ಅನುಭವ ಮಂಟಪವನ್ನು ಮನುವಾದಿಗಳು ಹಾಳು ಮಾಡಿ ಅವೈದಿಕ ನವಸಮಾಜದ ನಿರ್ಮಾಣವನ್ನು ಸ್ಥಗಿತಗೊಳಿಸಿದರು!

Date:

Advertisements

12ನೇ ಶತಮಾನದ ಕಾಯಕಜೀವಿಗಳ ಅನುಭವ ಮಂಟಪವನ್ನು ಮನುವಾದಿಗಳು ಹಾಳು ಮಾಡಿ ಅವೈದಿಕ ನವಸಮಾಜದ ನಿರ್ಮಾಣವನ್ನು ಸ್ಥಗಿತಗೊಳಿಸಿದರು! ಇದನ್ನೆಲ್ಲ ವೀಣಾ ಬನ್ನಂಜೆ ಅಂಥವರಿಗೆ ಯಾರು ಹೇಳಬೇಕು? ಜಾಣಕಿವುಡರಿಗೆ ಹೇಳಲು ಸಾಧ್ಯವೆ?

ಅನುಭವ ಮಂಟಪ ನಿರ್ಮಾಣಕ್ಕೆ ಸಂಬಂಧಿಸಿದ ಶಿಫಾರಸು ಸಮಿತಿಯ ಮೊದಲ ಸಭೆಯ ಅಜೆಂಡಾದಲ್ಲಿ ಮೊದಲ ಪಾಯಿಂಟ್ “ಅನುಭವ ಮಂಟಪ ಕಾಲ್ಪನಿಕ” ಎಂದು ಸಮಿತಿಯ ಅಧ್ಯಕ್ಷರಾಗಿದ್ದ ಗೊ.ರು.ಚ. ಅವರು ಬರೆದಿದ್ದರು. ನಾನು ಕೂಡಲೆ, ನೀಲಮ್ಮನ ವಚನವೊಂದರಲ್ಲಿ ಅನುಭವ ಮಂಟಪದ ಕುರಿತು ಹೇಳಿದ್ದನ್ನು ಹೇಳಿ ಆ ಪಾಯಿಂಟ್ ತೆಗೆಸಿದೆ.

ಎರಡನೇ ಮೀಟಿಂಗ್ ನಲ್ಲಿ ಅವರಿಗೆ ರೆವೆರೆಂಡ್ ಉತ್ತಂಗಿ ಚನ್ನಪ್ಪ ಅವರ ಅನುಭವ ಮಂಟಪದ ಐತಿಹಾಸಿಕತೆ ಪುಸ್ತಿಕೆ ಕೊಟ್ಟೆ. ಈ ಪುಸ್ತಕ ನೋಡಿದ್ದಿಲ್ಲ ಎಂದರು. ಅವರು ಮೊದಲ ಸಭೆಯಲ್ಲೇ ಸತ್ಯವನ್ನು ಒಪ್ಪಿಕೊಂಡಿದ್ದರು. ಅವರ ಪ್ರಜಾಪ್ರಭುತ್ವವಾದಿ ಗುಣಕ್ಕೆ ಶರಣು. ಇಂಥ ಗುಣ ನಮ್ಮೆಲ್ಲರಲ್ಲೂ ಇರುವುದು ಅವಶ್ಯವಾಗಿದೆ.

