ಸಿಗುವ ವೇತನಕ್ಕೂ - ಬದುಕು ಸಾಗಿಸಲು ಅಗತ್ಯವಿರುವ ಹಣಕ್ಕೂ ಅಜಗಜಾಂತರ ವ್ಯತ್ಯಾಸದ ನಡುವೆ ಜನರು ಸಾಲದ ಮೊರೆ ಹೋಗುತ್ತಿದ್ದಾರೆ. "ಉಳ್ಳವರು (ಶ್ರೀಮಂತರು) ರೊಕ್ಕ ಕೊಟ್ಟು ಉಂಡಾರೂ-ಕೊಂಡಾರೂ, ಬಡವ ನಾನೇನು ಮಾಡಲಿ" ಎಂದು ಸರ್ಕಾರವನ್ನು ಪ್ರಶ್ನಿಸುವ ಸ್ಥಿತಿ ಎದುರಾಗಿದೆ.
ಮಾರ್ಚ್ 31ಕ್ಕೆ ಈ ಹಣಕಾಸು ವರ್ಷ ಕೊನೆಯಾಗಲಿದ್ದು ಏಪ್ರಿಲ್ 1ರಿಂದ 2025-26ರ ‘ಫಿನಾನ್ಶಿಯಲ್ ಇಯರ್’ ಶುರುವಾಗಲಿದೆ. ಮುಂದಿನ ಆರ್ಥಿಕ ವರ್ಷದ ಮೊದಲ ದಿನದಿಂದಲೇ ದೇಶ, ರಾಜ್ಯದಲ್ಲಿ ಹಲವು ಹಣಕಾಸು ಸಂಬಂಧಿತ ಬದಲಾವಣೆಯಾಗಲಿವೆ. ಸಾಮಾನ್ಯವಾಗಿಯೇ ಪ್ರತಿ ತಿಂಗಳ ಮೊದಲ ದಿನ ಇಂಧನ (ಪೆಟ್ರೋಲ್- ಡಿಸೇಲ್), ವಾಣಿಜ್ಯ ಮತ್ತು ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ದರವನ್ನು ಪರಿಷ್ಕರಿಸಲಾಗುತ್ತದೆ ಅಥವಾ ಸ್ಥಿರವಾಗಿರಿಸಲಾಗುತ್ತದೆ. ಅದನ್ನು ಹೊರತುಪಡಿಸಿ ಏಪ್ರಿಲ್ 1ರಿಂದ ಕೇಂದ್ರ, ರಾಜ್ಯ ಬಜೆಟ್‌ನಲ್ಲಿ ಜಾರಿ ಮಾಡಿದ ಸುಂಕ, ತೆರಿಗೆಗೆ ಅನುಗುಣವಾಗಿ ಹಲವು ವಸ್ತುಗಳ ದರ ಏರಿಳಿತ ಕಾಣಬಹುದು.
ಈಗಾಗಲೇ ರಾಜ್ಯದಲ್ಲಿ ಬಸ್, ಮೆಟ್ರೋ ಟಿಕೆಟ್ ದರ ಹೆಚ್ಚಾಗಿದೆ. ಆಟೋರಿಕ್ಷಾ ಪ್ರಯಾಣ ದರ ಹೆಚ್ಚಿಸಬೇಕೆಂಬ ಚಾಲಕರ ಬೇಡಿಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಸರ್ಕಾರ ಅಂತಿಮ ನಿರ್ಧಾರವನ್ನು ಶೀಘ್ರವೇ ಕೈಗೊಳ್ಳಲಿದೆ. ಇವೆಲ್ಲವುದರ ನಡುವೆ ವಿದ್ಯುತ್, ಹಾಲು ಹೀಗೆ ಹಲವು ಬೆಲೆ ಏರಿಕೆಗಳ ಬಗ್ಗೆ ಸುದ್ದಿಯಾಗುತ್ತಲೇ ಇದೆ.
