- ‘ಯೋಗಿ ಆಡಳಿತದಲ್ಲಿ ದಲಿತ-ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ’
- ಕಳೆದ ಐದು ವರ್ಷಗಳಲ್ಲಿ ಯುಪಿಯಲ್ಲಿ 41 ಮಂದಿ ಕಸ್ಟಡಿ ಸಾವು
ಉತ್ತರ ಪ್ರದೇಶದ ಸುಲ್ತಾನ್‌ಪುರ ಜೈಲಿನ ಆವರಣದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ದಲಿತ ಆರೋಪಿಗಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರ ಕುಟುಂಸ್ಥರು ಇದು ಕಸ್ಟಡಿ ಕೊಲೆ ಎಂದು ಆರೋಪಿಸಿದ್ದಾರೆ. ಉನ್ನತ ಮಟ್ಟದ ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದಾರೆ.
ಕೊಲೆ ಆರೋಪದ ಮೇಲೆ ಮನೋಜ್ ರೈದಾಸ್ (19) ಮತ್ತು ವಿಜಯ್ ಪಾಸಿ ಅಲಿಯಾಸ್ ಕರಿಯಾ (20) ಜೈಲು ಸೇರಿದ್ದರು. ಅವರಿಗೆ ಪೊಲೀಸರು ಚಿತ್ರಹಿಂಸೆ ನೀಡಿ ಸಾಯಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ.
ಈ ಇಬ್ಬರ ಸಾವಿನ ಬಳಿಕ, ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಕುರಿತ ಪ್ರಶ್ನೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ದಾಳಿಗಳು, ಹತ್ಯೆಗಳು ನಡೆಯುತ್ತಿವೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಆರೋಪಿಸಿದ್ದಾರೆ.
ಅಮೇಥಿ ಜಿಲ್ಲೆಯ ಹಳ್ಳಿಯೊಂದರಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಆರೋಪದ ಮೇಲೆ ಮೇ 30 ರಂದು ಇಬ್ಬರು ದಲಿತರನ್ನು ಬಂಧಿಸಲಾಗಿತ್ತು. ಅವರ ವಿರುದ್ಧ ಜಾಮೊ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302 ಮತ್ತು 201ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಬಳಿಕ, ಅವರನ್ನು ಸುಲ್ತಾನ್‌ಪುರ ಜೈಲಿನಲ್ಲಿ ಇರಿಸಲಾಗಿತ್ತು.
“ರೈದಾಸ್ ಮತ್ತು ಕರಿಯಾ, ತಮ್ಮ ಪೊಲೀಸ್ ಹೇಳಿಕೆಗಳಲ್ಲಿ, ಯಾದವ್ ಅವರನ್ನು ತಮ್ಮ ದಾಯಾದಿ ಜಿತೇಂದ್ರನೆಂದು ತಪ್ಪಾಗಿ ಭಾವಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ” ಎಂದು ಜಾಮೊ ಸ್ಟೇಷನ್ ಹೌಸ್ ಆಫೀಸರ್ ವಿವೇಕ್ ಕುಮಾರ್ ಸಿಂಗ್ ಹೇಳಿದ್ದಾರೆ.
“ಇಬ್ಬರು ಕೈದಿಗಳು ಬುಧವಾರ ಯೋಗ ಕಾರ್ಯಕ್ರಮಕ್ಕೆ ಬಾರದೆ ಇದ್ದಾಗ, ಜೈಲು ಅಧಿಕಾರಿಗಳು ಆವರಣವನ್ನು ಪರಿಶೀಲಿಸಿದ್ದಾರೆ. ಮಧ್ಯಾಹ್ನ 12.30ರ ಸುಮಾರಿಗೆ ಅವರಿಬ್ಬರು ಬ್ಯಾರಕ್‌ನ ಹಿಂದಿನ ಮರದಲ್ಲಿ ನೇತಾಡುತ್ತಿರುವುದನ್ನು ಜೈಲಿನ ವಾರ್ಡನ್ ನೋಡಿದ್ದಾರೆ. ಇಬ್ಬರೂ ಕುತ್ತಿಗೆಗೆ ಸ್ಕಾರ್ಫ್ ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ವಾರ್ಡನ್ ತಕ್ಷಣ ಇತರ ಸಿಬ್ಬಂದಿಗೆ ಮಾಹಿತಿ ನೀಡಿ ಮೃತದೇಹಗಳನ್ನು ಕೆಳಗಿಳಿಸಿದರು,” ಎಂದು ಸುಲ್ತಾನ್‌ಪುರ ಜೈಲು ಸೂಪರಿಂಟೆಂಡೆಂಟ್ ಉಮೇಶ್ ಸಿಂಗ್ ಹೇಳಿದ್ದಾರೆ.
“ಅವರಿಬ್ಬರೂ ತಮ್ಮ ದಾಯಾದಿ ಅಲ್ಲದವನನ್ನು ಕೊಂದಿದ್ದರಿಂದ ಹತಾಶರಾಗಿದ್ದರು. ಪಶ್ಚಾತ್ತಾಪಪಟ್ಟಿದ್ದರು. ಮನವೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ” ಎಂದು ಸುಲ್ತಾನ್‌ಪುರ ಪೊಲೀಸ್ ಅಧೀಕ್ಷಕ ಸೋಮೆನ್ ಬರ್ಮಾ ಹೇಳಿದ್ದಾರೆ.
