- ಅಕ್ಕಿ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಅಸಹಕಾರ
- ಅಕ್ಕಿ ಹೊಂದಿಸಲು ಮತ್ತೆ ಕಸರತ್ತು ಆರಂಭಿಸಿದ ರಾಜ್ಯ ಸರ್ಕಾರ
ಅನ್ನಭಾಗ್ಯ ಯೋಜನೆ ಜಾರಿಗೆ ಅಗತ್ಯವಾಗಿರುವ ಅಕ್ಕಿ ನೀಡುವ ವಿಚಾರದಲ್ಲಿ ಮತ್ತೆ ಕೇಂದ್ರ ಸರ್ಕಾರ ತನ್ನ ಮೊಂಡುತನ ಮುಂದುವರೆಸಿ ಅಸಹಕಾರ ತೋರಿದೆ. ಪರಿಣಾಮ ರಾಜ್ಯ ಸರ್ಕಾರ ಯೋಜನೆ ಜಾರಿಗೆ ಅಗತ್ಯ ಅಕ್ಕಿ ಹೊಂದಾಣಿಕೆಗೆ ಪರ್ಯಾಯ ಮಾರ್ಗ ಕಂಡಕೊಳ್ಳಬೇಕಿದೆ.
ಅಕ್ಕಿ ವಿತರಣೆಗೆ ಅಸಹಕಾರ ತೋರುತ್ತಿದ್ದ ಕೇಂದ್ರ ಸರ್ಕಾರದ ಜೊತೆ ಮತ್ತೊಂದು ಸುತ್ತಿನ ಮಾತುಕತೆ ಸಲುವಾಗಿ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಎಚ್ ಮುನಿಯಪ್ಪ, ಇಂದು ಕೇಂದ್ರ ಮಂತ್ರಿ ಪಿಯೂಷ್ ಗೋಯಲ್ ಭೇಟಿಯಾಗಿ ಮಾತುಕತೆ ನಡೆಸಿದರು.
ನವದೆಹಲಿಯಲ್ಲಿಂದು ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಭೇಟಿಯಾಗಿ ರಾಜ್ಯಕ್ಕೆ ನೀಡಲಾಗುತ್ತಿರುವ ಅಕ್ಕಿಯನ್ನು ಶೀಘ್ರವೇ ಒದಗಿಸುವಂತೆ ಮನವಿ ಸಲ್ಲಿಸಿದರು. ಆದರೆ ರಾಜ್ಯದ ಮನವಿಗೆ ಕೇಂದ್ರ ಸರ್ಕಾರದ ಸ್ಪಂದನೆ ಸಕಾರಾತ್ಮಕವಾಗಿರಲಿಲ್ಲ ಎಂದು ಸಚಿವ ಮುನಿಯಪ್ಪ ತಿಳಿಸಿದರು.
ಗೋಯಲ್ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಆಹಾರ ಸಚಿವರು ನಮ್ಮ ಬೇಡಿಕೆಗೆ ಹಾರಿಕೆ ಉತ್ತರ ನೀಡಿದ್ದಾರೆ ಎಂದು ಹೇಳಿದರು. ಕೇಂದ್ರ ಕೊಟ್ಟರೂ ಕೊಡದಿದ್ದರೂ ನಾವು ಯೋಜನೆ ಜಾರಿ ಮಾಡುವುದು ಖಚಿತ ಎಂದು ಮುನಿಯಪ್ಪ ಸ್ಪಷ್ಟಪಡಿಸಿದರು.