ಇದನ್ನು ಓದಿದ್ದೀರಾ? ಮೆಣಸಿನಕಾಯಿ ದರ ತೀವ್ರ ಕುಸಿತ; ಉತ್ತಮ ಬೆಲೆ ನೀಡಿ ಎನುತ್ತಿದ್ದಾರೆ ರೈತರು
ಟೋಲ್ ದರ ಏರಿಕೆ
ಏಪ್ರಿಲ್ 1ರಿಂದ ರಾಜ್ಯದಲ್ಲಿ ಟೋಲ್ ಸುಂಕ ಕನಿಷ್ಠ ಶೇ.3ರಿಂದ ಶೇ.5ರಷ್ಟು ಹೆಚ್ಚಾಗಲಿದೆ. ರಾಜ್ಯದಲ್ಲಿ ಒಟ್ಟು 66 ಟೋಲ್ ಪ್ಲಾಜಾಗಳಿದ್ದು, ಎಲ್ಲಾ ಕಡೆ ಶುಲ್ಕ ಏರಿಕೆಯಾಗಲಿದೆ. ಹಣದುಬ್ಬರ ಕಾರಣದಿಂದಾಗಿ ಶುಲ್ಕ ಹೆಚ್ಚಿಸಲಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದೆ. ಆದರೆ ಈ ಹಣದುಬ್ಬರ ಬಡ, ಮಧ್ಯಮ ವರ್ಗದ ಜನರ ವೇತನ ಪರಿಷ್ಕರಣೆಗೆ ಮಾತ್ರ ಅನ್ವಯವಾಗದಿರುವುದು ವಿಷಾದನೀಯ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಟೋಲ್ ಶುಲ್ಕಗಳ ಬಗ್ಗೆ ಹೊಸ ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದೆ. ರಾಜ್ಯದಲ್ಲಿ ಬೆಂಗಳೂರು-ಮೈಸೂರು ಮಾರ್ಗದ ಕನಮಿಣಿಕೆ ಮತ್ತು ಶೇಷಗಿರಿಹಳ್ಳಿ, ಬೆಂಗಳೂರು-ತಿರುಪತಿ ಮಾರ್ಗದ ನಂಗ್ಲಿ, ಬೆಂಗಳೂರು-ಹೈದರಾಬಾದ್ ಮಾರ್ಗದ ಬಾಗೇಪಲ್ಲಿ, ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ, ಮತ್ತು ಹುಲಿಕುಂಟೆ ಹಾಗೂ ನಲ್ಲೂರು ದೇವನಹಳ್ಳಿ (ಸ್ಯಾಟಲೈಟ್ ಟೌನ್ ರಿಂಗ್ ರೋಡ್) ಟೋಲ್ ಪ್ಲಾಜಾಗಳಲ್ಲಿ ದರಗಳು ಹೆಚ್ಚಾಗಲಿವೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹೇಳುವಂತೇ, ದೇಶದಲ್ಲಿ ಟೋಲ್ ಸಂಗ್ರಹದಿಂದ 2023-24ರಲ್ಲಿ 64,809.86 ಕೋಟಿ ರೂಪಾಯಿ ಸಂಗ್ರಹಿಸಲಾಗಿದ್ದು, ಈ ಹಿಂದಿನ ವರ್ಷಕ್ಕಿಂತ ಶೇಕಡ 35ರಷ್ಟು ಅಧಿಕವಾಗಿದೆ. ಇದೀಗ ಟೋಲ್ ಶುಲ್ಕ ಹೆಚ್ಚಿಸಿ ಸಂಗ್ರಹವನ್ನು ಇನ್ನಷ್ಟು ಅಧಿಕಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಇದನ್ನು ಓದಿದ್ದೀರಾ? ಏಪ್ರಿಲ್‌ನಿಂದ ಬೆಲೆ ಹೆಚ್ಚಿಸಲಿರುವ ಕಾರು ಕಂಪನಿಗಳು
ಆದರೆ ಇವೆಲ್ಲವುದರಿಂದ ಬಳಲುವುದು ಬಡ, ಮಧ್ಯಮ ವರ್ಗ. ಟೋಲ್ ದರ ಹೆಚ್ಚಾದರೆ ಸಾಮಾನ್ಯವಾಗಿಯೇ ಖಾಸಗಿ ಬಸ್‌ಗಳು ಟಿಕೆಟ್ ದರವನ್ನು ಏರಿಸುತ್ತದೆ. ಇದರ ನೇರ ಏಟು ಜನಸಾಮಾನ್ಯರ ಮೇಲೆಯೇ ಬೀಳುತ್ತದೆ. ಈಗಾಗಲೇ ಹಬ್ಬ-ಹರಿದಿನದ ವೇಳೆ ಬೇಡಿಕೆ ನೆಪದಲ್ಲಿ ಬೆಂಗಳೂರು- ಹೈದಾರಾಬಾದ್, ಬೆಂಗಳೂರು ತಿರುಪತಿ ಮಾರ್ಗದ ಖಾಸಗಿ ಬಸ್‌ಗಳ ಟಿಕೆಟ್ ದರವು ತೀವ್ರ ಮಟ್ಟಕೆ ಏರಿಸಲಾಗುತ್ತಿದೆ. ಇದೀಗ ಟೋಲ್ ಹೆಚ್ಚಾದರೆ ಖಂಡಿತವಾಗಿಯೂ ಅದರ ಹೊರೆ ನೇರವಾಗಿ ಪ್ರಯಾಣಿಕರ ಮೇಲೆ ಬೀಳಲಿದೆ.
ಹಾಲಿನ ದರ ಏರಿಕೆ
ನಂದಿನ ಹಾಲಿನ ದರವನ್ನು ಲೀಟರ್‌ಗೆ ಕನಿಷ್ಠ ಮೂರರಿಂದ ಐದು ರೂಪಾಯಿ ಏರಿಸುವ ಬಗ್ಗೆ ಕೆಎಂಎಫ್ ಮತ್ತು ಸರ್ಕಾರದ ನಡುವೆ ಮಾತುಕತೆ ನಡೆಯುತ್ತಿದೆ. ಐದು ರೂಪಾಯಿ ಏರಿಕೆಯಾದರೆ ಒಂದು ಲೀಟರ್ ಹಾಲಿನ ಬೆಲೆ 47 ರೂಪಾಯಿಗೆ ಜಿಗಿಯಲಿದೆ. ಇದರ ಸಂಪೂರ್ಣ ಲಾಭವನ್ನು ರೈತರಿಗೆ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ್ದರೂ ಕೂಡಾ ಹೊಸ ದರ ಜಾರಿಗೆ ಬಂದ ಬಳಿಕ ಏನಾಗುತ್ತದೆಯೋ ಕಾದುನೋಡಬೇಕು. ಏನೇ ಆದರೂ ಬೆಲೆ ಏರಿಕೆ ಬಿಸಿ ನೇರವಾಗಿ ಗ್ರಾಹಕರಿಗೆ ತಟ್ಟಲಿದೆ.
