ಕೇತಗಾನಹಳ್ಳಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವು ಸಂಬಂಧ ತಹಶೀಲ್ದಾರ್ ನೀಡಿದ ನೋಟಿಸ್ ವಿರುದ್ಧ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
6 ಎಕರೆ ಒತ್ತುವರಿ ಸಂಬಂಧ ನೋಟಿಸ್ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್.ಎಸ್.ಸಂಜಯಗೌಡ ಅವರಿದ್ದ ಹೈಕೋರ್ಟ್ ಪೀಠ ವಿಚಾರಣೆ ನಡೆಸಿತು.
ಈ ಬಗ್ಗೆ ದಾಖಲೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಎಎಜಿ ಕಿರಣ್ ರೋಣ್ ಮನವಿ ಮಾಡಿದರು. ಬಳಿಕ ಕೋರ್ಟ್, ಮಾರ್ಚ್ 27ರವರೆಗೂ ಬಲವಂತದ ಕ್ರಮ ಕೈಗೊಳ್ಳುವುದಿಲ್ಲವೆಂದು ಹೇಳಿಕೆ ದಾಖಲಿಸಿಕೊಂಡು ವಿಚಾರಣೆಯನ್ನು ಮಾರ್ಚ್ 27ಕ್ಕೆ ನಿಗದಿಪಡಿಸಿದೆ. ಇದರಿಂದ ಕುಮಾರಸ್ವಾಮಿ ಅವರಿಗೆ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ.
ಕುಮಾರಸ್ವಾಮಿ ಪರ ಹಿರಿಯ ವಕೀಲ ಉದಯ್ ಹೊಳ್ಳ ಹಾಗೂ ಎ.ವಿ.ನಿಶಾಂತ್ ವಾದ ಮಂಡಿಸಿದ್ದು, ಅಧಿಕಾರ ವ್ಯಾಪ್ತಿ ಇಲ್ಲದಿದ್ದರೂ ತಹಶೀಲ್ದಾರ್ ನೋಟಿಸ್ ನೀಡಿದ್ದಾರೆ. 1985ರಲ್ಲಿ ಕ್ರಯಪತ್ರವಾಗಿರುವ ಜಮೀನಿಗೆ ಈಗ ನೋಟಿಸ್ ನೀಡಲಾಗಿದೆ. ಹಾಗೇ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ ಎಂದು ವಾದ ಮಂಡಿಸಿದರು.
ಕುಮಾರಸ್ವಾಮಿ ಪರ ವಕೀಲರ ವಾದಕ್ಕೆ ಎಎಜಿ ಕಿರಣ್ ರೋಣ್ ಆಕ್ಷೇಪ ವ್ಯಕ್ತಪಡಿಸಿದ್ದು, 2025ರ ತಿದ್ದುಪಡಿಯನ್ವಯ ತಹಶೀಲ್ದಾರ್‌ಗೆ ಅಧಿಕಾರವಿದೆ. ಈ ಬಗ್ಗೆ ದಾಖಲೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಮನವಿ ಕೋರ್ಟ್ಗೆ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ಕೋರ್ಟ್, ಮಾರ್ಚ್ 27ರವರೆಗೂ ಬಲವಂತದ ಕ್ರಮ ಕೈಗೊಳ್ಳುವುದಿಲ್ಲವೆಂದು ಹೇಳಿಕೆ ದಾಖಲಿಸಿ ಮಾರ್ಚ್ 27ಕ್ಕೆ ವಿಚಾರಣೆ ಮುಂದೂಡಿದೆ.