ಕೊಡಗು ಜಿಲ್ಲೆ, ಮಡಿಕೇರಿ ನಗರದ ರೆಡ್ ಬ್ರಿಕ್ಸ್ ಇನ್ ಸಭಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಕೊಡಗು ಪತ್ರಕರ್ತರ ಸಂಘ (ರಿ) ದ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಮತ್ತು ಪತ್ರಕರ್ತರ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ
ವಕೀಲರ ಸಂಘದ ಅಧ್ಯಕ್ಷ ಎಂ ಎ ನಿರಂಜನ್ ಮಾತನಾಡಿ ‘ ಸಮಾಜದಲ್ಲಿ ಒಡೆದ ಮನಸ್ಸುಗಳನ್ನು ಬೆಸೆಯುವ ಶಕ್ತಿ ಪತ್ರಕರ್ತರ ಹರಿತವಾದ ಲೇಖನಿಗಿದೆ. ಪತ್ರಕರ್ತರು ಸತ್ಯನಿಷ್ಠ ವರದಿಗಳನ್ನು ಪ್ರಕಟಿಸುವಾಗ ಯಾವುದೇ ಹಿಂಜರಿಕೆ ಇರಬಾರದು ‘ ಎಂದರು.
” ನ್ಯಾಯಾಂಗದ ತೀರ್ಪಿನ ಬಗ್ಗೆ ವಿಶ್ಲೇಷಣಾತ್ಮಕವಾಗಿ ಪ್ರಶ್ನಿಸುವ ಹಕ್ಕು ಪತ್ರಕರ್ತರಿಗೆ ಸದಾ ಇರುತ್ತದೆ. ಹೀಗಾಗಿ ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎಂದಿಗೂ ಧಕ್ಕೆಯಾಗುವುದಿಲ್ಲ. ಹೀಗಿದ್ದರೂ, ಇಂದಿನ ದಿನಗಳಲ್ಲಿ ತನಿಖಾ ವರದಿಗಳು ಕಡಿಮೆಯಾಗುತ್ತಿರುವುದು ವಿಷಾಧನೀಯ. ಈ ನಿಟ್ಟಿನಲ್ಲಿ ಕೊಡಗಿನ ಪತ್ರಕರ್ತರು ಗಮನಹರಿಸಬೇಕು. ಇಂದು ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿದೆ. ಪತ್ರಕರ್ತರು ಚಿಂತನಾಶೀಲ ಬರವಣಿಗೆಯ ಕಡೆ ಹೆಚ್ಚಿನ ಆದ್ಯತೆ ನೀಡಬೇಕು. ಹಿರಿಯರ ಗರಡಿಯಲ್ಲಿ ಮುನ್ನುಗ್ಗುವ ಪ್ರಯತ್ನ ಮಾಡಬೇಕು. ನಿಖರತೆ ಇದ್ದರೆ ಯಾವ ವಿಚಾರದಲ್ಲೂ ಎದರುವಂತಿಲ್ಲ. ಪತ್ರಕರ್ತರು ಜವಾಬ್ದಾರಿ ಅರಿತು ಕೆಲಸ ಮಾಡಬೇಕಿದೆ ” ಎಂದು ಸಲಹೆ ನೀಡಿದರು.
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ ಆರ್ ನಾಗೇಂದ್ರ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ‘ ಕೊಡಗು ಪತ್ರಕರ್ತರ ಸಂಘ ಬಲಿಷ್ಠವಾಗಬೇಕಾದರೆ ಸಂಘದ ಸಾರಥಿ ಗಟ್ಟಿಯಾಗಿರಬೇಕು. ಅನಿಲ್ ಹೆಚ್ ಟಿ ಅವರು ಎಲ್ಲರನ್ನು ಒಗ್ಗೂಡಿಸಿಕೊಂಡು ಸಂಘವನ್ನು ಮುನ್ನಡೆಸಲಿದ್ದಾರೆ. ಸಂಘದಲ್ಲಿ ತಮ್ಮ ತಂದೆ ತಾಯಿಯ ಹೆಸರಿನಲ್ಲಿ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸುವುದಾಗಿ ಇದೇ ಸಂದರ್ಭ ಘೋಷಿಸಿದರು ‘.
ಕೂರ್ಗ್ ಹೋಟೇಲ್ಸ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಸಂಘದ ಸ್ಟಿಕ್ಕರ್ ಬಿಡುಗಡೆಗೊಳಿಸಿ ಮಾತನಾಡಿ, ‘ ಕೊಡಗು ಜಿಲ್ಲೆಯಲ್ಲಿ ಸಾಮಾಜಿಕ ಕಾಳಜಿಯಿಂದ ಪತ್ರಿಕಾರಂಗ ನಡೆಯುತ್ತಿದೆ. ಬೇರೆ ಜಿಲ್ಲೆಗೆ ಹೋಲಿಕೆ ಮಾಡಿದರೆ ಕೊಡಗು ಜಿಲ್ಲೆಯಲ್ಲಿ ಪತ್ರಕರ್ತರು ಕಾಳಜಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಡಗು ಪತ್ರಕರ್ತರ ಸಂಘಕ್ಕೆ ಮುಂದಿನ ದಿನಗಳಲ್ಲಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ‘ ನೀಡಿದರು.
