ಭಾನುವಾರ ನಡೆದ ಮುಂಬೈ ಇಂಡಿಯನ್ಸ್ - ಚನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ - ರಾಜಸ್ಥಾನ ತಂಡಗಳ ನಡುವಿನ ಎರಡೂ ಪಂದ್ಯಗಳು ಪ್ರೇಕ್ಷಕರನ್ನು ರೋಮಾಂಚನಗೊಳಿಸಿದವು. ಹಲವು ದಾಖಲೆಗಳಿಗೆ ಕಾರಣವಾದವು...
ಚೆನ್ನೈ ಸೂಪರ್ ಕಿಂಗ್ಸ್ 18ನೇ ಐಪಿಎಲ್ ಆವೃತ್ತಿಯನ್ನು ಗೆಲುವಿನೊಂದಿಗೆ ಶುಭಾರಂಭ ಮಾಡಿತು. ಐಪಿಎಲ್ 2025ರ ಮೂರನೇ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ನೇತೃತ್ವದ ಸಿಎಸ್‌ಕೆ ತವರಿನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಚೆನ್ನೈ ತಂಡ ಎದುರಾಳಿ ತಂಡಗಳಿಗೆ ಎಚ್ಚರಿಕೆ ನೀಡಿದೆ.
ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಮುಂಬೈ ತಂಡದ ನೇತೃತ್ವ ವಹಿಸಿದ್ದ ಸೂರ್ಯಕುಮಾರ್ ಯಾದವ್ ಪಂದ್ಯವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಸಿಎಸ್‌ಕೆ ಬೌಲಿಂಗ್ ದಾಳಿಗೆ ತತ್ತರಿಸಿತು. ಯಾವುದೇ ಹಂತದಲ್ಲೂ ಸಿಎಸ್‌ಕೆ ಬೌಲರ್‌ಗಳು ಮುಂಬೈ ಇಂಡಿಯನ್ಸ್ ಬ್ಯಾಟರ್‍ಗಳಿಗೆ ಉತ್ತಮ ಇನಿಂಗ್ಸ್ ಆಡಲು ಅವಕಾಶ ನೀಡಲಿಲ್ಲ. ಪರಿಣಾಮ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಲಷ್ಟೇ ಶಕ್ತವಾಯಿತು.
ಮುಂಬೈ ಪರ ನಾಯಕ ಸೂರ್ಯಕುಮಾರ್ ಯಾದವ್ 29 ರನ್‌ಗಳೊಂದಿಗೆ ಉತ್ತಮ ಪ್ರದರ್ಶನ ನೀಡಿದರು. ತಿಲಕ್ ವರ್ಮಾ ಕೂಡ 25 ಎಸೆತಗಳಲ್ಲಿ 31 ರನ್ ಗಳಿಸುವ ಮೂಲಕ ಮುಂಬೈ ತಂಡಕ್ಕೆ ಅಡಿಪಾಯ ಹಾಕಿದರು. ಈ ಜೋಡಿ ಮುಂಬೈ ತಂಡದ ಜವಾಬ್ದಾರಿ ಹೊತ್ತು ಜೊತೆಯಾಟ ಆಡುವಾಗ ಉತ್ತಮ ರನ್ ಕಲೆ ಹಾಕುವ ನಿರೀಕ್ಷೆಯಿತ್ತು. ಏಕೆಂದರೆ ಸೂರ್ಯ ಮತ್ತು ತಿಲಕ್ ಇಬ್ಬರೂ ಸ್ಪೋಟಕ ಬ್ಯಾಟರ್‌ಗಳಾಗಿದ್ದು, ಪಂದ್ಯದ ಗತಿಯನ್ನೇ ಬದಲಿಸಬಲ್ಲವರಾಗಿದ್ದರು. ಆದರೆ ಈ ಇಬ್ಬರ ವಿಕೆಟ್ ಪಂದ್ಯದ ಗತಿಯನ್ನೇ ಬದಲಾಯಿಸಿತು.
ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ವಿಕೆಟ್ ಕಳೆದುಕೊಂಡಿದ್ದು ಪಂದ್ಯಕ್ಕೆ ಮಹತ್ವದ ತಿರುವು ಕೊಟ್ಟಿತ್ತು. ಇದು ಮುಂಬೈ ತಂಡವನ್ನು 150 ರನ್‌ಗಳಿಗೆ ಸಿಎಸ್‌ಕೆ ತಂಡವನ್ನು ಕಟ್ಟಿ ಹಾಕಲು ನೆರವಾಯಿತು. ಈ ಎಲ್ಲ ಮನ್ನಣೆ ಅಫ್ಘಾನಿಸ್ತಾನದ ಯುವ ಸ್ಟಾರ್ ಸ್ಪಿನ್ನರ್ ನೂರ್ ಅಹ್ಮದ್ ಅವರಿಗೆ ಸಲ್ಲಬೇಕು. ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಸಿಎಸ್‌ಕೆ ತಂಡ ದೊಡ್ಡ ಸ್ಕೋರ್ ಗಳಿಸದಂತೆ ತಡೆದರು. ಈ ವಿಕೆಟ್‌ಗಳನ್ನು ನೂರ್ ಅಹ್ಮದ್ ಕಬಳಿಸದಿದ್ದರೆ, ಮುಂಬೈ ತಂಡವು ಸವಾಲಿನ ಮೊತ್ತವನ್ನು ಕಲೆಹಾಕುವ ಎಲ್ಲ ಅವಕಾಶಗಳನ್ನು ಹೊಂದಿತ್ತು.
ಇದಾದ ನಂತರ ಮುಂಬೈ ಇಂಡಿಯನ್ಸ್ ತಂಡ ಇನಿಂಗ್ಸ್‌ನ ಕೊನೆಯಲ್ಲಿ ರಾಬಿನ್ ಮಿಂಜ್ ಮತ್ತು ನಮನ್ ಧೀರ್ ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ ನೂರ್ ಅಹ್ಮದ್ ತಮ್ಮ ಪ್ರಾಬಲ್ಯ ಸಾಧಿಸಿದರು. ನೂರ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಅವರು ತಮ್ಮ 4 ಓವರ್‍ಗಳಲ್ಲಿ ಕೇವಲ 18 ರನ್ ನೀಡಿ 4 ವಿಕೆಟ್ ಪಡೆದರು. ನೂರ್ ಅಹ್ಮದ್ ಈ ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಪಡೆಯದಿದ್ದರೆ, ಪಂದ್ಯ ಮುಂಬೈ ಪರ ವಾಲುವ ಸಾಧ್ಯತೆಯಿತ್ತು.
ರೋಹಿತ್ 18ನೇ ಬಾರಿ ಶೂನ್ಯಕ್ಕೆ ಔಟ್
ಮುಂಬೈ ಸೋಲಿನಲ್ಲಿ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಶೂನ್ಯಕ್ಕೆ ಪೆವಿಲಿಯನ್‌ಗೆ ತೆರಳಿದ್ದು ಕೂಡ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಐಪಿಎಲ್‌ನಲ್ಲಿ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಜಮಾವಣೆ ಮಾಡಿಕೊಂಡಿದ್ದಾರೆ. ರೋಹಿತ್ 18ನೇ ಬಾರಿಗೆ ಡಕ್ ಔಟ್ ಆಗುವ ಮೂಲಕ ದಿನೇಶ್ ಕಾರ್ತಿಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರೊಂದಿಗೆ ಜಂಟಿಯಾಗಿ ಮೊದಲನೇ ಸ್ಥಾನದಲ್ಲಿ ಸೇರ್ಪಡೆಯಾಗಿದ್ದಾರೆ.
