ಶಕ್ತಿ ಯೋಜನೆ | ಹೆಣ್ಣುಮಕ್ಕಳ ಪರ್ಸಿನಲ್ಲಿ ಚಿಕ್ಕಾಸು ಉಳಿದಿದೆ; ಬಿಟ್ಟಿ ಸಲಹೆಗಳು ಹೊಟ್ಟೆ ಕಿಚ್ಚಿನ ಹಳಹಳಿಕೆಗಳಷ್ಟೇ…

Date:

Advertisements
ಶಕ್ತಿ ಯೋಜನೆ ಜಾರಿಯ ಮೊದಲ ದಿನವೇ ಉತ್ತರ ಕರ್ನಾಟಕದ ಅಜ್ಜಿಯೊಬ್ಬರು ಬಸ್‌ನ ಮೆಟ್ಟಿಲಿಗೆ ತಲೆಯಿಟ್ಟು ಒಳಬಂದಿರುವುದು, ಧರ್ಮಸ್ಥಳಕ್ಕೆ ಪ್ರವಾಸ ಹೊರಟ ಮಹಿಳೆಯರು ಸಿದ್ದರಾಮಯ್ಯ ಅವರಿಗೆ, ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಬೇಡಿಕೊಂಡು ಬರುತ್ತೇವೆ ಎಂದಿರುವುದು ಜನಪರ ಯೋಜನೆಯನ್ನು ಗೇಲಿ ಮಾಡುತ್ತಿರುವ ಬಿಜೆಪಿ ನಾಯಕರ ಕಪಾಳಕ್ಕೆ ಬಾರಿಸಿದಂತಿದೆ

“ಈ ಸರ್ಕಾರ ಆರು ತಿಂಗಳೂ ಇರಲ್ಲ. ಈ ಕಡೆಯಿಂದ ಕೊಟ್ಟು ಆ ಕಡೆಯಿಂದ ಕಿತ್ತುಕೊಳ್ತಾರೆ. ಎಲ್ಲಾ ಬೆಲೆ ಏರಿಸಿದ್ದಾರೆ. ಕರೆಂಟ್‌ ಬಿಲ್‌ ಎರಡು ಪಟ್ಟು ಏರಿಸಿದ್ದಾರೆ. ಇದೆಲ್ಲ ನಾಟಕ ಬೇಕಾ? ಸಿದ್ದರಾಮಯ್ಯ ಅವನಪ್ಪನ ಮನೆಯಿಂದ ತಂದು ಕೊಡ್ತಾನಾ? ವೋಟು ಹಾಕಿದವರಿಗೆ ಬುದ್ಧಿ ಇಲ್ಲ. ಬಿಟ್ಟಿ ಅಂತ ನಾಟ್ಕ ಮಾಡಿ ಬೆಲೆ- ದರ ಏರಿಸಿದ್ದಾರೆ. ಹೀಗಾದರೆ ರಾಜ್ಯ ಪಾಕಿಸ್ತಾನ, ಶ್ರೀಲಂಕಾದ ತರ ದಿವಾಳಿ ಆಗ್ತದೆ. ಇವರು ಖಂಡಿತಾ ದೇಶ ಮಾರ್ತಾರೆ. ಇದೆಲ್ಲ ವೇಸ್ಟು… ಇದರ ಬದಲು ಕಾಲೇಜು, ಆಸ್ಪತ್ರೆಯೆಲ್ಲ ಎಲ್ಲ ಫ್ರೀ ಮಾಡ್ಬೇಕಿತ್ತು. ಜನ ಏನ್‌ ಫ್ರೀ ಕೊಡಿ ಅಂತ ಕೇಳಿದ್ರಾ? ವೋಟ್‌ ಗಾಗಿ ಜನರನ್ನು ಯಾಮಾರಿಸಿದ್ರು …..”

