ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಐಪಿಎಲ್ 2025 ರ ಐದನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 11 ರನ್ಗಳ ರೋಚಕ ಗೆಲುವು ಸಾಧಿಸಿತು.
244 ರನ್ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ 235 ರನ್ಗಳನ್ನು ಗಳಿಸಲು ಮಾತ್ರ ಶಕ್ತವಾಯಿತು. ಪಂಜಾಬ್ ಪರ ಆರಂಭಿಕ ಬ್ಯಾಟರ್ ಪ್ರಿಯಾಂಶ್ ಆರ್ಯ 47 ರನ್ ಗಳಿಸಿ ಅಮೋಘ ಪ್ರದರ್ಶನ ನೀಡಿದರು. ಶಶಾಂಕ್ ಸಿಂಗ್ ಕೂಡ 16 ಎಸೆತಗಳಲ್ಲಿ 44 ರನ್ ಗಳಿಸಿದರು. ಮತ್ತೊಂದೆಡೆ ನಾಯಕ ಶ್ರೇಯಸ್ ಅಯ್ಯರ್ ಅವರ ಅಜೇಯ 97 ರನ್ಗಳ ಇನ್ಸಿಂಗ್ಸ್ ಆಡಿದರು. ಕೊನೆಯ ಓವರ್ನಲ್ಲಿ ತಂಡದ ಹೆಚ್ಚು ರನ್ ಗಳಿಕೆಗಾಗಿ ಶಶಾಂಕ್ಗೆ ಬ್ಯಾಟಿಂಗ್ ಬಿಟ್ಟುಕೊಟ್ಟ ಶ್ರೇಯಸ್ ಅಯ್ಯರ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಶ್ರೇಯಸ್ 97 ರನ್ ಗಳಿಸಿದ ಸಂದರ್ಭದಲ್ಲಿ ಚೊಚ್ಚಲ ಶತಕಕ್ಕಾಗಿ ಹಂಬಲಿಸಲಿಲ್ಲ.”ನನ್ನ 100 ರನ್ ಬಗ್ಗೆ ಯೋಚಿಸಬೇಡಿ,ನೀನು ಸಾಧ್ಯವಾದಷ್ಟು ಬೌಂಡರಿ, ಸಿಕ್ಸರ್ ಬಾರಿಸು’ ಎಂದು ಸ್ಟ್ರೈಕರ್ ಶಶಾಂಕ್ ಸಿಂಗ್ ಅವರನ್ನು ಹುರುದುಂಬಿಸಿದರು.
ಪಂಜಾಬ್ ನೀಡಿದ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ಉತ್ತಮ ಆರಂಭ ಕಂಡಿತು. ಸಾಯಿ ಸುದರ್ಶನ್ ಮತ್ತು ನಾಯಕ ಶುಭಮನ್ ಗಿಲ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡುವ ಮೂಲಕ ಮೊದಲ ವಿಕೆಟ್ಗೆ 35 ಎಸೆತಗಳಲ್ಲಿ 61 ರನ್ ಗಳಿಸಿದರು. ಶುಭಮನ್ ಗಿಲ್ 14 ಎಸೆತಗಳಲ್ಲಿ 33 ರನ್ ಸಿಡಿಸಿ ಔಟ್ ಆದರು. ನಂತರ ಸಾಯಿ ಸುದರ್ಶನ್ ಜೊತೆ ಒಂದಾದ ಜೋಸ್ ಬಟ್ಲರ್ ತಂಡಕ್ಕೆ ಆಸರೆಯಾದರು. ಈ ಜೋಡಿಯನ್ನು ಕಟ್ಟಿ ಹಾಕಲು ಪಂಜಾಬ್ ಬೌಲರ್ಗಳು ಪರದಾಟ ನಡೆಸಿದರು. ಈ ಜೋಡಿ 40 ಎಸೆತಗಳಲ್ಲಿ 84 ರನ್ ಕಲೆ ಹಾಕಿದರು.
ಸಾಯಿ ಸುದರ್ಶನ್ 41 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ನೆರವಿನಿಂದ 74 ರನ್ ಗಳಿಗೆ ವಿಕೆಟ್ ಕಳೆದುಕೊಂಡರು. ಸಾಯಿ ಸುದರ್ಶನ್ ವಿಕೆಟ್ ಕಳೆದುಕೊಂಡರು ಕುಗ್ಗದ ಗುಜರಾತ್ ಬ್ಯಾಟರ್ಸ್ ಪಂಜಾಬ್ ಬೌಲರ್ಸ್ ಬೆವರಿಳಿಸಿದರು. ಮೂರನೇ ವಿಕೆಟ್ಗೆ ಜೋಸ್ ಬಟ್ಲರ್ ಹಾಗೂ ಶೆರ್ಫೇನ್ ರುದರ್ಫೋರ್ಡ್ ಜೋಡಿ 33 ಎಸೆತಗಳಲ್ಲಿ 54 ರನ್ ಗಳ ಜೊತೆಯಾಟ ಆಡಿದರು, ಈ ಜೋಡಿ ಪಂಜಾಬ್ ತಂಡದಿಂದ ಗೆಲುವು ಕಸಿದುಕೊಳ್ಳುವ ನಿರೀಕ್ಷೆಯಲ್ಲಿತ್ತು. ಅಷ್ಟರಲ್ಲೇ ಬಟ್ಲರ್ 33 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 54 ರನ್ ಗಳಿಸಿ ವಿಕೆಟ್ ಕಳೆದುಕೊಂಡರು.
