ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಗೆಲುವಿನ ಆರಂಭ ಪಡೆದಿದೆ. ಎಡ್ಜ್ಬಾಸ್ಟನ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 2 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತ್ತು.
ಆಸಿಸ್ ನಾಯಕ ಪ್ಯಾಟ್ ಕಮ್ಮಿನ್ಸ್ 9ನೇ ಕ್ರಮಾಂಕದಲ್ಲಿ ತೋರಿದ ದಿಟ್ಟ ಹೋರಾಟದ ಫಲವಾಗಿ ಆಸ್ಟ್ರೇಲಿಯಾ, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮಹತ್ವದ 1-0 ಮುನ್ನಡೆ ಸಾಧಿಸಿದೆ.
ಐದೂ ದಿನಗಳ ಕಾಲ ಬ್ಯಾಟಿಂಗ್ ಮಾಡಿದ ಉಸ್ಮಾನ್ ಖ್ವಾಜಾ!
ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎಲ್ಲಾ ಐದು ದಿನಗಳ ಕಾಲ ಬ್ಯಾಟಿಂಗ್ ನಡೆಸುವ ಮೂಲಕ ಆಸ್ಟ್ರೇಲಿಯಾದ ಎಡಗೈ ಆರಂಭಿಕ ಬ್ಯಾಟರ್ ಉಸ್ಮಾನ್ ಖ್ವಾಜಾ, ಅಪರೂಪದ ದಾಖಲೆ ವೀರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಐದು ದಿನಗಳ ಕಾಲ ಒಟ್ಟು 796 ನಿಮಿಷಗಳ ಕಾಲ ಕ್ರೀಸ್ನಲ್ಲಿದ್ದ ಖ್ವಾಜಾ, 518 ಎಸೆತಗಳನ್ನು ಎದುರಿಸಿ 206 ರನ್ಗಳಿಸಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ ತಾನೆದುರಿಸಿದ 199ನೇ ಎಸೆತದಲ್ಲಿ ಶತಕ ಪೂರ್ತಿಗೊಳಿಸಿದ್ದ ಖ್ವಾಜಾ, ಆ ಮೂಲಕ ಇಂಗ್ಲೆಂಡ್ ನೆಲದಲ್ಲಿ ಚೊಚ್ಚಲ ಶತಕದ ಸಂಭ್ರಮವನ್ನಾಚರಿಸಿದ್ದರು.
ಎರಡೂ ಇನ್ನಿಂಗ್ಸ್ಗಳಲ್ಲಿ ಕ್ರಮವಾಗಿ 141 ಮತ್ತು 6 ರನ್ಗಳಿಸಿದ್ದ ಖ್ವಾಜಾ, ಆಸ್ಟ್ರೇಲಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಖ್ವಾಜಾ ಪಾಲಾಗಿತ್ತು.
ಅಪರೂಪದ ದಾಖಲೆ
ಎಡ್ಜ್ಬಾಸ್ಟನ್ನಲ್ಲಿ ಐದು ದಿನಗಳ ಕಾಲ ಬ್ಯಾಟಿಂಗ್ ನಡೆಸುವ ಮೂಲಕ ಖ್ವಾಜಾ, ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಎರಡನೇ ಮತ್ತು ಒಟ್ಟಾರೆಯಾಗಿ 13ನೇ ಆಟಗಾರ ಎನಿಸಿಕೊಂಡಿದ್ದಾರೆ.
1980ರಲ್ಲಿ ಲಾರ್ಡ್ಸ್ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಕಿಮ್ ಹ್ಯೂಸ್, ಐದು ದಿನಗಳ ಕಾಲ ಬ್ಯಾಟಿಂಗ್ ನಡೆಸುವ ಮೂಲಕ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಮೊದಲ ಬ್ಯಾಟರ್ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಎರಡೂ ಇನ್ನಿಂಗ್ಸ್ಗಳಲ್ಲಿ ಕಿಮ್ ಹ್ಯೂಸ್ ಕ್ರಮವಾಗಿ 117 ಮತ್ತು 84 ರನ್ಗಳಿಸಿದ್ದರು.