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ, ಶಕ್ತಿ ಯೋಜನೆ ಜಾರಿಯ ಮುನ್ನ ಮತ್ತು ನಂತರ ಸರ್ಕಾರಿ ಬಸ್‌ ಪ್ರಯಾಣದಲ್ಲಿ ಕೇಳಿಬರುತ್ತಿರುವ ದೇಶಾವರಿ ಮಾತುಗಳಿವು. ಶಕ್ತಿ ಯೋಜನೆ ಜಾರಿಯಾಗುತ್ತಿದ್ದಂತೆ ಬಸ್‌ಗಳಲ್ಲಿ ಪಯಣಿಸುವ ಒಂದು ದೊಡ್ಡ ವರ್ಗದ ಜನ ಅರ್ಥಶಾಸ್ತ್ರಜ್ಞರೇ ಆಗಿ ಹೋಗಿಬಿಟ್ಟಿದ್ದಾರೆ. ಈ ಪೈಕಿ ಹೆಚ್ಚಿನವರು ಬಿಜೆಪಿಯ ಸಾಂಪ್ರದಾಯಿಕ ಮತದಾರರು, ಮೋದಿಭಕ್ತರು ಎಂದು ಪ್ರತ್ಯೇಕ ಹೇಳಬೇಕಿಲ್ಲ. ಆರಂಭದಲ್ಲಿ ಕೆಲವು ಕಂಡಕ್ಟರ್ ಗಳು ಜನರನ್ನು ಪ್ರಚೋದಿಸಿ ಚರ್ಚೆ ಆರಂಭಿಸಿ ತಾವೂ ಸೇರಿಕೊಳ್ಳೋರು. ಈಗ ಕಂಡಕ್ಟರ್‌ಗಳು ಮಾತಾಡುತ್ತಿಲ್ಲ. ಸಾರಿಗೆ ನಿಗಮಗಳಿಂದ ನಿರ್ದೇಶನ ಬಂದಿರಬೇಕು. ನಷ್ಟದಲ್ಲಿದ್ದ ಸಾರ್ವಜನಿಕ ಸಾರಿಗೆ ನಿಗಮಗಳು ಈಗ ಪ್ರಯಾಣಿಕರಿಂದ ತುಂಬಿ ತುಳುಕಿವೆ. ಸರ್ಕಾರದ ಬೊಕ್ಕಸದಿಂದಲೇ ಕೋಟ್ಯಂತರ ಹಣ ಪಾವತಿ ಮಾಡೋದ್ರಿಂದ ಸಿಬ್ಬಂದಿಯ ಬೊಗಳೆ ಬಂದ್ ಆಗಿದೆ. ಆದರೆ, ಧ್ವನಿ ಏರಿಸಿ ಮಾತನಾಡೋದು, ಅನಗತ್ಯವಾಗಿ ರೇಗುವುದು ಅತಿಯಾಗಿದೆ.

