2024ರ ಲೋಕಸಭೆ ಮತ್ತು ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ 22 ರಾಜಕೀಯ ಪಕ್ಷಗಳು ಸಂಗ್ರಹಿಸಿದ ನಿಧಿಗಳು ಮತ್ತು ಖರ್ಚುಗಳ ಘೋಷಿತ ಮೊತ್ತದ ವರದಿಯ ಪ್ರಕಾರ ಬಿಜೆಪಿಯೊಂದೇ 1,754 ಕೋಟಿಗಳನ್ನು ಖರ್ಚು ಮಾಡಿದೆ...
2024ರ ಲೋಕಸಭಾ ಚುನಾವಣೆ ಮತ್ತು ಅದೇ ಸಮಯದಲ್ಲಿ ನಡೆದ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ (ಆಂಧ್ರಪ್ರದೇಶ, ಒಡಿಶಾ, ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ) 22 ರಾಜಕೀಯ ಪಕ್ಷಗಳು ತಾವು ಖರ್ಚು ಮಾಡಿದ ವೆಚ್ಚವನ್ನು ಘೋಷಿಸಿವೆ. ಎಲ್ಲ ಪಕ್ಷಗಳ ಒಟ್ಟು ಮೊತ್ತದಲ್ಲಿ ಬರೋಬ್ಬರಿ 45% ಹಣವನ್ನು ಬಿಜೆಪಿ ಒಂದೇ ಖರ್ಚು ಮಾಡಿದೆ. ಉಳಿದ 55% ಹಣವು 21 ಪಕ್ಷಗಳ ಖರ್ಚಿನ ಮೊತ್ತವಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಭಾರತದ ಅತ್ಯಂತ ಶ್ರೀಮಂತ ಪಕ್ಷ ಬಿಜೆಪಿಯಾಗಿದೆ. ಇತ್ತೀಚೆಗೆ, ಬಿಜೆಪಿ ಘೋಷಿಸಿಕೊಂಡಿರುವಂತೆ ಕೇಸರಿ ಪಕ್ಷದ ಬಳಿ ಒಟ್ಟು 7,113.80 ಕೋಟಿ ರೂ. ಹಣವಿದೆ. ಕೇಂದ್ರದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ 857.15 ಕೋಟಿ ರೂ. ಹಣವನ್ನು ಹೊಂದಿದೆ. ಅಂದರೆ, ಕಾಂಗ್ರೆಸ್‌ಗಿಂತ ಬಿಜೆಪಿ ಬರೋಬ್ಬರಿ 9 ಪಟ್ಟು ಹೆಚ್ಚು ಹಣವನ್ನು ಹೊಂದಿದೆ.
2024ರ ಲೋಕಸಭೆ ಮತ್ತು ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ 22 ರಾಜಕೀಯ ಪಕ್ಷಗಳು ಸಂಗ್ರಹಿಸಿದ ನಿಧಿಗಳು ಮತ್ತು ಖರ್ಚುಗಳ ಘೋಷಿತ ಮೊತ್ತದ ವರದಿಯನ್ನು ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಆ ದತ್ತಾಂಶವನ್ನು ಕಾಮನ್‌ವೆಲ್ತ್ ಮಾನವ ಹಕ್ಕುಗಳ ಉಪಕ್ರಮ (CHRI) ವಿಶ್ಲೇಷಿಸಿ ವರದಿ ಬಿಡುಗಡೆ ಮಾಡಿದೆ. 22 ಪಕ್ಷಗಳು ಒಟ್ಟು 3,861.57 ಕೋಟಿ ರೂ.ಗಳನ್ನು ಖರ್ಚು ಮಾಡಿವೆ ಎಂದು ಹೇಳಿದೆ.
ಈ ಒಟ್ಟು ಖರ್ಚಿನಲ್ಲಿ ಬಿಜೆಪಿಯೇ 1,754.06 ಕೋಟಿ ರೂ. ಖರ್ಚು ಮಾಡಿದೆ. ಬಿಜೆಪಿಯ ಖರ್ಚಿಗೆ ಹೋಲಿಸಿದರೆ, ಬಿಜೆಪಿಗಿಂತ ಕಾಂಗ್ರೆಸ್ 60% ಕಡಿಮೆ ಖರ್ಚು ಮಾಡಿದೆ. ಅಂದರೆ, 686.19 ಕೋಟಿ ರೂ. ಖರ್ಚು ಮಾಡಿದೆ. ಪ್ರಾದೇಶಿಕ ಪಕ್ಷಗಳಾದ ಒಡಿಶಾದ ಬಿಜೆಡಿ, ಆಂಧ್ರದ ವೈಎಸ್ಆರ್‌ಸಿಪಿ ಹಾಗೂ ತಮಿಳುನಾಡಿನ ಡಿಎಂಕೆ – ಕ್ರಮವಾಗಿ 3ನೇ, 4ನೇ ಹಾಗೂ 5ನೇ ಸ್ಥಾನದಲ್ಲಿವೆ.
