ʼಮನುಧರ್ಮಶಾಸ್ತ್ರ ಮಹಿಳೆಯರನ್ನು ಅಡುಗೆ ಮನೆಯ ಕತ್ತಲ ಕೋಣೆಯಲ್ಲಿ ಕೊಳೆಯುವಂತೆ ಮಾಡಿತು. ಹೆಣ್ಣಿಗೆ ಯಾವುದೇ ಸ್ವಾತಂತ್ರ್ಯವನ್ನು ನೀಡದೆ ಬಂಧನದಲ್ಲಿ ಇಡುವಂತೆ ಮಾಡಿತು ಎಂದು ಫರಹತಾಬಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ.ಇಂದುಮತಿ ಪಿ. ಪಾಟೀಲ್ ಹೇಳಿದರು.
ಕಲಬುರಗಿಯ ಡಾ.ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಪದವಿ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದ ಡಾ.ಅಂಬೇಡ್ಕರ್ ವಿಚಾರ ವೇದಿಕೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿಯ ನಿಮಿತ್ಯ ಸರಣಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ʼಅಶಕ್ತರಾಗಿದ್ದ ಭಾರತೀಯ ಮಹಿಳೆಯರಿಗೆ ಸಂವಿಧಾನದಲ್ಲಿ ಸಮಾನ ಅವಕಾಶ ಕಲ್ಪಿಸುವ ಮೂಲಕ ಹೆಣ್ಣಿನ ಬದುಕಿಗೆ ಬೆಳಕಾಗಿ ಘನತೆ ತಂದವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ʼ ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಕೃಷ್ಣಪ್ಪ ಅವರು ಮಾತನಾಡಿ, ʼಅಂಬೇಡ್ಕರ್ ಕನಸು ಕಂಡ ಪೀಪಲ್ ಎಜುಕೇಷನ್ ಸೊಸೈಟಿಯ ಬೀಜವನ್ನು ಕಲಬುರಗಿಗೆ ತಂದು ನೆಟ್ಟು ಮರವಾಗಿಸಿದವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆʼ ಎಂದು ಅಭಿಪ್ರಾಯಪಟ್ಟರು.
ಡಾ.ಅಂಬೇಡ್ಕರ್ ವಿಚಾರ ವೇದಿಕೆಯ ಸಂಚಾಲಕ ಡಾ.ಗಾಂಧೀಜಿ ಮೋಳೆಕರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ʼಅಂಬೇಡ್ಕರ್ ಕಾಲೇಜು ಅಂಬೇಡ್ಕರ್ ವಿಚಾರಧಾರೆಯನ್ನು ವಿಸ್ತರಿಸುವ ಜವಾಬ್ದಾರಿ ನಿರ್ವಹಿಸಲು ಸರಣಿ ಉಪನ್ಯಾಸಗಳನ್ನು ನಗರದ ಬೇರೆ ಬೇರೆ ಕಾಲೇಜುಗಳಲ್ಲಿ ಆಯೋಜಿಸಿದೆ. ಅಂಬೇಡ್ಕರ್ ಚಿಂತನೆ ಕಲಿಯುವ ಮಕ್ಕಳಲ್ಲಿ ಗಾಢ ಪರಿಣಾಮ ಬೀರಬೇಕೆಂಬುದು ನಮ್ಮ ಕನಸು” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೀಪಲ್ ಏಜುಕೇಶನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಸೂರನ್ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಡಿ.ವಿಜಯಕುಮಾರ ಅವರು ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬೇಸಿಗೆ ಬಿಸಿ : ಏಪ್ರಿಲ್, ಮೇ ತಿಂಗಳಲ್ಲಿ ಕಚೇರಿ ಸಮಯ ಬದಲಾವಣೆಗೆ ಆಗ್ರಹ
ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಅರುಣ್ ಜೋಳದಕೂಡ್ಲಿಗಿ ಕಾರ್ಯಕ್ರಮ ನಿರೂಪಿಸಿದರು. ರಾಜ್ಯಶಾಸ್ತ್ರದ ಪ್ರಾಧ್ಯಾಪಕ ಡಾ.ಹರ್ಷವರ್ಧನ ವಂದಿಸಿದರು. ಪ್ರಾಧ್ಯಾಪಕರಾದ ಡಾ ನಿರ್ಮಲಾ ಸಿರಗಾಪುರ, ಡಾ.ಸಿದ್ದಪ್ಪ ಎಸ್.ಕಾಂತಾ, ಡಾ.ಸುದರ್ಶನ ಮದನಕರ್, ಡಾ. ವಸಂತ ವಿ.ನಾಶಿ, ಡಾ.ಶಿವಕುಮಾರ್ ಸಿ.ಎಸ್, ಡಾ.ಸಿದ್ದಾರ್ಥ ಮದನಕರ್, ಡಾ. ಕರಿಬಸಪ್ಪ, ಡಾ. ದತ್ತುರಾಯ ಮೊದಲಾದವರು ಉಪಸ್ಥಿತರಿದ್ದರು.