ಯತ್ನಾಳ್ ಬಸನಗೌಡರು ರಾಜಕೀಯ ಬಲಿಪಶುವೆ?

Date:

Advertisements
ಮೇಲ್ನೋಟಕ್ಕೆ ಹುಂಬ ರಾಜಕಾರಣಿಯಂತೆ ಕಂಡರೂ ಯತ್ನಾಳ್ ಬಸನಗೌಡರು ಬುದ್ಧಿವಂತರೆ. ಪ್ರತಿಯೊಂದು ಹೆಜ್ಜೆಯಲ್ಲೂ ರಾಜಕೀಯದ ಲಾಭ ಇದ್ದೇ ಇರುತ್ತದೆ. ಮುಸ್ಲಿಮರನ್ನು ತೆಗಳುವುದರಲ್ಲೂ ಲಾಭವಿದೆ. ಬಸವಣ್ಣ ಹೊಳೆಗೆ ಹಾರಿದ ಎನ್ನುವುದರ ಹಿಂದೆಯೂ ವಿಪ್ರರನ್ನು ಗೆಲ್ಲುವ ಹುನ್ನಾರದ ಜಾಡು ಇದೆ.

ಬಸನಗೌಡರು ಅಮಾಯಕ ನೆರೆಮನೆಯ ಹುಡುಗನಾಗಿದ್ದಾಗ ಶಾಸಕರಾದರು. ಒಳ್ಳೆಯ ಯುವ ಶಾಸಕನಾದಾಗ ಸಂಸದನಾದರು. ಸ್ಪುರದ್ರೂಪಿ ಅಮಾಯಕ ಸಂಸದ ಎನಿಸಿಕೊಳ್ಳುವಾಗ ಕೇಂದ್ರ ಸಚಿವರಾದರು. ಅದನ್ನೆ ಮುಂದುವರಿಸಿಕೊಂಡು ಹೋಗಿದ್ದರೆ ಈಗಾಗಲೇ ಒಂದೆರಡು ಭಾರಿ ಮುಖ್ಯಮಂತ್ರಿಯೂ ಆಗಿರಬಹುದಾಗಿತ್ತು. ಆದರೆ ಹಾಗೆ ಮಾಡಗೊಡಲಿಲ್ಲ ವಿಪ್ರರು. ಬೆಳೆಯುತ್ತಿರುವ ಮೊಳಕೆಯನ್ನು ಚಿವುಟಿಹಾಕಲು ಹುಬ್ಬಳ್ಳಿಯ ಹಮ್ಮೀರರು ಸಿದ್ಧವಾಗಿದ್ದರು. ʼನೀವು ಧೈರ್ಯಶಾಲಿ ನಾಯಕರು, ನೀವು ಮುಂದೆ ನಾವೆಲ್ಲ ನಿಮ್ಮ ಹಿಂದೆʼ ಎಂದರು. ಪ್ರಭುತ್ವದ ವಿರುದ್ಧ ಮಾತನಾಡಲು ಪ್ರಚೋದನೆ ನೀಡಿದರು. ಈ ಹುಬ್ಬಳ್ಳಿಯ ಹಮ್ಮೀರರು ಈಗಾಗಲೇ ಅಲ್ಲಿಯ ಲಿಂಗಾಯತನೊಬ್ಬನನ್ನು ರಾಜಕೀಯವಾಗಿ ನುಂಗಿ ನೀರು ಕುಡಿದಿದ್ದರು