ಕೆಲದಿನಗಳ ಹಿಂದೆ ಅನುಭವ ಮಂಟಪಕ್ಕೆ ಸಂಬಂಧಿಸಿದಂತೆ ವೀಣಾ ಬನ್ನಂಜೆ ಅವರ ಭಯಂಕರ ಶೈಲಿಯ ಮಾತುಗಳನ್ನು ಕೇಳುವಾಗ ಸತ್ಯವಾಗಿಯೂ ತಲೆನೋವು ಶುರುವಾಯಿತು. ಅನುಭವ ಮಂಟಪ ಕಾಲ್ಪನಿಕ ಎಂದು ಸಾಧಿಸಲು ಅವರು ಪಟ್ಟ ಶ್ರಮವನ್ನು ಕಲ್ಪಿಸಿಕೊಂಡು ಅವರ ಬಗ್ಗೆ ಕರುಣೆ ಮೂಡಿತು. ಸುಳ್ಳನ್ನು ಸಾಧಿಸುವುದು ಬಹಳ ಕಷ್ಟದ ಕೆಲಸ. ಸತ್ಯಕ್ಕೆ ಯಾವುದೇ ತಿಣುಕಾಟದ ಅವಶ್ಯಕತೆ ಇಲ್ಲ. ಅವರು 15ನೇ ಶತಮಾನದ ಮೊದಲ ಶೂನ್ಯ ಸಂಪಾದನೆಯನ್ನು ತಮ್ಮ ವಾದಕ್ಕೆ ಬಳಸಿಕೊಂಡರು. ಶಿವಗಣಪ್ರಸಾದಿ ಮಹಾದೇವಯ್ಯನವರು 1415ರಲ್ಲಿ ಬರೆದ ಮೊದಲ ಶೂನ್ಯ ಸಂಪಾದನೆ ಅದು. (ನಂತರ ಇನ್ನೂರು ವರ್ಷಗಳ ಅವಧಿಯಲ್ಲಿ ಮತ್ತೆ ಮೂರು ಬಂದಿವೆ.)

ಅದರಲ್ಲಿ ಅವರು “ಇದು ಪಗರಣ” ಎಂದು ಸ್ಪಷ್ಟಪಡಿಸಿದ್ದಾರೆ. 15ನೇ ಶತಮಾನದ ಮತ್ತು ತದನಂತರ ಇನ್ನೂರು ವರ್ಷಗಳ ಅವಧಿಯಲ್ಲಿ ಬಂದ ಶೂನ್ಯ ಸಂಪಾದನೆಗಳ ಸಂಭಾಷಣೆಗಳಲ್ಲಿನ ಕೆಲ ದುರ್ಬಲ ಅಂಶಗಳನ್ನು ಎತ್ತಿ 12ನೇ ಶತಮಾನದ ಅನುಭವ ಮಂಟಪದ ಮಹತ್ವವನ್ನು ಅಳೆಯಲಿಕ್ಕಾಗದು.

ಇನ್ನು ಕ್ರಿಸ್ತ ಪೂರ್ವದ ಪ್ಲೇಟೋನ ಡೈಲಾಗ್ ಗಳನ್ನು ಅನುಭವ ಮಂಟಪದ ಚರ್ಚೆಗೆ ಹೋಲಿಸಲಿಕ್ಕಾಗದು. ಬೃಹದಾರಣ್ಯಕ ಉಪನಿಷತ್ತಿನ ಸಂಭಾಷಣೆ ಮತ್ತು ರಾಜರ್ಷಿಗಳ ಆನುಭಾವಿಕ ನೆಲೆಯ ಚಿಂತನೆಗಳ ಹೋಲಿಕೆ ಹಿನ್ನೆಲೆಯಲ್ಲಿ ಅನುಭವ ಮಂಟಪದ ಐತಿಹಾಸಿಕೆಯನ್ನು ಒರೆಗಲ್ಲಿಗೆ ಹಚ್ಚುವುದು ಬಾಲಿಶ ಎನಿಸಿತು. ಅವರು ಈ ಓಘದಲ್ಲಿ ಅಕ್ಬರ್ ನನ್ನೂ ಎಳೆತಂದರು!

ವೀಣಾ ಬನ್ನಂಜೆ

ಅನುಭವ ಮಂಟಪವನ್ನು “ಅನುಭಾವ ಮಂಟಪ” ಎಂದು ತಪ್ಪಾಗಿ ಭಾವಿಸಿ ಅದನ್ನೂ ಪ್ರತಿಪಾದಿಸಿದರು. “ಚನ್ನಬಸವನೆಂಬ ಪ್ರಸಾದಿಯ ಪಡೆದು, ಅನುಭವ ಮಂಟಪವನನು ಮಾಡಿ ಅನುಭವ ಮೂರ್ತಿಯಾದ ನಮ್ಮ ಬಸವಯ್ಯನು.” ಎಂದು ನೀಲಾಂಬಿಕೆ ಹೇಳಿದ್ದಾರೆ.