ಅತಿ ಹೆಚ್ಚು ಖರ್ಚು ಮಾಡಿದ ಪಕ್ಷಗಳು
ಬಿಜೆಪಿ ಖರ್ಚು ಮಾಡಿರುವ ಒಟ್ಟು 1,737.68 ಕೋಟಿ ರೂ. ಪೈಕಿ 41.01 ಕೋಟಿ ರೂ.ಗಳನ್ನು ನಾಲ್ಕು ವಿಧಾನಸಭಾ ಚುನಾವಣೆಗಾಗಿ ಮತ್ತು ಉಳಿದೆಲ್ಲ ಹಣವನ್ನು ಲೋಕಸಭಾ ಚುನಾವಣೆಗಾಗಿ ಖರ್ಚು ಮಾಡಿದೆ.
ಮತ್ತೊಂದೆಡೆ, ಕಾಂಗ್ರೆಸ್ ಪಕ್ಷವು ಲೋಕಸಭೆ ಮತ್ತು ನಾಲ್ಕು ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಒಟ್ಟು 686.19 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳು ಒಂದೇ ಸಮಯದಲ್ಲಿ ನಡೆದಿದ್ದು, ಪಕ್ಷವು ಒಂದೇ ಖಾತೆಯಿಂದ ಖರ್ಚು ಮಾಡಿರುವುದಾಗಿ ಹೇಳಿರುವುದರಿಂದ ವಿಧಾನಸಭಾ ಚುನಾವಣೆಗೆ ಮಾಡಲಾಗಿರುವ ಖರ್ಚಿನ ಪ್ರತ್ಯೇಕ ಮೊತ್ತದ ಬಗ್ಗೆ ಗೊತ್ತಾಗಿಲ್ಲ ಎಂದು ವಿಶ್ಲೇಷಿತ ವರದಿ ತಿಳಿಸಿದೆ.
ಒಡಿಶಾದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳೆರಡರಲ್ಲೂ ಸ್ಪರ್ಧಿಸಿದ ಬಿಜೆಡಿ 415.21 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ವೆಚ್ಚದಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಒಡಿಶಾದಲ್ಲಿ ಬಿಜೆಡಿಯಂತೆ ಆಂಧ್ರಪ್ರದೇಶದಲ್ಲಿ ಅಧಿಕಾರ ಕಳೆದುಕೊಂಡ ವೈಎಸ್‌ಆರ್‌ಸಿಪಿ ಚುನಾವಣೆಯಲ್ಲಿ 328.63 ಕೋಟಿ ರೂ. ಖರ್ಚು ಮಾಡಿದ್ದು, 4ನೇ ಸ್ಥಾನದಲ್ಲಿದೆ.
ತಮಿಳುನಾಡಿನಲ್ಲಿ ಲೋಕಸಭಾ ಚುನಾವಣೆ ಎದುರಿಸಿದ ಡಿಎಂಕೆ 161.07 ಕೋಟಿ ರೂ. ಖರ್ಚು ಮಾಡಿದ್ದು, 5ನೇ ಸ್ಥಾನದಲ್ಲಿ, ಪಶ್ಚಿಮ ಬಂಗಾಳದಲ್ಲಿ ಚುನಾವಣ ಎದುರಿಸಿದ ಟಿಎಂಸಿ 147.68 ಕೋಟಿ ರೂ. ಖರ್ಚು ಮಾಡಿದ್ದು, 6ನೇ ಸ್ಥಾನದಲ್ಲಿದೆ.