ಭಾಜಪದಲ್ಲಿ ಹಿಂದೊಮ್ಮೆ ಇಂತಹದೆ ವಾತಾವರಣ ಸೃಷ್ಟಿಯಾಗಿತ್ತು. ಆಗ ಅದು ಲಿಂಗಾಯತ ಮತ್ತು ಬ್ರಾಹ್ಮಣರ ನಡುವೆ ನಡೆದ ನೇರ ಕಾಳಗವಾಗಿತ್ತು. ದೆಹಲಿ ನಾಯಕರಿಗೆ ಪ್ರಬಲವಾಗಿ ಬೆಳೆಯುತ್ತಿದ್ದ ಯಡಿಯೂರಪ್ಪನವರನ್ನು ನಿಯಂತ್ರಿಸಬೇಕಾಗಿತ್ತು. ಅದು ಅನಂತಕುಮಾರನಿಂದ ಮಾತ್ರ ಸಾಧ್ಯ ಎಂದು ಕಂಡುಕೊಂಡಿದ್ದರು. ಒಡೆದಾಳುವ ನೀತಿ ಅರಿವಾಗುತ್ತಿದ್ದಂತೆ ಇವರಿಬ್ಬರೂ ಜಾಗ್ರತರಾಗಿದ್ದರು. ಚಾಣಾಕ್ಷ ರಾಜಕಾರಣಿಯಾಗಿದ್ದ ಅನಂತಕುಮಾರ ʼಕೇಂದ್ರಕ್ಕೆ ನಾನು ರಾಜ್ಯಕ್ಕೆ ನೀನುʼ ಎಂಬ ಸಂಧಾನದ ಹಾದಿ ಹಿಡಿದಿದ್ದರು. ರಾಜಕೀಯದಲ್ಲಿ ಒಬ್ಬರ ಮೇಲೆ ಇನ್ನೊಬ್ಬರನ್ನು ಇಡುವುದು ಸಾಮಾನ್ಯ. ಆದರೆ ಅದಕ್ಕೆ ಕಾಲಾಳುಗಳ ಅವಶ್ಯಕತೆ ಸದಾ ಇದ್ದೇ ಇರುತ್ತದೆ. ಅನಂತಕುಮಾರ ಕಣ್ಮರೆಯಾದಾಗ ಯಡಿಯೂರಪ್ಪನವರನ್ನು ನಿಯಂತ್ರಣದಲ್ಲಿರಿಸಲು ಲಿಂಗಾಯತ ಪ್ರಬಲ ಕೋಮಿನ ನಾಯಕನನ್ನು ಹುಡುಕುತ್ತಿತ್ತು ವಿಪ್ರರ ಪಕ್ಷ. ಆ ಸ್ಥಾನವನ್ನು ಶೆಟ್ಟರ್ ಅಥವಾ ಬೊಮ್ಮಾಯಿಯವರು ತುಂಬಬಹುದು ಎಂದುಕೊಂಡಿದ್ದರು. ಆದರೆ ಇವರಿಬ್ಬರು ಯಡಿಯೂರಪ್ಪನವರಿಗೆ ಶರಣಾಗಿ ತಮ್ಮ ಕುರ್ಚಿ ಉಳಿಸಿಕೊಂಡರು. ಒಡೆದಾಳುವ ನೀತಿಯ ಬಲೆಯಲ್ಲಿ ಸರಳವಾಗಿ ಸಿಲುಕಿಕೊಂಡುಬಿಟ್ಟರು ಯತ್ನಾಳ್.

ಕೇಂದ್ರದಲ್ಲೊಬ್ಬ ತೆರೆಮರೆಯ ಹಿಂದಿದ್ದು ಕಾರ್ಯಾಚರಣೆ ನಡೆಸುತ್ತಿದ್ದ. ಅವನನ್ನು ʼಸಂತೋಷʼಗೊಳಿಸಲು ತಿಣುಕಾಡುತ್ತಿದ್ದರು ಯಡಿಯೂರಪ್ಪನವರು. ಆದರೆ ಇವನಿಗೆ ಲಿಂಗಾಯತರೆಂದರೆ ಅಲರ್ಜಿ. ʼಇವರೇನು ಮಹಾ, ಇಡೀ ದೇಶವೇ ನಮ್ಮ ಕೈಯಲ್ಲಿದೆ, ಗುಜರಾತಿನಲ್ಲಿ ಬಲಾಢ್ಯ ಪಟೇಲ್ ಸಮಾಜವನ್ನು, ಹರಿಯಾಣದಲ್ಲಿ ಜಾಟ್ ಸಮಾಜವನ್ನು, ಯುಪಿಯಲ್ಲಿ ಯಾದವರನ್ನು ಬದಿಗಿಟ್ಟು ಚುನಾವಣೆ ಗೆದ್ದಿಲ್ಲವೆ? ಅಂತಹವರನ್ನೇ ಹಣಿದವರಿಗೆ ಕರ್ನಾಟಕದ ಲಿಂಗಾಯತರು ಯಾವ ಲೆಕ್ಕ? ಇವರೇನು ಮಹಾʼ ಎನ್ನುತ್ತಿದ್ದ ಸಂತೋಷ. ಇವನು ಉರುಳಿಸಿದ ದಾಳದಲ್ಲಿ ಸಿಕ್ಕಿ ಹಾಕಿಕೊಂಡುಬಿಟ್ಟರು ಬಸನಗೌಡರು. ಇತ್ತ ಯಡಿಯೂರಪ್ಪನವರಿಗೆ ಇವರ ನಡೆ ಮುಜುಗರವಾದರೂ ತಡೆದುಕೊಳ್ಳುತ್ತಿದ್ದರು. ಆದರೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಸರಳ ಸಿದ್ಧಾಂತ ಇವರಿಬ್ಬರಿಗೂ ಅರ್ಥವಾಗಲೇ ಇಲ್ಲ.