“ಈ ಅನುಭವ ಮಂಟಪ ಇಲ್ಲಿರುವ ಎಲ್ಲಾ ಅನುಭಾವಿಗಳ ಮಹತ್ವಾಕಾಂಕ್ಷೆಯ ನೆಲೆವೀಡು.” ಎಂದು ಮಡಿವಾಳ ಮಾಚಿದೇವರು ಹೇಳಿದ್ದಾರೆ.” ಅದು ಅನುಭವ ಮಂಟಪವೇ ಆಗಿದೆ. ೭೭೦ ಅಮರಗಣಗಳು, ಮನುವಾದಿ ಸಮಾಜದಲ್ಲಿ ಅತ್ಯಂತ ಹಿಂದುಳಿದ ನಟುವರ ಜನಾಂಗದಿಂದ ಬಂದ ಮಹಾಜ್ಞಾನಿ ಅಲ್ಲಮಪ್ರಭುಗಳ ಸಮ್ಮುಖದಲ್ಲಿ ತಮ್ಮ ಕಾಯಕಗಳ ಅನುಭವದ ಆಧಾರದಲ್ಲೇ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ.

ನಟುವರ ಜನಾಂಗದ ಮಹಾಜ್ಞಾನಿಯ ಅಧ್ಯಕ್ಷತೆಯಲ್ಲಿ ಅಸ್ಪೃಶ್ಯರನ್ನು ಮತ್ತು ಶೂದ್ರರನ್ನು ಸಂಘಟಿಸಿ ವರ್ಣ, ಜಾತಿ, ವರ್ಗ ಮತ್ತು ಲಿಂಗಭೇದ ವಿರೋಧಿ ಅನುಭವ ಮಂಟಪವನ್ನು ರಚಿಸಿದ ಬಸವಣ್ಣನವರ ಮಹಾ ಯೋಜನೆಯನ್ನು ಮೀರಿಸುವಂಥದ್ದು ಜಗತ್ತಿನ ಇತಿಹಾಸದಲ್ಲಿ ಎಲ್ಲಿಯಾದರೂ ನಡೆದಿದೆಯೆ? ಶರಣರ ಅನುಭಾವ ಎಂಬುದು ವೈದಿಕರ ಮತ್ತು ಪಾಶ್ಚಿಮಾತ್ಯರ ಮೆಟಾಫಿಜಿಕ್ಸ್ ಅಲ್ಲ. ಅದು ಎಲ್ಲ ರೀತಿಯ ಅಸಮಾನತೆಯನ್ನು ನಾಶ ಮಾಡುವಂಥದ್ದು! ಅನುಭವ ಮಂಟಪದಲ್ಲಿ ಕಾಯಕ ಜೀವಿಗಳ ಅನುಭವದ ಮೂಲಕ ಅನುಭಾವದ ಸಾಕ್ಷಾತ್ಕಾರ ಆಗುತ್ತಿತ್ತು. ಹೀಗೆ ಅನುಭವ ಮಂಟಪದಲ್ಲಿ ಶರಣರ ಅನುಭವದ ಮೂಲಕವೇ ಅನುಭಾವ ಸೃಷ್ಟಿಯಾಗುತ್ತಿತ್ತು. ಶರಣರ ಅನುಭವ ಮಕರಂದದ ಹಾಗೆ. ಅನುಭವ ಮಂಟಪದ ಚರ್ಚೆಯ ಪರಿಣಾಮವಾದ ಅನುಭಾವವು ಜೇನಿನ ಹಾಗೆ. ಹೀಗೆ ಅದು ಶರಣರ ಅನುಭವ ಮಂಟಪ ಆಗಿದೆ.

ಮಂಟಪಕ್ಕೆ ಸಭೆ ಎಂಬ ಅರ್ಥವೂ ಇದೆ. ಮಂಟಪಕ್ಕೆ ಬಾಗಿಲುಗಳು ಇರುವುದಿಲ್ಲ. ಅಲ್ಲಿ ಎಲ್ಲಾ ವರ್ಣಗಳು, ಎಲ್ಲ ಜಾತಿಗಳ ಮೂಲದ ಶರಣ ಶರಣೆಯರಿಗೆ ಪ್ರವೇಶವಿತ್ತು. ಅವರೆಲ್ಲ ಇಷ್ಟಲಿಂಗಧಾರಿಗಳಾಗಿ ಜಾತಿ ಕುರುಹುಗಳನ್ನು ಕಳೆದುಕೊಂಡು ಲಿಂಗಭೇದವನ್ನು ಅಲ್ಲಗಳೆದು ನವಮಾನವರಾಗಿದ್ದರು. ಹೆಣ್ಣು ಗಂಡುಗಳು ಕೂಡಿ ಸಮೂಹ ಚರ್ಚೆಯಲ್ಲಿ ಭಾಗವಹಿಸುವ ಮನ್ವಂತರ ಅನುಭವ ಮಂಟಪದಲ್ಲಿ ಪ್ರಾರಂಭವಾಯಿತು.

ದುಡಿಯುವ ಜನರು ಮೊದಲ ಬಾರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಆನಂದವನ್ನು ಅನುಭವಿಸಿದರು. ಹೆಣ್ಣುಮಕ್ಕಳು ನಿಜದ ನೆಲೆಯಲ್ಲಿ ನಿಂತು ಪುರುಷರನ್ನು ಪ್ರಶ್ನಿಸಿದ್ದು ಅನನ್ಯವಾಗಿತ್ತು ಎಂಬುದು ಅವರ ವಚನಗಳಿಂಲೇ ಊಹಿಸಬಹುದು. ದಲಿತ, ಹಿಂದುಳಿದ ಕಾಯಕ ಜೀವಿಗಳು ಅನುಭವ ಮಂಟಪದ ವಾತಾವರಣದಲ್ಲಿ ನವ ಚೈತನ್ಯ ಹೊಂದಿದರು. ಕಾಯಕದ ಮೂಲಕವೇ ಬಡತನವನ್ನು ಮೆಟ್ಟಿನಿಂತು ಅರಿವಿನ ಶ್ರೀಮಂತಿಕೆ ಪಡೆದರು.

ಸಮಾಜದಲ್ಲಿ ಇದರಿಂದಾಗಿ ಭಾರೀ ಬದಲಾವಣೆಯಾಯಿತು. ಎಲ್ಲಿ ನೋಡಿದಲ್ಲಿ ಜನ ಬಸವಾ ಬಸವಾ ಎನ್ನುವಂಥ ವಾತಾವರಣ ಸೃಷ್ಟಿಯಾಯಿತು‌. ದುಡಿಯುವ ಜನರ ಒಗ್ಗಟ್ಟನ್ನು ನೋಡಿ ಮನುಧರ್ಮ ಸಿಂಹಾಸನ ಮತ್ತು ರಾಜಸಿಂಹಾಸನ ಅಲುಗಾಡತೊಡಗಿದವು. ಮನುವಾದಿಗಳು ಇಲ್ಲಿಯೆ ಬೆಚ್ಚಿಬಿದ್ದದ್ದು. ಅವರು ಬುಸುಗುಟ್ಟುವ ಕ್ಷಣಕ್ಕಾಗಿ ಕಾಯುತ್ತಿದ್ದರು. ಅನುಭವ ಮಂಟಪ ಕಾಯಕಜೀವಿಗಳ ಯಶಸ್ಸಿನ ಸಂಕೇತವಾಗಿತ್ತು. ಇಂಥ ಚೇತೋಹಾರಿ ವಾತಾವರಣದಲ್ಲಿಯೆ ಸಮಗಾರ ಹರಳಯ್ಯನವರ ಮಗ ಶೀಲವಂತ ಮತ್ತು ಬ್ರಾಹ್ಮಣ ಮೂಲದ ಮಧುವರಸರ ಮಗಳು ಲಾವಣ್ಯಳ ಮದುವೆಯಾಯಿತು. ಈ ಮದುವೆ, ಜಾತಿ ವಿನಾಶ ಮಾಡಿದ ಲಿಂಗವಂತರ ಮದುವೆ ಆಗಿತ್ತು. ಆದರೆ ಮನುವಾದಿಗಳು ‘ಇದು ಬ್ರಾಹ್ಮಣ ಕನ್ಯೆಯನ್ನು ಅಸ್ಪೃಶ್ಯ ಮದುವೆಯಾದ ಕಾರಣ ಮನುಸ್ಮೃತಿಯ ಪ್ರಕಾರ ವಿಲೋಮ ವಿವಾಹವಾಗಿದ್ದು ಇದರಿಂದ ಧರ್ಮಗ್ಲಾನಿಯಾಗುವುದು’ ಎಂದು ಕ್ಯಾತೆ ತೆಗೆದರು. ಬಿಜ್ಜಳ ದೊರೆ ರಾಜಧರ್ಮ ಪಾಲಿಸಬೇಕೆಂದು ಹಟ ಹಿಡಿದರು.

