ತಹಶೀಲ್ದಾರ್ ಕಚೇರಿಯ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯ ಮಾಡಲು ಕೆಲವು ಅಧಿಕಾರಿಗಳು ಲಂಚಪಡೆಯುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಆದರ್ಶ ಗ್ರಾಮ ಸಮಿತಿ(ಯಾಳವಾರ) ಕಾರ್ಯಕರ್ತರು ಕಲಬುರಗಿ ಜಿಲ್ಲೆಯ ಜೇವರ್ಗಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
“ಜೇವರ್ಗಿ ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಭಷ್ಟಾಚಾರವನ್ನು ತಡೆಯಬೇಕು. ಅಲ್ಲಿನ ಅಧಿಕಾರಿಗಳು ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಮನಬಂದಂತೆ ಲಂಚ ಪಡೆಯುತ್ತಿದ್ದು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ವಿಧವಾ ವೇತನ, ಸಂಧ್ಯಾ ಸುರಕ್ಷಾ, ಜಾತಿ ಮತ್ತು ಆದಾಯ, ರಿಜಿಸ್ಟರ್, ಇಸಿ, ಸರ್ವೇ ಕಾರ್ಯ ಸೇರಿದಂತೆ ಹಲವಾರು ಕಚೇರಿ ಕೆಲಸಗಳನ್ನು ಮಾಡಿಕೊಡಲು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರಿಂದ ಲಂಚ ಪಡೆಯುತ್ತಿದ್ದು, ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಭ್ರಷ್ಟಾಚಾರ ಕುರಿತು ಪ್ರಶ್ನಿಸಿದರೆ ಅಂತಹವರ ಕೆಲಸಗಳನ್ನು ಮಾಡದೆ, ನಾಳೆ ಬಾ, ನಾಡಿದ್ದು ಬಾ ಎಂದು ಕಾಲಹರಣ ಮಾಡುತ್ತಿದ್ದು, ರೈತರಿಗೆ ವಂಚನೆ ಮಾಡುತ್ತಿರುವುದು ನಮ್ಮ ಸಮಿತಿಯ ಗಮನಕ್ಕೆ ತಿಳಿದುಬಂದಿದೆ. ಹಾಗಾಗಿ ನಿಮಗೆ ಮನವಿ ಮಾಡುತ್ತಿದ್ದೇವೆ. ತಾವು ಮಧ್ಯ ಪ್ರವೇಶಿಸಬೇಕು” ಎಂದು ತಹಶೀಲ್ದಾರರಲ್ಲಿ ವಿನಂತಿಸಿದ್ದಾರೆ.
“ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಎಲ್ಲ ಅವ್ಯವಹಾರ, ಭ್ರಷ್ಟಾಚಾರ, ಲಂಚಾವತಾರವನ್ನು ತಡೆಹಿಡಿದು ಸಾರ್ವಜನಿಕರಿಗೆ ಕಾನೂನು ರೀತಿಯಲ್ಲಿ ಕಾಲ ಮಿತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಲು ಅಧಿಕಾರಿಗಳಿಗೆ ತಿಳಿಹೇಳುವುದರ ಮುಖಾಂತರ ತಾಲೂಕಿನ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಈ ಮೂಲಕ ಸಾರ್ವಜನಿಕರಿಗೆ ನ್ಯಾಯ ಕೊಡಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ನರಸಾಪುರ ಕೆರೆ ಒತ್ತುವರಿ ತೆರವುಗೊಳಿಸಿ : ಸಚಿವ ಬೋಸರಾಜು ಸೂಚನೆ
“ಒಂದುವೇಳೆ ಭ್ರಷ್ಟಾಚಾರ, ಲಂಚಾವತಾರ ಮತ್ತೆ ಮುಂದುವರೆದಿದ್ದೇ ಆದಲ್ಲಿ ನಾವು ಇದನ್ನು ಸರ್ಕಾರ ಮತ್ತು ಲೋಕಾಯುಕ್ತ ಇಲಾಖೆಯ ಗಮನಕ್ಕೆ ತಂದು ದೂರು ನೀಡುವುದು ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಆದರ್ಶ ಗ್ರಾಮ ಸಮಿತಿಯ ಅಧ್ಯಕ್ಷ ಇಬ್ರಾಹಿಂಪಟೇಲ ಸೇರಿದಂತೆ ಕಾರ್ಯಕರ್ತರು ಇದ್ದರು.