ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಅನುಷ್ಠಾನ ಮಾಡುವುದು ಪ್ರತಿಯೊಂದು ಇಲಾಖೆಯ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ ಟಿ ಹೇಳಿದರು.
ಉಡುಪಿಯ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಮಕ್ಕಳ ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಶಾಲಾ-ಕಾಲೇಜುಗಳು ಸೇರಿದಂತೆ ಹಾಸ್ಟೆಲ್‌ಗಳಲ್ಲಿ ಮಕ್ಕಳ ರಕ್ಷಣಾ ನೀತಿಯನ್ನು ತಪ್ಪದೇ ಜಾರಿಗೊಳಿಸುವುದರೊಂದಿಗೆ, ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆಗಳು ಆಗದಂತೆ ನೋಡಿಕೊಳ್ಳಬೇಕು. ಶಾಲಾ-ಕಾಲೇಜು ವಸತಿ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ಸಹಾಯವಾಣಿ ಸಂಖ್ಯೆ 112 ಹಾಗೂ 1098ನ್ನು ಗೋಡೆಯ ಮೇಲೆ ಕಡ್ಡಾಯವಾಗಿ ನಮೂದಿಸಬೇಕು” ಎಂದು ಸೂಚಿಸಿದರು.
“ಗ್ರಾಮ ಮಟ್ಟಗಳಲ್ಲಿ ಮಕ್ಕಳ ರಕ್ಷಣಾ ಸಮಿತಿ, ಮಹಿಳೆ ಮತ್ತು ಮಕ್ಕಳ ಕಾವಲು ಸಮಿತಿ ಹಾಗೂ ಮಕ್ಕಳ ಶಿಕ್ಷಣ ಸಮಿತಿಗಳನ್ನು ರಚಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಮಕ್ಕಳ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಅವುಗಳನ್ನು ಬಗೆಹರಿಸಬೇಕು” ಎಂದರು.
“ಯಾವುದೇ ಮಕ್ಕಳು ಶಾಲೆಯಿಂದ ಹೊರ ಉಳಿಯದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಶಿಕ್ಷಣ ಇಲಾಖೆ, ಸ್ಥಳೀಯ ಸಂಸ್ಥೆಗಳು ಕಾರ್ಯಪ್ರವೃತ್ತರಾಗಿರಬೇಕು. ಶಾಲಾ ಆವರಣಗಳಲ್ಲಿ ವಿದ್ಯುತ್ ತಂತಿಯ ಮಾರ್ಗಗಳು ಇರುವ ಬಗ್ಗೆ ಜಿಲ್ಲಾ ಮಟ್ಟದಲ್ಲಿ ವರದಿಯನ್ನು ನೀಡಬೇಕು. ಜೊತೆಗೆ ಇವುಗಳ ತೆರವಿಗೂ ಮುಂದಾಗಬೇಕು” ಎಂದರು.
“ಸಮಾಜದ ಅನಿಷ್ಠ ಪದ್ಧತಿಯಾದ ಬಾಲ್ಯ ವಿವಾಹಗಳು ಎಲ್ಲೂ ನಡೆಯದಂತೆ ನೋಡಿಕೊಳ್ಳಬೇಕು. ಪ್ರೌಢಶಾಲಾ ಮಟ್ಟದಲ್ಲಿ ಮಕ್ಕಳ ಪ್ರೀತಿ-ಪ್ರೇಮಗಳು ನಡೆಯದಂತೆ ಕಡಿವಾಣ ಹಾಕಬೇಕು. ಪೋಕ್ಸೊ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು” ಎಂದರು.
“ಬಾಲ ಕಾರ್ಮಿಕ ಹಾಗೂ ಬಾಲ್ಯ ವಿವಾಹ ಪ್ರಕರಣಕ್ಕೆ ಒಳಗಾದವರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಆದ್ಯತೆ ಮೇಲೆ ನೀಡಬೇಕು. ಪ್ರತಿ ಶಾಲೆಯಲ್ಲೂ ಮಕ್ಕಳ ಹಕ್ಕುಗಳ ಕ್ಲಬ್‌ಗಳನ್ನು ರಚಿಸುವುದರೊಂದಿಗೆ ವಿದ್ಯಾರ್ಥಿಗಳು ಅದರಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಣ ಇಲಾಖೆಯದ್ದಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಿತರಣೆಯಾಗದೆ ತುಕ್ಕು ಹಿಡಿಯುತ್ತಿವೆ ನೂರಾರು ಗಾಲಿ ಕುರ್ಚಿಗಳು
“ವಿದ್ಯಾರ್ಥಿಗಳಿಗೆ ಶಾಲಾ- ಶುಲ್ಕಗಳನ್ನು ಕಟ್ಟಿಲ್ಲ ಎಂಬ ಕಾರಣದಿಂದ ವರ್ಗಾವಣೆ ಪತ್ರವನ್ನು ತಡೆಹಿಡಿಯದಂತೆ ನೋಡಿಕೊಳ್ಳಬೇಕು” ಎಂದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಶರ್ಮಿಳಾ ಎಸ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಪೊಲೀಸ್ ಉಪ ಅಧೀಕ್ಷಕ ದಿನಕರ್, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಸೇರಿದಂತೆ ಇತರರು ಇದ್ದರು.