ಈ ಸುದ್ದಿ ಓದಿದ್ದೀರಾ?: ಆ್ಯಶಸ್ ಟೆಸ್ಟ್ | ಇಂಗ್ಲೆಂಡ್ ನೆಲದಲ್ಲಿ ಉಸ್ಮಾನ್ ಖ್ವಾಜಾ ಚೊಚ್ಚಲ ಶತಕ
ಆ್ಯಶಸ್ ಸರಣಿಯಲ್ಲಿ ಮೊದಲ ಆಸಿಸ್ ಬ್ಯಾಟರ್
1876-77ರಲ್ಲಿ ಆರಂಭವಾದ ಆ್ಯಶಸ್ ಟೆಸ್ಟ್ ಸರಣಿಯ ಇತಿಹಾಸದಲ್ಲೇ ಐದು ದಿನಗಳ ಕಾಲ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾದ ಮೊದಲ ಮತ್ತು ಒಟ್ಟಾರೆಯಾಗಿ ಮೂರನೇ ಆಟಗಾರ ಎಂಬ ಖ್ಯಾತಿಗೆ ಉಸ್ಮಾನ್ ಖ್ವಾಜಾ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಇಂಗ್ಲೆಂಡ್ನ ಜೆಫ್ರಿ ಬಾಯ್ಕಾಟ್ (1977) ಮತ್ತು ರೋರಿ ಬರ್ನ್ಸ್ (2019) ಅವರು ಕ್ರಮವಾಗಿ ಟ್ರೆಂಟ್ ಬ್ರಿಡ್ಜ್ ಮತ್ತು ಎಡ್ಜ್ಬಾಸ್ಟನ್ನಲ್ಲಿ ಆಶಸ್ನಲ್ಲಿ ಈ ಸಾಧನೆ ಮಾಡಿದ್ದರು.
ಗೆಲುವಿನ ನಗೆ ಬೀರಿದ ಎರಡನೇ ಬ್ಯಾಟರ್
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಪಂದ್ಯದ ಐದೂ ದಿನಗಳ ಕಾಲ ಬ್ಯಾಟಿಂಗ್ ನಡೆಸಿದ ಆಟಗಾರರ ಪಟ್ಟಿಯಲ್ಲಿ ಉಸ್ಮಾನ್ ಖ್ವಾಜಾಗೆ ಇದೀಗ 13ನೇ ಸ್ಥಾನ. ಆದರೆ ಐದು ದಿನಗಳ ಬ್ಯಾಟಿಂಗ್ ನಡೆಸಿ, ಅಂತಿಮವಾಗಿ ತಂಡವು ಗೆಲುವು ದಾಖಲಿಸಿದವರ ಪಟ್ಟಿಯಲ್ಲಿ ಉಸ್ಮಾನ್ ಎರಡನೆಯ ಬ್ಯಾಟರ್. ಇಂಗ್ಲೆಂಡ್ನ ದಂತಕಥೆ ಜೆಫ್ರಿ ಬಾಯ್ಕಾಟ್ ಈ ಸಾಧನೆ ಮಾಡಿದ ಮೊದಲನೇ ಬ್ಯಾಟ್ಸ್ಮನ್. 1977ರ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಬಾಯ್ಕಾಟ್ ಈ ವಿಶಿಷ್ಟ ಸಾಧನೆಯನ್ನು ಮಾಡಿದ್ದರು. 1964-1982ರ ನಡುವೆ ಇಂಗ್ಲೆಂಡ್ ಕ್ರಿಕೆಟ್ನ ಶ್ರೇಷ್ಠ ಬ್ಯಾಟ್ಸ್ಮನ್ ಆಗಿದ್ದ ಜೆಫ್ರಿ, 108 ಟೆಸ್ಟ್ಗಳನ್ನು ಆಡಿದ್ದಾರೆ.
