ಮ ತಂದೆಗೆ ನೀಡಿರುವ ಸರ್ಕಾರಿ ಕಾರಿನಲ್ಲಿ ಕುಳಿತು, ಬೆಂಗಳೂರಿನ ಸದಾಶಿವ ನಗರದಲ್ಲಿ ಸಂಚರಿಸಿದ್ದಾರೆ. ಡ್ರೈವರ್ ಕಾರು ಚಲಾಯಿಸುತ್ತಿದ್ದರೆ, ಅವರ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಸಂಯುಕ್ತಾ ಅವರು, ತಮ್ಮ ಆಸನದ ಕಿಟಕಿ ಗಾಜನ್ನು ಇಳಿಸಿ, ನಗರ ಸೌಂದರ್ಯ ನೋಡುತ್ತಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದುದನ್ನು ಸಾರ್ವಜನಿಕರು ನೋಡಿದ್ದಾರೆ.
ಕಾರಿನ ಮುಂದೆ ಕರ್ನಾಟಕ ಸರ್ಕಾರದ ಲಾಂಛನ ನೋಡಿ, ಕಾರಿನೊಳಗೆ ಸಚಿವರು ಇಲ್ಲದಿರುವುದನ್ನು ಗಮನಿಸಿ ತಮ್ಮ ಮೊಬೈಲ್ ಗಳಿಂದ ಸಚಿವರ ಪುತ್ರಿಯು ಕಾರಿನಲ್ಲಿ ರೌಂಡ್ಸ್ ಹೊಡೆಯುತ್ತಿರುವುದನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಚಿವರ ಪುತ್ರಿಯ ಈ ನಡೆಯುನ್ನು ಟೀಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಖಾಲಿ ಹುದ್ದೆ ಭರ್ತಿಗೆ ಮುಂದಾದ ಗೃಹ ಇಲಾಖೆ; ಮುಂದಿನ ವಾರದಲ್ಲಿ ನೂತನ ನೇಮಕಾತಿ
ಮಗಳಿಗೆ ಎಚ್ಚರಿಕೆ ನೀಡುತ್ತೇನೆ: ಸಚಿವ
ತಮ್ಮ ಪುತ್ರಿಯ ಬಗ್ಗೆ ಕೇಳಿಬಂದಿರುವ ಟೀಕೆಗಳಿಗೆ ಸಚಿವ ಶಿವಾನಂದ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, “ಸರ್ಕಾರ ಕೊಟ್ಟಿರುವ ಅಧಿಕೃತ ಕಾರು ನನ್ನ ಬಳಿಯೇ ಇದೆ. ಬೋರ್ಡ್ ಇರುವ ಕಾರು ಬೆಂಗಳೂರಿನಲ್ಲಿದೆ. ಆ ಕಾರನ್ನು ಸಹ ನನ್ನ ಮಗಳು ಉಪಯೋಗಿಸಬಾರದು. ಅವರು ಯಾವ ಸಂದರ್ಭದಲ್ಲಿ ಅದನ್ನು ಉಪಯೋಗಿಸಿದ್ದಾರೋ ನನಗೆ ಗೊತ್ತಿಲ್ಲ. ನಾನು ಆ ಬಗ್ಗೆ ಮಾಹಿತಿ ಪಡೆಯುತ್ತೇನೆ. ನನ್ನ ಕಾರನ್ನು ಬಳಸಬಾರದೆಂದು ಮಗಳಿಗೆ ಎಚ್ಚರಿಕೆ ನೀಡುತ್ತೇನೆ” ಎಂದು ಹೇಳಿದ್ದಾರೆ.