ಕುನಾಲ್ ಕಾಮ್ರಾ ಹಾಸ್ಯ ಹಚ್ಚಿದ ಕಿಚ್ಚು: ಪ್ರಭುತ್ವಕ್ಕೆ ಎದೆಯೊಡ್ಡಿದ್ದು ಇದೇ ಮೊದಲೇನೂ ಅಲ್ಲ

Date:

Advertisements
ಕುನಾಲ್ ಕಾಮ್ರಾ ಸೆಲೆಬ್ರಿಟಿಯಾಗಿ ವ್ಯವಸ್ಥೆಯ ಅವ್ಯವಸ್ಥೆಗಳನ್ನು ಟೀಕಿಸುವ ಮೂಲಕ ಒಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾವು-ನೀವು ತಪ್ಪು ಮಾಡಿದ ಸರ್ಕಾರ, ಜನಪ್ರತಿನಿಧಿಗಳನ್ನು ಟೀಕಿಸುವ ಕೆಲಸ ಮಾಡಬೇಕಿದೆ...

”ನನಗೆ ದೇಶದ ಸಂವಿಧಾನದ ಮೇಲೆ ನಂಬಿಕೆ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನಗಳಿಗೆ ಸೋಲಾಗಲಿದೆ. ನ್ಯಾಯಾಲಯದ ಆದೇಶವನ್ನು ಹೊರತುಪಡಿಸಿ ಬೇರೆ ಯಾವುದೇ ಒತ್ತಡಕ್ಕೆ ಮಣಿದು ನಾನು ನನ್ನ ಹೇಳಿಕೆಯನ್ನು ಹಿಂಪಡೆದುಕೊಳ್ಳುವುದಿಲ್ಲ. ಅಲ್ಲದೇ ನನ್ನ ಹೇಳಿಕೆಗೆ ಕ್ಷಮೆಯನ್ನೂ ಕೋರುವುದಿಲ್ಲ. ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಗ್ಗೆ ನೀಡಿದ ಹೇಳಿಕೆಗೆ ಯಾವುದೇ ವಿಷಾದವಿಲ್ಲ” ಎಂದು ಪ್ರಭುತ್ವದ ವಿರುದ್ಧ ಯಾವುದೇ ಅಂಜಿಕೆಯಿಲ್ಲದೆ ಎದೆಯುಬ್ಬಿಸಿ ಹೇಳುತ್ತಾರೆ ಸ್ಟ್ಯಾಂಡ್‌ಪ್‌ ಹಾಸ್ಯ ಕಲಾವಿದ ಕುನಾಲ್‌ ಕಾಮ್ರಾ. ಸ್ಟಾರ್‌ ನಟರು, ಸೆಲಬ್ರಿಟಿಗಳು ತಾವಾಯಿತು, ತಮ್ಮ ಹಣ ಸಂಪಾದನೆಯಾಯಿತು ಎನ್ನುತ್ತಾ ದೇಶದ ಸಮಸ್ಯೆಗಳ ಉಸಾಬರಿ ತಮಗ್ಯಾಕೆ ಎಂದು ತಟಸ್ಥವಾಗಿದ್ದು ಬಿಡುವ ಕಾಲದಲ್ಲಿ ಕುನಾಲ್‌ ಕಾಮ್ರಾ ಅಧಿಕಾರಸ್ಥರ ವಿರುದ್ಧ ನೀವು ಮಾಡುತ್ತಿರುವುದು ತಪ್ಪು ಎಂದು ಬಹಿರಂಗವಾಗಿ ಹೇಳುತ್ತಾರೆ.

ತಮ್ಮ ಇತ್ತೀಚಿನ ಸ್ಟ್ಯಾಂಡ್‌ಅಪ್‌ ಹಾಸ್ಯ ಕಾರ್ಯಕ್ರಮದಲ್ಲಿ ಕುನಾಲ್‌ ಕಾಮ್ರಾ ಅವರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್‌ ಶಿಂದೆ ಅವರನ್ನು ಉಲ್ಲೇಖಿಸಿ, “ಗದ್ದಾರ್”(ದ್ರೋಹಿ) ಎಂದು ಕರೆದಿದ್ದರು. ಕಾಮ್ರಾ ಹೇಳಿಕೆ ಮಹಾರಾಷ್ಟ್ರದ ಏಕನಾಥ್‌ ಶಿಂದೆ ಒಳಗೊಂಡ ಸರ್ಕಾರಕ್ಕೆ ಸಹಿಸಲಾಗಲಿಲ್ಲ. ಅಷ್ಟೇ ಅಲ್ಲ, ಶಿಂದೆ ಬೆಂಬಲಿಗರು ಕಾರ್ಯಕ್ರಮ ಆಯೋಜಸಿದ್ದ ಹ್ಯಾಬಿಟ್ಯಾಟ್‌ ಸ್ಟುಡಿಯೋವನ್ನು ಧ್ವಂಸಗೊಳಿಸಿದ್ದರು. ಆದರೆ ಇದ್ಯಾವುದಕ್ಕೂ ಕಾಮ್ರಾ ಜಗ್ಗಿಲ್ಲ. ತಾವು ಯಾವುದೇ ಕಾರಣಕ್ಕೂ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರೆ. ವ್ಯವಸ್ಥೆ ಕೂಡ ತನ್ನ ತಪ್ಪನ್ನು ಒಪ್ಪಿಕೊಳ್ಳದೆ ಸತ್ಯ ಹೇಳಿದವರನ್ನೆ ಬಾಯಿ ಮುಚ್ಚಿಸಲು ಹೊರಟಿದೆ. ಮಹಾರಾಷ್ಟ್ರ ಸರ್ಕಾರದ ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಕೂಡ ಕುನಾಲ್‌ ಕಾಮ್ರಾರ ಹ್ಯಾಬಿಟ್ಯಾಟ್‌ ಸ್ಟುಡಿಯೋ ಕಟ್ಟಡವನ್ನು ನೆಲಸಮ ಮಾಡಿದ್ದು, ಯಾವ ಕಾರಣಕ್ಕೆ ಕಟ್ಟಡ ನೆಲಸಮ ಮಾಡಲಾಗಿದೆ ಎಂಬುದಕ್ಕೆ ಸ್ಪಷ್ಟೀಕರಣ ನೀಡಿಲ್ಲ.

ಪ್ರಭುತ್ವದ ನೀಚತನಗಳ ವಿರುದ್ಧ ಹಾಸ್ಯದ ಮೂಲಕ ಪ್ರತಿರೋಧವೊಡ್ಡಿದ ಭಾರತೀಯ ಹಾಸ್ಯ ಕಲಾವಿದರಲ್ಲಿ ಕುನಾಲ್ ಕಾಮ್ರಾ ಪ್ರಮುಖ ಸಾಲಿನಲ್ಲಿ ನಿಲ್ಲುತ್ತಾರೆ. ವಿಪಕ್ಷಗಳು ಮಾಡದ ಹಲವು ಕೆಲಸಗಳನ್ನು ಏಕಾಂಗಿಯಾಗಿ ಮಾಡಿ ತೋರಿಸುತ್ತಾರೆ. ಸಾಮಾನ್ಯರಿಗೆ ತಮ್ಮ ಭಾವನೆಗಳನ್ನು, ತಮ್ಮ ನೋವನ್ನು ಯಾವುದೇ ಭಯವಿಲ್ಲದೆ ಅತ್ಯದ್ಭುತವಾಗಿ ವ್ಯಕ್ತಪಡಿಸುವ ಒಬ್ಬ ಕಲಾವಿದ ಇದ್ದಾನೆ ಎಂಬ ಸಮಾಧಾನ, ಅವರ ಕಾರ್ಯಕ್ರಮಗಳಲ್ಲಿ ಕಾಣಸಿಗುತ್ತದೆ. ಅವರ ಇತ್ತೀಚಿನ ಹೊಸ ವಿಡಿಯೋಗೆ ಬರುತ್ತಿರುವ ಪ್ರತಿಕ್ರಿಯೆ ನೋಡಿದರೆ, ಅವರ ಹಾಸ್ಯವನ್ನು ಮೆಚ್ಚುವವರು ಎಷ್ಟು ಜನ ಇದ್ದಾರೆ ಎಂಬುದು ತಿಳಿಯುತ್ತದೆ. ಅವರ ವಿಡಿಯೋಗಳ ಪ್ರತಿಕ್ರಿಯೆ ವಿಭಾಗದಲ್ಲಿ ಅವರಿಗೆ ಸಾವಿರಾರು ನಿಂದನೆ, ಬೆದರಿಕೆಗಳು ಬರುತ್ತವೆ. ಆದರೆ ಅದಕ್ಕಿಂತ ಹೆಚ್ಚು ಪ್ರಶಂಸೆ ವ್ಯಕ್ತವಾಗುತ್ತದೆ. ಜನರು ಕೂಡ ಪ್ರೀತಿಯಿಂದ ತಮ್ಮ ಕೈಲಾದಷ್ಟು ಹಣಕಾಸಿನ ನೆರವನ್ನು ಕುನಾಲ್‌ ಅವರಿಗೆ ಮಾಡುತ್ತಿದ್ದಾರೆ.

