ಹಂದಿ ಬೇಟೆಗಾಗಿ ಇಟ್ಟಿದ್ದ ಸಿಡಿಮದ್ದನ್ನು ಹಸುವೊಂದು ತಿಂದಿದ್ದು, ಬಾಯಿ ಹಾಕುತ್ತಿದ್ದಂತೆ ಸಿಡಿಮದ್ದು ಸ್ಪೋಟಿಸಿ ಹಸುವಿನ ಬಾಯಿ ಛಿದ್ರಗೊಂಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ದುರ್ಘಟನೆ ನಡೆದಿದೆ. ಕೆಂಪಿಸಿದ್ದನಹುಂಡಿ ಗ್ರಾಮದ ರೈತ ಚನ್ನನಂಜೇಗೌಡ ಅವರ ಹಸುವಿನ ಬಾಯಿ ಛಿದ್ರವಾಗಿದೆ. ಹಸು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.
ಗ್ರಾಮದ ವಾಟರ್ ಟ್ಯಾಂಕ್ ಬಳಿ ಜಾನುವಾರು ಹಸುವನ್ನು ಮೇಯಲು ಬಿಟ್ಟಿದ್ದರು. ಆದರೆ, ಅದೇ ಜಾಗದಲ್ಲಿ ಕಾಡು ಹಂದಿ ಬೇಟೆಗಾಗಿ ಸಿಡಿಮದ್ದು ಇಡಲಾಗಿತ್ತು. ಸಿಡಿಮದ್ದು ಇದ್ದ ಜಾಗದಲ್ಲಿ ಹಸು ಬಾಯಿ ಹಾಕಿದ್ದು, ತಕ್ಷಣವೇ ಸಿಡಿಮದ್ದು ಸಿಡಿದಿದೆ. ಹಸುವಿನ ಬಾಯಿ ಛಿದ್ರಗೊಂಡಿದೆ.
ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದಾರೆ.
2020ರಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಕೇರಳದ ಮಲಪ್ಪುರಂ ಜಿಲ್ಲೆಯ ಸೈಲೆಂಟ್ ವ್ಯಾಲಿಯಲ್ಲಿ ಆಹಾರ ಹುಡುಕುತ್ತಾ ಗ್ರಾಮವೊಂದರ ಸಮೀಪಕ್ಕೆ ಬಂದಿದ್ದ ಗರ್ಭಿಣಿ ಆನೆಗೆ ಕೆಲ ಕಿಡಿಗೇಡಿಗಳು ಪೈನಾಪಲ್ನಲ್ಲಿ ಸ್ಪೋಟಕ ತುಂಬಿ ತಿನ್ನಲು ಕೊಟ್ಟಿದ್ದರು. ಅದನ್ನು ತಿಂದ ಕೂಡಲೇ ಸಿಡಿಮದ್ದು ಸ್ಪೋಟಗೊಂಡು ಆನೆ ಸಾವನ್ನಪ್ಪಿತ್ತು. ಘಟನೆ ಕುರಿತು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.