ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಹರನಾಳ ಗ್ರಾಪಂನಲ್ಲಿ ನಡೆದ ದೌರ್ಜನ್ಯ ಹಾಗೂ ನಿರಂತರ ಅವ್ಯವಹಾರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತು.
ಪಟ್ಟಣದ ಮೊಹರೆ ವೃತ್ತದಿಂದ ಮೆರವಣಿಗೆ ಮೂಲಕ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ದಸಂಸ ಮುಖಂಡರು, “ಗ್ರಾ.ಪಂ.ಯ 15ನೇ ಹಣಕಾಸು ಯೋಜನೆ ಅನುದಾನ, ಪ್ರವರ್ಗ-1ರ ಸದಸ್ಯರ ಗೌರವಧನ ಹಾಗೂ ಹೆಸ್ಕಾಂ ಇಲಾಖೆಗೆ ತುಂಬಬೇಕಾದ ಸುಮಾರು 18 ತಿಂಗಳ ವಿದ್ಯುತ್ ಬಿಲ್ ಸೇರಿದಂತೆ ಸುಮಾರು ವರ್ಷಗಳಿಂದ ಇದೇ ರೀತಿ ಹಲವು ಕಾಮಗಾರಿ ಮಾಡದೆ ಬೋಗಸ್ ಬಿಲ್ ತೆಗೆದಿದ್ದು, ಹರನಾಳ ಹಾಗೂ ಇಂಗಳಗಿ ಗ್ರಾಮದ ದಲಿತರ ಕಾಲೋನಿಯ ರಸ್ತೆ, ಚರಂಡಿ, ಬೀದಿ ದೀಪ ಅಭಿವೃದ್ಧಿ ಮಾಡಲಾರದೆ ಬೋಗಸ್ ಬಿಲ್ ಎತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಭಿವೃದ್ಧಿ ಅಧಿಕಾರಿ ಅಧ್ಯಕ್ಷರು ಹಾಗೂ ಇನ್ನಿತರ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅಭಿವೃದ್ಧಿ ಕಾಮಗಾರಿಗೆ ಬಳಸಬೇಕಾದ ಹಣವನ್ನು ಮರಳಿ ಸರ್ಕಾರದ ಖಾತೆಗೆ ಜಮೆ ಮಾಡಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅನ್ಯಾಯವನ್ನು ಕೇಳಲು ಹೋದ ದಲಿತ ಸಂಘರ್ಷ ಸಮಿತಿಯ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅಧ್ಯಕ್ಷ ಹಾಗೂ ಮುಖಂಡರ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ವಿಜಯಪುರ | ಏ.1ರಿಂದ ₹10,000 ಗೌರವಧನ ನೀಡುವಂತೆ ಆಶಾ ಕಾರ್ಯಕರ್ತೆಯರ ಆಗ್ರಹ
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ರಮೇಶ ಆಸಂಗಿ, ಜಿಲ್ಲಾ ಸಂಚಾಲಕ ಪ್ರಕಾಶ ಗುಡಿಮನಿ, ಪದಾಧಿಕಾರಿಗಳಾದ ವಿನಾಯಕ ಗುಣಸಾಗರ, ಅಶೋಕ ಚಲವಾದಿ, ಪರಶುರಾಮ ತಳವಾರ, ರಾಜಕುಮಾರ ಸಿಂದಗೇರಿ, ಮಂಜುನಾಥ ಯಂಟಮಾನ, ರಾವತ ಮಾಸ್ತಾರ ತಳಕೇರಿ, ಬಸವರಾಜ ಇಂಗಳಗಿ, ಪರಶುರಾಮ ಬಡಿಗೇರ, ಅಶೋಕ ಗುಡಿಸಲಮನಿ, ಪ್ರಕಾಶ ಶಾಂತಗಿರಿ, ರಾಜು ಮೆಟಗಾರ.ಪಿಂಟೂ ಬಾಸುತ್ತರ ಸೇರಿದಂತೆ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.