ಮತ್ತೊಂದೆಡೆ ಕೊನೆ ಓವರ್ ವರೆಗೆ ಗುಜರಾತ್ ತಂಡಕ್ಕೆ ಗೆಲುವು ತಂದು ಕೊಡಲು ಶೆರ್ಫೇನ್ ರುದರ್ಫೋರ್ಡ್ ಹೋರಾಟ ನಡೆಸಿದರು. ಆದರೆ ಶೆರ್ಫೇನ್ ರುದರ್ಫೋರ್ಡ್ 28 ಎಸೆತಗಳಲ್ಲಿ 46 ರನ್ ಗಳಿಸಿ ತಮ್ಮ ಆಟ ನಿಲ್ಲಿಸಿದರು.
ಗಮನ ಸೆಳೆದ ಕನ್ನಡಿಗ ವೈಶಾಕ್
ಪಂಜಾಬ್ ಕಿಂಗ್ಸ್ ತಂಡದ ಎಲ್ಲಾ ಬೌಲರ್ಗಳು ಹೆಚ್ಚು ರನ್ ಬಿಟ್ಟು ಕೊಟ್ಟರು. ಆದರೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕೆ ಇಳಿದ ಕನ್ನಡಿಗ ವೈಶಾಖ್ ವಿಜಯಕುಮಾರ್ ಮಾತ್ರ ವಿಕೆಟ್ ಪಡೆಯದಿದ್ದರೂ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಬಿರುಸಿನ ಬ್ಯಾಟಿಂಗ್ ಮೂಲಕ ರನ್ ಗಳಿಸಿತ್ತಿದ್ದ ಗುಜರಾತ್ ಬ್ಯಾಟರ್ಸ್ ವೈಶಾಖ್ ವಿಜಯಕುಮಾರ್ ಬೌಲಿಂಗ್ನಲ್ಲಿ ಪರದಾಟ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಭವಿಷ್ಯದಲ್ಲಿ ಬಿಸಿಸಿಐಗೆ ಕಾದಿದೆ ದೊಡ್ಡ ಅಪಾಯ; ಪಾಕಿಸ್ತಾನ ಕ್ರಿಕೆಟ್ ಮಂಡಳಿ ಎಚ್ಚರಿಕೆ
ವೈಶಾಖ್ ವಿಜಯಕುಮಾರ್ ವೈಡ್ ಯಾರ್ಕರ್ಗಳೊಂದಿಗೆ ಗುಜರಾತ್ ತಂಡದ ರನ್ ಕಟ್ಟಿಹಾಕಿದರು. ಅವರ ಮೊದಲೆರಡು ಓವರ್ಗಳಲ್ಲಿ ಕೇವಲ ಐದು ರನ್ಗಳನ್ನು ನೀಡಿದರು. ಇದು ಪಂಜಾಬ್ ಕಿಂಗ್ಸ್ ತಂಡದ ಗೆಲುವನ್ನು ಜೀವಂತವಾಗಿರಿಸಿತು. ತಮ್ಮ ಮೂರನೇ ಓವರ್ನಲ್ಲಿ ಅಂದರೆ 19ನೇ ಓವರ್ನಲ್ಲಿ 18 ರನ್ಗಳನ್ನು ಬಿಟ್ಟುಕೊಟ್ಟ ವೈಶಾಖ್ ದುಬಾರಿ ಎನಿಸಿಕೊಂಡರು. ಆದರೆ ಅವರು ಶಿಸ್ತು ಬದ್ದಿನ ಬೌಲಿಂಗ್ ಮೂಲಕ ಪಂಜಾಬ್ ತಂಡದ ಮೊದಲ ಗೆಲುವಿಗೆ ಕಾಣಿಕೆ ನೀಡಿದರು. ಅವರು 3 ಓವರ್ಗಳಲ್ಲಿ 28 ರನ್ ಬಿಟ್ಟು ಕೊಡುವ ಮೂಲಕ ಗುಜರಾತ್ ಬ್ಯಾಟರ್ಗಳು ಮೇಲೆ ಪ್ರಾಬಲ್ಯ ಸಾಧಿಸಿದರು. ಈ ಮೂಲಕ ಅವರು ಪಂದ್ಯಕ್ಕೆ ತಿರುವು ಕೊಟ್ಟರು.
ಗುಜರಾತ್ಗೆ ಕೊನೆಯ ಓವರ್ನಲ್ಲಿ ಗೆಲ್ಲಲು 27 ರನ್ಗಳು ಬೇಕಾಗಿತ್ತು. ದುರದೃಷ್ಟವಶಾತ್, ಮೊದಲ ಎಸೆತದಲ್ಲೇ ರಾಹುಲ್ ಟೆವಾಟಿಯಾ ರನೌಟ್ ಆದರು. ಆದರೆ ರುದರ್ಫೋರ್ಡ್ ಎರಡನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಗುಜರಾತ್ ತಂಡಕ್ಕೆ ಗೆಲುವಿನ ಭರವಸೆಯನ್ನು ಚಿಗುರಿಸಿದರು. ನಂತರದ ಎಸೆತದಲ್ಲಿ ಅರ್ಷದೀಪ್ ಸಿಂಗ್ ಅವರು ರುದರ್ಫೋರ್ಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಈ ಮೂಲಕ ಗುಜರಾತ್ ಗೆಲುವಿನ ಕನಸಿಗೆ ಅರ್ಷದೀಪ್ ಅಡ್ಡಿಯಾದರು. ಕೊನೆಯ ಎಸೆತದಲ್ಲಿ ಶಾರುಖ್ ಖಾನ್ ಭರ್ಜರಿ ಸಿಕ್ಸ್ ಬಾರಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.