ಐದು ದಿನಗಳ ಖ್ವಾಜಾ ಬ್ಯಾಟಿಂಗ್ ಹಾದಿ
ಜೂನ್ 16ರಂದು ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ಆರಂಭವಾದ ಟೆಸ್ಟ್ ಪಂದ್ಯದ ಮೊದಲ ದಿನ ಉಸ್ಮಾನ್ ಖ್ವಾಜಾ, ಅಜೇಯ 4 ರನ್ಗಳಿಸಿದ್ದರು. 2ನೇ ದಿನ ಶತಕ ಪೂರ್ತಿಗೊಳಿಸಿ 126 ರನ್ಗಳೊಂದಿಗೆ ಅಜೇಯರಾಗುಳಿದಿದ್ದರು. 3ನೇ ದಿನ 141 ರನ್ಗಳಿಸಿದ್ದ ವೇಳೆ ವಿಕೆಟ್ ಒಪ್ಪಿಸಿದರು. ನಾಲ್ಕನೇ ದಿನ ಎರಡನೇ ಇನ್ನಿಂಗ್ಸ್ನಲ್ಲಿ 273 ರನ್ಗಳಿಗೆ ಇಂಗ್ಲೆಂಡ್ ಆಲೌಟ್ ಆಗಿತ್ತು. ಮತ್ತೆ ಆಸ್ಟ್ರೇಲಿಯಾ ಪರ ಬ್ಯಾಟಿಂಗ್ ಆರಂಭಿಸಿದ ಖ್ವಾಜಾ, 4ನೇದಿನ 34 ರನ್ ಗಳಿಸಿ ಅಂತಿಮ ದಿನಕ್ಕೆ ಬ್ಯಾಟಿಂಗ್ಚ ಕಾಯ್ದುಕೊಂಡಿದ್ದರು. 5ನೇ ದಿನ 65 ಗಳಿಸಿದ್ದ ವೇಳೆ, ಸ್ಟೋಕ್ಸ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗಿ ನಿರ್ಗಮಿಸಿದ್ದರು.
ಇಸ್ಲಾಮಾಬಾದ್ನಿಂದ ಕಾಂಗಾಂರೂ ನಾಡಿಗೆ ಪಯಣ
ಡಿಸೆಂಬರ್ 18, 1986ರಂದು ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಜನಿಸಿದ್ದ ಉಸ್ಮಾನ್ ಖ್ವಾಜ, ಐದು ವರ್ಷದವರಾಗಿದ್ದಾಗ ತಮ್ಮ ಕುಟುಂಬದೊಂದಿಗೆ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದರು. ಆಸ್ಟ್ರೇಲಿಯ ತಂಡಕ್ಕೆ ಆಯ್ಕೆಯಾದ ಮೊದಲ ಮುಸ್ಲಿಮ್ ಆಟಗಾರ . ಬಾಲ್ಯದಲ್ಲಿಯೇ ಕ್ರಿಕೆಟ್ ಆಸಕ್ತಿ ಬೆಳಸಿಕೊಂಡಿದ್ದ ಖ್ವಾಜಾ, ಪಾಕಿಸ್ತಾನದಲ್ಲಿರುವಾಗಲೇ ಸ್ಥಳೀಯ ಮೈದಾನಗಳಲ್ಲಿ ಆಡುವ ಫೋಟೋವನ್ನು ಇತ್ತೀಚೆಗೆ ಹಂಚಿಕೊಂಡಿದ್ದರು.

ಇಂಗ್ಲೆಂಡ್ ಗೆಲುವು ಕಸಿದ ಕಮ್ಮಿನ್ಸ್-ಲಿಯಾನ್ ಜೋಡಿ!
281 ರನ್ಗಳ ಗೆಲುವಿನ ಗುರಿ ಪಡೆದಿದ್ದ ಆಸ್ಟ್ರೇಲಿಯಾ, 227 ರನ್ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತ್ತು. ಗೆಲುವಿಗೆ ಇನ್ನೂ 54 ರನ್ಗಳ ದೂರವಿತ್ತು. ಮತ್ತೊಂದೆಡೆ ಅಂತಿಮ ಎರಡು ವಿಕೆಟ್ಗಳಷ್ಟೇ ಇಂಗ್ಲೆಂಡ್ ಗೆಲುವಿಗೆ ಬೇಕಿದ್ದವು. ಆದರೆ ಈ ಹಂತದಲ್ಲಿ ಜೊತೆಯಾದ ಕಮ್ಮಿನ್ಸ್ 44 ಮತ್ತು ನಾಥನ್ ಲಿಯಾನ್ 16 ರನ್ಗಳಿಸುವ ಮೂಲಕ ಇಂಗ್ಲೆಂಡ್ ಕೈಯಲ್ಲಿದ್ದ ಗೆಲುವನ್ನು ಕಸಿದಿದ್ದರು.
ಸಂಕ್ಷಿಪ್ತ ಸ್ಕೋರ್
- ಇಂಗ್ಲೆಂಡ್; 393/8 ಡಿಕ್ಲೇರ್ & 273 ಆಲೌಟ್
- ಆಸ್ಟ್ರೇಲಿಯಾ; 386 & 282/8
- ಫಲಿತಾಂಶ: ಆಸ್ಟ್ರೇಲಿಯಾಗೆ 2 ವಿಕೆಟ್ ಜಯ