ಅಸ್ಸಾಂನಲ್ಲಿ ಮಾರ್ಚ್ 24ರಿಂದ ಮಾರ್ಚ್ 29ರವರೆಗೆ ನಡೆಯಲಿದ್ದ 11ನೇ ತರಗತಿ (ಪ್ರಥಮ ಪಿಯುಸಿ) ಪರೀಕ್ಷೆಯು ರದ್ದಾಗಿದೆ. ಹಲವು ವಿಷಯಗಳ ಪ್ರಶ್ನೆ ಪತ್ರಿಕೆಯು ಸೋರಿಕೆಯಾದ ಕಾರಣದಿಂದಾಗಿ ಎಲ್ಲಾ 36 ವಿಷಯಗಳ ಪರೀಕ್ಷೆಗಳು ರದ್ದಾಗಿದೆ ಎಂದು ಶಿಕ್ಷಣ ಸಚಿವ ರನೋಜ್ ಪೆಗು ತಿಳಿಸಿದ್ದಾರೆ.
ಸದ್ಯ ದೇಶದಲ್ಲಿ ಪ್ರಶ್ನಾ ಪತ್ರಿಕೆ ಸೋರಿಕೆಯ ಹಲವು ಪ್ರಕರಣಗಳು ಬಯಲಿಗೆ ಬಂದಿದೆ. ನೀಟ್–ಯುಜಿ ಪರೀಕ್ಷೆಯಲ್ಲೂ ಕೂಡಾ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕೇಳಿಬಂದಿದ್ದು, ಪರೀಕ್ಷೆ ಬರೆದ ವಿದ್ಯಾರ್ಥಿಗಳು ಇಕ್ಕಟ್ಟಿನಲ್ಲಿ ಸಿಲುಕುವಂತಾಗಿದೆ. ಇತ್ತೀಚೆಗೆ ಅಸ್ಸಾಂನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಅನುಮಾನದಲ್ಲಿ 9ನೇ ತರಗತಿ ಪರೀಕ್ಷೆ ರದ್ದು ಮಾಡಲಾಗಿತ್ತು. ಹಲವು ವರ್ಷಗಳಿಂದ ಅಸ್ಸಾಂ ಮಾತ್ರವಲ್ಲ ದೇಶದಾದ್ಯಂತ ಈ ಪ್ರಶ್ನೆ ಪತ್ರಿಕೆ ಸೋರಿಕೆಯು ದೊಡ್ಡ ಸಮಸ್ಯೆಯಾಗಿ ಉಳಿದಿದೆ.
ಇದನ್ನು ಓದಿದ್ದೀರಾ? ರಾಜಸ್ಥಾನ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಿಯ ‘ಅಕ್ರಮ’ ಮನೆ ನೆಲಸಮ
ಮಾರ್ಚ್ 21ರಂದು ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಅಸ್ಸಾಂ ರಾಜ್ಯ ಶಾಲಾ ಶಿಕ್ಷಣ ಮಂಡಳಿ (ಎಎಸ್‌ಎಸ್‌ಇಬಿ) ಪರೀಕ್ಷೆಯನ್ನು ರದ್ದುಪಡಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. 11ನೇ ತರಗತಿ ಪರೀಕ್ಷೆಯು ಮಾರ್ಚ್ 6ರಂದು ಆರಂಭವಾಗಿತ್ತು ಮಾರ್ಚ್ 29ರವರೆಗೆ ನಡೆಯಲಿತ್ತು. ಇದೀಗ ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣ ಉಳಿದ ಎಲ್ಲಾ ಪರೀಕ್ಷೆಗಳನ್ನು ರದ್ದು ಮಾಡಲಾಗುವುದು ಎಂದು ಸಚಿವ ಪೆಗು ಮಾಹಿತಿ ನೀಡಿದ್ದಾರೆ.
ಮೂರು ಸರ್ಕಾರಿ ಸಂಸ್ಥೆಗಳು ಸೇರಿದಂತೆ 18 ಸಂಸ್ಥೆಗಳು ಪರೀಕ್ಷೆ ನಡೆಯುವುದಕ್ಕೂ ಒಂದು ದಿನ ಮುನ್ನ ಪ್ರಶ್ನೆ ಪತ್ರಿಕೆಯನ್ನು ಹೊರತೆಗೆದಾಗ ಪೇಪರ್ ಸೋರಿಕೆಯಾಗಿದೆ ಎನ್ನಲಾಗಿದೆ. ನಿಗಡಿಪಡಿಸಿದ ಸಮಯಕ್ಕಿಂತ ಮೊದಲೇ ಸೀಲ್ ಅನ್ನು ತೆಗೆಯಲಾಗಿದೆ ಎಂದು ಸಚಿವರು ಹೇಳಿದ್ದಾರೆ.