ಮಾಧ್ಯಮ ಜಾಹೀರಾತಿನ ಮೇಲಿನ ವೆಚ್ಚ
ಚುನಾವಣೆಯ ಸಮಯದಲ್ಲಿ ಎಲ್ಲ 22 ರಾಜಕೀಯ ಪಕ್ಷಗಳು ತಮ್ಮ ಖರ್ಚಿನಲ್ಲಿ ಹೆಚ್ಚು ಮೊತ್ತವನ್ನು ಮಾಧ್ಯಮ ಜಾಹೀರಾತುಗಳಿಗೆ ಬಳಸಿವೆ. ಕೇಬಲ್ ಮತ್ತು ಸ್ಯಾಟಲೈಟ್ ಟಿವಿ ಚಾನೆಲ್‌ಗಳು, ವೆಬ್‌ಸೈಟ್‌ಗಳು ಸೇರಿದಂತೆ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಜಾಹೀರಾತು ನೀಡಲು ಮತ್ತು ಮತದಾರರನ್ನು ತಲುಪುವ ಉದ್ದೇಶಕ್ಕಾಗಿ ಬೃಹತ್ SMS ಕಳಿಸಲು ಎಲ್ಲ ಪಕ್ಷಗಳು ಒಟ್ಟು 992.48 ಕೋಟಿ ರೂ. ಖರ್ಚು ಮಾಡಿವೆ.
ಆದಾಗ್ಯೂ, ”ಗೋವಾ, ಜಾರ್ಖಂಡ್, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಜಾಹೀರಾತಿಗಾಗಿ ಬಿಜೆಪಿ ತನ್ನ ಖರ್ಚು ವರದಿಯ ‘ಬಿ’-ಭಾಗದಲ್ಲಿ ನೀಡಿರುವ ಅಂಕಿಅಂಶಗಳ ಚಿತ್ರವನ್ನು ಚುನಾವಣಾ ಆಯೋಗವು ಪ್ರಕಟಿಸಿದೆ. ಸ್ಕ್ಯಾನ್ ಮಾಡಿದ ಚಿತ್ರಗಳು ಸ್ಪಷ್ಟವಾಗಿಲ್ಲದ ಕಾರಣ, ಜಾಹೀರಾತು ಮೇಲಿನ ಬಿಜೆಪಿ ಖರ್ಚುಇನ್ನೂ ಹೆಚ್ಚಿರಬಹುದು” ಎಂದು ಅಧ್ಯಯನವು ತಿಳಿಸಿದೆ.
ಬಿಜೆಪಿ ತನ್ನ ಒಟ್ಟು ಖರ್ಚಿನಲ್ಲಿ ಕನಿಷ್ಠ 684.57 ಕೋಟಿ ರೂ.ಗಳನ್ನು ಮಾಧ್ಯಮ ಜಾಹೀರಾತಿಗಾಗಿ ಖರ್ಚು ಮಾಡಿದೆ. ತನ್ನ ಖರ್ಚು ವರದಿಯ ‘ಸಿ’-ಭಾಗದಲ್ಲಿ, ಮಾಧ್ಯಮ ಜಾಹೀರಾತಿಗೆ ಕೇವಲ 58.45 ಲಕ್ಷ ರೂ. ಖರ್ಚು ಮಾಡಿರುವುದಾಗಿ ಬಿಜೆಪಿ ಹೇಳಿಕೊಂಡಿದೆ. ಆದರೆ, ವರದಿಯ ‘ಎ’-ಭಾಗದಲ್ಲಿ ಪಕ್ಷದ ಪ್ರಧಾನ ಕಚೇರಿಯಿಂದ ಮಾಡಲಾದ ಮಾಧ್ಯಮ ಜಾಹೀರಾತು ವೆಚ್ಚವು 611.50 ಕೋಟಿ ರೂ.ಗಳಾಗಿವೆ ಎಂದು ಅಧ್ಯಯನ ಹೇಳಿದೆ.
ಈ ವರದಿ ಓದಿದ್ದೀರಾ?: ಧರ್ಮಾಧಾರಿತ ಮೀಸಲಾತಿ | ಅವರು ಸುಳ್ಳು ಹೇಳ್ತಾನೇ ಇರ್ತರೆ, ನೀವು ಸತ್ಯ ಹೇಳ್ತಾನೇ ಇರ್ಬೇಕು!
”ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಜೆಪಿ ಭರ್ತಿ ಮಾಡಿದ ‘ಬಿ’-ಭಾಗದಲ್ಲಿ ಉಲ್ಲೇಖಿಸಲಾದ ಮಾಧ್ಯಮ ಜಾಹೀರಾತು ವೆಚ್ಚಗಳನ್ನು ಒಟ್ಟುಗೂಡಿಸಲಾಗಿದ್ದು, ಜಾಹೀರಾತಿಗಾಗಿನ ಬಿಜೆಪಿಯ ಒಟ್ಟು ಮೊತ್ತ 684.57 ಕೋಟಿ ರೂ.ಗಳಾಗಿವೆ” ಎಂದು ತಿಳಿಸಿದೆ.
