ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಸಿಂದಗಿ ಮತ್ತು ಆಲಮೇಲ ತಾಲೂಕಿನ ಆಯಾ ಗ್ರಾಮ ಪಂಚಾಯತಿ ಪಿಡಿಒ, ಮೇಲಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕು ಪಂಚಾಯತಿ ಸಭಾಭವನದಲ್ಲಿ ಕುಡಿಯುವ ನೀರಿನ ಕುರಿತು ಸಿಂದಗಿ ಮತ್ತು ಆಲಮೇಲ ತಾಲೂಕಿನ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
“ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಜೂನ್ ತಿಂಗಳವರೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಒಂದು ವೇಳೆ ಕರ್ತವ್ಯ ಲೋಪ ಎಸಗಿದರೆ ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
“ಗ್ರಾಪಂ ವ್ಯಾಪ್ತಿಯಲ್ಲಿ ಯಾವ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಮತ್ತು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿ. ಎಲ್ಲಿ ಕೊಳವೆಬಾವಿ ಕೊರೆಸುವ ಅವಶ್ಯಕತೆಯಿದೆ ಅದರ ಬಗ್ಗೆ ಪಟ್ಟಿ ತಯಾರಿಸಿ ನೀಡಿ. ಯಾವ ಹಳ್ಳಿಗಳಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡಿಲ್ಲ ಅದರ ಬಗ್ಗೆ ತಾಪಂ ಇಒ ಅವರಿಗೆ ಲಿಖಿತ ರೂಪದಲ್ಲಿ ಸವಿಸ್ತಾರವಾಗಿ ಮಾಹಿತಿ ನೀಡಬೇಕು. ಜೆಜೆಎಂ ಕಾಮಗಾರಿಯಲ್ಲಿ ಎಷ್ಟು ಮನೆಗಳಿಗೆ ಮಂಜೂರಾತಿ ನೀಡಿದೆ. ಎಷ್ಟು ಮನೆಗಳಿಗೆ ನಳದ ಸಂಪರ್ಕ ಒದಗಿಸಿದ್ದಾರೆ. ಎಷ್ಟು ಬಿಲ್ ಪಾವತಿಯಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಿ” ಎಂದು ಸೂಚಿಸಿದರು.
“ಸಿಂದಗಿ ಮತ್ತು ಆಲಮೇಲ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಭೆ ತೆಗೆದುಕೊಳ್ಳಲಾಗಿದೆ. ಮುಂಬರುವ ಏಪ್ರಿಲ್ ಕೊನೆ ವಾರ ಅಥವಾ ಮೇ ಮೊದಲ ವಾರದಲ್ಲಿ ಪುನಃ ಸಿಂದಗಿ ಮತ್ತು ಆಲಮೇಲ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪಿಡಿಒ ಹಾಗೂ ಸಂಬಂಧಿಸಿದವರಿಗೆ ಸಭೆ ನಡೆಸಲಾಗುವುದು. ಒಟ್ಟಾರೆ 2-3 ತಿಂಗಳು ಜೊತೆಗೂಡಿ ಜನರ ಸಂಪರ್ಕದಲ್ಲಿದ್ದು ಎಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ ಅಲ್ಲಿ ಸಮಸ್ಯೆ ಪರಿಹರಿಸೋಣ” ಎಂದು ಹೇಳಿದರು.
ಇದನ್ನೂ ಓದಿ: ವಿಜಯಪುರ | ಏ.1ರಿಂದ ₹10,000 ಗೌರವಧನ ನೀಡುವಂತೆ ಆಶಾ ಕಾರ್ಯಕರ್ತೆಯರ ಆಗ್ರಹ
ಸಿಂದಗಿ ತಾಪಂ ಇಒ ರಾಮು ಅಗ್ನಿ, ಆಲಮೇಲ ತಾಪಂ ಇಒ ಪಠಾಣ, ಸಿಂದಗಿ ತಹಶೀಲ್ದಾರ್ ಡಾ. ಪ್ರದೀಪ ಕುಮಾರ ಹಿರೇಮಠ, ಆಲಮೇಲ ತಹಶೀಲ್ದಾರ್ ವಿಜಯಕುಮಾರ ಕೆ, ಸಿಂದಗಿ ಗ್ರೇಡ್ ತಹಶೀಲ್ದಾರ್ ಇಂದ್ರಾಬಾಯಿ ಬಳಗಾನೂರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ತಾರಾನಾಥ ರಾಠೋಡ, ಕೆಡಿಪಿ ಸದಸ್ಯ ಮಹಾನಂದ ಬಮ್ಮಣ್ಣಿ, ಜಿಪಂ ಕೆಡಿಪಿ ಸದಸ್ಯ ನೂರಹ್ಮದ ಅತ್ತಾರ ಸೇರಿದಂತೆ ಪಿಡಿಒ ಹಾಗೂ ತಾಪಂ ಅಧಿಕಾರಿಗಳು ಸಭೆಯಲ್ಲಿ ಇದ್ದರು.