ರೋಹಿತ್ ಮೊದಲ ಓವರ್‌ನಲ್ಲಿಯೇ ಉತ್ಸಾಹದಿಂದಲೇ ಕ್ರೀಸಿಗೆ ಇಳಿದಿದ್ದರು. ಆದರೆ ಖಲೀಲ್ ಅಹ್ಮದ್ ಎಸೆದ ನಾಲ್ಕನೇ ಎಸೆತವನ್ನು ಎದುರಿಸಿದಾಗ ಅವರು ಮಿಡ್ ವಿಕೆಟ್‌ನಲ್ಲಿದ್ದ ಶಿವಂ ದುಬೆ ಅವರಿಗೆ ಕ್ಯಾಚಿತ್ತು ಔಟಾದರು. ಆರ್‌ಸಿಬಿಯ ಇಬ್ಬರು ಮಾಜಿ ಆಟಗಾರರಾದ ದಿನೇಶ್ ಕಾರ್ತಿಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ 18 ಬಾರಿ ಶೂನ್ಯಕ್ಕೆ ಔಟಾದ ದಾಖಲೆ ಹೊಂದಿದ್ದಾರೆ. ಈ ಮೂವರನ್ನು ಹೊರತುಪಡಿಸಿದರೆ 16 ಬಾರಿ ಶೂನ್ಯಕ್ಕೆ ಔಟಾಗಿರುವ ಪಿಯೂಷ್ ಚಾವ್ಲಾ ಮತ್ತು ಸುನಿಲ್ ನರೈನ್ ಅವರು ನಂತರದ ಸ್ಥಾನಗಳಲ್ಲಿದ್ದಾರೆ.
ದಿನೇಶ್ ಕಾರ್ತಿಕ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ ಎರಡರಿಂದಲೂ ನಿವೃತ್ತಿ ಪಡೆದಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಇದೀಗ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದಾರೆ. ಹೀಗಾಗಿ ಶೂನ್ಯ ರನ್ ವಿಚಾರವಾಗಿ ರೋಹಿತ್ ಶರ್ಮಾ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಐಪಿಎಲ್‌ನಲ್ಲಿ ಒಟ್ಟು 134 ಪಂದ್ಯಗಳಿಂದ 24.74 ಸರಾಸರಿಯಲ್ಲಿ 2771 ರನ್ ಗಳಿಸಿದ್ದಾರೆ. ಅದರಲ್ಲಿ 18 ಅರ್ಧಶತಕಗಳಿವೆ.
ರೋಹಿತ್ ಶರ್ಮಾ ಅವರು 258 ಪಂದ್ಯಗಳಿಂದ 29.58 ಸರಾಸರಿಯಲ್ಲಿ 6628 ರನ್‌ಗಳಿಸಿದ್ದಾರೆ. ಅದರಲ್ಲಿ 2 ಶತಕ 43 ಅರ್ಧಶತಕಗಳಿವೆ. ಇಷ್ಟು ಮಾತ್ರವಲ್ಲದೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದವರ ಪಟ್ಟಿಯಲ್ಲಿ ರೋಹಿತ್ ಅವರು ಮೂರನೇ ಸ್ಥಾನದಲ್ಲಿದ್ದಾರೆ. 8063 ರನ್ ಕಲೆಹಾಕಿರುವ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿ ಮತ್ತು 6769 ರನ್ ಗಳಿಸಿರುವ ಶಿಖರ್ ಧವನ್ 2ನೇ ಸ್ಥಾನದಲ್ಲಿದ್ದಾರೆ.
ಹೊಸ ಹುಡುಗ ವಿಘ್ನೇಶ್ ಪುತ್ತೂರ್ ಕೈಚಳಕ
ಐಪಿಎಲ್‌ನಲ್ಲಿ ಇದೀಗ ವಿಘ್ನೇಶ್ ಪುತ್ತೂರ್ ಎಂಬ ಉದಯೋನ್ಮುಖ ಕ್ರಿಕೆಟಿಗನ ಉದಯವಾಗಿದೆ. ಆಡಿದ ಮೊದಲ ಪಂದ್ಯದಲ್ಲೇ ಮೂವರು ದಿಗ್ಗಜ ಬ್ಯಾಟರ್‌ಗಳ ವಿಕೆಟ್ ಕಬಳಿಸಿ ಹೊಸ ದಾಖಲೆ ಬರೆದಿದ್ದಾರೆ. ಮುಂಬೈ ಇಂಡಿಯನ್ಸ್ ಪ್ರತಿಭಾನ್ವಿತ ಆಟಗಾರನ ರೂಪದಲ್ಲಿ ಸಿಕ್ಕ ಈ ಯುವಕ ತಾನು ಭರವಸೆಯ ಕ್ರಿಕೆಟಿಗನಾಗಬಲ್ಲೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ.
