ತುಂಗಭದ್ರಾ ತಟದಲ್ಲಿ ಬಂಡವಾಳ ಕೇಂದ್ರೀಕರಣದ ಕಾರ್ಖಾನೆಗಳು, ಪರಿಸರ ಮಾಲಿನ್ಯ ಉಂಟುಮಾಡುವ ಸ್ಪಾಂಜ್ ಐರನ್, ಸಿಮೆಂಟ್, ರಾಸಾಯನಿಕ ಗೊಬ್ಬರ, ಸುಣ್ಣ ತಯಾರಿಸುವ ಬೃಹತ್ ಕಾರ್ಖಾನೆಗಳ ಮೇಲೆ ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಮಾಲಿನ್ಯಕಾರಿ ಕಾರ್ಖಾನೆ ಬಾಧಿತರ ಆಂದೋಲನ ಸಂಚಾಲಕ ಕೆ ಬಿ ಗೋನಾಳ ಹೇಳಿದರು.
ತಾವರಗೇರ ಬುದ್ಧ ವಿಹಾರದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ(ಯುವ ಪಡೆ) ನೇತೃತ್ವದಲ್ಲಿ ಜರುಗಿದ ಕೊಪ್ಪಳ ಜಿಲ್ಲಾ ಮಾಲಿನ್ಯಕಾರಿ ಕಾರ್ಖಾನೆ ಬಾಧಿತರ ಆಂದೋಲನದಿಂದ ಹಮ್ಮಿಕೊಂಡಿದ್ದ ಎರಡು ದಿನದ ಪರಿಸರ ಜಾಗೃತಿ ಅಧ್ಯಯನ ಶಿಬಿರದ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
“ಈ ಬೃಹತ್ ಕಾರ್ಖಾನೆಗಳಿಂದ ಜಿಲ್ಲೆಗೆ ನಯಾಪೈಸೆ ಉಪಕಾರವಾಗಿಲ್ಲ. ಆದರೆ ನಮ್ಮದಲ್ಲದ ತಪ್ಪಿನಿಂದ ಗಿಣಿಗೇರಿ, ಹಿರೇಬಗನಾಳ, ಹಳೆಕನಕಾಪುರ, ಬೇವಿನಹಳ್ಳಿ, ಹುಲಿಗಿ, ಹಿರೇಕಾಸನಕಂಡಿ, ಚಿಕ್ಕಬಗನಾಳ, ಲಾಚನಕೇರಿ, ಕುಣಿಕೇರಿ, ಕುಣಿಕೇರಿ ತಾಂಡಾ, ಹಾಲವರ್ತಿ, ಬೆಳವಿನಾಶ ಮುಂತಾದ ಗ್ರಾಮಗಳಲ್ಲಿ ಕೃಷಿ ಬೆಳೆಹಾನಿ, ಜಲಮಾಲಿನ್ಯ, ವಾಯುಮಾಲಿನ್ಯ ಉಂಟಾಗಿ ಜನರು ದೀರ್ಘ ಕಾಲಿನ ರೋಗಗಳಿಗೆ ತುತ್ತಾಗಿದ್ದಾರೆ. ಧೂಳು, ಹೊಗೆಮಿಶ್ರಿತ ಮೇವು ತಿಂದು ಪ್ರಾಣಿಗಳು ಅತಿಸಾರದಿಂದ ಸಾಯುತ್ತಿವೆ. ತುಂಗಭದ್ರಾ ಜಲಾಶಯ ಈ ಕಾರ್ಖಾನೆಗಳ ತ್ಯಾಜ್ಯದಿಂದ ವಿಷವಾಗಿದೆ. ಅಗ್ಗದ ದರದಲ್ಲಿ ಭೂಮಿಯನ್ನು ಕೆಐಎಡಿಬಿ ಮೂಲಕ ಒತ್ತಡ ಹಾಕಿ ಒತ್ತಾಯದಿಂದ ಕಿತ್ತುಕೊಳ್ಳಲಾಗಿದೆ” ಎಂದು ಆರೋಪಿಸಿದರು.
