ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂದೆಯನ್ನು ಟೀಕಿಸಿದ ಸ್ಟಾಂಡ್‌ಅಪ್ ಕಾಮೆಡಿಯನ್ ಕುನಾಲ್ ಕಾಮ್ರಾ ವಿರುದ್ಧ ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರಣಾವತ್ ವಾಗ್ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲೇ ಈ ಹಿಂದೆ ಉದ್ಧವ್ ಠಾಕ್ರೆ ಸರ್ಕಾರ ತನ್ನ ವಿರುದ್ದ ಕೈಗೊಂಡ ಕ್ರಮ ಕಾನೂನುಬಾಹಿರವಾಗಿತ್ತು, ಇದು ಕಾನೂನುಬದ್ಧವಾಗಿದೆ ಎಂದು ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಸಂಸತ್ತಿನ ಹೊರಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕಂಗನಾ ರಣಾವತ್, “ಯಾರನ್ನಾದರೂ ಈ ರೀತಿ ಅಗೌರವಿಸುವುದು ಸರಿಯಲ್ಲ. ಹಾಸ್ಯದ ಹೆಸರಲ್ಲಿ ಯಾವುದೇ ವ್ಯಕ್ತಿಯನ್ನು ಅವಮಾನಿಸಬಾರದು. ಬರೀ ಎರಡು ನಿಮಿಷಗಳ ಖ್ಯಾತಿಗಾಗಿ ಈ ರೀತಿ ಮಾಡುತ್ತಾರೆ” ಎಂದು ಟೀಕಿಸಿದ್ದಾರೆ.
ಇದನ್ನು ಓದಿದ್ದೀರಾ? ಶಿಂದೆ ‘ದ್ರೋಹಿ’ ಎಂದ ಕುನಾಲ್ ಕಮ್ರಾ: ಎಫ್‌ಐಆರ್ ದಾಖಲು, ಹೋಟೆಲ್ ಧ್ವಂಸ
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಅವರನ್ನು ಸ್ಟಾಂಡ್‌ಅಪ್ ಕಾಮೆಡಿಯನ್ ಕುನಾಲ್ ಕಾಮ್ರಾ ಟೀಕಿಸಿದ್ದು, ಈ ವಿಡಿಯೋ ವೈರಲ್ ಆದ ಕೆಲವೇ ಗಂಟೆಗಳಲ್ಲಿ ಕುನಾಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕುನಾಲ್ ವಿರುದ್ಧ ಶಿಂದೆ ನೇತೃತ್ವದ ಶಿವಸೇನೆ ಶಾಸಕ ಮುರ್ಜಿ ಪಟೇಲ್ ದೂರು ನೀಡಿದ್ದಾರೆ. ಕಮ್ರಾ ಹೆಸರನ್ನು ಉಲ್ಲೇಖಿಸದೆಯೇ ಪರೋಕ್ಷವಾಗಿ ಶಿಂದೆ ಅವರನ್ನು ಸಂಬೋಧಿಸಿ ತನ್ನದೇ ಪಕ್ಷಕ್ಕೆ ದ್ರೋಹ ಬಗೆದ ದ್ರೋಹಿ ಎಂದು ಹೇಳಿದ್ದಾರೆ. ಅದಾದ ಬೆನ್ನಲ್ಲೇ ಶಿವಸೇನೆ ಕಾರ್ಯಕರ್ತರು ಮುಂಬೈ ಸ್ಟುಡಿಯೋವನ್ನು ಧ್ವಂಸಗೊಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದೆ ಕಂಗನಾ, “ನನಗೆ ಏನಾಯಿತು ಮತ್ತು ಈಗ ಏನಾಗುತ್ತಿದೆ ಎಂಬುದನ್ನು ನಾನು ಹೋಲಿಸಲು ಬಯಸುವುದಿಲ್ಲ. ಅದು ಕಾನೂನುಬಾಹಿರ, ಇದು ಕಾನೂನುಬದ್ಧವಾಗಿದೆ. ಯಾವುದೇ ವ್ಯಕ್ತಿಯನ್ನು ಹಾಸ್ಯದ ಹೆಸರಲ್ಲಿ ಅವಮಾನಿಸುವುದು ಸರಿಯಲ್ಲ. ನೀವು ಅವರ ಕೆಲಸವನ್ನು ನಿರ್ಲಕ್ಷಿಸುತ್ತಿದ್ದೀರಿ. ಶಿಂದೆ ಆಟೋರಿಕ್ಷಾ ಓಡಿಸುತ್ತಿದ್ದರು. ಆದರೆ ಈಗ ತುಂಬಾ ಬೆಳೆದಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕುನಾಲ್ ಕಮ್ರಾ ಜೊತೆ ಟ್ವೀಟ್ ವಾರ್ | ಓಲಾ ಷೇರು ಕುಸಿತ; ಭವಿಶ್ ದುರಹಂಕಾರದ ಫಲವೆಂದ ನೆಟ್ಟಿಗರು
“ಕಮ್ರಾ ಅರ್ಹತೆಗಳೇನು? ಜೀವನದಲ್ಲಿ ಏನನ್ನೂ ಸಾಧಿಸಲಾಗದ ಇವರು ಯಾರು? ಹಾಸ್ಯವನ್ನು ದುರುಪಯೋಗ ಮಾಡುವುದು, ನಮ್ಮ ಧಾರ್ಮಿಕ ಗ್ರಂಥಗಳನ್ನು ಅಪಹಾಸ್ಯ ಮಾಡುವುದು, ನಮ್ಮ ತಾಯಂದಿರು ಮತ್ತು ಸಹೋದರಿಯರ ಬಗ್ಗೆ ತಮಾಷೆ ಮಾಡುವುದು- ಹೀಗೆ ಇವೆಲ್ಲ ಮಾಡಿ ತಮ್ಮನ್ನು ತಾವು ಪ್ರಭಾವಿ (influencers) ಎಂದು ಕರೆಸಿಕೊಳ್ಳುತ್ತಾರೆ. ಎರಡು ನಿಮಿಷಗಳ ಖ್ಯಾತಿಗಾಗಿ ಇದನ್ನು ಮಾಡುತ್ತಾರೆ. ನಮ್ಮ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ” ಎಂದು ಪ್ರಶ್ನಿಸಿದರು.