ಒಂದೆಡೆ ಅಸೂಯೆಯಿಂದ ಕುದಿಯುತ್ತಿರುವ ಬಿಜೆಪಿ ನಾಯಕರ ಅಪಪ್ರಚಾರ, ಅದಕ್ಕೆ ಪೂರಕ ಚಿತ್ರನಾಟಕ ಬರೆದು ತಯಾರಿಸಿದ ಭಜನಾಮಂಡಳಿ ಮೀಡಿಯಾದ ವಿಡಿಯೋಗಳ ಹಿಮ್ಮೇಳ. “ನನ್ನ ಹೆಂಡತಿ ಧರ್ಮಸ್ಥಳಕ್ಕೆ ಹೋದೋಳು ಇನ್ನೂ ಬಂದಿಲ್ಲ, ಮನೆಯಲ್ಲಿ ಅಡುಗೆ ಮಾಡೋರು ಯಾರು? ಹೆಣ್ಣುಮಕ್ಕಳು ಮನೆಬಿಟ್ಟು ಬೀದಿ ಸುತ್ತೋಕೆ ಶುರು ಮಾಡಿದ್ದಾರೆ. ತೀರ್ಥಕ್ಷೇತ್ರಗಳಿರುವ ಪ್ರದೇಶಗಳಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಕಿರಿಕಿರಿಯೆನಿಸಿದೆ. ಪ್ರವಾಸಿಗರಿಂದ ತುಂಬಿರುವ ಬಸ್‌ಗಳಿಂದಾಗಿ ಅವರ ನೆಮ್ಮದಿಯ ಪ್ರಯಾಣಕ್ಕೆ ಕುತ್ತು ಬಂದಿದೆ” ಎಂದು ಬಣ್ಣನೆಯ ನೆಗೆಟಿವ್‌ ವಿಡಿಯೊಗಳು. ಈ ನಡುವೆ ಬೊಮ್ಮಾಯಿ ಸರ್ಕಾರ ಮಾಡಿ ಹೋದ ವಿದ್ಯುತ್‌ ದರ ಹೆಚ್ಚಳದ ಅವಾಂತರ. ಒಟ್ಟಿನಲ್ಲಿ ಉಚಿತ ಸಿಕ್ಕರೂ ಕಾಂಗ್ರೆಸ್‌ ಸರ್ಕಾರವನ್ನು ಗುಮಾನಿ ಹುಟ್ಟಿಸುವ ವಾತಾವರಣವನ್ನುನಿರ್ಮಿಸಲಾಗುತ್ತಿದೆ. ಏಪ್ರಿಲ್‌ನಿಂದ ಪೂರ್ವಾನ್ವಯ ಆಗುವಂತೆ ಮೇ ತಿಂಗಳ ಬಿಲ್‌ನಲ್ಲಿ ಬಾಕಿ ಮೊತ್ತವನ್ನು ಸೇರಿಸಿದ ಪರಿಣಾಮ ಬಿಲ್‌ ಮೊತ್ತ ಹೆಚ್ಚಾಗಿದೆ. ಪರಿಣಾಮವಾಗಿ ಜನ ಆಕ್ರೋಶಗೊಂಡಿದ್ದಾರೆ. ಇಲ್ಲಿ ಕೊಟ್ಟು, ಅಲ್ಲಿ ಕಸಿಯುತ್ತಿದ್ದಾರೆ ಎಂದು ಜನರು ಆಡಿಕೊಳ್ಳುವ ಬೆಂಕಿಗೆ ಗಾಳಿ ಹಾಕಲಾಗುತ್ತಿದೆ. ಅಧಿಕಾರ ಕಳೆದುಕೊಂಡು ಕಂಗಾಲಾಗಿರುವ ಬಿಜೆಪಿಯವರಿಗೆ ಮೃಷ್ಟಾನ್ನ ಸಿಕ್ಕಂತಾಗಿದೆ. ಬಿಜೆಪಿ ನಾಯಕರು ನೀವು ಬಿಲ್‌ ಕಟ್ಟಬೇಡಿ ಅಂತ ಜನರನ್ನು ಎತ್ತಿಕಟ್ಟುತ್ತಿದ್ದಾರೆ. ಸೋತು ಕೂತಿರುವ ಬಿಜೆಪಿ ನಾಯಕ ರೇಣುಕಾಚಾರ್ಯ ತಮ್ಮದ ಕ್ಷೇತ್ರ ಮನೆಮನೆಗೆ ತೆರಳಿ ವಿದ್ಯುತ್‌ ಬಿಲ್‌ ಕಟ್ಟಬೇಡಿ, ಸರ್ಕಾರ ಮೋಸ ಮಾಡ್ತಿದೆ, ಪ್ರತಿಭಟನೆ ಮಾಡಿ ಎಂದು ಗಲಭೆಗೆ ಪ್ರಚೋದನೆ ಕೊಡುವ ಕೀಳು ಮಟ್ಟಕ್ಕೆ ಇಳಿದಿದ್ದಾರೆ.