ಮೊದಲು ಅಂತಿಮ ಇಲೆವೆನ್‌ನಲ್ಲಿ ವಿಘ್ನೇಶ್ ಪುತ್ತೂರ್ ಹೆಸರಿರಲಿಲ್ಲ. ಆದರೆ ಯಾವಾಗ ಮುಂಬೈ ತಂಡ ಬ್ಯಾಟಿಂಗ್ ಮುಗಿಸಿ ಕ್ಷೇತ್ರರಕ್ಷಣೆಗೆ ಇಳಿಯುವಾಗ ಇಂಪ್ಯಾಕ್ಟ್ ಪ್ಲೇಯರ್‌ಆಗಿ ರೋಹಿತ್ ಶರ್ಮಾ ಬದಲು ಎಡಗೈ ಸ್ಪಿನ್ನರ್ ವಿಘ್ನೇಶ್ ಪುತ್ತೂರ್ ಅವರನ್ನು ಕಣಕ್ಕಿಳಿಸಿತ್ತು. ಚೆನ್ನೈ ಪಂದ್ಯಕ್ಕೆ ಕೇವಲ 156 ರನ್‌ಗಳ ಗುರಿ ಇದ್ದುದರಿಂದ ಸೋಲಿಸುವುದು ಕಷ್ಟ ಎಂದು ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ತಂಡ ಪಂದ್ಯ ಸೋತರೂ ಪ್ರಮುಖ ಬ್ಯಾಟರ್‌ಗಳ ವಿಕೆಟ್ ಉರುಳಿಸಿ ಕ್ರಿಕೆಟ್ ಜಗತ್ತಿನ ಗಮನ ಸೆಳದಿದ್ದಾನೆ.
ಕೇರಳದ ಮಲಪ್ಪುರಂನ ಆಟೋ ಚಾಲಕನ ಪುತ್ರ ವಿಘ್ನೇಶ್ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್(53), ಬಳಿಕ ಆಲ್‌ರೌಂಡರ್‍ಗಳಾದ ಶಿವಂ ದುಬೆ(9), ದೀಪಕ್ ಹೂಡಾ(3) ಅವರ ವಿಕೆಟ್ ಪಡೆಯುವ ಮೂಲಕ ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದಾನೆ.
ಮುಂಬೈ ಇಂಡಿಯನ್ಸ್ ತಂಡ ಟ್ಯಾಲೆಂಟ್ ಹಂಟ್ ಮಾಡುವ ಪ್ರಕ್ರಿಯೆ ಕಳೆದ ಕೆಲವು ವರ್ಷಗಳಿಂದ ನಡೆಸುತ್ತಿದೆ. ವಿಶ್ವದ ನಂಬರ್ ವನ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಭಾರತದ ಅಗ್ರಪಂಕ್ತಿಯ ಆಲ್ ರೌಂಡರ್‍ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಸಹೋದರರು ಇದೇ ಟ್ಯಾಲೆಂಟ್ ಹಂಟ್ ಪ್ರಕ್ರಿಯೆಯಲ್ಲಿ ಕ್ರಿಕೆಟ್‌ಗೆ ಸೇರ್ಪಡೆಯಾದವರು.