ಕೇಂದ್ರ-ರಾಜ್ಯದ ನಡುವೆ ಜಟಾಪಟಿ
ಅನ್ನ ಭಾಗ್ಯಕ್ಕಾಗಿನ ಅಕ್ಕಿ ವಿತರಣೆಯಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಸಚಿವ ಮುನಿಯಪ್ಪ ಆರೋಪಿಸಿದ್ದರು. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಭಾರತೀಯ ಆಹಾರ ನಿಗಮ (ಎಫ್ಸಿಐ) ರಾಜ್ಯಕ್ಕೆ ಅಗತ್ಯವಿರುವ ಅಕ್ಕಿ ಪೂರೈಕೆ ಮಾಡುತ್ತಿಲ್ಲ. ಹೀಗಾಗಿ ಅಕ್ಕಿಗಾಗಿ ಬೇರೆ ರಾಜ್ಯಗಳಿಗೆ ಮನವಿ ಮಾಡುವಂತಾಗಿದೆ.
ಈಗಾಗಲೇ ಛತ್ತೀಸ್‌ಘಢ ಮತ್ತು ಪಂಜಾಬ್ ಸರ್ಕಾರಗಳು ಅಕ್ಕಿ ಕೊಡಲು ಮುಂದೆ ಬಂದಿವೆ. ಆದರೆ ಛತ್ತೀಸ್‌ಘಢ ಸರ್ಕಾರ ಕೇವಲ ಒಂದು ತಿಂಗಳಿಗೆ ಆಗುವಷ್ಟು(1.5 ಮೆಟ್ರಿಕ್ ಟನ್) ಅಕ್ಕಿ ಕೊಡುವುದಾಗಿ ಹೇಳಿದೆ. ಈ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳ ಆಹಾರ ಸಚಿವರ ಜೊತೆಗೆ ಈ ಕುರಿತು ಸಭೆ ನಡೆಸಲಾಗುತ್ತಿದೆ ಎಂದರು.
ಅಕ್ಕಿಯನ್ನು ಕೇಂದ್ರದಿಂದ ಪುಕ್ಕಟೆ ಕೇಳುತ್ತಿಲ್ಲ. ಅದಕ್ಕೆ ಹಣವನ್ನು ಕೊಡುತ್ತೇವೆ ಎಂದು ಹೇಳಿದ್ದೇವೆ. ಆದರೆ, ಕೇಂದ್ರದಿಂದ ಸಹಕಾರ ಸಿಗುತ್ತಿಲ್ಲ. ಹೀಗಾಗಿ ನಮ್ಮದೇ ಆದಂತ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದ್ದೇವೆ. ಎನ್ಸಿಸಿಎಫ್, ನಾಫೆಡ್, ಕೇಂದ್ರೀಯ ಭಂಡಾರ ಮುಖಾಂತರ ಅಕ್ಕಿ ಖರೀದಿ ಮಾಡುತ್ತೇವೆ.
ಈ ಸುದ್ದಿ ಓದಿದ್ದೀರಾ?:ಅಕ್ಕಿ ಕೊಡದಿರುವ ನೀಚ ಬುದ್ಧಿ ನಮಗಿಲ್ಲ: ಡಿ ವಿ ಸದಾಂದಗೌಡ ತಿರುಗೇಟು
ಹೊರ ರಾಜ್ಯದಿಂದ ಪಡಿತರಕ್ಕೆ ಅಗತ್ಯ ಧಾನ್ಯಗಳ ಖರೀದಿ ಮಾಡಿದರೆ ಸಾರಿಗೆ ವೆಚ್ಚ ಹೆಚ್ಚುವರಿಯಾಗುತ್ತದೆ. ಇದಕ್ಕಾಗಿ ಕೇಂದ್ರ ಸಂಸ್ಥೆಗಳಿಂದ ಖರೀದಿ ಮಾಡಲು ಮುಂದಾಗಿದ್ದೇವೆ. ಕೇಂದ್ರದ ಸಂಸ್ಥೆಗಳಾದರೆ ಅವರೇ ತರಿಸಿಕೊಂಡು ನಮಗೆ ಕೊಡುತ್ತಾರೆ. ಹೀಗಾಗಿ ಇಲ್ಲಿಂದಲೇ ದಾನ್ಯಗಳ ಖರೀಗೆ ಮಾತುಕತೆ ನಡೆಸುತ್ತಿದ್ದೇವೆ ಎಂದವರು ಹೇಳಿದರು.