ರಾಜಧರ್ಮ ಎಂದರೆ ವರ್ಣಾಶ್ರಮ ಧರ್ಮವಾದ ವೈದಿಕ ಧರ್ಮಕ್ಕೆ ಚ್ಯುತಿ ಬಾರದಂತೆ ರಾಜನು ರಾಜ್ಯವಾಳುವುದು. ಈ ವಿಲೋಮ ವಿವಾದದಿಂದಾಗಿ, ‘ಬಿಜ್ಜಳ ರಾಜಧರ್ಮವನ್ನು ಪಾಲಿಸುತ್ತಿಲ್ಲ’ ಎಂದು ಗುಲ್ಲೆಬ್ಬಿಸಿದರು. ಕೊನೆಗೂ ಮನುವಾದಿಗಳು ಶಾಸ್ತ್ರ ಮುಂದಿಟ್ಟು ಬಿಜ್ಜಳನ ಕಿವಿ ಊದುವಲ್ಲಿ ಸಫಲರಾದರು. ವೈದಿಕರ ಶಾಸ್ತ್ರಗಳ ಆಜ್ಞೆಯನ್ನು ಬಿಜ್ಜಳನ ಶಸ್ತ್ರಗಳು ಪಾಲಿಸಿದವು. ಶರಣರ ಮೇಲೆ ನಡೆದ ಪ್ರತಿಕ್ರಾಂತಿಯಲ್ಲಿ ಸಹಸ್ರಾರು ವಚನಕಟ್ಟುಗಳು ಬೆಂಕಿಗೆ ಆಹುತಿಯಾದವು. ಅನೇಕ ಶರಣರು ಸಾವು ನೋವಿಗೆ ಈಡಾದರು. ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶರಣರು ಚೆಲ್ಲಾಪಿಲ್ಲಿಯಾಗಿ ಹೋದರು.

ಹೀಗೆ 12ನೇ ಶತಮಾನದ ಕಾಯಕಜೀವಿಗಳ ಅನುಭವ ಮಂಟಪವನ್ನು ಮನುವಾದಿಗಳು ಹಾಳು ಮಾಡಿ ಅವೈದಿಕ ನವಸಮಾಜದ ನಿರ್ಮಾಣವನ್ನು ಸ್ಥಗಿತಗೊಳಿಸಿದರು! ಇದನ್ನೆಲ್ಲ ವೀಣಾ ಬನ್ನಂಜೆ ಅಂಥವರಿಗೆ ಯಾರು ಹೇಳಬೇಕು?
ಜಾಣಗಿವುಡರಿಗೆ ಹೇಳಲು ಸಾಧ್ಯವೆ?

ಇನ್ನು ಕೆಲವರು ವೀಣಾ ಬನ್ನಂಜೆ ಅವರಿಗೆ ಏಕವಚನದಲ್ಲಿ ಟೀಕಿಸುತ್ತಿದ್ದಾರೆ. ಅದು ಸಲ್ಲದು. ಸಾಧ್ಯವಾದರೆ ಅವರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುವುದು. ಅದಾಗದಿದ್ದರೆ ಸುಮ್ಮನಿರುವುದು ಒಳ್ಳೆಯದು. ಶರಣ ಸಂಸ್ಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ಸರಿ ಅಲ್ಲ.

