ನೋಯ್ಡಾದ ವಿಚ್ಛೇದಿತ ವ್ಯಕ್ತಿಯೊಬ್ಬರು ಮತ್ತೊಮ್ಮೆ ಪ್ರೀತಿಯ ಹುಡುಕಾಟಕ್ಕೆ ಇಳಿದು 6.3 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ವಿಚ್ಛೇದನವಾದ ಬಳಿಕ ಡೇಟಿಂಗ್ ಆ್ಯಪ್‌ನಲ್ಲಿ ಹೊಸ ಪ್ರೇಯಸಿಯ ಶೋಧಕ್ಕೆ ಇಳಿದ ಈ ವ್ಯಕ್ತಿ ತನ್ನ ಜೀವನದಲ್ಲಿ ಮಾಡಿದ ಎಲ್ಲಾ ಉಳಿತಾಯವನ್ನು ಕಳೆದುಕೊಂಡ ಬಳಿಕ ಮೋಸ ಹೋದ ಅರಿವಾಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ವಿಚ್ಛೇದನದ ಬಳಿಕ ದಲ್ಜಿತ್ ಸಿಂಗ್ ಡೇಟಿಂಗ್ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು ಹೊಸ ಪ್ರೇಯಸಿಯ ಹುಡುಕಾಟದಲ್ಲಿ ತೊಡಗಿದರು. ಕಳೆದ ವರ್ಷ ಯುವತಿಯ ಪ್ರೊಫೈಲ್ ಮ್ಯಾಚ್ ಆಗಿದ್ದು, ಸ್ನೇಹ ಬೆಳೆದಿದೆ. ಯುವತಿ ಆರಂಭದಲ್ಲಿ ನಂಬಿಕೆ ಬೆಳೆಸಿಕೊಂಡು ಬಳಿಕ ಹೂಡಿಕೆ ಹೆಸರಿನಲ್ಲಿ ಹಣ ಎಗರಿಸಿದ್ದಾಳೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಎಲ್ಲ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಸೈಬರ್ ಅಪರಾಧಗಳ ಕುರಿತು ತರಬೇತಿ: ಸಚಿವ ಪರಮೇಶ್ವರ್
ದೆಹಲಿ ಮೂಲದ ಸಂಸ್ಥೆಯ ನಿರ್ದೇಶಕರಾಗಿರುವ ದಲ್ಜೀತ್ ಸಿಂಗ್ ಅವರಿಗೆ ಡಿಸೆಂಬರ್‌ನಲ್ಲಿ ಡೇಟಿಂಗ್ ಆ್ಯಪ್‌ನಲ್ಲಿ ಹೈದಾರಾಬಾದ್ ಮೂಲದವರು ಎನ್ನಲಾದ ಅನಿತಾ ಎಂಬ ಯುವತಿಯ ಪ್ರೊಫೈಲ್ ಮ್ಯಾಚ್ ಆಗಿದೆ. ಆರಂಭದಲ್ಲಿ ಇಬ್ಬರೂ ಸಾಮಾನ್ಯವಾಗಿ ಮಾತನಾಡುತ್ತಿದ್ದು, ಬಳಿಕ ಸ್ನೇಹಿತರಾಗಿದ್ದಾರೆ.
ದಲ್ಜೀತ್ ಭರವಸೆ ಗೆದ್ದ ಬಳಿಕ ಅನಿತಾ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸುವ ಮೂರು ಸಂಸ್ಥೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ದಲ್ಜೀತ್ ಆರಂಭದಲ್ಲಿ ಒಂದು ವೆಬ್‌ಸೈಟ್ ಮೂಲಕ 3.2 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದು ಕೆಲವೇ ಗಂಟೆಗಳಲ್ಲಿ 24 ಸಾವಿರ ರೂಪಾಯಿ ಲಾಭ ಗಳಿಸಿದ್ದಾರೆ. ದಲ್ಜೀತ್ ತನ್ನ ಬ್ಯಾಂಕ್ ಖಾತೆಗೆ ಎಂಟು ಸಾವಿರ ರೂಪಾಯಿ ವರ್ಗಾಯಿಸಿದ್ದರು.
