ಆಟೋ ಚಾಲಕರು ಸಾರ್ವಜನಿಕರೊಂದಿಗೆ ಯಾವ ರೀತಿ ವರ್ತಿಸಬೇಕು ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸಿ ಹೇಗೆ ಸುರಕ್ಷತೆ ಕಾಪಾಡಬೇಕೆಂಬುದರ ಕುರಿತು ಶಿವಮೊಗ್ಗ ಪೊಲೀಸರಿಂದ ವಿಶೇಷ ಜಾಗೃತಿ ಸಭೆ ನಡೆಸಲಾಯಿತು.
ಸುರಕ್ಷಿತ ನಿಯಮಗಳ ಬಗ್ಗೆ ದೊಡ್ಡಪೇಟೆಯ ಪಿಐ ರವಿ ಸಂಗನಗೌಡ ಪಾಟೀಲ್, ಪಿಎಸ್ಐಗಳಾದ ವಸಂತ್ ಕುಮಾರ್, ಅಂತೋನಿ ಮೊದಲಾದವರ ನೇತೃತ್ವದಲ್ಲಿ ಇಂದು ಸಭೆ ನಡೆಸಲಾಗಿದೆ.
ಎನ್ಟಿ ರಸ್ತೆಯಲ್ಲಿರುವ ಸಹ್ಯಾದ್ರಿ ಆಟೋ ಸ್ಟ್ಯಾಂಡ್, ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣದ ಬಳಿಯ ಆಟೋ ಸ್ಟ್ಯಾಂಡ್ ಗಳಲ್ಲಿ ವಾರದ ಬ್ರೀಫಿಂಗ್, ರಸ್ತೆ ನಿಯಮ, ಸಾರ್ವಜನಿಕರೊಂದಿಗಿನ ನಡೆತೆಗಳ ಬಗ್ಗೆ ಜಾಗೃತಿ ಮೂಡಿಸಿದರು.

ಈ ಕುರಿತು ಈದಿನ ಡಾಟ್ ಕಾಮ್ ಮಾ.11ರಂದು “ಶಿವಮೊಗ್ಗ | ಮೀಟರ್ ಬಳಸದ ಆಟೋಗಳು; ಕಣ್ಮುಚ್ಚಿ ಕುಳಿತ ಪೊಲೀಸರು” ಶೀರ್ಷಿಕೆಯಡಿ ಸುದ್ದಿ ಮಾಡಿತ್ತು.
ಸುದ್ದಿ ಪ್ರಕಟವಾದ ಬೆನ್ನಲ್ಲೇ ಪೊಲೀಸ್ ಇಲಾಖೆ ನಿರಂತರ ಅಭಿಯಾನ ನಡೆಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ಈ ಮೊದಲು ಮಾ.17ರಂದು ಶಿವಮೊಗ್ಗ ಸಂಚಾರ ವೃತ್ತ ಕಚೇರಿಯಲ್ಲಿ ನಗರದ ಖಾಸಗಿ ಮತ್ತು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆಟೋ ಚಾಲಕರ ಕುಂದುಕೊರತೆಗಳ ಸಭೆ ಮಾಡಿ ಆಟೋ ಚಾಲಕರಿಗೆ ಬಸ್ ನಿಲ್ದಾಣದ ಹತ್ತಿರ ಆಟೋ ಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಬಾರದು ಮತ್ತು ಕಡ್ಡಾಯವಾಗಿ ಆಟೋ ಮೀಟರ್ ಬಳಕೆ ಮಾಡುವುದು ಹಾಗೂ ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಸಿಪಿಐ ಸಂತೋಷ್ ಕುಮಾರ್ ನೇತೃತ್ವದಲ್ಲಿ ಜಾಗೃತಿ ಮೂಡಿಸಲಾಗಿತ್ತು.
ಇದನ್ನೂ ಓದಿ: ಶಿವಮೊಗ್ಗ | ಹೊಸನಗರ ಮನೆಗಳ್ಳನ ಬಂಧನ
ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಮನಗಂಡ ಪೊಲೀಸ್ ಇಲಾಖೆ ನಿರಂತರ ಅಭಿಯಾನ ನಡೆಸುತ್ತಿದ್ದಾರೆ. ಜನಸ್ನೇಹಿ ಪೊಲೀಸ್ ಇಲಾಖೆ ಹಾಗೂ ಆಟೋ ಚಾಲಕರು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಬೆಸೆದು ಸೇವೆ ಒದಗಿಸುವಂತಾಗಲಿ. ಇದರಂತೆ ಶಿವಮೊಗ್ಗ ನಾಗರಿಕರಿಗೆ ಹಾಗೂ ಬೇರೆ ಬೇರೆ ಊರಿನಿಂದ ಬರುವಂತವರಿಗೆ ಮುಂದಿನ ದಿನಗಳಲ್ಲಿ ಅನುಕೂಲವಾಗಲಿ ಎಂಬುದು ಈದಿನ ಡಾಟ್ ಕಾಮ್ ಆಶಯವಾಗಿದೆ.