2020ರಲ್ಲಿ ಕಂಗನಾ ರಣಾವತ್ ಕಚೇರಿ ನೆಲಸಮ
2020ರ ಸೆಪ್ಟೆಂಬರ್‌ನಲ್ಲಿ ಮುಂಬೈನ ಪಾಲಿ ಹಿಲ್‌ನಲ್ಲಿರುವ ಕಂಗನಾ ಕಚೇರಿಯ ಒಂದು ಭಾಗವನ್ನು ಅತಿಕ್ರಮಣ ಕಾರಣದಿಂದಾಗಿ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಕೆಡವಿತ್ತು. ಆದರೆ ಕ್ರಮದ ಬಗ್ಗೆ ಪ್ರಶ್ನೆ ಹುಟ್ಟಿತ್ತು. ಆ ಸಂದರ್ಭದಲ್ಲಿ ಉದ್ಧವ್ ಠಾಕ್ರೆ ಸರ್ಕಾರ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿತ್ತು.
ಈ ಬೆನ್ನಲ್ಲೇ ಕಂಗನಾ ರಣಾವತ್ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದರು. ಆ ವೇಳೆ ಕಂಗನಾ ಬಿಜೆಪಿ ಸದಸ್ಯರಾಗಿರಲಿಲ್ಲ. ಶಿವಸೇನೆಯೂ ಕೂಡಾ ವಿಭಜನೆಯಾಗಿರಲಿಲ್ಲ. ಆದರೆ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರದಲ್ಲಿ ಕಂಗನಾ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವೆ ವಾಗ್ವಾದ ನಡೆಯುತ್ತಿತ್ತು. ನಟಿ ಈ ಧ್ವಂಸವನ್ನು ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಹಾಗೆಯೇ ನ್ಯಾಯಾಲಯದಲ್ಲಿ ಅವರ ಪರವಾಗಿ ತೀರ್ಪು ಬಂದಿತ್ತು. ಈ ಕ್ರಮದ ಹಿಂದಿನ ಉದ್ದೇಶವನ್ನು ಹೈಕೋರ್ಟ್ ಪ್ರಶ್ನಿಸಿತ್ತು.
ಇದೀಗ ಕುನಾಲ್ ಕಾಮ್ರಾ ಮಹಾರಾಷ್ಟ್ರ ಉಪಮುಖ್ಯಮಂತ್ರಿಯನ್ನು ಟೀಕಿಸುತ್ತಿದ್ದಂತೆ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮುಂಬೈನ ಖಾರ್ ಪ್ರದೇಶದ ಯುನಿಕಾಂಟಿನೆಂಟಲ್ ಹೋಟೆಲ್‌ನಲ್ಲಿರುವ ದಿ ಹ್ಯಾಬಿಟ್ಯಾಟ್ ಸ್ಟುಡಿಯೋವನ್ನು ಧ್ವಂಸಗೊಳಿಸುತ್ತಿದೆ. ಕಟ್ಟಡ ಅತಿಕ್ರಮಣ ಪ್ರದೇಶದಲ್ಲಿದೆ ಎಂದು ಹೇಳಿದೆ. ಎರಡೂ ಪ್ರಕರಣದಲ್ಲಿಯೂ ನೇರವಾಗಿ ರಾಜಕೀಯ ಕಂಡುಬಂದಿದೆ. ಆದರೆ ಇದೀಗ ಬಿಜೆಪಿಯಲ್ಲಿರುವ ಕಂಗನಾ ಇಂದಿನ ಬಿಜೆಪಿ ಸರ್ಕಾರದ ಕ್ರಮ ಕಾನೂನುಬದ್ಧವಾಗಿದೆ ಎಂದು ಹೇಳಿಕೊಂಡಿದ್ದಾರೆ.