ವಿಘ್ನೇಶ್ ಕೇರಳ ಅಂಡರ್ 14 ಮತ್ತು ಅಂಡರ್ 19 ವಿಭಾಗದಲ್ಲಿ ಮಿಂಚಿದ್ದ. ಆದರೆ ಸೀನಿಯರ್ ತಂಡಕ್ಕೆ ಈವರೆಗೂ ಪದಾರ್ಪಣೆ ಮಾಡಿಲ್ಲ. ಈತ ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಅಲೆಪ್ಪಿ ರಿಪ್ಪಲ್ಸ್ ತಂಡಕ್ಕೆ ಆಡುತ್ತಿದ್ದ.
ಎಸ್‌ಆರ್‌ಎಚ್ – ಆರ್‌ಆರ್ ತಂಡದ ದಾಖಲೆಗಳು
ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ತಂಡಗಳ ನಡುವೆ ಉಪ್ಪಳದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾದವು. ಹೈದರಾಬಾದ್ ತಂಡ ಐಪಿಎಲ್ ಆವೃತ್ತಿಯಲ್ಲಿ ನಾಲ್ಕನೇ ಬಾರಿ 250 ಕ್ಕೂ ಹೆಚ್ಚು ರನ್ ಕಲೆ ಹಾಕಿ ದಾಖಲೆ ಬರೆದಿದೆ. ಎಸ್‌ಆರ್‌ಹೆಚ್ ಇಂದು ತನ್ನದೇ ದಾಖಲೆ ಮುರಿಯಲು ಒಂದು ರನ್‌ನಿಂದ ವಿಫಲವಾದರೂ 2ನೇ ಸ್ಥಾನಕ್ಕೆ ಸೇರ್ಪಡೆಗೊಂಡಿತು. 2024ರ 17ನೇ ಆವೃತ್ತಿಯಲ್ಲಿ ಆರ್‌ಸಿಬಿ ವಿರುದ್ಧ 287/3 ರನ್ ಕಲೆ ಹಾಕಿದ್ದು ಇದುವರೆಗಿನ ಅತ್ಯಧಿಕ ಮೊತ್ತವಾಗಿತ್ತು. ಅದರಲ್ಲಿ ಇಶಾನ್ ಕಿಶನ್‌ರ ಅಮೋಘ ಶತಕವೂ ದಾಖಲಾಗಿತ್ತು. ಅದು ಶತಕ ಬಾರಿಸಿದ ಮೊದಲ ಬ್ಯಾಟರ್ ಭಾಜನಕ್ಕೂ ಪಾತ್ರವಾಯಿತು. ಈ ಬಾರಿ 6 ವಿಕೆಟ್ ನಷ್ಟಕ್ಕೆ 286 ರನ್ ಪೇರಿಸಿತು.
ಸಂಜು ಸ್ಯಾಮ್ಸನ್ ವಿಶೇಷ ಸಾಧನೆ
ರಾಜಸ್ಥಾನ ಪರ ಅರ್ಧಶತಕ ಗಳಿಸುವ ಮೂಲಕ ಸಂಜು ಸ್ಯಾಮ್ಸನ್ ತಮ್ಮ ಐಪಿಎಲ್ 2025ರ ಅಭಿಯಾನವನ್ನು ಅಬ್ಬರದಿಂದ ಆರಂಭಿಸಿದರು. ಸಂಜು ಸ್ಯಾಮ್ಸನ್ ಅರ್ಧಶತಕದ ಮೂಲಕ ರಾಜಸ್ಥಾನ ಪರ ವಿಶೇಷ ದಾಖಲೆ ಸೃಷ್ಟಿಸಿದರು. ಸಂಜು ಅವರು ರಾಜಸ್ಥಾನ ಪರ ತಮ್ಮ 142ನೇ ಇನಿಂಗ್ಸ್‌ನಲ್ಲಿ 4000 ರನ್‌ಗಳನ್ನು ಪೂರ್ಣಗೊಳಿಸಿದರು. ಈ ದಾಖಲೆ ಮಾಡುವ ಮುನ್ನ ಸಂಜುಗೆ 64 ರನ್‌ಗಳ ಅಗತ್ಯವಿತ್ತು. ಸ್ಯಾಮ್ಸನ್ ಐಪಿಎಲ್‌ನಲ್ಲಿ 141 ಪಂದ್ಯಗಳಿಂದ 31.72 ಮತ್ತು 140.55 ಸರಾಸರಿಯಲ್ಲಿ 3934 ರನ್ ಗಳಿಸಿದ್ದರು.
ಹೈದರಾಬಾದ್ ವಿರುದ್ಧ ಅವರು 37 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ 66 ರನ್‌ಗಳಿಸಿ ದಾಖಲೆ ಮಾಡಿದರು. ಇದು ಅವರ 30ನೇ ಐಪಿಎಲ್ ಅರ್ಧಶತಕವಾಗಿತ್ತು. ಐಪಿಎಲ್ ಇತಿಹಾಸದಲ್ಲಿ 4500 ರನ್‌ಗಳ ಮೈಲಿಗಲ್ಲು ತಲುಪಲು ಅವರು ವಿಫಲರಾದರೂ, 4000 ರನ್ ಗಳಿಸಿದ ಮೂರನೇ ರಾಜಸ್ಥಾನ ರಾಯಲ್ಸ್ ಆಟಗಾರ ಎನಿಸಿಕೊಂಡರು. ಹೈದರಾಬಾದ್ ವಿರುದ್ಧ ಸ್ಯಾಮ್ಸನ್ ಆಡಿರುವ 24 ಪಂದ್ಯಗಳಿಂದ 45.63 ಸರಾಸರಿಯಲ್ಲಿ 867 ರನ್‌ಗಳನ್ನು ಗಳಿಸಿದ್ದಾರೆ.
ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡದ ಮೊದಲ ಮೂರು ಪಂದ್ಯಗಳಿಗೆ ಇಂಪ್ಯಾಕ್ಟ್ ಆಟಗಾರನಾಗಿ ಮಾತ್ರ ಆಡುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ, ರಿಯಾನ್ ಪರಾಗ್ ತಂಡವನ್ನು ಮುನ್ನಡೆಸಲಿದ್ದಾರೆ. ಬೆರಳಿನ ಗಾಯದಿಂದಾಗಿ ಸ್ಯಾಮ್ಸನ್ ವಿಕೆಟ್ ಕೀಪಿಂಗ್ ಕರ್ತವ್ಯಗಳನ್ನು ನಿರ್ವಹಿಸಲು ಸಂಪೂರ್ಣವಾಗಿ ಸದೃಢವಾಗಿಲ್ಲ.
ಆರ್ಚರ್ ರಾಜಸ್ಥಾನ್ ರಾಯಲ್ಸ್‌ನ ದುಬಾರಿ ಬೌಲರ್
ಜೋಫ್ರಾ ಆರ್ಚರ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡರು. ಆರ್ಚರ್ ತಮ್ಮ ನಾಲ್ಕು ಓವರ್‌ಗಳಲ್ಲಿ 76 ರನ್‌ಗಳನ್ನು ಬಿಟ್ಟುಕೊಟ್ಟರು. ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಧಿಕ ಸ್ಕೋರ್ ಆಗಿತ್ತು. ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೋಹಿತ್ ಶರ್ಮಾ 73 ರನ್‌ಗಳನ್ನು ನೀಡಿದ್ದರು.
ಈಗ ಮೋಹಿತ್ ಶರ್ಮಾ ಅವರನ್ನು ಆರ್ಚರ್ ಹಿಂದಿಕ್ಕಿ ತಮ್ಮ ಹೆಸರಿಗೆ ಬೇಡದ ದಾಖಲೆಯನ್ನು ಸೇರಿಸಿಕೊಂಡಿದ್ದಾರೆ. 2023ರಲ್ಲಿ ಕೊನೆಯ ಬಾರಿಗೆ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಆರ್ಚರ್, ಒಂದು ವರ್ಷದ ನಂತರ ಐಪಿಎಲ್‌ಗೆ ಮರಳಿದ್ದರು. ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಅವರನ್ನು 12.50 ಕೋಟಿ ರೂ.ಗೆ ಖರೀದಿಸಿತ್ತು.