ಮುಸ್ಲಿಮರ ಪವಿತ್ರ ರಮಝಾನ್ ತಿಂಗಳಲ್ಲಿ ಉಪವಾಸ ವ್ರತ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ, ಒಂದು ತಿಂಗಳು ಪೂರ್ತಿ ಉಪವಾಸ ಹಿಡಿದು, ಶಾರೀರಿಕ ಮತ್ತು ಮಾನಸಿಕವಾಗಿ ಎಲ್ಲಾ ಕೆಡುಕುಗಳಿಂದ ದೂರ ಸರಿಯುವಂತೆ ಮಾಡುವ ಉಪವಾಸ ತರಬೇತಿಯ ತಿಂಗಳು ಕೂಡ ಹೌದು ಈ ತಿಂಗಳಲ್ಲಿ ಉಪವಾಸ ಪಾರಾಯಣಕ್ಕೆ ಕೂಡ ಬಹಳಷ್ಟು ಮಹತ್ವವಿದೆ ಅದರಲ್ಲೂ ಇತ್ತೀಚೆಗೆ ದಿನಗಳಲ್ಲಿ ಕೋಮು ದ್ವೇಷ, ಅಪನಂಬಿಕೆ, ಸೌಹಾರ್ದತೆ ಕೆಡಿಸುವ ಇಂತಹ ಕಾಲ ಘಟ್ಟದಲ್ಲಿ ಅಲ್ಲಲ್ಲಿ ಸೌಹಾರ್ದ ಇಪ್ತಾರ್ ಕೂಟಗಳು ಸಹ ನಡೆಯುತ್ತಲಿದೆ. ಅಂತಹ ಸೌಹಾರ್ದ ಇಪ್ತಾರ್ ಕೂಟಕ್ಕೆ ಉಡುಪಿ ನಗರದ ತೋನ್ಸೆ ಹೂಡೆ ಗ್ರಾಮ ಮತ್ತೊಮ್ಮೆ ಸಾಕ್ಷಿಯಾಗಿದೆ. ಹೂಡೆ ಪರಿಸರದ ಸಾರ್ವಜನಿಕರಿಗೆ ಮುಕ್ತವಾಗಿ ಇಪ್ತಾರ್ ಕೂಟವನ್ನು ಇಂದು ಹೂಡೆಯ ಉರ್ದು ಪ್ರಾಥಮಿಕ ಶಾಲಾ ಆವರಣದಲ್ಲಿ ತೋನ್ಸೆ ಪ್ರೆಂಡ್ಸ್ ವತಿಯಿಂದ ಆಯೋಜಿಸಿದ್ದರು.

ಕಳೆದ ಐದು ವರ್ಷಗಳಿಂದ ಹೂಡೆ ಪರಿಸರದಲ್ಲಿ ಇಪ್ತಾರ್ ಕೂಟವನ್ನು ಆಯೋಜಿಸುತ್ತಿದ್ದು ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರಿಗೂ ಮುಕ್ತವಾಗಿ ಆಮಂತ್ರಿಸಿ ಮುಸ್ಲಿಮರ ಉಪವಾಸದ ಬಗ್ಗೆ ತಿಳಿಯಬೇಕು ಮತ್ತು ಶಾಂತಿಯುತ ವಾದ ನಮ್ಮ ಹೂಡೆ ಪರಿಸರದಲ್ಲಿ ಪರಸ್ಪರ ಎಲ್ಲರೂ ಮುಕ್ತವಾಗಿ ಬೆರೆಯಲು ಈ ಇಪ್ತಾರ್ ಕೂಡ ಒಂದು ವೇದಿಕೆಯಾಗಲಿ ಎಂಬುದೇ ನಮ್ಮ ಮುಖ್ಯ ಆಶಯ ಹಾಗಾಗಿ ಪ್ರತಿವರ್ಷ ಸೌಹಾರ್ದ ವಾತಾವರಣ ನಿರ್ಮಿಸುವ ಉದ್ದೇಶಕ್ಕಾಗಿ ಇಂತಹ ಸಭೆಗಳನ್ನು ಇಲ್ಲಿನ ಗ್ರಾಮದವರ ಸಹಕಾರದೊಂದಿಗೆ ಆಯೋಜಿಸುತ್ತೇವೆ ಎಂದು ಇಪ್ತಾರ್ ಕೂಟದ ಆಯೋಜಕರಲ್ಲಿ ಒಬ್ಬರಾದ ಅಬ್ದುಲ್ಲಾ ಮನ್ಸೂರ್ ಅಲಿ ಈದಿನ.ಕಾಮ್ ಜೊತೆ ಹಂಚಿಕೊಂಡರು.

ಈ ದಿನ.ಕಾಮ್ ಜೊತೆ ಮಾತನಾಡಿದ ಸ್ಥಳಿಯರಾದ ಅರುಣ್ ಕುಮಾರ್ ತೋನ್ಸೆ ಪ್ರೆಂಡ್ಸ್ ನಡೆಸುವ ಇಪ್ತಾರ್ ಕೂಟಕ್ಕೆ ಪ್ರತಿವರ್ಷ ತಪ್ಪದೇ ಹಾಜರಾಗುತ್ತೇನೆ, ಹೂಡೆಯಲ್ಲಿರುವ ಸೌಹಾರ್ದತೆ ಬಗ್ಗೆ ಹೆಚ್ಚು ಹೇಳಬೇಕೆಂದಿಲ್ಲ, ನಾವೆಲ್ಲರೂ ಇಲ್ಲಿ ಅಣ್ಣ ತಮ್ಮಂದಿರ ಹಾಗೇ ಒಟ್ಟಾಗಿ ಬದುಕುತ್ತಿದ್ದೇವೆ ಇಂತಹ ಇಪ್ತಾರ್ ಕೂಟದಿಂದ ಇನ್ನಷ್ಟು ಹತ್ತಿರವಾಗಲು ಸಹಕಾರವಾಗುತ್ತದೆ ಎಂದು ಹೇಳಿದರು.

ಈದಿನ.ಕಾಮ್ ಜೊತೆ ಮಾತನಾಡಿದ ತೋನ್ಸೆ ಪಂಚಾಯತ್ ಸದಸ್ಯರಾದ ಮಹೇಶ್ ಪೂಜಾರಿ, ಸೌಹಾರ್ದ ಇಪ್ತಾರ್ ಕೂಟಕ್ಕೆ ಮಾತ್ರವಲ್ಲ ಇಲ್ಲಿ ನಡೆಯುವ ಮುಸ್ಲಿಮರ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ನಾನು ಹಾಜರಿರುತ್ತೇನೆ, ನಾವು ಮುಸ್ಲಿಮರ ಜೊತೆ ಒಟ್ಟಿಗೆ ಇರುವವರೇ, ಬಹಳ ಹತ್ತಿರದಿಂದ ನೋಡಿದ್ದೇನೆ ಒಂದು ತಿಂಗಳ ಕಟ್ಟು ನಿಟ್ಟಿನ ಉಪವಾಸವನ್ನು ಆಚರಿಸುತ್ತಾರೆ, ಹಿಂದು ಮುಸ್ಲಿಮ್, ಎಂಬ ಬೇದ ಮಾಡದೆ, ನಿರ್ಗತಿಕರಿಗೆ, ಬಡವರಿಗೆ ದಾನ ಧರ್ಮ ಮಾಡುತ್ತಾರೆ ಎಂದು ಹೇಳಿದರು.

ಈದಿನ.ಕಾಮ್ ಜೊತೆ ಮಾತನಾಡಿದ ಉಡುಪಿ ಜಿಲ್ಲಾ ಮುಸ್ಲೀಮ್ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಮೌಲ, ತೋನ್ಸೆ ಎಂಬ ಊರೇ ಸೌಹಾರ್ದತೆಗೆ, ಭ್ರಾತೃತ್ವಕ್ಕೆ, ಸಹೋದರತೆಗೆ ಹೆಸರುವಾಸಿಯಾದ ಊರು, ಅನ್ಯೋನ್ಯತೆ ಹೆಸರುವಾಸಿಯಾದ ಊರು. ಕೆಲವು ವರ್ಷಗಳಿಂದ ಈ ಸಹೋದತೆ, ಅನ್ಯೋನ್ಯತೆಯನ್ನು ಕೆಡಿಸಲು ಕೆಲವು ಬೆರಳೆಣಿಕೆಯಷ್ಟು ಮಂದಿ ಪ್ರಯತ್ನ ಮಾಡಿರಬಹುದು, ಅದರ ಹೊರತಾಗಿ ತೋನ್ಸೆ- ಹೂಡೆಯ ಸಮಾನ ಮನಸ್ಕ ಸಹೋದರರು ಸೌಹಾರ್ದ ಇಪ್ತಾರ್ ಕೂಟ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇಂತಹ ಸೌಹಾರ್ದ ಕೂಟಗಳು, ಸೌಹಾರ್ದ ಸಭೆಗಳನ್ನು ನಡೆಸುವ ಮೂಲಕ ಎಲ್ಲರ ಮನಸ್ಸನ್ನು ಬೆಸೆಯುವ ಕೆಲಸಗಳನ್ನು ಎಲ್ಲೆಡೆಯೂ ನಡೆಯಲಿ ಎಂದು ಸಂಘಟಕರಿಗೆ ಶುಭಹಾರೈಸಿದರು.
ಇಪ್ತಾರ್ ಕೂಟದಲ್ಲಿ, ತಾಲೂಕು ಪಂಚಾಯತ್ ಸದಸ್ಯರಾದ ರಹ್ಮತುಲ್ಲಾ ಹೂಡೆ, ಕೆಮ್ಮಣ್ಣು ಗ್ರಾಮ ಪಂಚಾಯತ್ ಸದಸ್ಯರಾದ ಇದ್ರೀಸ್ ಹೂಡೆ, ಹೈದರ್ ಅಲಿ, ಡಾ ರಫೀಕ್ ತೋನ್ಸೆ, ಶಾಹಿದ್ ಅಲಿ ಮುಂತಾದವರು ಉಪಸ್ಥಿತರಿದ್ದರು.