“20 ವರ್ಷಗಳಿಂದ ನಮ್ಮ ಆಹ್ಲಾದಕರ ಪರಿಸರ ನಾಶ ಮಾಡಿದ್ದಲ್ಲದೇ ಉತ್ತರ ಭಾರತದ ಕೂಲಿಕಾರ್ಮಿಕನ್ನು ಗೋಳನ್ನು ಕರೆತಂದು ಅಪಾಯಕಾರಿ ಕೆಲಸದಲ್ಲಿ ನಿಯೋಜಿಸುತ್ತಿದ್ದಾರೆ. ಜಾಗತೀಕರಣ, ಉದಾರೀಕರಣ ನೀತಿಗಳ ಕಾರಣದಿಂದ ನಮ್ಮ ಬದುಕುವ ಹಕ್ಕನ್ನು ಮೊಟಕುಗೊಳಿಸಲಾಗಿದೆ. ಇದರ ವಿರುದ್ಧ ಬಾಧಿತರು ದೀರ್ಘ ಕಾಲದ ಹೋರಾಟಕ್ಕೆ ಮುಂದಾಗಿ ಕೊಪ್ಪಳ ನಗರಕ್ಕೆ ಭೂತವಾಗಿ ಬಂದು ಕಾಡುತ್ತಿರುವ ಬಲ್ಡೋಟ ಬಿಎಸ್‌ಪಿಎಲ್ ಕಂಪೆನಿಯನ್ನು ಹೊರಗೆ ಓಡಿಸುವತನಕ ಮತ್ತು ಈಗಿರುವ ಕಾರ್ಖಾನೆಗಳು ಮುಂದುವರಿದ ತಂತ್ರಜ್ಞಾನ ಬಳಸಿ ಮಾಲಿನ್ಯ ನಿಯಂತ್ರಣ ಮಾಡುವ ತನಕ ಬಾಧಿತ ಗ್ರಾಮಗಳು ಮತ್ತು ಕೊಪ್ಪಳ ನಗರದ ಜನರು ವಿರಮಿಸದೆ ಹೋರಾಟ ಮಾಡಬೇಕು” ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಧಾರವಾಡ ಸಮಾಜ ಪರಿವರ್ತನಾ ಸಮುದಾಯದ ಎಸ್ ಆರ್ ಹಿರೇಮಠ ಮಾತನಾಡುತ್ತ, “ಇದೊಂದು ರಾಜಕೀಯ ಮುತ್ಸದ್ದಿತನದ ಕೊರತೆಗಿದೆ. ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಎಲ್ಲಕ್ಕೂ ಮಿಗಿಲಾಗಿ ಜನತೆಯ ಹೋರಾಟಗಳು ಬೆಳೆದು ಬಂದಾಗ ಮಾತ್ರ ಜನರ ವಿರೋಧಿಯಾಗಿರುವ ರಾಜಕಾರಣವನ್ನು ಸೋಲಿಸಬಹುದು. ಇಂದು ಭಗತ್ ಸಿಂಗ್ ಹಾಗೂ ಅವರ ಒಡನಾಡಿಗಳು ಹುತಾತ್ಮರಾದ ದಿನ. ಸ್ವಾತಂತ್ರ್ಯ ಎನ್ನುವುದು ನಮ್ಮ ಜನ್ಮಸಿದ್ಧ ಹಕ್ಕು ಎಂದು ಭಗತ್ ಸಿಂಗ್ ಹೇಳಿರುವುದನ್ನು ನಾವುಗಳು ಇದೀಗ ಇಂದಿನ ಕಂಪೆನಿಗಳ ವಿರುದ್ಧ ಸಾಧಿಸಬೇಕಾಗಿದೆ@ ಎಂದು ಹೇಳಿದರು.
“ಮುಂದಿನ ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಿ ಮನುಷ್ಯನ ಬುದ್ಧಿವಂತಿಕೆ ಮತ್ತು ಸಂಶೋಧನೆಯಿಂದ ಹುಟ್ಟಿದ ಯಾವುದೇ ರಾಸಾಯನ ಪೂರೈಕೆಯೂ ಆಗಬಲ್ಲದು, ನಿಯಂತ್ರಣ ತಪ್ಪಿದರೆ ದೊಡ್ಡ ಪ್ರಮಾಣದಲ್ಲಿ ಮಾರಾಕವೂ ಆಗಬಹುದು. ಎರಡನೇ ಮಹಾಯುದ್ಧದಲ್ಲಿ ಬಳಸಲಾದ ಪರಮಾಣುವಿನಿಂದ ಮನುಷ್ಯ ಬುದ್ಧಿ ಕಲಿಯಬೇಕು. ಅಂಬೇಡ್ಕರ್ ಅವರು 1950 ಜನವರಿ 26ರಂದು ಒಬ್ಬ ವ್ಯಕ್ತಿಗೆ ಒಂದೇ ಮತವೆಂದು ಹೇಳಿದ್ದು, ಅದು ಈ ದೇಶದಲ್ಲಿ ಜಾರಿಗೆ ಬಂದದ್ದು ಬಹುದೊಡ್ಡ ಬದಲಾವಣೆಯಾಗಿದೆ. ಗ್ರಾಮೀಣ ಜನರ ಆರೋಗ್ಯ ಕೆಡಿಸಲು ಯಾರಿಗೂ ಅವಕಾಶವಿಲ್ಲ. ಆದರೂ ಅವರು ಆಡಳಿತವನ್ನು ದುರುಪಯೋಗಪಡಿಸಿಕೊಂಡು ಸರ್ವಾಧಿಕಾರಿಗಳಾಗಿ ನಡೆದುಕೊಂಡು ಈ ವ್ಯವಸ್ಥೆ ಅಸ್ಥಿರಗೊಳಿಸಿದ್ದಾರೆ” ಎಂದು ದೂರಿದರು.
“ನ್ಯಾಯ ಪಡೆಯಲು ತಾಳ್ಮೆ ಇರಬೇಕಾಗುತ್ತದೆ. ಅಧಿಕಾರದಲ್ಲಿ ಉದ್ಧಟತನದಿಂದ ಯಾರೇ ನಡೆದುಕೊಂಡಾಗ ಅದನ್ನು ಪ್ರಶ್ನಿಸಲು ಸಂಘಟನೆಗಳು ಬೇಕಾಗುತ್ತವೆ. ಸಾರ್ವಜನಿಕ ವಿಚಾರಣೆ ನಡೆಸದೆ ಯಾವುದೇ ಕಾರ್ಖಾನೆಗಳನ್ನು ಆರಂಭಿಸುಂತಿಲ್ಲವೆಂದು ಕಾನೂನು ಹೇಳುತ್ತದೆ. ಆದರೂ ಇದನ್ನು ಉಲ್ಲಂಘನೆ ಮಾಡಿ ಕೈಗಾರಿಕೆಗಳನ್ನು ಸ್ಥಾಪಿಸಲಾಗಿದೆ. ಅಲ್ಲಿನ ರಸ್ತೆಗಳಲ್ಲಿ ಸುರಕ್ಷಿತ ಪ್ರಯಾಣ ಮಾಡಲು ಸಾಧ್ಯವಿಲ್ಲ, ನಿಮ್ಮ ಸಂಘಟನೆಯಲ್ಲಿ ವೈಚಾರಿಕ ಬದ್ಧತೆ ಇಟ್ಟುಕೊಂಡು ಹೋರಾಟ ಮಾಡಬೇಕು” ಎಂದರು.
ಅಧ್ಯಕ್ಷತೆ ವಹಿಸಿದ್ದ ಅಲ್ಲಮಪ್ರಭು ಬೆಟ್ಟದೂರು ಅವರು ಕೈಗಾರಿಕಾ ಮಂತ್ರಿ ಎಂ ಬಿ ಪಾಟೀಲರ ಹೇಳಿಕೆಯನ್ನು ಖಂಡಿಸುತ್ತ ಮಾತನಾಡಿ, “ಕೊಪ್ಪಳದಲ್ಲಿ ಕೇಂದ್ರೀಕೃತವಾಗಿರುವ ಕಾರ್ಖಾನೆ ಕೇಂದ್ರೀಕರಣ ನೀತಿಯಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಅಲ್ಲೊಂದು ಇಲ್ಲೊಂದು ಜನವಸತಿ ಪ್ರದೇಶದಿಂದ ದೂರದಲ್ಲಿ ಉದ್ಯಮಗಳಿರಬೇಕಲ್ಲದೆ ಕೊಪ್ಪಳ ಜಿಲ್ಲೆಯ ಗಿಣಿಗೇರಿ, ಅಲ್ಲಾನಗರ, ಹಳೆಕನಕಾಪುರ, ಬೇವಿನಹಳ್ಳಿ, ಹಿರೇಬಗನಾಳ, ಹಿರೇಕಾಸನಕಂಡಿ, ಹಾಲವರ್ತಿ, ಚಿಕ್ಕಬಗನಾಳ, ಕುಣಿಕೇರಿ, ಲಾಚನಕೇರಿ, ಕುಣಿಕೇರಿ ತಾಂಡಾ ಮುಂತಾದ 20ಕ್ಕಿಂತ ಹೆಚ್ಚು ಹಳ್ಳಿಗಳು ಕಾರ್ಖಾನೆಗಳ ಹೊಗೆ, ಧೂಳಿನಿಂದ ಬಾಧಿತವಾಗಿ ಜನಜೀವನ ಸಂಕಷ್ಟದಲ್ಲಿದೆ. ರೈತರ ಕೃಷಿಬೆಳೆ ಹಾಳಾಗಿವೆ. ಬೂದಿ ಹೊಗೆ ತಾಗಿದ ಮೇವು ತಿಂದು ದನಗಳು ಅತಿಸಾರದಿಂದ ಸಾಯುತ್ತಿವೆ. ಜನ ಕೆಮ್ಮು, ದಮ್ಮು, ಅಸ್ತಮಾ, ಟಿಬಿ, ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅವರಿಗೆ ಚಿಕಿತ್ಸೆ ಸಿಗುವಂತೆ ಮಾಡಿ ಕಾರ್ಖಾನೆಗಳಿಂದ ಪರಿಹಾರ ಕೊಡಿಸಬೇಕು” ಎಂದು ಒತ್ತಾಯಿಸಿದರು.
“ಬೆಳೆ ಹಾಳಾಗಿರುವುದಕ್ಕೆ ಹಾಗೂ ಜಾನುವಾರುಗಳ ಸಾವಿಗೂ ಪರಿಹಾರ ಸಿಗಬೇಕು. ಈಗಾಗಲೇ ಸರ್ಕಾರ ನೇಮಿಸಿದ ತಾಂತ್ರಿಕ ಸಮಿತಿ ವರದಿ ಒಂದು ತಾಸು ಓದಿದರೆ ಸಾಕು. ಅದನ್ನು ಬಿಟ್ಟು ಮತ್ತೆ ಅಧ್ಯಯನ ಮಾಡಲಾಗುವುದು ಎನ್ನುವುದು ಕಾಲಹರಣವಾಗುತ್ತದೆ. ಬಾಧಿತ ಪ್ರದೇಶದಲ್ಲಿ ಕೈಗಾರಿಕಾ ಮಂತ್ರಿಗಳು ಸಂಚರಿಸಿ ನೋಡಿದರೆ ಮೇಲ್ನೋಟಕ್ಕೆ ಪರಿಸರ ಮಾಲಿನ್ಯ ಉಂಟಾಗಿರುವುದು ಗೊತ್ತಾಗಲಿದೆ. ಕೊಪ್ಪಳದ ಜಿಲ್ಲಾ ಕಚೇರಿ, ಜಿಲ್ಲಾ ಆಸ್ಪತ್ರೆ, ಮೆಡಿಕಲ್ ಕಾಲೇಜು, ಗವಿಮಠ, ಗವಿಶ್ರೀ ನಗರ, ಕಾಳಿದಾಸನಗರ, ಬೇಲ್ದಾರ್ ಕಾಲೋನಿ, ಸಿದ್ದಾರ್ಥ ನಗರ ಮುಂತಾದ ಪ್ರದೇಶಗಳು ಈಗಾಗಲೇ ಬಾಧಿತವಾಗಿದ್ದು ಬಲ್ದೋಟ ಬಿಎಸ್‌ಪಿಎಲ್ ವಿಸ್ತರಣೆಯಿಂದ ಕೊಪ್ಪಳ ನಗರ ಮತ್ತು ಇಪ್ಪತ್ತು ಹಳ್ಳಿಗಳನ್ನು ಸ್ಥಳಾಂತರಿಸಬೇಕಾಗುತ್ತದೆ. ಕೊಪ್ಪಳ ಜಿಲ್ಲೆಯ ಪರಿಸರ ಉಳಿಯಬೇಕಾದರೆ ಈಗಿರುವ ಕಾರ್ಖಾನೆಗಳು ಹೊಸ ತಂತ್ರಜ್ಞಾನ ಬಳಸಿ ಹೊಗೆ, ಬೂದಿ ಜನರನ್ನು ಬಾಧಿಸದಂತೆ ಮಾಡಬೇಕು. ಕೊಪ್ಪಳ ಇರಬೇಕು! ಇಲ್ಲವೇ ಬಿಎಸ್‌ಪಿಎಲ್ ಇರಬೇಕು. ಎರಡೂ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂಬುದನ್ನು ಸಚಿವರು ಮನಗಾಣಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಾರು ಚಾಲನೆ ಮಾಡುತ್ತಿದ್ದಾಗಲೇ ಹೃದಯಾಘಾತ; ಗುತ್ತಿಗೆದಾರ ಸಾವು
ಜನ ಸಂಗ್ರಾಮ ಪರಿಷತ್ ರಾಘವೇಂದ್ರ ಕುಷ್ಟಗಿ ಮಾತನಾಡಿ, “ತುಂಗಭದ್ರಾ ರಕ್ಷಣೆಗೆ ನಾವೆಲ್ಲ ಮುಂದಾಗಬೇಕೆಂದು, ಈಗ ಕೊಪ್ಪಳ ಮಾತ್ರವಲ್ಲ ರಾಯಚೂರು ಸೇರಿ ಆರ್‌ಟಿಪಿಎಸ್ ಮೃತ್ಯು ಚಿನ್ನದ ಗಣಿಗಾರಿಕೆಯಿಂದ ಸಿಲಿಕೋಸಿಸ್ ಬಾಧಿಸುತ್ತಿದ್ದು, ಮಧ್ಯಪ್ರದೇಶದಲ್ಲಿ ಮಾತ್ರ ಚಿಕಿತ್ಸಾ ಕೇಂದ್ರವಿದೆ. ಇನ್ನೊಂದು ಎಐಐಎಂಎಸ್‌ನಲ್ಲಿ ಮಾತ್ರ ಸಾಧ್ಯವಿದೆ” ಎಂದು ಹೇಳಿದರು.
ಮಾಲಿನ್ಯಕಾರಿ ಕಾರ್ಖಾನೆಯಿಂದ ಬಾಧಿತರಾಗಿರುವ ಮಹೇಶ ವದನಾಳ, ಸಾ ಹಿರೇಬಗನಾಳ, ಶಿವಪ್ಪ ದೇವರಮನಿ, ಗಣೇಶ ಆಚಾರ, ಕೊಟ್ರಪ್ಪ ಪಲ್ಲೇದ, ಗವಿಸಿದ್ದಪ್ಪ ಪುಟಗಿ, ಶಂಕ್ರಪ್ಪ ಕರ್ಕಿಹಳ್ಳಿ, ತಿರುಪತಿ ಇಂದಿರಾನಗರ, ಮುದುಕಪ್ಪ ಎಂ. ಹೊಸಮನಿ, ಮಹಾಂತೇಶ ಕೊತಬಾಳ, ಶುಕರಾಜ ತಾಳಕೇರಿ, ಮದ್ದಾನಯ್ಯ ಹಿರೇಮಠ, ಮಾನವ ಬಂಧುತ್ವ ವೇದಿಕೆ ಮಹಿಳಾ ಸಂಚಾಲಕಿ ಶಶಿಕಲಾ, ಕೊಜಿಬ ಆಂದೋಲನ ಸಂಚಾಲಕ ಡಿ ಎಚ್ ಪೂಜಾರ, ಟಿ ರತ್ನಾಕರ ಶರಣು ಗಡ್ಡಿ, ನಜೀರ್‌ಸಾಬ್ ಮೂಲಿಮನಿ, ಎಸ್ ಎ ಗಫಾರ್, ಶರಣು ಶೆಟ್ಟರ್, ಎಂ ಕೆ ಸಾಹೇಬ, ಶರಣು ಪಾಟೀಲ ಇದ್ದರು.