ಹೊಟ್ಟೆ ನೋವು ಎಂದು ಆಸ್ಪತ್ರೆಗೆ ತೆರಳಿದ್ದ ಯುವತಿ ವೈದ್ಯ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಯುವತಿಗೆ ನ್ಯಾಯ ದೊರೆಯಬೇಕೆಂದು ಒತ್ತಾಯಿಸಿ ಉಡುಪಿಯಾದ್ಯಂತ ಅಭಿಯಾನ ನಡೆಯುತ್ತಿದೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕೆಮ್ಮುಂಡೇಲು ನಿವಾಸಿ ನಿಕಿತಾ (20) ಮೃತ ಯುವತಿ. ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಬುಧವಾರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಅಪೆಂಡಿಸೈಟಿಸ್, ಅರ್ನಿಯಾದಂತಹ ಸಮಸ್ಯೆ ಇರಬಹುದೆಂದು ವೈದ್ಯರು ನಾನಾ ಸ್ಕಾನಿಂಗ್ ಮತ್ತು ಎಂಡೋಸ್ಕೋಪಿ ಮಾಡಿದ್ದಾರೆ. ಏನು ಸಮಸ್ಯೆಯಾಗಿದೆ ಎಂದು ವಿವರಿಸದೆ, ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಬಳಿಕ, ಯುವತಿ ಸಾವನ್ನಪ್ಪಿದ್ದಾರೆ ಎಂದು ಆಕೆಯ ಪೋಷಕರು ತಿಳಿಸಿದ್ದಾರೆ.
ನಿಕಿತಾಗೆ ಅಪೆಂಡಿಸೈಟಿಸ್ ಆಗಿದೆಯೆಂದು ಆಪರೇಷನ್ ಮಾಡಿದ್ದರು. ಬಳಿಕ, ಆಕೆಯ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದ್ದು, ಆರೋಗ್ಯ ಏರುಪೇರಾಗಿತ್ತು. ಆತಂಕಗೊಂಡು ಮಣಿಪಾಲಕ್ಕೆ ಕಳಿಸುವಂತೆ ನಾವು ಕೇಳಿದೆವು. ಆದರೆ, ಯಾವ ಸಮಸ್ಯೆಯೂ ಇಲ್ಲ. ನಾವೇ ಚಿಕಿತ್ಸೆ ನೀಡುತ್ತೇವೆಂದು ವೈದ್ಯರು ಹೇಳಿದರು. ಮಗಳು ಭಾನುವಾರ ಸಾವನ್ನಪ್ಪಿದ್ದು, ಆಕೆ ಸಾವಿಗೆ ಹೃದಯಾಘಾತ ಕಾರಣವೆಂದು ವೈದ್ಯರು ಹೇಳಿದ್ದಾರೆ. ನಮ್ಮ ಮಗಳ ಸಾವಿಗೆ ವೈದ್ಯರೇ ಕಾರಣ” ಎಂದು ಪೋಷಕರು ಆರೋಪಿಸಿದ್ದಾರೆ.
ನಿಕಿತಾ ಸಾವಿಗೆ ನ್ಯಾಯ ದೊರೆಯಬೇಕು. ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಯುತ್ತಿದೆ. ಆದರೆ, ಆಸ್ಪತ್ರೆ ವಿರುದ್ಧ ದೂರು ನೀಡಲು ಮೃತ ಯುವತಿಯ ಪೋಷಕರು ನಿರಾಕರಿಸಿದ್ದು, ‘ಮಗಳೇ ಇಲ್ಲವೆಂದ ಮೇಲೆ ದೂರು ನೀಡಿ ಏನು ಪ್ರಯೋಜನ’ವೆಂದು ಹೇಳಿದ್ದಾರೆ.