Advertisements

ಕುನಾಲ್ ಕಾಮ್ರಾ ವ್ಯವಸ್ಥೆಯ ವಿರುದ್ಧ ಸಿಡಿದೆದ್ದಿರುವುದು ಇದು ಮೊದಲೇನಲ್ಲ. 8 ವರ್ಷಗಳ ಹಿಂದೆ 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ‘ಸರಕಾರ ನಾವು ಆಯ್ಕೆ ಮಾಡಿರುವ ಸೇವಾ ಪೂರೈಕೆದಾರ. ನಾವು ಅಧಿಕಾರ ಕೊಟ್ಟಿರುವುದು ನಮ್ಮ ಕೆಲಸ ಮಾಡಿ ಎಂದು. ಅದೇ ನಮಗೂ ಸರಕಾರಕ್ಕೂ ಇರುವ ಸಂಬಂಧ. ಸರಕಾರ ನಡೆಸುವವರು ಸರಿಯಾಗಿ ಕೆಲಸ ಮಾಡಿದರೆ ಸರಿ, ಇಲ್ಲದಿದ್ದರೆ ಅವರನ್ನು ಟೀಕಿಸುವ, ಅವರನ್ನು ತೆಗಳುವ ಹಕ್ಕು ನಮಗಿದೆ’ ಎಂದು ಗುಡುಗಿದ್ದರು. ಯೋಗ ಹಾಗೂ ಭ್ರಷ್ಟಾಚಾರ ವಿರೋಧಿ ಆಂದೋಲನದ ಹೆಸರಲ್ಲಿ ಕೋಟಿಗಟ್ಟಲೆ ಸಂಪಾದಿಸಿದ ಬಾಬಾ ರಾಮ್‌ದೇವ್ ಬಗ್ಗೆ ಏಳೆಂಟು ವರ್ಷಗಳ ಹಿಂದೆಯೇ ಕುನಾಲ್ ಕಾಮ್ರಾ ಹಾಸ್ಯದ ಮೂಲಕ ತಿವಿದಿದ್ದರು. ಕುನಾಲ್ ಅವರಂತೆ ರಾಮ್‌ದೇವ್‌ರನ್ನು ತಮ್ಮ ವಿಭಿನ್ನ ಹಾಸ್ಯದ ಮೂಲಕ ಟೀಕಿಸಿದವರು ಮತ್ತೊಬ್ಬರು ಇಲ್ಲ.

ಈ ಸುದ್ದಿ ಓದಿದ್ದೀರಾ? ಹಣ ಪತ್ತೆ ಹಗರಣ: ನ್ಯಾಯಮೂರ್ತಿ ವರ್ಮಾ ದೈನಂದಿನ ವಿಚಾರಣೆ ಮಾಡುವಂತಿಲ್ಲ, ಆದೇಶ- ತೀರ್ಪು ನೀಡುವಂತಿಲ್ಲ

ಮುಂಬೈನ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದ ಕುನಾಲ್ ಕಾಮ್ರಾ ಓದು ಹೆಚ್ಚು ಮುಂದುವರೆಸಲಿಲ್ಲ. 2ನೇ ವರ್ಷದ ಪದವಿ ಓದುವಾಗಲೇ ವಿದ್ಯಾಭ್ಯಾಸಕ್ಕೆ ನಮಸ್ತೆ ಹೇಳಿ ಸಿನಿಮಾ ನಿರ್ಮಾಣ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. 11 ವರ್ಷಗಳ ಕಾಲ ಕೆಲಸ ನಿರ್ವಹಿಸಿದ ನಂತರ 2013ರಲ್ಲಿ ಕೆಲಸವನ್ನು ಬಿಟ್ಟು ಮುಂಬೈನ ಕ್ಲಬ್‌ವೊಂದರಲ್ಲಿ ಸ್ಟ್ಯಾಂಡಪ್ ಹಾಸ್ಯ ಕಲಾವಿದನಾಗಿ ಸ್ವಂತ ದುಡಿಮೆಯನ್ನು ಶುರು ಮಾಡಿದರು. ಅವರ ಪ್ರಥಮ ಸ್ಟಾಂಡಪ್ ಕಾಮಿಡಿ ವೀಡಿಯೊ ಶೀರ್ಷಿಕೆ ‘ಪೇಟ್ರಿಯಾಟಿಸಂ ಅಂಡ್ ದಿ ಗವರ್ನಮೆಂಟ್’ ಎಂಬುದಾಗಿತ್ತು. ಸಾಮಾನ್ಯವಾಗಿ ಹಾಸ್ಯದ ಕಾರ್ಯಕ್ರಮ ಮಾಡುವವರು ಗಂಭೀರವಾದ ವಿಚಾರಗಳು ಹಾಗೂ ದೇಶದ ವಿಚಾರಗಳನ್ನು ಪ್ರಸ್ತಾಪಿಸುವುದಿಲ್ಲ. ಕೇಂದ್ರ ಸರ್ಕಾರದ ಅವ್ಯವಸ್ಥೆ ಹಾಗೂ ದುರಂತಗಳನ್ನು ಟೀಕಿಸುತ್ತಾ ಹಾಸ್ಯದಲ್ಲಿ ಹೆಸರು ಮಾಡಿದರು ಕುನಾಲ್. ತಮ್ಮ ಹಾಸ್ಯದ ಮೂಲಕ ಮೋದಿ ಸರ್ಕಾರದ ನೋಟು ರದ್ದತಿ, ಉದ್ಯೋಗ, ವಿದೇಶದಿಂದ ಹಣ ತರುವುದು ಮುಂತಾದ ಹಲವಾರು ಸುಳ್ಳುಗಳು, ವೈಫಲ್ಯಗಳನ್ನು ಜನರಿಗೆ ತಿಳಿಸುತ್ತಾ ಹೋದರು.