“ಮೃತದೇಹಗಳ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ನ್ಯಾಯಾಲಯದ ಅನುಮತಿ ಮೇರೆಗೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ವಿಧಿವಿಜ್ಞಾನ ತಂಡವು ಸಾವಿನ ಸ್ಥಳವನ್ನು ಪರಿಶೀಲಿಸಿದೆ. ಮೂವರು ವೈದ್ಯರ ತಂಡವು ಮರಣೋತ್ತರ ಪರೀಕ್ಷೆ ನಡೆಸುತ್ತಿದೆ. ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ” ಎಂದು ಬರ್ಮಾ ತಿಳಿಸಿದ್ದಾರೆ.
ಕಾರಾಗೃಹಗಳ ಮಹಾನಿರ್ದೇಶಕ ಎಸ್‌ಎನ್ ಸಬತ್ ಅವರು ಸಾವಿನ ಕುರಿತು ತನಿಖೆ ನಡೆಸುವಂತೆ ಜೈಲು ಎಸ್‌ಪಿ ಹೇಮಂತ್ ಕುಟಿಯಾಲ್ ಅವರಿಗೆ ನಿರ್ದೇಶನ ನೀಡಿದ್ದಾರೆ.
ಆದರೆ, ರೈದಾಸ್ ಅವರ ತಾಯಿ ಸೀತಾರಾಣಿ, “ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದು ಕಸ್ಟಡಿ ಕೊಲೆ. ಪೊಲೀಸರೇ ಕೊಂದು ಆತ್ಮಹತ್ಯೆಯೆಂದು ಹೇಳುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಕೆಲವು ಪೊಲೀಸರು ನನ್ನ ಮನೆಗೆ ಬಂದು ‘ನಿನ್ನ ಮಗ ಜೈಲಿನಲ್ಲಿರುವುದು ನಿನಗೆ ಗೊತ್ತೇ’ ಎಂದು ಕೇಳಿದರು. ನಾನು ಇಲ್ಲವೆಂದೆ. ‘ನಿನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಂತ್ಯಕ್ರಿಯೆಗೆ ಸಿದ್ಧತೆ ಮಾಡಬೇಕು’ ಎಂದು ಅವರು ನನಗೆ ಹೇಳಿದರು” ಎಂದು ಸೀತಾರಾಣಿ ವಿವರಿಸಿರುವುದಾಗಿ ನ್ಯೂಸ್‌ಕ್ಲಿಕ್ ವರದಿ ಮಾಡಿದೆ.
ಪೊಲೀಸರು ತಮ್ಮ ಮಗನನ್ನು ಕೊಂದಿದ್ದಾರೆ ಎಂದು ಆರೋಪಿಸಿದ ಕರಿಯ ತಂದೆ ಜಗನ್ನಾರಾಯಣ, “ನನ್ನ ಮಗ ಜೈಲಿನಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು. ಅವನ ಮೃತದೇಹವನ್ನು ಅಂತ್ಯಕ್ರಿಯೆ ಮಾಡಲು ನನ್ನನ್ನು ಕೇಳಿದರು. ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಲ್ಲಿ ಅವನನ್ನು ಕೊಲ್ಲಲಾಗಿದೆ. ಅವನ ಸಾವಿಗೆ ಜೈಲು ಆಡಳಿತವೇ ಹೊಣೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ರಾಜಸ್ಥಾನ: ಪೊಲೀಸರಿಂದಲೇ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ
“ಬಿಜೆಪಿ ಸರ್ಕಾರದ ಆಡಳಿತದಲ್ಲಿ ದಲಿತರು ಮತ್ತು ಇತರ ಅಲ್ಪಸಂಖ್ಯಾತರ ಸಾವುಗಳು ನಿಲ್ಲುವಂತೆ ಕಾಣುತ್ತಿಲ್ಲ. ಯೋಗಿ ಸರ್ಕಾರವು ಉತ್ತರಪ್ರದೇಶದಲ್ಲಿ ಅತ್ಯುತ್ತಮ ಕಾನೂನು ಮತ್ತು ಸುವ್ಯವಸ್ಥೆಯಿದೆ ಎಂದು ಹೆಮ್ಮೆಪಡುತ್ತಿದೆ. ಆದರೆ, ದಲಿತರು ಮತ್ತು ಅಲ್ಪಸಂಖ್ಯಾತರು ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾರೆ” ಎಂದು ಮಾನವ ಹಕ್ಕುಗಳ ಕಾರ್ಯಕರ್ತ ರವಿ ಅಂಬೇಡ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ರಾಜ್ಯದ ಜೈಲಿಗಳಲ್ಲಿಯೇ ಸುರಕ್ಷತೆಯನ್ನು ಖಾತ್ರಿಪಡಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಜೈಲುಗಳೇ ಅಸುರಕ್ಷಿತವಾಗಿರುವಾಗ, ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಹೇಗೆ ಹೆಮ್ಮೆ ಪಡುತ್ತಾರೆ. ಕಸ್ಟಡಿ ಸಾವು ಅಥವಾ ಕೊಲೆಯಲ್ಲೂ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದೆ” ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ 2017ರಿಂದ 2022ರವರೆಗೆ 41ಮಂದಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳಲ್ಲಿ ಹೇಳಿದೆ.