Advertisements

SANJEDARPANA Vachana Belaku Ramjan Darga
ರಂಜಾನ್‌ ದರ್ಗಾ
+ posts

ಸಾಹಿತಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಸಂವಾದ ಚಾನಲ್ ನ ಒಂದು ಆರಾಧ್ಯ ಎನ್ನುವವನು ಕಳೆದೆರಡು ದಿನಗಳಿಂದ ಇದೇ ವಿಷಯವಾಗಿ ರಂಜಾನ್ ದರ್ಗಾ ಮೇಲೆ ಅಸಭ್ಯವಾಗಿ ದಾಳಿ ಮಾಡುತ್ತಿದೆ,,, ಇವನು ಲಂಗೋಟಿ ಚೌಕಿದಾರ, ಅವನಿಗೆ ನಿಜ ದ್ವೇಷ ಇರುವುದು ಬಸವತತ್ವಗಳ ಮೇಲೆ ಅದನ್ನು ಅಪರೋಕ್ಷವಾಗಿ ಕಾರಿಕೊಳ್ಳುತ್ತಿದೆ

  2. ವೀಣಾ ಬನ್ನಂಜೆ ಅವರು ಬಹುಶಃ ಬನ್ನಂಜೆ ಗೋವಿಂದಚಾರ್ಯರ ಮಗಳಿರಬಹುದು. ಬನ್ನಂಜೆ ಗೋವಿಂದಚಾರ್ಯ ಎಂತಹ ವ್ಯಕ್ತಿ ಎಂದರೆ ಕನ್ನಡದ ಖ್ಯಾತ ನಟ ವಿಷ್ಣುವರ್ಧನ ಅವರಿಗೆ ವ್ಯವಹಾರದಲ್ಲಿ ತಪ್ಪು ಮಾರ್ಗದರ್ಶನ ನೀಡಿ ಅವರನ್ನು ದಿವಾಳಿ ಎಬ್ಬಿಸಿದರು. ವಿಷ್ಣುವರ್ಧನ್ ಅವರು ಗೋವಿಂದಚ್ಯಾರ್ಯರನ್ನು ತಮ್ಮ ಆಧ್ಯಾತ್ಮಿಕ ಗುರುಗಳೆಂದು ಒಪ್ಪಿಕೊಂಡಿದ್ದರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ: SIT ತನಿಖೆ ನಿಷ್ಪಕ್ಷಪಾತವಾಗಿ ಮುಂದುವರಿಸಲು ಸರ್ಕಾರಕ್ಕೆ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಆಗ್ರಹ

ಧರ್ಮಸ್ಥಳದಲ್ಲಿ ನಡೆದಿರುವ ಮಹಿಳೆಯರ ನಾಪತ್ತೆ, ಅತ್ಯಾಚಾರ ಮತ್ತು ಬರ್ಬರ ಕೊಲೆಗಳ ಪ್ರಕರಣಗಳ...

ಪಿಒಪಿ ಬಳಸಲ್ಲ ಎಂದು ಗಣೇಶೋತ್ಸವ ಸಮಿತಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಿ: ಈಶ್ವರ ಖಂಡ್ರೆ ಸೂಚನೆ

ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪಿಒಪಿ ಗಣಪತಿ ಮೂರ್ತಿ ಬಳಸುವುದಿಲ್ಲವೆಂದು ಪೆಂಡಾಲ್‌ಗೆ ಅನುಮತಿ ನೀಡುವ...

ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್‌ ವಶಕ್ಕೆ, ಬ್ರಹ್ಮಾವರ ಪೊಲೀಸ್ ಠಾಣೆ ಸುತ್ತ ಒಂದು ದಿನದ ನಿಷೇಧಾಜ್ಞೆ ಜಾರಿ

ಮಹೇಶ್ ಶೆಟ್ಟಿ ತಿಮರೋಡಿ ತೀವ್ರ ವಿಚಾರಣೆಯ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ...

Download Eedina App Android / iOS

X