“ನಾನೇ ಬೇರೆ, ನನ್ನ ಹಾಸ್ಯವೇ ಬೇರೆ. ಇಷ್ಟ ಇದ್ದರೆ ನೋಡಿ, ಇಲ್ಲದಿದ್ದರೆ ಹೊರಡಿ. ನಾನು ವ್ಯವಸ್ಥೆಯ ವಿರುದ್ಧದ ವಿಷಯಗಳ ಬಗ್ಗೆ ಮಾತ್ರ ಕಾಮಿಡಿ ಮಾಡುವುದು” ಎಂದು ತೆಗಳುವವರಿಗೆ ನೇರವಾಗಿ ಹೇಳಿಬಿಡುತ್ತಾರೆ. ವ್ಯವಸ್ಥೆಯ ವಿರುದ್ಧದ ವಿಷಯಗಳನ್ನೆ ಹಾಸ್ಯವನ್ನಾಗಿ ಮಾಡಿಕೊಂಡು ದೇಶದಲ್ಲಿ ಸೂಪರ್‌ ಹಿಟ್‌ ಆದವರು ಕುನಾಲ್ ಕಾಮ್ರಾ. ಎಂಟು ವರ್ಷಗಳ ಹಿಂದೆ ಯಾವ ಧೋರಣೆ ಇಟ್ಟುಕೊಂಡು ಆಳುವ ಸರಕಾರವನ್ನು ಕಾಮಿಡಿ ಮೂಲಕ ತಿವಿಯುತ್ತಿದ್ದರೋ, ಅದೇ ರೀತಿಯಲ್ಲಿ ಇಂದಿಗೂ ಜನರನ್ನು ನಗಿಸುತ್ತಿದ್ದಾರೆ. ಇವರ ಕಾರ್ಯಕ್ರಮಗಳನ್ನು, ವಿಡಿಯೋಗಳನ್ನು ಲಕ್ಷಗಟ್ಟಲೆ ಜನರು ನೋಡುತ್ತಾರೆ. ದೇಶದಲ್ಲಿ ಇವರಿಗೆ ಅಸಂಖ್ಯಾತ ಅಭಿಮಾನಿ ಬಳಗವಿದೆ. ರಾಜಕೀಯವೆಂದರೆ ದೂರ ಹೋಗುವವರ ನಡುವೆ ತಾನು ಹಾಸ್ಯ ಮಾಡುವುದೇ ಸರ್ಕಾರದ ವೈಫಲ್ಯಗಳ ವಿರುದ್ಧ. ನೀವು ನನ್ನ ವಿರುದ್ಧ ಏನು ಬೇಕಾದರೂ ಮಾಡಿಕೊಳ್ಳಿ ಎಂದು ನೇರವಾಗಿ ಸವಾಲೆಸೆಯುತ್ತಾರೆ.

kunal kamra 1

ಕುನಾಲ್ ಕಾಮ್ರಾ ಅವರಿಗೆ ಅಭಿಮಾನಿಗಳ ಜೊತೆಗೆ ಅವಹೇಳನ, ಟ್ರೋಲಿಂಗ್, ಬೆದರಿಕೆ, ಕಾನೂನು ಸವಾಲುಗಳು ಕೂಡ ಲೆಕ್ಕವಿಲ್ಲದಷ್ಟಿವೆ. ಒಮ್ಮೆ ಕುನಾಲ್ ಕಾಮ್ರಾ ಸಲ್ಮಾನ್ ಖಾನ್ ಬಗ್ಗೆ ತಮಾಷೆ ಮಾಡಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು. ವಿಮಾನ ನಿಲ್ದಾಣದಲ್ಲಿ ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿಯನ್ನು ನೇರವಾಗಿ ”ನೀನು ಸ್ಟುಡಿಯೋದಲ್ಲಿ ಬೊಬ್ಬೆ ಹಾಕುವುದನ್ಬು ಬಿಟ್ಟು ನನ್ನ ಜೊತೆ ಈಗ ಚರ್ಚೆ ಮಾಡು” ಎಂದು ಸವಾಲು ಹಾಕಿ ಆರು ತಿಂಗಳು ವಿಮಾನ ಪ್ರಯಾಣದ ನಿಷೇಧಕ್ಕೆ ಒಳಗಾಗಿದ್ದರು. ಬಿಜೆಪಿಯ ಆಪ್ತ, ಓಲಾ ಇಲೆಕ್ಟ್ರಿಕ್ ಸ್ಕೂಟರ್ ಮಾಲೀಕ ಭವಿಶ್ ಅಗರ್ವಾಲ್‌ಗೆ ‘ಎಕ್ಸ್’ನಲ್ಲಿ ಸವಾಲು ಹಾಕಿ “ನೀನು ಮೊದಲು ಸರಿಯಾಗಿ ಸ್ಕೂಟರ್ ತಯಾರಿಸು, ಗ್ರಾಹಕರು ತುಂಬಾ ಸಮಸ್ಯೆಯಲ್ಲಿದ್ದಾರೆ, ಸ್ಕೂಟರ್ ಬೇಡ ಎಂದವರಿಗೆ ಮರುಪಾವತಿ ಮಾಡು” ಎಂದು ಹೇಳಿ ಸುದ್ದಿಯಾಗಿದ್ದರು.

