ಆರೋಗ್ಯಪೂರ್ಣ ವ್ಯಕ್ತಿತ್ವದಿಂದ ಆರೋಗ್ಯಪೂರ್ಣ ಸಮಾಜ ಕಟ್ಟಲು ಸಾಧ್ಯ ಎಂದು ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಮತ್ತು ಕುವೆಂಪು ವಿಶ್ವ ವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಶಿವಮೊಗ್ಗ ಇವರ ವತಿಯಿಂದ ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ 42 ಕುವೆಂಪು ವಿಶ್ವವಿದ್ಯಾಲಯ ನಗರ ಕೇಂದ್ರ ಕಚೇರಿಯಲ್ಲಿ ಎಚ್ಐವಿ ಏಡ್ಸ್ ಜಾಗೃತಿ, ರಕ್ತದಾನದ ಮಹತ್ವ, ರೆಡ್ ರಿಬ್ಬನ್ ಕ್ಲಬ್ ಮಾಹಿತಿ ಹಾಗೂ ತಂಬಾಕು ನಿಯಂತ್ರಣ ಕಾರ್ಯಕ್ರಮಗಳ ಬಗ್ಗೆ ಹಮ್ಮಿಕೊಂಡಿದ್ದ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಆರೋಗ್ಯದ ಬಗ್ಗೆ ಸರಿಯಾದ ಅರಿವು, ಮಾರ್ಗದರ್ಶನವಿಲ್ಲದೆ ತಪ್ಪು ತಿಳುವಳಿಕೆಯಿಂದ ಇಂದು ಅಪಾಯಗಳು ಹೆಚ್ಚುತ್ತಿವೆ. ನಮ್ಮ ಮುಂದಿನ ಯುವ ಜನಾಂಗವನ್ನು ಆರೋಗ್ಯ ಸಂಬಂಧಿ ಅಪಾಯಗಳಿಂದ ಪಾರು ಮಾಡಲು ಇಂತಹ ತರಬೇತಿ ಕಾರ್ಯಾಗಾರಗಳು ಅತ್ಯಗತ್ಯ” ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಡಾ. ಪ್ರಭಾಕರ್ ಬಿ. ಟಿ, ” ಇಂದಿನ ನಮ್ಮ ಜೀವನ ಶೈಲಿಯೇ ನಮ್ಮ ದುರಂತಕ್ಕೆ ಕಾರಣ. ಗುಣಮಟ್ಟದ ಆಹಾರದ ಕೊರತೆ, ವ್ಯಾಯಾಮ, ನಡಿಗೆ ರಹಿತ ಜೀವನ ಕ್ರಮಗಳಿಂದಾಗಿ ನಾವು ಬೇಗ ಅಪಾಯಗಳಿಗೆ ಬಲಿಯಾಗುತ್ತಿದ್ದೇವೆ. ಏಡ್ಸ್ ನಂತಹ ಮಾರಕ ರೋಗಗಳನ್ನು ಬರದಂತೆ ತಡೆಗಟ್ಟುವುದೇ ನಮ್ಮ ಗುರಿಯಾಗಬೇಕು. ಇದಕ್ಕೆ ಸಾಕಷ್ಟು ಎಚ್ಚರ, ಜಾಗೃತಿ ಮತ್ತು ಸುರಕ್ಷತಾ ಕ್ರಮಗಳನ್ನು ವಹಿಸಬೇಕು” ಎಂದರು.
ಇದನ್ನೂ ಓದಿ: ಶಿವಮೊಗ್ಗ | ಜೋಗದ ಕಾಮಗಾರಿ ವಿಳಂಬ; ಏಪ್ರಿಲ್ 30ರವರೆಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ
ಶಿವಮೊಗ್ಗ ಡಿಎಪಿಸಿಯುದ ಜಿಲ್ಲಾ ಮೇಲ್ವಿಚಾರಕಿ ಮಂಗಳ ರಾಕ್ತದಾನ ಮತ್ತು ರೆಡ್ ರಿಬ್ಬನ್ ಕ್ಲಬ್ ಬಗ್ಗೆ ಮಾಹಿತಿ ನೀಡಿದರು. ಹೇಮಂತ್ ರಾಜ್ ಅವರು ತಂಬಾಕು ಸೇವನೆಯ ದುಷ್ಪರಿಣಾಮಗಳನ್ನು ವಿವರಿಸಿದರು. ಶಿವಮೊಗ್ಗ ಜಿಲ್ಲಾ ರಕ್ತ ಕೇಂದ್ರದ ಆಪ್ತ ಸಮಾಲೋಚಕಾ ಹನುಮಂತಪ್ಪ ರಕ್ತದಾನ ಶಿಬಿರಗಳ ಬಗ್ಗೆ ಮಾಹಿತಿ ನೀಡಿದರು. ತರಬೇತಿ ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಎನ್ಎಸ್ಎಸ್ ಅಧಿಕಾರಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಜೆಸಿಐನ ದಿವ್ಯಾ ವಿ. ಪಿ ಉಪಸ್ಥಿತರಿದ್ದರು.