Advertisements

ಇದನ್ನು ಓದಿದ್ದೀರಾ?: ಅನುಭವ ಮಂಟಪವನ್ನು ಮನುವಾದಿಗಳು ಹಾಳು ಮಾಡಿ ಅವೈದಿಕ ನವಸಮಾಜದ ನಿರ್ಮಾಣವನ್ನು ಸ್ಥಗಿತಗೊಳಿಸಿದರು!

ಬಸವಣ್ಣನ ಕರ್ನಾಟಕದಲ್ಲಿ ಹಾರ್ಡ್ ಹಿಂದುತ್ವ ನಡೆಯುವುದಿಲ್ಲ ಎಂದು ನಿಧಾನವಾಗಿ ಅರಿವಾಗಲಾರಂಭಿಸಿತ್ತು ಕೇಂದ್ರದ ಬಿಜೆಪಿಯ
ತಂತ್ರಗಾರರಿಗೆ. ಎಂಟನೆಯ ಶತಮಾನದಲ್ಲಿ ಶಂಕರನನ್ನು ನಂತರ ಮಾಧ್ವ, ರಾಮಾನುಜಾಚಾರ್ಯರನ್ನು ಭಾರತಕ್ಕೆ ನೀಡಿದ ನಾಡಿದು. ಹನ್ನೆರಡನೆಯ ಶತಮಾನದಿಂದಲೇ ಸಮ ಸಮಾಜದ ಬೇರುಗಳು ಇಲ್ಲಿ ಬೇರೂರಿವೆ. ಸೂಫಿಗಳು ಶರಣರು ಈ ನಾಡಿನ ಕಣ್ಮಣಿಗಳು ಎಂದು ಅರಿವಾಗಲು ಹತ್ತು ವರ್ಷಗಳನ್ನು ಕಳೆದುಕೊಂಡಿತ್ತು ಭಾರತೀಯ ಜನತಾ ಪಾರ್ಟಿ. ಅವರು ಮೆಲ್ಲನೆ ಕಟ್ಟರ್ ಹಿಂದುತ್ವವಾದಿಗಳನ್ನು ಹಿಂದೆ ತಳ್ಳಲಾರಂಭಿಸಿದರು. ಕಡಲ ತೀರದಲ್ಲಿ ಐದು ಬಾರಿ ಸಂಸದನಾದ ಅನಂತಕುಮಾರ ಹೆಗಡೆಯನ್ನು ಕಡಲ ತೀರದಲ್ಲಿ ತಿರುಗಾಡು ಎಂದರು. ಮೈಸೂರಿನ ಪ್ರತಾಪನಿಗೆ ನಿನ್ನ ಪ್ರತಾಪವನ್ನು ಹೆಂಡತಿಯ ಮೇಲೆ ತೋರಿಸು ಎಂದರು. ಇನ್ನೊಬ್ಬನಿಗೆ ಸೀಟಿ ಊದುತ್ತ ಚಿಕ್ಕಮಗಳೂರಿನಲ್ಲಿರು ಎಂದು ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತೆ ಮಾಡಿದ್ದಾರೆ. ಹಳೆಹುಲಿ ಈಶ್ವರಪ್ಪನಿಗೆ ಕ್ಯಾರೆ ಎನ್ನಲಿಲ್ಲ. ಆದರೆ ಇವರ ಮೇಲೆ ನಡೆಸಿದ ಕಾರ್ಯಾಚರಣೆಯನ್ನು ಯತ್ನಾಳ ಮೇಲೆ ತಕ್ಷಣ ಪ್ರಯೋಗಿಸಲಿಲ್ಲ. ಕಾರಣ ಯತ್ನಾಳ ಹಿಂದಿದ್ದ ದೊಡ್ಡ ಸಮಾಜ. ಆ ಸಮಾಜದ ಬೆಂಬಲ ಎಷ್ಟಿದೆ ಎಂದು ಅಳೆದು ತೂಗಿ ನೋಡುತ್ತಲೇ ಇದ್ದರು. Long rope ನೀಡಿದರು. ಸುದಾರಿಸಿಕೋ ಎಂದರು. ಮುಂದೊಂದು ದಿನ ಆ ಲಾಂಗ್ ರೋಪ್ ಕೊರಳಿಗೆ ಸುತ್ತುಕೊಳ್ಳಬಹುದೆಂದು ಬಸನಗೌಡರು ಅಂದುಕೊಂಡಿರಲಿಕ್ಕಿಲ್ಲ.

