ಅರೆಮಲೆನಾಡು, ಅಡಿಕೆ ಸೆರಗು ಎಂದೇ ಹೆಸರಾಗಿರುವ ಹೊಳಲ್ಕೆರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಚಿತ್ರದುರ್ಗ ಜಿಲ್ಲಾ ಘಟಕದ ವತಿಯಿಂದ ಹೊಳಲ್ಕೆರೆಯ ಸಂವಿಧಾನ ಸೌಧದಲ್ಲಿ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾ.27 ಮತ್ತು 28 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಮತ್ತು ಹೊಳಲ್ಕೆರೆ ಕಸಾಪದಿಂದ ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಹೊಳಲ್ಕೆರೆ ನಗರ ಹಳದಿ ಕೆಂಪು ಬಣ್ಣದ ಬಾವುಟಗಳಿಂದ ರಂಗೇರಿದೆ.

ಮಾ.27ರ ಬೆಳಿಗ್ಗೆ 10ಕ್ಕೆ “ಚಿತ್ರದುರ್ಗ ರಸ್ತೆಯ ಟೋಲ್‌ಗೇಟ್‌ನಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ಉದ್ಘಾಟಿಸಲಿದ್ದಾರೆ. ಶ್ರೀ ರಾಘವೇಂದ್ರಸ್ವಾಮಿ ವೇದಿಕೆ, ಡಾ.ಡಿ.ಎಂ.ನಂಜುಂಡಪ್ಪ ಸಭಾಂಗಣದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ರಾಷ್ಟ್ರಧ್ವಜಾರೋಹಣವನ್ನು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಪರಿಷತ್ ಧ್ವಜವನ್ನು ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ನಾಡಧ್ವಜವನ್ನು ತಾಲೂಕು ಅಧ್ಯಕ್ಷ ಎನ್.ಶಿವಮೂರ್ತಿ ಆರೋಹಣ ಮಾಡಲಿದ್ದಾರೆ.
ಪುರಸಭೆ ಅಧ್ಯಕ್ಷ ಜಯಸಿಂಹ ಖಾಟ್ರೋತ್ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಪುರಸಭೆ ಉಪಾಧ್ಯಕ್ಷೆ ಎಚ್.ಆರ್.ನಾಗರತ್ನ ವೇದಮೂರ್ತಿ, ಮುಖ್ಯಾಧಿಕಾರಿ ರೇಣುಕಾ ಎಸ್.ದೇಸಾಯಿ, ತಹಶೀಲ್ದಾರ್ ಬೀಬಿ ಫಾತಿಮಾ, ಇಓ ಪಿ.ವಿಶ್ವನಾಥ್, ಬಿಇಓ ಎಚ್.ಶ್ರೀನಿವಾಸ್, ಸಿಪಿಐ ಎಂ.ಡಿ.ಚಿಕ್ಕಣ್ಣನವರ್ ಇತರರು ಭಾಗವಹಿಸುವರು.
ವೇದಿಕೆಯನ್ನು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಉದ್ಘಾಟಿಸಲಿದ್ದು, ಮುಖ್ಯಧ್ವಾರವನ್ನು ಜಿಪಂ ಸಿಇಓ ಎಸ್.ಜೆ.ಸೋಮಶೇಖರ್, ವಾಣಿಜ್ಯ ಮಳಿಗೆಗಳನ್ನು ಉಪವಿಭಾಗಾಧಿಕಾರಿ ಮಹಿಬೂಬ್ ಜಿಲಾನ್ ಉದ್ಘಾಟಿಸುವರು. ಬಾಲೇಹೊಸೂರು ಭಾವೈಕ್ಯತಾ ಪೀಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಪಾಂಡೋಮಟ್ಟಿ ಡಾ.ಗುರುಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟಿಸುವರು. ಶಾಸಕ ಎಂ.ಚಂದ್ರಪ್ಪ ಅಧ್ಯಕ್ಷತೆ ವಹಿಸುವರು. ಸಂಸದ ಗೋವಿಂದ ಕಾರಜೋಳ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಎಂಎಲ್ಸಿ ಕೆ.ಎಸ್.ನವೀನ್ ಪುಸ್ತಕ ಮಳಿಗೆ ಉದ್ಘಾಟಿಸಲಿದ್ದಾರೆ. ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಷಿ ಪುಸ್ತಕಗಳ ಲೋಕಾರ್ಪಣೆ, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಸಮ್ಮೇಳನಾಧ್ಯಕ್ಷರ ಭಾಷಣ ಪ್ರತಿ ಬಿಡುಗಡೆ ಮಾಡಲಿದ್ದು, ಪ್ರೊ.ಜಿ.ಪರಮೇಶ್ವರಪ್ಪ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಲಿದ್ದಾರೆ.