ಚಹಾ ಪುಡಿ, ಸಕ್ಕರೆ, ಕಾಫಿ ಬೆಲೆ ಈಗಾಗಲೇ ಗಗನಕ್ಕೇರಿದೆ. ಇದೀಗ ಹಾಲಿನ ದರವೂ ಬಡವನ ಕೈಗೆಟುಕದಂತಿದೆ. ಇವೆಲ್ಲವುದರ ನಡುವೆ ಹೋಟೆಲ್ ಮಾಲೀಕರು ಸಾಮಾನ್ಯವಾಗಿಯೇ ಚಹಾ, ಕಾಫಿ ದರವನ್ನು ಹೆಚ್ಚಿಸುತ್ತಾರೆ. ಬೆಲೆ ಏರಿಕೆ ಹೊರೆಯನ್ನು ಯಾವ ಹೋಟೆಲ್ ಮಾಲೀಕ ತನ್ನ ಮೇಲೆಯೇ ಹಾಕಿಕೊಂಡು ನಷ್ಟದ ಕೂಪಕ್ಕೆ ಜಾರುತ್ತಾನೆ? ಖಚಿತವಾಗಿ ಗ್ರಾಹಕರ ಜೇಬಿಗೆ ಕತ್ತರಿ. ಈಗಾಗಲೇ ಕಾಫಿ ಬೆಲೆ ಏರಿಕೆಯಾಗಿದೆ, ಹಾಲಿನ ಬೆಲೆಯೂ ಹೆಚ್ಚಾಗಲಿದೆ, ಆದ್ದರಿಂದ ಫಿಲ್ಟರ್ ಕಾಫಿ ಬೆಲೆ ಹೆಚ್ಚಿಸುತ್ತೇವೆ ಎಂದು ಹೋಟೆಲ್ ಅಸೋಸಿಯೇಷನ್ ಘೋಷಿಸಿದೆ.
ಇದನ್ನು ಓದಿದ್ದೀರಾ? ಬಜೆಟ್ 2025 | ಯಾವೆಲ್ಲ ವಸ್ತುಗಳ ಬೆಲೆ ಏರಿಕೆ, ಇಳಿಕೆ?
ಇಲ್ಲಿ ಪ್ರತಿ ದಿನ ಕಾಫಿ, ಟೀ ಕುಡಿಯುವ ನಮಗಿಂತ ತನ್ನ ಎದೆಹಾಲು ಸಾಲದೆ ಮಗುವಿಗೆ ಪ್ಯಾಕೆಟ್ ಹಾಲು ಬಿಸಿ ಮಾಡಿ ಕುಡಿಸುವ ಬಡ ತಾಯಿಯತ್ತ ನಮ್ಮ ಗಮನ ಹೊರಳಬೇಕಿದೆ. ಉತ್ತರ ಕರ್ನಾಟಕದಿಂದ ಇತರೆಡೆ ಗುಳೆ ಬಂದು, ಗುಡಿಸಲು ಹಾಕಿ ನೆಲೆಸಿ, ಕೂಲಿ ಕೆಲಸ ಮಾಡಿದ ಹಣದಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ತಾಯಿ ತನ್ನ ಮಗುವಿನ ದುಬಾರಿ ಹಾಲನ್ನು ಕುಡಿಸಲು ಸಾಧ್ಯವೇ?
ವಿದ್ಯುತ್ ದರ ಏರಿಕೆ
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಿಸಿದೆ. ಈ ದರ ಏರಿಕೆಯು ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ. ಕೆಪಿಟಿಸಿಎಲ್ ಮತ್ತು ಎಸ್ಕಾಂ ನೌಕರರ ಪಿಂಚಣಿ, ಗ್ರಾಚ್ಯುಟಿ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಇಂಧನ ಇಲಾಖೆ ಮುಂದಾಗಿದೆ. ಮೂರು ಆರ್ಥಿಕ ವರ್ಷಗಳಿಗೆ ಅನ್ವಯಿಸುವಂತೆ ಈ ಆದೇಶವನ್ನು ಹೊರಡಿಸಲಾಗಿದೆ. 2025-26ರಲ್ಲಿ 36 ಪೈಸೆ, 2026-27ರಲ್ಲಿ 35 ಪೈಸೆ, 2027-28ರಲ್ಲಿ 34 ಪೈಸೆ ಏರಿಕೆಯಾಗಲಿದೆ. ಗೃಹಜ್ಯೋತಿ ಯೋಜನೆಯಿಂದ ನಷ್ಟವಾಗಿ ಸರ್ಕಾರ ದರ ಏರಿಕೆ ನಿರ್ಧಾರ ಕೈಗೊಂಡಿದೆ ಎಂಬ ಸುದ್ದಿಗಳಾಗಿವೆ. ಆದರೆ ಈ ಆರೋಪವನ್ನು ಸಚಿವ ಶರಣಪ್ರಕಾಶ್ ಪಾಟೀಲ್ ಅಲ್ಲಗಳೆದಿದ್ದಾರೆ. ಗೃಹಜ್ಯೋತಿ ಯೋಜನೆಯಿಂದ ನಷ್ಟವಾಗಿಲ್ಲ. ನಾವು 200 ಯೂನಿಟ್ ವಿದ್ಯುತ್ ಉಚಿತ ನೀಡುತ್ತಿದ್ದೇವೆ, ಅದು ಮುಂದುವರಿಯಲಿದೆ ಎಂದಿದ್ದಾರೆ.
ಕಾರಿನ ಬೆಲೆ ಏರಿಕೆ
ದೇಶದ ಪ್ರಮುಖ ಕಾರು ಉತ್ಪಾದಕ ಕಂಪನಿಗಳಾದ ಟಾಟಾ ಮೋಟರ್ಸ್, ಕಿಯಾ ಇಂಡಿಯಾ ಮತ್ತು ಮಾರುತಿ ಸುಜುಕಿ ಏಪ್ರಿಲ್ ಒಂದರಿಂದ ಜಾರಿಗೆ ಬರುವಂತೆ ಬೆಲೆ ಏರಿಕೆಯನ್ನು ಘೋಷಿಸಿವೆ. ಈಗಾಗಲೇ ಈ ವರ್ಷದ ಜನವರಿಯಲ್ಲಿ ಬಹುತೇಕ ಕಾರು ತಯಾರಕ ಕಂಪನಿಗಳು ಬೆಲೆ ಏರಿಕೆ ಮಾಡಿದೆ. ಇದೀಗ ಉತ್ಪಾದನಾ ವೆಚ್ಚ ಹೆಚ್ಚಳ ಕಾರಣದಿಂದಾಗಿ ಮತ್ತೆ ಬೆಲೆ ಹೆಚ್ಚಿಸಲು ಮುಂದಾಗಿದೆ. ಇದು ಒಂದು ಕಾರು ಖರೀದಿಸಬೇಕೆಂಬ ಮಧ್ಯಮ ವರ್ಗದ ಕನಸಿಗೆ ಖಂಡಿತ ತಡೆಯಾಗಲಿದೆ.
ಇದನ್ನು ಓದಿದ್ದೀರಾ? ದೇಶದಲ್ಲಿ ನಿಯಂತ್ರಣಕ್ಕೆ ಬಾರದ ಬೆಲೆ ಏರಿಕೆ ಮತ್ತು ಸಚಿವೆ ನಿರ್ಮಲಾ ಸೀತಾರಾಮನ್ ಸಿಟ್ಟು!
ಬಸ್, ಮೆಟ್ರೋ ಟಿಕೆಟ್ ದರ ಹೆಚ್ಚಳ
ಈಗಾಗಲೇ ಬಸ್, ಮೆಟ್ರೋ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. ಇದೀಗ ಆಟೋ ರಿಕ್ಷಾ ಚಾಲಕರ ಬೇಡಿಕೆಯಂತೆ ಮೀಟರ್ ದರವನ್ನೂ ಏರಿಸುವ ಸಾಧ್ಯತೆಯಿದೆ.
ಟೋಲ್ ಸಮಸ್ಯೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುದೀರ್ಘ ಹೋರಾಟಕ್ಕೆ ನಾಂದಿ ಹಾಡಿದೆ. ದಕ್ಷಿಣ ಕನ್ನಡದಲ್ಲಿ ಯಶಸ್ಸು ಕಂಡ ಡಿವೈಎಫ್‌ಐ ಸಂಘಟನೆ ನೇತೃತ್ವದ ಟೋಲ್ ವಿರೋಧಿ ಹೋರಾಟ ಅದಕ್ಕೊಂದು ಉದಾಹರಣೆ. ಅವೈಜ್ಞಾನಿಕ ಟೋಲ್ ಸಮಸ್ಯೆಯನ್ನು ಬಗೆಹರಿಸಬೇಕಾದ ಕೇಂದ್ರ, ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಇನ್ನೊಂದೆಡೆ ದಿನ ನಿತ್ಯ ಬಳಸುವ ಹಾಲು, ವಿದ್ಯುತ್, ಸಾರಿಗೆ ವೆಚ್ಚವೂ ಇನ್ನಷ್ಟೂ ಹೊರೆಯಾಗಲಿವೆ.
ಹಣದುಬ್ಬರದ ನಡುವೆ ದಿನನಿತ್ಯದ ವೆಚ್ಚ ದುಬಾರಿಯಾಗುತ್ತಿದೆ. ಸಿಗುವ ವೇತನಕ್ಕೂ ಬದುಕು ಸಾಗಿಸಲು ಅಗತ್ಯವಿರುವ ಹಣಕ್ಕೂ ಅಜಗಜಾಂತರ ವ್ಯತ್ಯಾಸದ ನಡುವೆ ಜನರು ಸಾಲದ ಮೊರೆ ಹೋಗುತ್ತಿದ್ದಾರೆ. “ಉಳ್ಳವರು (ಶ್ರೀಮಂತರು) ರೊಕ್ಕ ಕೊಟ್ಟು ಉಂಡಾರೂ ಕೊಂಡಾರೂ, ಬಡವ ನಾನೇನು ಮಾಡಲಿ” ಎಂದು ಸರ್ಕಾರವನ್ನು ಪ್ರಶ್ನಿಸುವ ಸ್ಥಿತಿ ಎದುರಾಗಿದೆ.
ಯಾವುದೇ ಸರ್ಕಾರವಾದರೂ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ತನ್ನ ಕಾರ್ಪೋರೇಟ್ ಧೋರಣೆಯನ್ನು ಭದ್ರವಾಗಿ ಕಾಪಿಟ್ಟುಕೊಂಡಿರುತ್ತದೆ. ಸಮಯ ಬಂದಾಗ ಆ ಅಸ್ತ್ರವನ್ನು ಒಂದೊಂದಾಗಿ ಪ್ರಯೋಗಿಸುತ್ತದೆ ಎಂಬ ವಾದಗಳು ಹೊಸತೇನಲ್ಲ. ಅದರಲ್ಲೂ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡಿ ಇನ್ನೊಂದೆಡೆ ಬೆಲೆ ಏರಿಕೆಯ ಮೂಲಕ ಜನರಿಂದ ದೂಚಲಾಗುತ್ತಿದೆ ಎಂಬುದು ವಿಪಕ್ಷಗಳ ಆರೋಪ. ಇದಕ್ಕೆ ತಕ್ಕುದಾಗಿ ರಾಜ್ಯ ಸರ್ಕಾರವು ಒಂದಾದ ಬಳಿಕ ಒಂದರಂತೆ ತನ್ನ ಬತ್ತಳಿಕೆಯಲ್ಲಿದ್ದ ದರ ಏರಿಕೆ ಬಾಣವನ್ನು ಪ್ರಯೋಗಿಸುತ್ತಿದೆ. ಈ ಬಾಣದ ಏಟಿನಿಂದಾದ ಒಣಗದ ಗಾಯವನ್ನು ಹೊತ್ತು ಬಡ, ಮಧ್ಯಮ ವರ್ಗದ ಜನರು ದಿನದೂಡಬೇಕಾದ ಶೋಚನೀಯ ಸ್ಥಿತಿಯಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.