Advertisements

“ಇದೆಲ್ಲ ಯಾಕೆ ಬೇಕು, ಈ ಬಿಟ್ಟಿಯಿಂದಾಗಿ ಬಸ್ಸುಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಸಂಜೆ ಐದು ಗಂಟೆಗೆ ಬರುತ್ತಿದ್ದ ಮಗಳು ಈಗ ಏಳು ಗಂಟೆಗೆ ತಲುಪುತ್ತಿದ್ದಾಳೆ. ಆ ಸಿದ್ರಾಮಯ್ಯನಿಗೇನು ಗೊತ್ತು? ಇನ್ನು ಐದು ವರ್ಷ ಇನ್ನೂ ಏನೆಲ್ಲ ಹಾಳು ಮಾಡಿ ಬಿಡ್ತಾರೋʼ ಎಂಬುದು ಮಹಿಳೆಯೊಬ್ಬರ ಬಡಬಡಿಕೆ. “ನೀವು ಹಣ ಕೊಟ್ಟು ಟಿಕೆಟ್‌ ತೊಗೊಳ್ಳಿ, ಯೋಜನೆಯನ್ನು ಟೀಕಿಸಬೇಡಿ. ತಿಂಗಳಿಡೀ ದುಡಿದು ಹತ್ತು ಸಾವಿರ ಸಂಬಳ ಪಡೆಯುವ ಬಡ ಮಹಿಳೆಗೆ ತಿಂಗಳಿಗೆ ಒಂದು ಸಾವಿರ ಉಳಿತಾಯವೂ ದೊಡ್ಡ ವಿಚಾರವೇ. ಬಡವರಿಗೆ ಕೊಟ್ಟಾಗ ಯಾಕಿಷ್ಟು ಅಸಹನೆ? ಬಡವರಿಗೆ ಏನೂ ಕೊಡದೇ 400 ರೂಪಾಯಿ ಇದ್ದ ಅಡುಗೆ ಅನಿಲದ ಸಿಲಿಂಡರ್‌ ದರವನ್ನು ರೂ.1,200 ಕ್ಕೆ ಏರಿಸಿದಾಗ, 70 ರೂಪಾಯಿ ಇದ್ದ ಪೆಟ್ರೋಲ್‌ ಬೆಲೆಯನ್ನು120 ರೂಪಾಯಿಗೆ ಏರಿಸಿದಾಗ ಸಿಟ್ಟು ಬರಲಿಲ್ವಾ?” ಎಂದು ಹೇಳಿ ಬಾಯಿ ಮುಚ್ಚಿಸಲಾಗಿದೆ.