ಬಿಜೆಪಿ ನಂತರದ ಸ್ಥಾನದಲ್ಲಿ ವೈಎಸ್‌ಆರ್‌ಸಿಪಿ ಇದೆ. ಈ ಪಕ್ಷವು ಮಾಧ್ಯಮ ಜಾಹೀರಾತಿಗಾಗಿ 87.36 ಕೋಟಿ ರೂ. ಖರ್ಚು ಮಾಡಿದೆ. ನಂತರ ಸ್ಥಾನದಲ್ಲಿ, ಡಿಎಂಕೆ 73.75 ಕೋಟಿ ರೂ., ಬಿಜೆಡಿ 47.14 ಕೋಟಿ ರೂ. ಹಾಗೂ ಟಿಎಂಸಿ 36.30 ಕೋಟಿ ರೂ. ಖರ್ಚು ಮಾಡಿದೆ. ಕಾಂಗ್ರೆಸ್ ದೇಶಾದ್ಯಂತ ಜಾಹೀರಾತಿಗಾಗಿ ಕೇವಲ 12.09 ಕೋಟಿ ರೂ. ಖರ್ಚು ಮಾಡಿರುವುದಾಗಿ ತಿಳಿಸಿದೆ.
ಸಾಮಾಜಿಕ ಮಾಧ್ಯಮ ವೆಚ್ಚದಲ್ಲಿ ಬಿಜೆಡಿ ಅಗ್ರಸ್ಥಾನ
ಸಾಮಾಜಿಕ ಮಾಧ್ಯಮದಲ್ಲಿನ ಪ್ರಚಾರಕ್ಕಾಗಿ ಒಡಿಶಾದ ಬಿಜೆಡಿ ಹೆಚ್ಚು ಖರ್ಚು ಮಾಡಿದೆ. ಪಕ್ಷವು 83.03 ಕೋಟಿ ರೂ. ಖರ್ಚು ಮಾಡುವ ಮೂಲಕ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಡಿಎಂಕೆ 50.26 ಕೋಟಿ ರೂ., ಕಾಂಗ್ರೆಸ್ 47.69 ಕೋಟಿ ರೂ. ಹಾಗೂ ಜೆಡಿ(ಯು) 7.43 ಕೋಟಿ ರೂ. ಖರ್ಚು ಮಾಡಿದೆ. ಬಿಜೆಪಿ ಐದನೇ ಸ್ತಾನದಲ್ಲಿದ್ದು, 6.94 ಕೋಟಿ ರೂ. ವೆಚ್ಚ ಮಾಡಿದೆ.
ಸ್ಟಾರ್ ಪ್ರಚಾರಕರು ಮತ್ತು ನಾಯಕರ ಪ್ರಯಾಣ ಖರ್ಚು
ಮಾಧ್ಯಮ ಜಾಹೀರಾತುಗಳನ್ನು ಹೊರತುಪಡಿಸಿ ಪಕ್ಷಗಳು ಪ್ರಚಾರಕರ ವೆಚ್ಚಕ್ಕಾಗಿ ಹೆಚ್ಚು ಖರ್ಚು ಮಾಡಿವೆ. ಬಿಜೆಪಿ ತನ್ನ ಸ್ಟಾರ್ ಪ್ರಚಾರಕರ ಪ್ರಯಾಣಕ್ಕಾಗಿ ಕನಿಷ್ಠ 389.24 ಕೋಟಿ ರೂ. ಮತ್ತು ಪಕ್ಷದ ಇತರ ನಾಯಕರ ಪ್ರಯಾಣಕ್ಕಾಗಿ 12.26 ಕೋಟಿ ರೂ. ಖರ್ಚು ಮಾಡಿದೆ. ಆದರೆ, ಈ ವೆಚ್ಚದಲ್ಲಿಯೂ ಗೋವಾ, ಕರ್ನಾಟಕ, ಜಾರ್ಖಂಡ್ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಮಾಡಲಾದ ಖರ್ಚಿನ ಬಗ್ಗೆ ನಿಖರವಾದ ಮಾಹಿತಿಯನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿಲ್ಲ. ಈ ರಾಜ್ಯಗಳಲ್ಲಿನ ಖರ್ಚಿನ ಮಾಹಿತಿ ಅಪೂರ್ಣವಾಗಿವೆ.
