ಗೃಹಖಾತೆಯನ್ನು ಪರಮೇಶ್ವರ ಅವರು ಮರಿ ಖರ್ಗೆಗೆ ಲೀಸ್‌ಗೆ ಕೊಟ್ಟಿದ್ದಾರೋ? ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಳಿನ್ ಕುಮಾರ್ ಅವರನ್ನು ಕಾಮಿಡಿ ಕಿಲಾಡಿ ಎಂದು ವ್ಯಂಗ್ಯವಾಡಿದೆ. ತಾವು ಅಧ್ಯಕ್ಷಗಿರಿಯನ್ನು ಸಂತೋಷ್ ಪಾದರಕ್ಷೆಗಳಿಗೆ ಲೀಸ್ ಕೊಟ್ಟಿದ್ದೀರಿ ಎಂದು ಕುಟುಕಿದೆ.
“ಬಿಜೆಪಿಗರ ಇತ್ತೀಚಿನ ಮಾತು ಕೃತಿ ಗಮನಿಸಿದರೆ ನಮ್ಮ ಸರ್ಕಾರ ಉಚಿತ ಮಾನಸಿಕ ಚಿಕಿತ್ಸೆಯ ಯೋಜನೆಯನ್ನೂ ರೂಪಿಸಬೇಕಾದೀತು” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
“ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಕಾರಣನಾದ ನಾಮಕಾವಸ್ಥೆ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕನಿಷ್ಠ ಕಾಮನ್ ಸೆನ್ಸ್ ಇಲ್ಲ, ಇನ್ನು ಸಂಸದೀಯ ನಿಯಮಗಳ ಬಗ್ಗೆ ಅರಿವಿರಲು ಹೇಗೆ ಸಾಧ್ಯ” ಎಂದು ಪ್ರಶ್ನಿಸಿದೆ.
“ಪ್ರಿಯಾಂಕ್ ಖರ್ಗೆ ಅವರು ಕಲಬುರಗಿಯ ಉಸ್ತುವಾರಿ ಸಚಿವರು, ಅಲ್ಲಿನ ವ್ಯವಸ್ಥೆಯನ್ನು ಸರಿಪಡಿಸುವುದು ಅವರ ಹೊಣೆಗಾರಿಕೆ. ಅಲ್ಲಿನ ಅಧಿಕಾರಿಗಳನ್ನು ಸರಿದಾರಿಗೆ ತರುವುದು ಅವರದ್ದೇ ಜವಾಬ್ದಾರಿ. ಇಷ್ಟು ಸಾಮಾನ್ಯ ತಿಳುವಳಿಕೆ ಇಲ್ಲದಿರುವುದಕ್ಕಾಗಿಯೇ ಕಟೀಲ್ ಅವರನ್ನು ಕಾಮಿಡಿ ಕಿಲಾಡಿ ಎನ್ನುವುದು” ಎಂದು ಟೀಕಿಸಿದೆ.
“ಕಟೀಲ್ ಅವರೇ, ತಾವು ಅಧ್ಯಕ್ಷಗಿರಿಯನ್ನು ಬಿಎಲ್ ಸಂತೋಷ್ ಅವರ ಪಾದರಕ್ಷೆಗಳಿಗೆ ಲೀಸ್‌ಗೆ ಕೊಟ್ಟಿದ್ದೀರಿ ಎಂದ ಮಾತ್ರಕ್ಕೆ ಬೇರೆಲ್ಲರೂ ಹಾಗೆಯೇ ಎಂದು ತಿಳಿಯುವುದು ಮೂರ್ಖತನ” ಎಂದು ಟ್ವೀಟ್ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಗೃಹ ಸಚಿವರಿಗೆ ಕೆಲಸದ ಒತ್ತಡ ಜಾಸ್ತಿಯಾಗಿ ಖಾತೆಯನ್ನು ಮರಿ ಖರ್ಗೆಗೆ ವಹಿಸಿದ್ದಾರೆಯೇ: ನಳಿನ್ ಕುಮಾರ್ ಪ್ರಶ್ನೆ
“ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರಿಗೆ ಕೆಲಸದ ಒತ್ತಡ ಜಾಸ್ತಿಯಾಗಿದೆಯೋ? ತಮ್ಮ ಖಾತೆಯ ಮೇಲೆ ಬೇಸರವೋ? ತಿಳಿಯುತ್ತಿಲ್ಲ. ಅಥವಾ ತಮ್ಮ ಗೃಹಖಾತೆಯ ಕೆಲಸಗಳನ್ನು ಪ್ರಿಯಾಂಕ್ ಖರ್ಗೆ ಅವರಿಗೆ ಲೀಟ್‌ಗೆ ಕೊಟ್ಟಿದ್ದಾರೋ? ಪೊಲೀಸ್ ಅಧಿಕಾರಗಳಿಗೆ ಮರಿ ಖರ್ಗೆಯವರು ಕ್ಲಾಸ್ ತಗೊತಿದ್ದಾರೆ ಎಂದರೆ ನನ್ನ ಊಹೆ ನಿಜ ಅಲ್ಲವೇ?” ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದರು.