ಮಯನ್ಮಾರ್ ಹಾಗೂ ಥೈಲ್ಯಾಂಡ್‌ನಲ್ಲಿ 7.7 ಮತ್ತು 6.4 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿದ್ದು, ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಇದರಿಂದ ಮಯನ್ಮಾರ್ ಗಡಿ ದೇಶವಾಗಿರುವ ಭಾರತದ ನವದೆಹಲಿ, ಕೋಲ್ಕತ್ತಾ ಹಾಗೂ ಈಶಾನ್ಯ ರಾಜ್ಯಗಳಲ್ಲೂ
ಭೂಮಿ ಕಂಪಿಸಿದ ಅನುಭವ ಉಂಟಾಗಿದೆ.
ಭೂಕಂಪದ ಪರಿಣಾಮ ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಮತ್ತು ಮಯನ್ಮಾರ್‌ನಲ್ಲಿ ಸೇತುವೆಯೊಂದು ಕುಸಿದು ಬಿದ್ದಿವೆ. ಘಟನೆಯಲ್ಲಿ ಅಪಾರ ಸಾವು, ನಷ್ಟ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ವಿಯೆಟ್ನಾಂ ಸೇರಿದಂತೆ ನೆರೆಯ ದೇಶಗಳಲ್ಲಿ ಕಂಪನದ ಅನುಭವವಾಗಿದೆ. ವಿಯೆಟ್ನಾಂನಲ್ಲಿ, ಹನೋಯ್ ಮತ್ತು ಹೋ ಚಿ ಮಿನ್ಹ್ ನಗರಗಳೆರಡೂ ಕಂಪನಗಳನ್ನು ಅನುಭವಿಸಿದವು, ಭೂಕಂಪನ ಚಟುವಟಿಕೆಯಿಂದಾಗಿ ಬೆಳಕಿನ ನೆಲೆವಸ್ತುಗಳು ತೂಗಾಡುತ್ತಿದ್ದವು. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಮತ್ತು ಜರ್ಮನಿಯ ಭೂವಿಜ್ಞಾನ ಕೇಂದ್ರ ಜಿಎಫ್‌ಝೆಡ್ ಮಯನ್ಮಾರ್‌ನಲ್ಲಿ ಭೂಕಂಪನದ ಕೇಂದ್ರಬಿಂದುವಾಗಿದ್ದು , 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಅಸ್ಸಾಂ ಮೂಲತಃ ಮಯನ್ಮಾರ್‌ನ ಭಾಗವಾಗಿತ್ತು: ಸುಪ್ರೀಂ ಕೋರ್ಟ್‌ಗೆ ಕಪಿಲ್ ಸಿಬಲ್ ಹೇಳಿಕೆ
ಜನನಿಬಿಡ ಕೇಂದ್ರ ಬ್ಯಾಂಕಾಕ್‌ನಲ್ಲಿರುವ ಗಗನಚುಂಬಿ ಕಟ್ಟಡಗಳು ಮತ್ತು ಹೋಟೆಲ್‌ಗಳಿಂದ ಭಯಗೊಂಡ ನಿವಾಸಿಗಳು ಹೊರಗೆ ಓಡಿಬರುತ್ತಿರುವ ವಿಡಿಯೋಗಳು ವೈರಲ್ ಆಗಿದೆ. ಶುಕ್ರವಾರ ಸಂಭವಿಸಿದ ಭೂಕಂಪದ ಸಮಯದಲ್ಲಿ ಬ್ಯಾಂಕಾಕ್‌ನಲ್ಲಿರುವ ಪ್ರಸಿದ್ಧ ಮಹಾನಕೋರ್ನ್ ಕಟ್ಟಡವು ಅಲುಗಾಡುತ್ತಿರುವ ವಿಡಿಯೋ ಕೂಡ ಇದೆ. ಪ್ರಬಲ ಭೂಕಂಪದ ನಂತರ ಥಾಯ್ ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ಸಭೆ ನಡೆಸಿದ್ದು, ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಮಯನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿನ ಭೂಕಂಪ ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಭಾರತ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಭಾರತವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.