ಆದಾಗ್ಯೂ, ”ಈ ಅಪೂರ್ಣ ಅಂಕಿಅಂಶಗಳ ಹೊರತಾಗಿಯೂ, 22 ರಾಜಕೀಯ ಪಕ್ಷಗಳು ಒಟ್ಟಾಗಿ ಘೋಷಿಸಿದ ಸ್ಟಾರ್ ಪ್ರಚಾರಕರ ಪ್ರಯಾಣ ವೆಚ್ಚದಲ್ಲಿ ಬಿಜೆಪಿ 47%ಗಿಂತ ಹೆಚ್ಚು ಪಾಲು ಹೊಂದಿದೆ” ಎಂದು ವರದಿ ಹೇಳಿದೆ.
ಈ ವರದಿ ಓದಿದ್ದೀರಾ?: ‘ಮಹಾತ್ಮ ಗಾಂಧಿ ನೋಟುಗಳಿಗೆ ಬೆಂಕಿ ಬಿದ್ದಿದೆಯೋ ಅಣ್ಣಾ…’
ಬಿಜೆಪಿಯ ಪ್ರಮುಖ ಸ್ಟಾರ್ ಪ್ರಚಾರಕ ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನ ಪ್ರಯಾಣ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಿದೆ ಎಂದು ಭಾವಿಸಲಾಗಿದೆ. ಹೀಗಾಗಿ, ಬಿಜೆಪಿಯ ವೆಚ್ಚದ ಪಟ್ಟಿಯಲ್ಲಿ ಮೋದಿ ಹೆಸರು ಇಲ್ಲ ಎಂದು ಅಧ್ಯಯನವು ಹೇಳಿದೆ.
ಬಿಜೆಪಿಯ ನಂತರ, ವೈಎಸ್‌ಆರ್‌ಸಿಪಿ ತನ್ನ ಸ್ಟಾರ್ ಪ್ರಚಾರಕರ ಪ್ರಯಾಣಕ್ಕಾಗಿ ಹೆಚ್ಚು ಖರ್ಚು ಮಾಡಿದೆ. ವೈಎಸ್‌ಆರ್‌ಸಿಪಿ 241.42 ಕೋಟಿ ರೂ. ಖರ್ಚು ಮಾಡಿದೆ. ನಂತರ ಸ್ಥಾನಗಳಲ್ಲಿ ಬಿಎಸ್‌ಪಿ 58.61 ಕೋಟಿ ರೂ., ಟಿಎಂಸಿ 46.25 ಕೋಟಿ ರೂ. ಹಾಗೂ ಬಿಜೆಡಿ 25.46 ಕೋಟಿ ರೂ. ಖರ್ಚು ಮಾಡಿದೆ ಎಂದು ವರದಿಯಾಗಿದೆ.
ಚುನಾವಣಾ ಖರ್ಚನ್ನು ಘೋಷಿಸಿರುವ 22 ಪಕ್ಷಗಳು
ಆಮ್ ಆದ್ಮಿ ಪಕ್ಷ (ಎಎಪಿ), ಅಸೋಮ್ ಗಣ ಪರಿಷತ್ (ಎಜಿಪಿ), ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ), ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್-ಮುಸ್ಲಿಮೀನ್ (ಎಐಎಂಐಎಂ), ತೃಣಮೂಲ ಕಾಂಗ್ರೆಸ್ (ಟಿಎಂಸಿ), ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಡಿಯುಡಿಎಫ್), ಬಿಜು ಜನತಾ ದಳ (ಬಿಜೆಡಿ), ಭಾರತೀಯ ಜನತಾ ಪಕ್ಷ (ಬಿಜೆಪಿ), ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ – ಮಾರ್ಕ್ಸ್‌ವಾದಿ (ಸಿಪಿಐಎಂ), ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ), ಜಾತ್ಯತೀತ ಜನತಾ ದಳ (ಜೆಡಿಎಸ್), ಜನತಾ ದಳ – ಯುನೈಟೆಡ್ (ಜೆಡಿಯು), ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ-ರಾಮ್ ಪಾಸ್ವಾನ್ ಬಣ), ರಾಷ್ಟ್ರೀಯ ಜನತಾ ದಳ (RJD), ಸಮಾಜವಾದಿ ಪಕ್ಷ (SP), ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (SDF), ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (SKM), ತೆಲುಗು ದೇಶಂ ಪಕ್ಷ (TDP), ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್ಆರ್ಸಿಪಿ).