ಪ್ರವಾಸೋದ್ಯಮದ ಬೆಳವಣಿಗೆ ನಿಟ್ಟಿನಲ್ಲಿ ಕೊಡಗಿನ ಪತ್ರಕರ್ತರು ನಿರಂತರ ಸಹಕಾರ ನೀಡುತ್ತಾ ಬಂದಿದ್ದಾರೆ, ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ನವ ರೂಪುರೇಷೆ ನೀಡುವ ನಿಟ್ಟಿನಲ್ಲಿ ಏಪ್ರಿಲ್ ಎರಡನೇ ವಾರದಲ್ಲಿ ಮಡಿಕೇರಿಯಲ್ಲಿ ಎರಡು ದಿನ ಪ್ರವಾಸೋದ್ಯಮ ಉತ್ಸವವನ್ನು ಆಯೋಜಿಸಿದ್ದು, ರಾಜ್ಯ ಮಟ್ಟದಿಂದಲೂ ಪ್ರವಾಸೋದ್ಯಮ ಕ್ಷೇತ್ರದ ಅನೇಕ ಪ್ರಮುಖರು ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದೂ ದಿನೇಶ್ ಕಾರ್ಯಪ್ಪ ಮಾಹಿತಿ ನೀಡಿದರು.

ಕೊಡಗು ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಅನಿಲ್ ಹೆಚ್ ಟಿ ಕೊಡಗಿನ ಪತ್ರಿಕಾ ಕ್ಷೇತ್ರದ ಭೀಷ್ಮ ಶಕ್ತಿ ಪತ್ರಿಕೆಯ ಸ್ಥಾಪಕರಾದ ಬಿ ಎಸ್ ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಪದಗ್ರಹಣ ಸ್ವೀಕರಿಸಿ ಮಾತನಾಡಿ ” ಸಂಘದ ಅಧ್ಯಕ್ಷನಾಗಿ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದೇನೆ. ಇದರಿಂದ ನನ್ನ ಹೊಣೆಗಾರಿಕೆ ಹೆಚ್ಚಾಗಿದೆ. ಸಂಘ ಕಳೆದ ಎರಡು ವರ್ಷದಲ್ಲಿ ಅತ್ಯುತ್ತಮವಾಗಿ ಬೆಳೆದುಬಂದಿದೆ. ನಿವೇಶನ ರಹಿತ ಪತ್ರಕರ್ತರಿಗೆ ನಿವೇಶನ, ಪತ್ರಕರ್ತರು ಹಾಗೂ ತಮ್ಮ ಕುಟುಂಬ ಸದಸ್ಯರಿಗೆ ಗುಂಪು ಆರೋಗ್ಯ ವಿಮೆ ಸೇರಿದಂತೆ ಹಲವು ಉಪಯುಕ್ತ ಯೋಜನೆ ರೂಪಿಸಲಾಗುತ್ತದೆ. ಸಂಘದಲ್ಲಿ ನೂರಕ್ಕೂ ಅಧಿಕ ಮಂದಿ ಸದಸ್ಯರಿದ್ದು, ಪತ್ರಿಕಾ ಭವನ ಟ್ರಸ್ಟ್ ಕೂಡ ಬೆನ್ನೆಲುಬಾಗಿ ನಿಂತಿದೆ. ಎರಡು ವರ್ಷದಲ್ಲಿ ಸುಮಾರು 7 ದತ್ತಿ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಒಟ್ಟು 10 ದತ್ತಿ ಪ್ರಶಸ್ತಿ ಸ್ಥಾಪಿಸುವ ಗುರಿ ಇದೆ. ಸಂಘದಿಂದ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ” ಎಂದು ತಿಳಿಸಿದರು.
ಸಂಘದ ಗೌರವ ಸಲಹೆಗಾರ ಟಿ ಪಿ ರಮೇಶ್ ಮಾತನಾಡಿ ‘ ಪತ್ರಕರ್ತರ ಸಂಘ ಸಾರ್ವಜನಿಕವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಹೊಸ ಸಂಘವನ್ನು ರಚನೆ ಮಾಡಿ ಕಳೆದ ಎರಡು ವರ್ಷದಿಂದ ಅತ್ಯುತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ ‘ ಎಂದರು.
ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್ ಎ ಮುರುಳೀಧರ್ ಮಾತನಾಡಿ ‘ ಕೊಡಗು ಜಿಲ್ಲೆಯಲ್ಲಿ ನೋಂದಾಯಿತ ಸಂಘ ಅಸ್ಥಿತ್ವದಲ್ಲಿದ್ದರೆ ಅದು ಕೊಡಗು ಪತ್ರಕರ್ತರ ಸಂಘ ಮಾತ್ರ. ನಾಲ್ಕು ತಾಲೂಕು ಸಮಿತಿಗಳನ್ನು ಕೂಡ ರಚನೆ ಮಾಡಿಕೊಂಡು ಕ್ರೀಯಾಶೀಲವಾಗಿ ಕೆಲಸ ಮಾಡಿಕೊಂಡು ಬರುತ್ತಿದೆ. ಸಂಘದಲ್ಲಿ ಒಗ್ಗಟ್ಟು ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು’ ಎಂದು ಹೇಳಿದರು.
ಕೊಡಗು ಪತ್ರಕರ್ತರ ಸಂಘದ ಗೌರವ ಸಲಹೆಗಾರ ಬಿ ಜಿ ಅನಂತಶಯನ, ಮದೆನಾಡಿನ ಸಿಂಚನಾ, ಡಾ ಮುಲ್ಲೇಂಗಡ ರೇವತಿ ಪೂವಯ್ಯ, ಜಾದುಗಾರ ವಿಕ್ರಂ ಜಾದೂಗಾರ್, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಕೊಡಗು | ‘ ಲೈನ್ ಮನೆ ‘ ಜೀತ ಇಂದಿಗೂ ಜೀವಂತ
ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಎಂ ಪಿ ಕೇಶವ ಕಾಮತ್, ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ ವಿ ರವಿಕುಮಾರ್, ಸಂಘದ ನೂತನ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಮೊದಲಾದವರು ಇದ್ದರು.