ಇದಾದ ಬಳಿಕ ಅನಿತಾ ತನಗೆ ಸಹಾಯ ಮಾಡುತ್ತಿದ್ದಾಳೆ, ನನ್ನ ಉತ್ತಮ ಸ್ನೇಹಿತೆ ಎಂದು ನಂಬಿದ ದಲ್ಜೀತ್ 4.5 ಕೋಟಿ ರೂಪಾಯಿ ಉಳಿತಾಯವನ್ನು ಹೂಡಿಕೆ ಮಾಡುವ ಖಾತೆಗೆ ವರ್ಗಾಯಿಸಿದ್ದಾರೆ. ಅನಿತಾ ಹೇಳಿದ ಕಾರಣಕ್ಕೆ ಎರಡು ಕೋಟಿ ರೂಪಾಯಿ ಸಾಲವನ್ನೂ ಪಡೆದು ಹೂಡಿಕೆ ಮಾಡಿದ್ದಾರೆ. ದಲ್ಜೀತ್ ಒಟ್ಟಾಗಿ 6.5 ಕೋಟಿ ರೂಪಾಯಿ ಮೊತ್ತವನ್ನು 30 ಬಾರಿ 25 ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಸೈಬರ್ ಕ್ರೈಮ್ | ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗೆ 90 ಲಕ್ಷ ರೂ. ವಂಚನೆ
ದಲ್ಜೀತ್ ತಾನು ಹೂಡಿಕೆ ಮಾಡಿದ ಮೊತ್ತವನ್ನು ವಿತ್‌ಡ್ರಾ ಮಾಡಲು ಪ್ರಯತ್ನಿಸಿದಾಗ ತಾನು ಹೂಡಿಕೆ ಮಾಡಿದ ಮೊತ್ತದ ಶೇಕಡ 30ರಷ್ಟು ಹಣವನ್ನು ಮಾತ್ರ ವರ್ಗಾಯಿಸುವಂತೆ ವೆಬ್‌ಸೈಟ್‌ನಲ್ಲಿ ಸೂಚಿಸಲಾಗಿದೆ. ಅದಾದ ಬಳಿಕ ಸಂಪರ್ಕವೇ ಕಡಿತವಾಗಿದೆ. ವೆಬ್‌ಸೈಟ್ ಕೂಡಾ ಸರ್ವರ್ ಡೌನ್ ಎಂದು ಬರಲು ಆರಂಭಿಸಿದೆ.
ಇಷ್ಟೆಲ್ಲಾ ಆದ ಬಳಿಕ ಸಂಶಯಗೊಂಡ ದಲ್ಜೀತ್ ನೋಯ್ಡಾ ಸೈಬಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ನಡೆಸಿದಾಗ ಅನಿತಾ ಎಂಬ ಹೆಸರಿನ ಡೇಟಿಂಗ್ ಆ್ಯಪ್ ಪ್ರೊಫೈಲ್ ನಕಲಿ ಎಂದು ತಿಳಿದುಬಂದಿದೆ. ಪೊಲೀಸರು ಸದ್ಯ ದಲ್ಜೀತ್ ಹಣ ವರ್ಗಾಯಿಸಿದ ಖಾತೆಗಳ ಬಗ್ಗೆ ಮಾಹಿತಿ ಕಳೆಹಾಕುತ್ತಿದ್ದಾರೆ.
ಹೆಚ್ಚುತ್ತಿರುವ ಸೈಬರ್ ಕ್ರೈಮ್ ಪ್ರಕರಣಗಳ ಸಂಖ್ಯೆ
ದೇಶದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲೂ ಕರ್ನಾಟದಲ್ಲಿ, ಪ್ರಮುಖವಾಗಿ ಬೆಂಗಳೂರಿನಲ್ಲಿ ಇಂತಹ ಸೈಬರ್ ಕ್ರೈಮ್ ಪ್ರಕರಣಗಳು ಅಧಿಕಗೊಳ್ಳುತ್ತಿವೆ. 2023ರಲ್ಲಿ ಕರ್ನಾಟಕದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿ 22,224ಕ್ಕೆ ತಲುಪಿದೆ. 2024ರಲ್ಲಿ 22,415 ಕೇಸುಗಳು ದಾಖಲಾಗಿವೆ. 2025ರಲ್ಲಿ ಫೆಬ್ರವರಿವರೆಗೆ ರಾಜ್ಯದಲ್ಲಿ 2,251 ಪ್ರಕರಣಗಳು ಬೆಳಕಿಗೆ ಬಂದಿವೆ. ಅದರಲ್ಲೂ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟು 60,000 ಸೈಬರ್ ಕ್ರೈಮ್ ಸಂಬಂಧಿತ ದೂರುಗಳು ದಾಖಲಾಗಿವೆ.