ಮಧ್ಯಾಹ್ನದ “ಮಾತು, ಮಂಥನದಲ್ಲಿ, ಸಾಹಿತ್ಯ ಮತ್ತು ವೈವಿಧ್ಯತೆ” ಗೋಷ್ಠಿಯ ಸಾನ್ನಿಧ್ಯವನ್ನು ಶ್ರೀ ಶಾಂತವೀರ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ವಹಿಸುವರು. ಜಾನಪದ ವಿದ್ವಾಂಸ ಡಾ.ಮೈಲನಹಳ್ಳಿ ರೇವಣ್ಣ ‘ಕನ್ನಡ ಸಾಹಿತ್ಯ ಪ್ರಸ್ತುತ ಕಥನ ಕ್ರಮಗಳು’ ವಿಷಯ ಮಂಡನೆ ಮಾಡುವರು. ಹಿರಿಯೂರು ವಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಎನ್.ಮಹೇಶ್ ವಿಷಯ ಮಂಡನೆ, ‘ವಚನ ಸಾಹಿತ್ಯ ಕಲ್ಯಾಣ ಕಾಲದ ಶರಣೆಯರು’ ಗೋಷ್ಠಿಯಲ್ಲಿ ಸಾಹಿತಿ ಪ್ರೊ.ಎಚ್.ಲಿಂಗಪ್ಪ ವಿಷಯ ಮಂಡನೆ ಮಾಡುವರು.

‘ಕನ್ನಡ ಅಸ್ಮಿತೆ ಮತ್ತು ಸ್ತ್ರೀ ಸಮಾನತೆ’ ಗೋಷ್ಠಿಯಲ್ಲಿ ಹೊಳಲ್ಕೆರೆ ಬ್ರಹ್ಮಕುಮಾರಿ ಡಾ.ಸುಮಿತ್ರಕ್ಕ ಸಾನ್ನಿಧ್ಯ ವಹಿಸುವರು. ತಹಶೀಲ್ದಾರ್ ಬೀಬಿ ಫಾತಿಮಾ ಅಧ್ಯಕ್ಷತೆ ವಹಿಸುವರು. ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಮಾನತೆ ವಿಷಯದ ಬಗ್ಗೆ ಶಿವಮೊಗ್ಗದ ಪ್ರಾಧ್ಯಾಪಕಿ ಡಾ.ಪ್ರೇಮಾ, “ಕರ್ನಾಟಕ ಏಕೀಕರಣ ಚಳುವಳಿ ನಡೆದು ಬಂದ ಹಾದಿ” ಕುರಿತು ವಿಷಯದ ಕುರಿತು ಜಗಳೂರು ಸರ್ಕಾರಿ ಕಾಲೇಜು ಉಪನ್ಯಾಸಕಿ ಆರ್.ರಾಣಿ ಮಂಡನೆ
ಮಾಡುವರು. ಇದೇ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಜಾನಪದ ಗಾಯಕ ಎನ್.ಮೋಹನ್‌ಕುಮಾರ್ ಗಾಯನ ಮಾಡುವರು.
ಮಾ.28 ರಂದು ಸಂಕೀರ್ಣ-ಶಿಕ್ಷಣ, ಸಮಾನತೆ, ಒಳಮೀಸಲಾತಿ, ಕೃಷಿ ಕ್ಷೇತ್ರದ ಸಮಸ್ಯೆಗಳ ಕುರಿತು ಗೋಷ್ಠಿಗಳು ನಡೆಯುವವು. ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಡಾ.ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಆಹಾರ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಕಾ.ರಾಮೇಶ್ವರಪ್ಪ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಉಪಸ್ಥಿತಿ ವಹಿಸುವರು.
“ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ಸವಾಲುಗಳ” ವಿಷಯ ಕುರಿತು ಮಾಜಿ ಶಾಸಕ ವೈಎಸ್‌ವಿ ದತ್ತಾ “ಒಳಮೀಸಲಾತಿ” ಕುರಿತು ಚಿಂತಕ ಕೋಡಿಹಳ್ಳಿ ಸಂತೋಷ್ ವಿಷಯ ಮಂಡನೆ ಮಾಡಲಿದ್ದಾರೆ. ಜಿಲ್ಲೆಯ ಕೃಷಿ ಕ್ಷೇತ್ರದ ಸಮಸ್ಯೆಗಳ ಕುರಿತು ರೈತ ಮುಖಂಡ ಕೆ.ಸಿ.ಹೊರಕೇರಪ್ಪ ಮಾತನಾಡಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ನಡೆಯುವ ಕವಿಗೋಷ್ಠಿಯಲ್ಲಿ ವನಕಲ್ಲು ಸಂಸ್ಥಾನದ ಬಸವರಮಾನಂದ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಾಹಿತಿ ಪರಮೇಶ್ವರಪ್ಪ ಕುದುರಿ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 2 ಗಂಟೆಗೆ ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ ನಡೆಯಲಿದ್ದು, ಶ್ರೀ ಈಶ್ವರನಾಂದಪುರಿ ಸ್ವಾಮೀಜಿ, ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಡಾ.ಬಸವ ಮಾಚಿದೇವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಸಂವಾದದಲ್ಲಿ ನಿವೃತ್ತ ಪ್ರಾಚಾರ್ಯರಾದ ಜೆ.ಯಾದವರೆಡ್ಡಿ, ಸಂಗೇನಹಳ್ಳಿ ಅಶೋಕ್ ಕುಮಾರ್, ಡಾ.ಎಚ್.ಎಲ್.ಪ್ರವೀಣ್‌ಕುಮಾರ್, ಶಿಕ್ಷಕಿ ಗೀತಾ ಭರಮಸಾಗರ, ನಿವೃತ್ತ ಪ್ರಾಧ್ಯಾಪಕ ಬಿ.ಎಂ.ಲಕ್ಷ್ಮೀನಾರಾಯಣ ಭಾಗವಹಿಸುವರು.

ಮಧ್ಯಾಹ್ನ 3 ಗಂಟೆಗೆ ಬಹಿರಂಗ ಅಧಿವೇಶನ, ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಡಾ.ಮೀರಾಸಾಬಿಹಳ್ಳಿ ಶಿವಣ್ಣ ಸಮಾರೋಪ ಭಾಷಣ ಮಾಡುವರು. ಮಾಜಿ ಶಾಸಕರಾದ ಎ.ವಿ.ಉಮಾಪತಿ, ಪಿ.ರಮೇಶ್, ಎಂ.ಬಿ.ತಿಪ್ಪೇರುದ್ರಪ್ಪ, ಜಿ.ಸಿ.ಮಂಜುನಾಥ್, ಯು.ಎಚ್.ತಿಮ್ಮಣ್ಣ ಉಪಸ್ಥಿತಿ ಇರಲಿದೆ.
ಸರ್ಕಾರದ ಕೆಲವು ಇಲಾಖೆಗಳ ನೌಕರರು ಮತ್ತು ಶಿಕ್ಷಣ ಇಲಾಖೆ ನೌಕರರಿಗೆ ಒಡಿಡಿ ಸೌಲಭ್ಯ ನೀಡಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದರೆ ಹಾಜರಾತಿ ಸಿಗಲಿದೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಖಾಸಗಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಆಗ್ರಹ.