ಸುಪ್ರೀಂ ಕೋರ್ಟ್ ವಿರುದ್ಧವೂ ಕಾಮಿಡಿ

ಕುನಾಲ್ ಸುಪ್ರೀಂ ಕೋರ್ಟ್ ವಿರುದ್ಧವೂ ಹಾಸ್ಯ ಮಾಡಿ ನ್ಯಾಯಾಂಗ ನಿಂದನೆಯ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ”ಸುಪ್ರೀಂ ಕೋರ್ಟ್ ಎಂಬುದು ಬ್ರಾಹ್ಮಣ ಬನಿಯಾ ಕೋರ್ಟ್ ಆಗಿದೆ. ಅಲ್ಲಿ ಯಾರಿಗೂ ನ್ಯಾಯ ಸಿಗುವುದಿಲ್ಲ. ಅದಕ್ಕಿಂತ ಹೆಚ್ಚು ಗೌರವವನ್ನು ನಾನು ಫುಡ್ ಕೋರ್ಟ್‌ಗೆ ಕೊಡುತ್ತೇನೆ” ಎಂದು ಹೇಳಿದ್ದರು. ಇನ್ನೊಂದು ಬಾರಿ ತನ್ನ ಎಕ್ಸ್ ಪೋಸ್ಟ್‌ನಲ್ಲಿ ಅಂದಿನ ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ಎಸ್‌ ಎ ಬೋಬ್ಡೇ ಅವರಿಗೆ ಮಧ್ಯದ ಬೆರಳು ತೋರಿಸಿದ್ದು ಹೆಚ್ಚು ಚರ್ಚೆಯಾಗಿತ್ತು.

ಬಿಜೆಪಿ ಐಟಿ ಸೆಲ್, ವಾಟ್ಸಾಪ್‌ ಯುನಿವರ್ಸಿಟಿ ಹಾಗೂ ಇವುಗಳಿಗೆ ಜೋತು ಬಿದ್ದಿರುವ ನಿವೃತ್ತ ಅಂಕಲ್ ಆಂಟಿಗಳು ಮುಸ್ಲಿಂ ದ್ವೇಷದಿಂದಾಗಿ ಏನೇನು ಅವಾಂತರ ಮಾಡುತ್ತಿದ್ದಾರೆ ಎಂದು ತಮ್ಮ ಕಾಮಿಡಿ ಮೂಲಕವೇ ಲಕ್ಷಾಂತರ ಜನರಿಗೆ ಕುನಾಲ್ ಕಾಮ್ರಾ ತಿಳಿಸಿದ್ದರು. ಒಟ್ಟಿನಲ್ಲಿ ಕುನಾಲ್ ಕಾಮ್ರಾ ಸೆಲೆಬ್ರಿಟಿಯಾಗಿ ವ್ಯವಸ್ಥೆಯ ಅವ್ಯವಸ್ಥೆಗಳನ್ನು ಟೀಕಿಸುವ ಮೂಲಕ ಒಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕುನಾಲ್‌ ಕೆಲಸಗಳನ್ನು ಪ್ರಖ್ಯಾತರು ಎನಿಸಿಕೊಂಡಿರುವ ಉಳಿದವರು ಹೊಗಳಿಕೆಯ ಕಿರೀಟವನ್ನು ತಲೆಯಿಂದ ತೆಗೆದು ತಪ್ಪು ಮಾಡಿದ ಸರ್ಕಾರ, ಜನಪ್ರತಿನಿಧಿಗಳನ್ನು ಟೀಕಿಸುವ ಕೆಲಸ ಮಾಡಬೇಕಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X