ಶಕ್ತಿ ಯೋಜನೆ ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್

ಬಡ ಅಮ್ಮಂದಿರ ಸಂಕಟ ಗೊತ್ತಿಲ್ಲದವರು: ಕಾಲೇಜಿನಿಂದ ಮಗಳು ಮನೆಗೆ ಬರುವುದು ತಡವಾಗುತ್ತಿದೆ ಎಂಬ ಅಮ್ಮನ ಆತಂಕ ನಿಜವೋ ಸುಳ್ಳೋ ಗೊತ್ತಿಲ್ಲ. ಒಂದು ವೇಳೆ ನಿಜವಿದ್ದರೂ, ಬಸ್ಸುಗಳನ್ನು ಹೆಚ್ಚಿಸುವ ಪರಿಹಾರ ಇದೆ. ಅದಕ್ಕಾಗಿ ಒತ್ತಾಯಿಸಬೇಕೇ ವಿನಾ ಬಡವರಿಗೆ ನೀಡಿದ್ದನ್ನು ಕಂಡು ಕರುಬುವುದು ಅಪ್ಪಟ ಅಮಾನವೀಯತೆ. ಬಡವರ ವಿರೋಧದ ಮತ್ತು ಕಾಂಗ್ರೆಸ್‌ ವಿರೋಧದ ಇಂತಹ ಬಿಜೆಪಿ ಮನಸ್ಥಿತಿಯಿದು. ಬಡವರ ಪರ ಯೋಜನೆಯನ್ನು, ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೈದು ತೀರಿಸಿಕೊಂಡ ಆ ಮಹಿಳೆಗೆ, ಹತ್ತಾರು ಮೈಲಿ ಬಸ್‌ ಪ್ರಯಾಣ ಮಾಡಿ ಮೂರ್ನಾಲ್ಕು ಮನೆಗಳ ಕಸಮುಸುರೆ ಸ್ವಚ್ಛಮಾಡಿ ತಿಂಗಳಿಗೆ ಹತ್ತು ಸಾವಿರ ದುಡಿಯುವ ಮಹಿಳೆಯ ಸಂಕಷ್ಟದ ಅರಿವು ಇಲ್ಲ. ಕುಡುಕ ಗಂಡ, ಬೇಜವಾಬ್ದಾರಿ ಮಕ್ಕಳ ಜೊತೆ ಏಗುತ್ತ ಕುಟುಂಬ ನಿರ್ವಹಣೆ ಮಾಡುವ ತಾಯಿ, ಏಕಾಂಗಿಯಾಗಿ ಮಕ್ಕಳನ್ನು ಸಾಕುತ್ತ ಕುಟುಂಬ ನಿರ್ವಹಣೆ ಮಾಡುತ್ತಿರುವ ವಿಧವೆ, ಅನಾರೋಗ್ಯಪೀಡಿತ ಪತಿಯ ಆರೈಕೆ, ಮಕ್ಕಳ ಶಿಕ್ಷಣ, ಮನೆ ಬಾಡಿಗೆಯ ಭಾರದಲ್ಲಿ ಹೈರಾಣಾಗಿರುವ ಮನೆಯೊಡತಿಯ ಸಂಕಟ ಗೊತ್ತಿಲ್ಲ. ಗೊತ್ತು ಮಾಡಿಕೊಳ್ಳುವ ಸಂವೇದನೆಯೂ ಇಲ್ಲ.

“ಇದೆಲ್ಲ ವೇಸ್ಟು, ಆಸ್ಪತ್ರೆ ಕಾಲೇಜುಗಳೆಲ್ಲ ಫ್ರೀ ಮಾಡಬೇಕಿತ್ತು. ಇವರ ಈ ಯೋಜನೆಗಳು ಎರಡು ತಿಂಗಳಷ್ಟೇ… ಫ್ರೀ ಕೊಡಲು ಹಣ ಎಲ್ಲಿಂದ ತರ್ತಾರೆ, ನಮ್‌ ಮೇಲೆಯೇ ತೆರಿಗೆ ಹಾಕ್ತಾರೆ” ಅಂತ ಫ್ರೀ ಟಿಕೆಟ್‌ ತೊಗೊಂಡ ಇಬ್ಬರು ಮಾತು ಶುರು ಮಾಡಿದ್ರು. “ಸರ್ಕಾರಿ ಆಸ್ಪತ್ರೆ, ಶಾಲೆ, ಕಾಲೇಜುಗಳೆಲ್ಲೆಲ್ಲ ಉಚಿತ ವ್ಯವಸ್ಥೆ ಇದೆ. ನೀವು ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸಿ ಸರ್ಕಾರ ಫೀಸು ಕಟ್ಬೇಕು ಅಂದ್ರೆ ಆಗುತ್ತಾ? ಇದು ದುಡಿಯುವ ಬಡ ಮಹಿಳೆಯರ ಅನುಕೂಲಕ್ಕಾಗಿ ಇರುವ ಯೋಜನೆ, ನೀವು ಹಣ ಕೊಟ್ಟೇ ಪ್ರಯಾಣಿಸಿ” ಎಂದು ಹೇಳಿ ತರಾಟೆಗೆ ತೆಗೆದುಕೊಂಡಾಗ ಬಾಯಿ ಮುಚ್ಚಿದರು.

“ಇದೆಲ್ಲ ಹೆಚ್ಚು ದಿನ ನಡೆಯಲ್ಲ. ಈ ಸರ್ಕಾರಕ್ಕೆ ಬುದ್ದಿ ಇದೆಯಾ? ಗೆಲ್ತೀವಿ ಎಂಬ ನಂಬಿಕೆ ಇರಲಿಲ್ಲ. ಹಾಗಾಗಿ ಸುಳ್ಳು ಭರವಸೆ ಕೊಟ್ಟು ಈಗ ಗೆದ್ದಿದ್ದಾರೆ ಭರವಸೆ ಈಡೇರಿಸಲೇ ಬೇಕು. ಎಲ್ಲಿಂದ ಹಣ ತರ್ತಾರೆ? ರಾಜ್ಯ ಮಾರಿ ಬಿಡ್ತಾರೆ ಅಷ್ಟೇ. ಎಲ್ಲ ಫ್ರೀ ಕೊಟ್ರೆ ಅಭಿವೃದ್ಧಿ ಹೇಗೆ ಮಾಡ್ತಾರೆ? ಎಲ್ಲಾ ಬೆಲೆ ಏರಿಸ್ತಾರೆ ಅಷ್ಟೇ” ಎಂಬುದು ಒಂದಷ್ಟು ನಿವೃತ್ತ ಪುರುಷರ ಹಳಹಳಿಕೆ.

new project ೧
ಧಾರವಾಡದ ಅಜ್ಜಿ ನಿಂಗಮ್ಮ ಶಿಂಗಾಡಿ ಅವರು ಶಕ್ತಿಯೋಜನೆಯನ್ನು ಸ್ವಾಗತಿಸಿದ ಪರಿಯಿದು…

ಸಂವೇದನೆ ಮರೆತ ಲೇಖಕಿಯ ಗೋಳು: ಇವೆಲ್ಲದರ ನಡುವೆ ಮೇಲ್ವರ್ಗದ ಲೇಖಕಿಯೊಬ್ಬರ ಫೇಸ್‌ಬುಕ್‌ ಬರಹ ಬಡವರ ಬಗೆಗೆ ತಿಂದು ತೇಗಿದ ಒಂದು ವರ್ಗದ ಅಸಹನೆಗೆ ಸಾಕ್ಷಿಯಾಗಿತ್ತು. ನಂದಿನಿ ವಿಶ್ವನಾಥ್‌ ಎಂಬ ಸೃಜನಶೀಲ ಲೇಖಕಿ, ಕವಯತ್ರಿ ಬೆಂಗಳೂರಿನ ತಮ್ಮ ಬಸ್‌ ಪ್ರಯಾಣದ ಸಂದರ್ಭದಲ್ಲಿ ಪಕ್ಕದಲ್ಲಿ ಕುಳಿತಿದ್ದ ಬಳ್ಳಾರಿಯ ಬಡ ಮಹಿಳೆಯೊಬ್ಬರ ಕುರಿತು ಬರೆದ ಸಾಲುಗಳು ಪ್ರಜ್ಞಾವಂತ ಜನರಿಂದ ವ್ಯಾಪಕ ಟೀಕೆಗೆ ಒಳಗಾದ ನಂತರ ಪೋಸ್ಟ್‌ ಡಿಲಿಟ್‌ ಮಾಡಿದ್ದರು. “ಕೂತ ಕ್ಷಣದಿಂದ ಪರ ಪರ ಅಂತ ಮೈ ಕರ್ಕೊಳ್ಳೋಕೆ ಶುರುಮಾಡಿದಾಕೆ ಎಲ್ಲಿ ಕೆರ್ಕೊತಿದ್ದೇನೆ ಎನ್ನುವ ಎಗ್ಗಿಲ್ಲದೇ ಶರೀರದ ಸಮಸ್ತ ಅಂಗಾಂಗಗಳನ್ನು ಕರೆದುಕೊಳ್ಳುತ್ತಲೇ ಹೋದರು” ಎಂದು ಆಕೆ ಉಚಿತ ಪ್ರಯಾಣದ ಮಾಡುತ್ತಲೇ ಈ ನೆಲದ ಸಮಸ್ತ ಬಡ ಮಹಿಳೆಯರನ್ನು ಕೊಳಕರು, ಬಸ್‌ನಲ್ಲಿ ಪ್ರಯಾಣಿಸಲು ಯೋಗ್ಯರಲ್ಲದವರು ಎಂದು ಹೇಳಿದಂತಿತ್ತು.

ಶಕ್ತಿ ಯೋಜನೆ ಜಾರಿಯ ಮೊದಲ ದಿನವೇ ಉತ್ತರ ಕರ್ನಾಟಕದ ನಿಂಗಮ್ಮ ಶಿಂಗಾಡಿ ಎಂಬ ಅಜ್ಜಿಯೊಬ್ಬರು ಬಸ್‌ನ ಮೆಟ್ಟಿಲಿಗೆ ತಲೆಯಿಟ್ಟು ಒಳಬಂದಿರುವುದು, ಮೊದಲ ದಿನವೇ ಧರ್ಮಸ್ಥಳಕ್ಕೆ ಪ್ರವಾಸ ಹೊರಟ ಮಹಿಳೆಯರು ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಂಡು ಬರುತ್ತೇವೆ ಎಂದಿರುವುದು ಜನಪರ ಯೋಜನೆಯನ್ನು ಗೇಲಿ ಮಾಡುತ್ತಿರುವ ಬಿಜೆಪಿ ನಾಯಕರ ಕಪಾಳಕ್ಕೆ ಬಾರಿಸಿದಂತಿದೆ.

ಈ ನಡುವೆ ಕರಾವಳಿ ಮಲೆನಾಡು ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳಿಗೆ ಪ್ರಯಾಣಿಕರ ಕೊರತೆ, ನಗರದಲ್ಲಿ ಆಟೋಗಳಿಗೆ ಪ್ರಯಾಣಿಕರ ಕೊರತೆ, ಟ್ಯಾಕ್ಸಿಗಳಿಗೆ ಜನ ಬರುತ್ತಿಲ್ಲ ಎಂಬುದೆಲ್ಲ ಪೂರ್ಣ ಸತ್ಯವಲ್ಲ. ಅವರವರ ಅನುಕೂಲಕ್ಕೆ ತಕ್ಕಂತೆ ಆಟೋ, ಟ್ಯಾಕ್ಸಿಗಳಲ್ಲಿ ಓಡಾಡುವ ಜನ ಯಾವತ್ತೂ ಇದ್ದೇ ಇರುತ್ತಾರೆ. ಬೆಂಗಳೂರು ಮೆಟ್ರೊ ಶುರುವಾದಾಗ ಟ್ಯಾಕ್ಸಿ ಮತ್ತು ಆಟೋ ಚಾಲಕರು ಹೀಗೆಯೇ ಗೋಳಾಡಿದ್ದರು. ನಂತರ ಎಲ್ಲವೂ ಎಂದಿನಂತಾಯಿತಲ್ಲ.