ಆದರೆ ದಿನಾಂಕ ಮೂಂದೂಡಿ ಮಾರ್ಚ್ 27,28ಕ್ಕೆ ನಿಗದಿಪಡಿಸಿದ್ದರ ಬಗ್ಗೆ ಕೆಲ ಆಕ್ಷೇಪಗಳಿದ್ದು, ಬಹುತೇಕ ಶಾಲಾ ಕಾಲೇಜು ತರಗತಿಗಳ ಪರೀಕ್ಷೆಯ ಸಮಯವಾಗಿರುವುದರಿಂದ ಈ ಸಮಯದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತದೆ. ಪರೀಕ್ಷೆ ಸಮಯದಲ್ಲಿ ಆಯೋಜನೆ ಮಾಡಿರುವುದರಿಂದ ಸಾಹಿತ್ಯ ಸಮ್ಮೇಳನವನ್ನು ಕಣ್ತುಂಬಿಕೊಳ್ಳಬೇಕಾಗಿದ್ದ ವಿದ್ಯಾರ್ಥಿಗಳು ಹಾಜರಾಗದೆ ಜಿಲ್ಲೆಯ ಕನ್ನಡ ನುಡಿ ಹಬ್ಬದಿಂದ ವಂಚಿತಲಾಗಲಿದ್ದಾರೆ ಎನ್ನುವ ಅಪಸ್ವರ ಕೇಳಿ ಬರುತ್ತಿದೆ.
ಅಲ್ಲದೆ ಶಿಕ್ಷಕರುಗಳು ಕೂಡ ಮೌಲ್ಯಮಾಪನ, ಪರೀಕ್ಷೆ ಇನ್ನಿತರ ಕಾರ್ಯಗಳಲ್ಲಿ ತೊಡಗಿಕೊಳ್ಳದೆ ಸಮ್ಮೇಳನದಲ್ಲಿ ಭಾಗವಹಿಸಲು ಸಾಧ್ಯವೇ? ಎನ್ನುವ ಪ್ರಶ್ನೆ ಸಾಹಿತ್ಯಿಕ ವಲಯದಿಂದಲೇ ಕೇಳಿಬರುತ್ತಿದೆ.
ಅಲ್ಲದೆ ಚಿತ್ರದುರ್ಗದ ಪಾಳೆಗಾರರ ವಂಶಸ್ಥ ಗುತ್ಯೆಪ್ಪನಾಯಕ ಪ್ರತಿಷ್ಠಾಪಿಸಿದ ಬೃಹತ್ ಗಣಪತಿ ವಿಗ್ರಹ, ಒಂಟಿ ಕಾಲು ಮಠ ಸೇರಿದಂತೆ ತಾಲೂಕಿನಲ್ಲಿ ವಿವಿಧ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳಿದ್ದು, ಅವುಗಳನ್ನು ಸಮ್ಮೇಳನಕ್ಕೆ ಆಗಮಿಸುವವರಿಗೆ ಪರಿಚಯಿಸುವ ಕಾರ್ಯವಾಗಬೇಕು ಎನ್ನುವ ಸಲಹೆ ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಏನೇ ಇದ್ದರೂ ಹಲವು ವರ್ಷಗಳ ನಂತರ ಎರಡನೇ ಬಾರಿಗೆ ಮತ್ತೆ ಹೊಳಲ್ಕೆರೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿದ್ದು ತಾಲೂಕಿನ ಜನತೆ ಸಾಹಿತ್ಯಾಸಕ್ತರೂ ಸೇರಿದಂತೆ ಜಿಲ್ಲೆಯ ಎಲ್ಲಾ ಜನರು ಸಮ್ಮೇಳನದಲ್ಲಿ ಭಾಗವಹಿಸಿ ವೈಚಾರಿಕತೆಯ ವಿಚಾರಗಳು ಎಲ್ಲರಿಗೂ ದೊರೆಯಲಿ. ಆ ಬಗ್ಗೆ ಚರ್ಚೆಗಳನ್ನು ನಡೆಸುವ ಮೂಲಕ ಯಶಸ್ವಿಗೊಳಿಸಲಿ ಎನ್ನುವುದೇ ಎಲ್ಲರ ಆಶಯ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು