ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಬದ್ಧ ವೈರಿಯಂತಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಜೊತೆ ಕ್ಲೋಸ್ ಡೋರ್ ಮೀಟಿಂಗ್ ನಡೆಸಿದ್ದು ಚರ್ಚೆಗೆ ಗ್ರಾಸವಾಗಿದೆ.
ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಪ್ರಕರಣ ಭಾರೀ ಸಂಚಲನ ಮೂಡಿಸಿರುವ ಹೊತ್ತಲ್ಲೇ ದೊಡ್ಡ ದೊಡ್ಡ ಬೆಳವಣಿಗೆಗಳು ನಡೆಯುತ್ತಿವೆ. ಒಂದು ಕಡೆ ಸಿದ್ದರಾಮಯ್ಯ ಬಣದ ನಾಯಕರ ಮೇಲೆಯೇ ಹನಿಟ್ರ್ಯಾಪ್ ನಡೆಯುತ್ತಿವೆ ಎನ್ನುವ ಗಂಭೀರ ಆರೋಪಗಳು ಕೇಳಿಬಂದಿವೆ. ಅತ್ತ ಬಿಜೆಪಿಯಲ್ಲೂ ಯಡಿಯೂರಪ್ಪ ವಿರೋಧಿ ಬಣದ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಬಿಜೆಪಿಯಿಂಚ ಉಚ್ಛಾಟಿಸಲಾಗಿದೆ. ಒಟ್ಟಾರೆ ರಾಜ್ಯ ರಾಜಕಾರಣದಲ್ಲಿ ಕಾವೇರಿದ ಚರ್ಚೆಗಳಿಗೆ ಈಗ ಬರವಿಲ್ಲ.
ಈ ಮಧ್ಯೆ ಹೆಚ್ ಡಿ ಕುಮಾರಸ್ವಾಮಿ ಮತ್ತು ಸಚಿವ ಸತೀಶ್ ಜಾರಕಿಹೊಳಿ ಅವರು ಬುಧವಾರ ದೆಹಲಿಯಲ್ಲಿ ಒಟ್ಟಿಗೆ ಭೇಟಿಯಾಗಿ ದೀರ್ಘ ಅವಧಿವರೆಗೂ ಚರ್ಚಿಸಿದ್ದು, ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇದೇ ವೇಳೆ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರನ್ನು ಸಹ ಜಾರಕಿಹೊಳಿ ಭೇಟಿ ಮಾಡಿದ್ದಾರೆ.

ಸಾಹುಕಾರ್ ಹಾಗೂ ದಳಪತಿಗಳ ಈ ನಡೆ ಭಾರೀ ಕುತೂಹಲ ಮೂಡಿಸಿದೆ. ಡಿನ್ನರ್‌ಗೆ ಬರುವಂತೆ ಹೆಚ್.ಡಿ.ಕುಮಾರಸ್ವಾಮಿ ಅವರೇ ಸತೀಶ್ ಜಾರಕಿಹೊಳಿ ಅವರನ್ನು ಆಹ್ವಾನಿಸಿದ್ದರು ಎನ್ನಲಾಗಿದ್ದು, ಈ ವೇಳೆ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಬದಲಾವಣೆ ವಿಚಾರವಾಗಿ ಕಾಂಗ್ರೆಸ್‌ನೊಳಗೆ ಚರ್ಚೆ ಜೀವಂತವಿದೆ. ಸತೀಶ್ ಜಾರಕಿಹೊಳಿ ಸಹ ನಾನೂ ಸಿಎಂ ಅಭ್ಯರ್ಥಿ ಎಂದು ಈಗಾಗಲೇ ಹೇಳಿದ್ದಾರೆ. ಒಂದು ವೇಳೆ ಕಾಂಗ್ರೆಸ್‌ನಲ್ಲಿ ದಿಢೀರ್ ಬೆಳವಣಿಗೆಗಳು ನಡೆದು, ಸಿಎಂ ಬದಲಾವಣೆ ವಿಚಾರ ಮುನ್ನೆಲೆಗೆ ಬಂದರೆ ಬಹುಮತಕ್ಕಾಗಿ ಮುಂಚಿತವಾಗಿ ಜೆಡಿಎಸ್ ಮತ್ತು ಬಿಜೆಪಿ ನಾಯಕರ ಜೊತೆ ಸತೀಶ್ ಜಾರಕಿಹೊಳಿ ಚರ್ಚೆಗೆ ಮುದಾಗಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.
ಸದ್ಯದಲ್ಲೇ ಬಿಜೆಪಿ ನಾಯಕರನ್ನು ಸತೀಶ್ ಜಾರಕಿಹೊಳಿ ಅವರು ಭೇಟಿಯಾಗಬಹುದು ಎನ್ನಲಾಗುತ್ತಿದೆ. ಒಟ್ಟಾರೆ ಈಗ ಎಲ್ಲವೂ ಅಸ್ಪಷ್ಟವಾದ ಚರ್ಚೆಗಳೇ ಆಗಿವೆ. ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.