ಕಳೆದೊಂದು ವಾರದಿಂದ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಇನ್ನೂ ನಾಲ್ಕೈದು ದಿನ ಮಳೆ ಮುಂದುವರೆಯಲಿದ್ದು, ಕರ್ನಾಟಕದ 12 ಜಿಲ್ಲೆಗಳಲ್ಲಿ ಏಪ್ರಿಲ್ 3ರವರೆಗೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮಾರ್ಚ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದು ಇಲಾಖೆ ಹೇಳಿದೆ. ವಾಡಿಕೆಯಂತೆ ರಾಜ್ಯದಲ್ಲಿ ಸರಾಸರಿ 8.8 ಸೆಂ.ಮೀ. ಮಳೆಯಾಗಬೇಕು. ಆದರೆ, ಈ ಬಾರಿ 14.8 ಸೆಂ.ಮೀ. ಮಳೆಯಾಗಿದೆ ಎಂದು ತಿಳಿಸಿದೆ.
ಮಾರ್ಚ್ ಅಂತ್ಯ ಮತ್ತು ಏಪ್ರಿಲ್ ಆರಂಭದಲ್ಲಿಯೂ ಮಳೆಯಾಗಲಿದ್ದು, ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳು, ದಕ್ಷಿಣ ಒಳನಾಡುವ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಏಪ್ರಿಲ್ 3ರವರೆಗೆ ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ.
ಕಳೆದ ಗುರುವಾರ ಕೊಡಗು ಜಿಲ್ಲೆಯಲ್ಲಿ 5 ಸೆಂ.ಮೀ ಮಳೆಯಾಗಿದೆ. ಮುಂದಿನ ದಿನಗಳಲ್ಲಿ, ಕೊಡಗು ಸೇರಿದಂತೆ ಮಲೆನಾಡು ಪ್ರದೇಶದಲ್ಲಿ ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆಗಳಿವೆ.