ಅಮೇರಿಕಾದ ಲಾಸ್ ಏಂಜಲೀಸ್ನಲ್ಲಿರುವ ಎತ್ತರ ಬೆಟ್ಟದ ಮೇಲೆ ಸ್ಥಾಪಿಸಲಾಗಿರುವ ಹಾಲಿವುಡ್ ಲ್ಯಾಂಡ್ ಮಾರ್ಕ್ ಮಾದರಿಯಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದಲ್ಲಿರುವ ತುಂಬೆ ಪ್ರದೇಶದಲ್ಲಿ THUMBAY ಲ್ಯಾಂಡ್ ಮಾರ್ಕ್ ನಿರ್ಮಿಸಲಾಗಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ಇರುವ ತುಂಬೆ ಪ್ರದೇಶದಲ್ಲಿರುವ ಎತ್ತರದ ಬೆಟ್ಟದಲ್ಲಿಉದ್ಯಮ ಸಂಸ್ಥೆಯಾದ ತುಂಬೆ ಗ್ರೂಪ್ ಉದ್ಯಮದಿಂದ ಇದನ್ನು ಸ್ಥಾಪಿಸಲಾಗಿದೆ.
ಸ್ಥಳೀಯರು ಸೇರಿದಂತೆ ಸಾರ್ವಜನಿಕರ ಗಮನ ಸೆಳೆಯುತ್ತಿರುವ ಈ ಬೋರ್ಡ್ ಅನ್ನು ಗಮನಿಸಿ, ಈ ಮಾರ್ಗವಾಗಿ ಸಾಗುವ ಪ್ರಯಾಣಿಕರು ಫೋಟೋ ಕ್ಲಿಕ್ಕಿಸಿಕೊಂಡು ಮುಂದೆ ಸಾಗುತ್ತಿದ್ದಾರೆ.

‘ಒಂದು ತಿಂಗಳ ಶ್ರಮವಹಿಸಿ ಈ ಲ್ಯಾಂಡ್ ಮಾರ್ಕ್ ಬೋರ್ಡ್ ಅನ್ನು ನಿರ್ಮಿಸಲಾಗಿದೆ. ಸುಮಾರು 10ರಿಂದ 15 ಕಾರ್ಮಿಕರು, ತಂತ್ರಜ್ಞರ ನೆರವಿನಿಂದ ಇದನ್ನು ಹಾಕಲಾಗಿದ್ದು, ಪ್ರತಿಯೊಂದು ಇಂಗ್ಲಿಷ್ ಅಕ್ಷರವು 30 ಅಡಿ ಎತ್ತರದಲ್ಲಿದ್ದು, 150 ಅಡಿ ಅಗಲ ಹೊಂದಿದೆ. ಅಡಿಭಾಗ ಗಟ್ಟಿಯಾಗಿ ನಿಲ್ಲಲು ಗುಂಡಿ ತೋಡಿ ಕಾಂಕ್ರಿಟ್ ಬಳಸಲಾಗಿದೆ’ ಎಂದು ಇದರ ಗುತ್ತಿಗೆ ವಹಿಸಿಕೊಂಡಿದ್ದ ಮಂಗಳೂರಿನ ಹೈಟೆಕ್ ಪ್ರಿಂಟ್ & ಸೈನ್ನ ಮಾಲೀಕರಾದ ಇರ್ಷಾದ್ ರಾಮಲ್ಕಟ್ಟೆ ತಿಳಿಸಿದ್ದಾರೆ.

