ಮಾಜಿ ಸಚಿವ ಕೆ. ಶಿವನಗೌಡ ನಾಯಕ ಅವರು ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡು ರಾಯಚೂರು ಜಿಲ್ಲೆಗೆ ಹೊಸದಾಗಿ ಅರಕೇರಾ ತಾಲೂಕನ್ನು ಘೋಷಣೆ ಮಾಡಿದ್ದಾರೆ. ಇದು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಕೂಡಲೇ ರದ್ದುಪಡಿಸಬೇಕೆಂದು ಸಾಮಾಜಿಕ ಹೋರಾಟಗಾರ ವಿ ಎಂ ಮೇಟಿ ಆಗ್ರಹಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಈ ಪಂಚಾಯ್ತಿ ವ್ಯಾಪ್ತಿಯಲ್ಲಿ ಜಾಲಹಳ್ಳಿ, ಹೊಸೂರು, ಸಿದ್ದಾಪುರ, ಸೋಮನ ಮರಡಿ, ಸುಂಕೇಶ್ವರಹಾಳ, ರಾಮದುರ್ಗ ಜಿನ್ನಾಪುರ, ಸೇರಿದಂತೆ ಹಲವಾರು ಗ್ರಾಮಗಳಿವೆ. ತಾಲೂಕು ಘೋಷಣೆ ಮಾಡುವ ಮೊದಲು ಗ್ರಾಮಸ್ಥರ ಸಭೆ ಮಾಡಿ ಅಭಿಪ್ರಾಯ ಸಂಗ್ರಹಿಸುವ ಸಣ್ಣ ಇರಾದೆ ತೋರಿಲ್ಲ. ರಾಜಕೀಯ ಬಲದಿಂದ, ಸ್ವ ಲಾಭಕ್ಕಾಗಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ವಿರೋಧದ ನಡುವೆಯೂ ತಾಲೂಕು ಘೋಷಣೆ ಮಾಡಿದ್ದಾರೆ” ಎಂದು ಆರೋಪಿಸಿದರು.
“ಈ ಅವೈಜ್ಞಾನಿಕವಾಗಿ ನಿರ್ಧಾರದಿಂದ ಈ ಭಾಗದ ಗ್ರಾಮಸ್ಥರು ಹಾಗೂ ರೈತರು ಉಪ ನೊಂದಣಿ ಸೇರಿದಂತೆ ಹಲವಾರು ಸಮಸ್ಯೆಗಳು ಎದುರಿಸುವಂತಾಗಿದೆ. ಈಗಾಗಲೇ ಕಳೆದ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸುವ ಮೂಲಕ ತಾಲೂಕಿನ ಮತದಾರರು ಶಿವನಗೌಡ ನಾಯಕರಿಗೆ ತಕ್ಕ ಪಾಠ ಕಲಿಸಿದ್ದಾರೆ. ಅವರ ಅವೈಜ್ಞಾನಿಕ ಜನವಿರೋಧಿ ನಡೆಗಳಿಂದ ಸೋಲುಂಡಿದ್ದಾರೆ.
ಈಗಲಾದರೂ ಅರಕೇರಾ ತಾಲೂಕು ಕೇಂದ್ರವನ್ನು ರದ್ದು ಮಾಡಿ, ಗಬ್ಬೂರನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕು” ಎಂದು ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ಮನವಿ ಮಾಡಿದರು.
ಇದನ್ನೂ ಓದಿ: ರಾಯಚೂರು | ಪಿಡಿಓ, ಅಧಿಕಾರ ದುರ್ಬಳಕೆ ಆರೋಪ: ಕೂಲಿ ಕಾರ್ಮಿಕರು ಧರಣಿ
ಮಾಜಿ ತಾಪಂ ಸದಸ್ಯ ಗೋವಿಂದರಾಯ, ಮರಲಿಂಗಪ್ಪ ಕೂಳ್ಳೂರು, ಆಂಜನೇಯ ಬಡಿಗೇರಾ, ಮಂಜುನಾಥ್ ಹೇರುಂಡಿ, ಉಪಸ್ಥಿತರಿದ್ದರು.