Women Travellers In Bus
ಮೊದಲ ದಿನದ ಉಚಿತ ಪ್ರಯಾಣ

ಹೀಗೆ ನೂರೆಂಟು ಬಿಟ್ಟಿ ಸಲಹೆಗಳ ನಡುವೆ ಶಕ್ತಿ ಯೋಜನೆ ಆರಂಭವಾದ ಈ 10 ದಿನಗಳಲ್ಲಿ ಮಹಿಳೆಯರ ಪರ್ಸಿನಲ್ಲಿ ಒಂದಿಷ್ಟು ಚಿಕ್ಕಾಸು ಉಳಿದಿದೆ. ಪಂಜರದಿಂದ ಹೊರಬಿಟ್ಟಂತಾದ ಮಹಿಳೆಯರು ಪ್ರವಾಸ, ತೀರ್ಥಯಾತ್ರೆ ಅಂತ ಸುತ್ತಾಡಿ ಬಂದಿದ್ದಾರೆ. ಪ್ರಸಿದ್ಧ ದೇವಸ್ಥಾನದ ಹುಂಡಿಗೆ ಹೆಚ್ಚು ಹಣ ಬಿದ್ದಿದೆ. ಹೊಟೇಲುಗಳಲ್ಲಿ ವ್ಯಾಪಾರ ಹೆಚ್ಚಿದೆ. ಮಾರುಕಟ್ಟೆಗಳಲ್ಲಿ ಹಣ ಹರಿದಿದೆ ಎಂಬುದು ಸತ್ಯ. ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಹೊರನಾಡು ಮುಂತಾದ ಪ್ರಸಿದ್ದ ದೇವಸ್ಥಾನಗಳಿಗೆ ಹೊರಜಿಲ್ಲೆಯ ಮಹಿಳೆಯರು ಹೆಚ್ಚು ಭೇಟಿ ನೀಡಿರುವ ಕಾರಣ ಅಲ್ಲಿನ ವ್ಯಾಪಾರಿಗಳು ಖುಷಿಯಾಗಿದ್ದಾರೆ.

ಇದನ್ನು ಓದಿ ಈ ದಿನ ಸಂಪಾದಕೀಯ | ಒಣ ಮಾತಾಗದಿರಲಿ ಸುಳ್ಳುಸುದ್ದಿ ನಿಗ್ರಹ

ಕಾಂಗ್ರೆಸ್‌ ಸರ್ಕಾರದ ಶಕ್ತಿ ಯೋಜನೆಯಡಿ ಉಚಿತ ಬಸ್‌ ಪ್ರಯಾಣ, ಗೃಹಲಕ್ಷ್ಮಿ ಯೋಜನೆಯಡಿ ಮನೆಯೊಡತಿಗೆ 2000 ರೂಪಾಯಿ, ತಿಂಗಳು ಪೂರ್ತಿ ಬಳಸುವಷ್ಟು ಅನ್ನಭಾಗ್ಯದ ಅಕ್ಕಿ, ಈಗಷ್ಟೇ ಪದವಿ/ ಡಿಪ್ಲೊಮಾ ಮುಗಿಸಿ ಕೆಲಸದ ಹುಡುಕಾಟದಲ್ಲಿರುವ ಮಕ್ಕಳಿಗೆ ಎರಡು ವರ್ಷಗಳವರೆಗೆ ರೂ. 3000/1500 ಪ್ರೋತ್ಸಾಹ ಧನ ನೀಡುವ ಯುವನಿಧಿ ಯೋಜನೆ… ಹೀಗೆ ಐದೂ ಯೋಜನೆಯ ಫಲಾನುಭವಿಗಳು ಒಂದು ಕುಟುಂಬದಲ್ಲಿದ್ದರೆ, ಅದು ನೀಡುವ ಶಕ್ತಿ ಇಡೀ ಕುಟುಂಬದ ಪಾಲಿಗೆ ನೆಮ್ಮದಿಯ ನಿಟ್ಟುಸಿರು. ಉಳಿದಂತೆ ಬಿಟ್ಟಿ ಸಲಹೆಗಳು ಹೊಟ್ಟೆ ಕಿಚ್ಚು, ಅರೆಜ್ಞಾನ, ಅಜ್ಞಾನದ ಹಳಹಳಿಕೆಗಳಷ್ಟೇ.

ಹೇಮಾ 2
ಹೇಮಾ ವೆಂಕಟ್
+ posts

ʼಈ ದಿನ.ಕಾಮ್‌ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್
ಹೇಮಾ ವೆಂಕಟ್
ʼಈ ದಿನ.ಕಾಮ್‌ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X