ಮೇಲ್ನೋಟಕ್ಕೆ ಹುಂಬ ರಾಜಕಾರಣಿಯಂತೆ ಕಂಡರೂ ಬಸನಗೌಡರು ಬುದ್ಧಿವಂತರೆ. ಪ್ರತಿಯೊಂದು ಹೆಜ್ಜೆಯಲ್ಲೂ ರಾಜಕೀಯದ ಲಾಭ ಇದ್ದೇ ಇರುತ್ತದೆ. ಮುಸ್ಲಿಮರನ್ನು ತೆಗಳುವುದರಲ್ಲೂ ಲಾಭವಿದೆ. ಬಸವಣ್ಣ ಹೊಳೆಗೆ ಹಾರಿದ ಎನ್ನುವುದರ ಹಿಂದೆಯೂ ವಿಪ್ರರನ್ನು ಗೆಲ್ಲುವ ಹುನ್ನಾರದ ಜಾಡು ಇದೆ. ಅದನ್ನೆ ಅಲ್ಲವೆ ಅವರ ಪಕ್ಷವು ಸಹ ಕಲಿಸುತ್ತಿರುವುದು. ಭಾರತೀಯ ಜನತಾ ಪಕ್ಷವು ಭಾರತದಲ್ಲಿರುವ 15% ಮುಸ್ಲಿಮರಿಂದ 85% ಹಿಂದೂಗಳಿಗೆ ಗಂಡಾಂತರವಿದೆ ಎನ್ನುತ್ತದೆ. ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಮಕ್ಕಳನ್ನು ಹೆತ್ತು, ತಮ್ಮ ಜನಸಂಖ್ಯೆಯನ್ನು ವೃದ್ಧಿಸಿಕೊಂಡು ಮುಂದೊಂದು ದಿನ ಭಾರತವನ್ನೇ ಮುಸ್ಲಿಂ ರಾಷ್ಟ್ರ ಮಾಡಲಿದ್ದಾರೆ ಎಂಬ ಭ್ರಮೆ ಹರಡುತ್ತಿಲ್ಲವೆ? ಇದೆ ಭ್ರಮೆಯನ್ನು ಹರಡಿ ಬಹುಸಂಖ್ಯಾತರನ್ನು (85%) ತಣ್ಣಗೆ ಒಗ್ಗೂಡಿಸುತ್ತಿಲ್ಲವೆ? ಇಲ್ಲದ ಭಯ ಸೃಷ್ಟಿಸಿ ಬಹುಸಂಖ್ಯಾತ ಹಿಂದೂ ಮತ ಪಡೆಯುತ್ತಿಲ್ಲವೆ?

ಇದು ಇವರ ಪಕ್ಷದ ಪ್ರಣಾಳಿಕೆಯಾದರೆ ವೈಯಕ್ತಿಕವಾಗಿ ಯತ್ನಾಳರು ಇವರಿಗಿಂತಲೂ ಇನ್ನೊಂದು ಹೆಜ್ಜೆ ಮುಂದಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಇವರು ಪಂಚಮಸಾಲಿ ಎನ್ನುವುದಿಲ್ಲ. ಅಲ್ಲಿ ಹಿಂದೂಗಳ ಕಾರ್ಡ್ ಆಡುತ್ತಾರೆ. ಉಳಿದ ಉತ್ತರ ಕರ್ನಾಟಕದ ಕ್ಷೇತ್ರಗಳಲ್ಲಿ ಪಂಚಮಸಾಲಿಯಾಗುತ್ತಾರೆ. ಹಿಂದೂಗಳ ಪಕ್ಷದಲ್ಲಿ ‘ಹಿಂದೂ ನಾವೆಲ್ಲ ಒಂದು’ ಎನ್ನುತ್ತ ಮೀಸಲಾತಿ ನೆಪದಲ್ಲಿ ಹಿಂದೂಗಳಲ್ಲಿ ಪಂಚಮಸಾಲಿಗಳಿಗೆ ಮೀಸಲಾತಿ ನೀಡಿ ಎನ್ನುತ್ತಾರೆ. ಹಾಗಿದ್ದರೆ ‘ಹಿಂದೂ ನಾವೆಲ್ಲ ಒಂದು’ ಹೇಗಾಗುತ್ತದೆ ಎಂದಾಗ, ಅನ್ಯ ಸಮಾಜಗಳಿಗೂ ಅದನ್ನು ವಿಸ್ತರಿಸಿ ಎನ್ನುತ್ತಾರೆ. ಎಲ್ಲರಿಗೂ ಮೀಸಲಾತಿ ನೀಡಿದರೆ ಮೀಸಲಾತಿಯ ಲಾಭ ಯಾರಿಗೆ? ಎಂದರೆ ನಗೆಪಾಟಲಿಗೆ ತಮ್ಮನ್ನು ತಾವೇ ದೂಡಿಕೊಳ್ಳುತ್ತಾರೆ.

ಅವರ ರಾಜಕೀಯ ನಡೆ ಏನೇ ಇರಲಿ. ಇವರು ತಮ್ಮ ವಿರೋಧಿಗಳು ಸಹ ಮೆಚ್ಚುವಂತೆ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಬಿಜಾಪುರ ಜಿಲ್ಲೆ ಇಬ್ಬರು ನಾಯಕರನ್ನು ಕಂಡಿದೆ. ಒಬ್ಬರು ಕಾಂಗ್ರೆಸ್ಸಿನಲ್ಲಿದ್ದರೆ ಇನ್ನೊಬ್ಬರು ಭಾರತೀಯ ಜನತಾ ಪಕ್ಷದಲ್ಲಿದ್ದಾರೆ. ಒಬ್ಬರು ಯತ್ನಾಳ್ ಗೌಡರಾದರೆ ಇನ್ನೊಬ್ಬರು ತೊರವಿ ಗೌಡರು. ಇವರಿಬ್ಬರೂ ಕ್ರಿಯಾಶೀಲರು. ತೊರವಿಯ ಎಂ.ಬಿ. ಪಾಟೀಲರು ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ನಾಯಕರು. 2013-18ರ ಅವಧಿಯಲ್ಲಿ ಅವರು ನೀರಾವರಿ ಖಾತೆಯನ್ನು ವಹಿಸಿಕೊಂಡು ‘ಬರದ ನಾಡು ಬಿಜಾಪುರ’ ಎಂಬ ಹಣೆಪಟ್ಟಿಯನ್ನು ಕಳಚಲು ನಿರಂತರವಾಗಿ ಕೆಲಸ ಮಾಡಿದವರು. ಇಡೀ ವಿಜಾಪುರ ಜಿಲ್ಲೆಗೆ ನೀರಾವರಿ ಒದಗಿಸಿದರು. ಎಂ.ಬಿ. ಪಾಟೀಲರಂತೆ ಸಚಿವನಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡುವ ಅವಕಾಶ ಯತ್ನಾಳ ಗೌಡ್ರಿಗೆ ಸಿಗಲಿಲ್ಲ. 2018ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡಿತು. ವಿಜಾಪುರದ ನಗರ ಶಾಸಕರಾಗಿ ಯತ್ನಾಳ ಬಸನಗೌಡರು ಚುನಾಯಿತರಾದರು. ಮಂತ್ರಿಯಾಗುವ ಎಲ್ಲ ಅರ್ಹತೆಗಳಿದ್ದರೂ ಅವರಿಗೆ ಅದು ಒಲಿದು ಬರಲಿಲ್ಲ. ಆದರೆ ಅವರೊಬ್ಬ ಪ್ರಭಾವಿ ನಾಯಕರಾಗಿ ಹೊರ ಹೊಮ್ಮಿದ್ದರು. ಅವರ ಮಾತಿಗೆ ಸರಕಾರದಲ್ಲಿ ಬೆಲೆಯಿತ್ತು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿರಲಿ ಅಥವಾ ಬೊಮ್ಮಾಯಿಯವರೇ ಮುಖ್ಯಮಂತ್ರಿಯಾಗಿರಲಿ ವಿಜಾಪುರದ ನಗರ ಕ್ಷೇತ್ರ ಅಭಿವೃದ್ಧಿಗಾಗಿ ಅವರು ಅಡ್ಡ ಬರಲಿಲ್ಲ. ಯತ್ನಾಳಗೌಡರು ಹಲವು ಹತ್ತು ಯೋಜನೆಗಳನ್ನು ಹಾಕಿಕೊಂಡರು. ಅವರ ಯೋಜನೆಗಳಿಗೆ ಸರಕಾರ ಕಮಕ್ ಕಿಮಕ್ ಎನ್ನದೆ ಹಣ ನೀಡುತ್ತಿತ್ತು. ಸಾವಿರಾರು ಕೋಟಿ ಹಣವನ್ನು ವಿಜಾಪುರ ನಗರಕ್ಕೆ ತಂದರು. ವಿಜಾಪುರ ನಗರದ ಚಿತ್ರಣವನ್ನೇ ಬದಲಾಯಿಸಿದರು. ಹತ್ತು ಹದಿನೈದು ವರ್ಷಗಳ ಹಿಂದಿದ್ದ ನಾ ನೋಡಿದ ವಿಜಾಪುರಕ್ಕೂ ಇಂದಿನ ವಿಜಾಪುರಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ಇದನ್ನು ಓದಿದ್ದೀರಾ?: ಯತ್ನಾಳ್‌ ಮುಂದಿನ ನಡೆ ಏನು?; ಹೊಸ ಪಕ್ಷ ಅಥವಾ ಕಾಂಗ್ರೆಸ್‌!

ವಿಜಯಪುರದಲ್ಲಿ ಬೆಂಗಳೂರನ್ನು ಮೀರಿಸುವ ರಸ್ತೆಗಳಿವೆ. ಜಗತ್ ಪ್ರಸಿದ್ಧ ಪ್ರವಾಸಿ ತಾಣಗಳಿವೆ. ಜೇಬಿಗೆ ತಕ್ಕಂತೆ ಒಳ್ಳೆಯ ಹೋಟೆಲ್‌ಗಳಿವೆ. ವಿಶ್ವದರ್ಜೆಯ ಬ್ರ್ಯಾಂಡ್ ಶೋ ರೂಮ್ ಗಳಿವೆ. ಮಾಲ್ ಗಳಿವೆ. ಮೇಲಾಗಿ ರಸ್ತೆ ಬದಿಯಲ್ಲಿ ಆಲಂಕಾರಿಕ ಮರಗಳಿವೆ. ನಗರವಾಸಿಗಳಿಗೆ ಕೃಷ್ಣೆ ನಿತ್ಯದರ್ಶನ ನೀಡುತ್ತಾಳೆ. ನಗರಸಭೆ ನಗರದ ಸ್ವಚ್ಛತೆಗೆ ಗಮನ ಕೊಟ್ಟಿದೆ. ಭೂತನಾಳ ಕೆರೆ ಮೈ ತುಂಬಿಕೊಂಡು ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ. ಮೇಲಾಗಿ ಹಿಂದೂ ಮುಸ್ಲಿಂ ಗಲಾಟೆಗಳಿಲ್ಲದೆ ನಗರ ಶಾಂತವಾಗಿದೆ.

“ಪಾಲಿಟಿಕ್ಸ್ ಕೇಲಿಯೇ ಹಮಾರಾ ಗೌಡಾ ಸ್ಟೇಜ್ ಪೇ ಗಾಲಿ ದೇತಾ. ಮಗರ ಉಸಕಾ ದಿಲ್ ಬಹುತ್ ಸಾಫ್ ಹೈ. ಘರ ಗಯಾತೋ ಹಮಾರಾ ಕಾಮ್ ಚುಟ್ಕಿಮೆ ಹೋ ಜಾತಾ” ಎನ್ನುತ್ತಾನೆ ಮಿಂಯಾ ಬಾಯಿ.

ಇಬ್ಬರು ಮುಖ್ಯಮಂತ್ರಿಗಳನ್ನು ಕೊಟ್ಟ ಹುಬ್ಬಳ್ಳಿಯ ಸ್ಥಿತಿ ಕಂಡು ಮರುಗಿದ್ದೆ. ಆದರೆ ಮಂತ್ರಿಗಳಿಲ್ಲದ ವಿಜಾಪುರ, ಬೆಳಗಾವಿ, ಶಿವಮೊಗ್ಗ ಇಂದು ಬಿ ದರ್ಜೆಯ ಪಟ್ಟಣಗಳಾಗಿ ಭಾರತದ ಗಮನ ಸೆಳೆಯುತ್ತವೆ.

ಜಿ ಬಿ ಪಾಟೀಲ್
ಜಿ ಬಿ ಪಾಟೀಲ್‌
+ posts

ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಜಿ ಬಿ ಪಾಟೀಲ್‌
ಜಿ ಬಿ ಪಾಟೀಲ್‌
ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

Download Eedina App Android / iOS

X