ಪವಿತ್ರ ರಂಜಾನ್ ತಿಂಗಳ ಉಪವಾಸದ ಪ್ರಯುಕ್ತ ಹುಬ್ಬಳ್ಳಿಯ ಕುಮಾರಣ್ಣ ಪಾಟೀಲ ಅವರ ನಿವಾಸದಲ್ಲಿ ಇಫ್ತಿಯಾರ್ ಕೂಟ ಏರ್ಪಡಿಸಿದ್ದರು. ಈ ಇಫ್ತಿಯಾರ್ ಕೂಟದಲ್ಲಿ ಮುಸ್ಲಿಮರು, ಕ್ರಿಷ್ಚಿಯನ್, ಮರಾಠ, ಪರಿಶಿಷ್ಟ ಜಾತಿ ಸಮುದಾಯ, ಬೌದ್ಧರು, ಲಿಂಗಾಯತ ಹೀಗೆ ಎಲ್ಲ ಸಮುದಾಯದವರೂ ಭಾಗವಹಿಸಿದ್ದರು. ಪ್ರಾರಂಭದಲ್ಲಿ ರಾಚಪ್ಪ ಕುಬಸದ ವಚನ ಪ್ರಾರ್ಥನೆ ಮಾಡಿದರು. ಅದರೊಂದಿಗೆ ಕುರಾನ್ ಮತ್ತು ಬೈಬಲ್ ಪಠಣದ ಮೂಲಕ ಕಾರ್ಯಕ್ರಮವನ್ನು ಪ್ರಾರಂಬಿಸಿದರು.
ಇಫ್ತಿಯಾರ್ ಕೂಟ ಏರ್ಪಡಿಸಿದ್ದ ಕುಮಾರಣ್ಣ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, 12 ನೇ ಶತಮಾನದಲ್ಲಿ ನೂರಾರು ಶರಣರು ಸೇರಿ ಸಮಸಮಾಜಕ್ಕಾಗಿ ಅನುಭವ ಮಂಟಪದಲ್ಲಿ ಚರ್ಚೆ ಮಾಡುತ್ತಿದ್ದರು. ನಾವು ಕೂಡಾ ಅಣ್ಣ ತಮ್ಮಂದಿರಂತೆ ಬದುಕಬೇಕು. ಪರಸ್ಪರ ಸೌಹಾರ್ದಯುತವಾಗಿ ವ್ಯವಹರಿಸಬೇಕು. ಮತ್ತು ಒಂದಾಗಿ ನಮ್ಮ ಸಮಸ್ಯೆಗಳ ಕುರಿತು ಚರ್ಚಿಸಬೇಕು. ನಾವೆಲ್ಲ ಭಾರತೀಯರಾದ ಕಾರಣ; ಒಂದಾಗಿ ಬಾಳಬೇಕು ಎಂದರು.
ಈ ಸಂದರ್ಶಭದಲ್ಲಿ ಶಮೀಮ್ ಮುಲ್ಲಾ ಮಾತನಾಡಿ, ಬರೀ ಉಪವಾಸ ಮಾಡಿದರೆ ಮಾತ್ರ ಸ್ವರ್ಗ ಸಿಗೋದಿಲ್ಲ. ನಮಾಜ್, ರೋಜಾ, ಜಕಾತ್’ಗಳನ್ನೂ ಪ್ರಾಮಾಣಿಕವಾಗಿ ಮಾಡಿದರಷ್ಟೆ ಅದು ದೇವರಿಗೆ ಮುಟ್ಟುತ್ತದೆ. ಯಾವ ಧರ್ಮವೂ ಇನ್ನೊಂದು ಧರ್ಮವನ್ನು ದ್ವೇಷ ಮಾಡಲು ಹೇಳಿಲ್ಲ. ಮಹಮ್ಮದ್ ಪೈಗಂಬರ್ ವಿಚಾರಗಳು ಬಸವಣ್ಣನವರ ವಿಚಾರಗಳು ಒಂದೆ ಆಗಿದ್ದವು ಎಂದರು.
ಗಂಗಾಧರ್ ಪೆರೂರ್ ಮಾತನಾಡಿ, ನಾವೆಲ್ಲ ಸಹೋದರರಂತೆ ಬದುಕುತ್ತಿದ್ದೇವೆ. ನಮ್ಮ ವಿರೋಧಿಗಳಿಗೆ ನಾವೆಲ್ಲಾ ಒಂದಾಗಿದ್ದೇವೆ ಎನ್ನುವ ಸಂದೇಶವನ್ನು ನಾವು ಕೊಡಬೇಕು. ಸಂವಿಧಾನದ ಆಶಯದಂತೆ ನಡೆಯೋಣ ಎಂದರು. ಹಲವಾರು ವರ್ಷಗಳಿಂದ ಕುಮಾರಣ್ಣನವರು ಜಾಗೃತಿ ಮೂಡಿಸುತ್ತಿದ್ದಾರೆ. ಇಂಥ ಕಾರ್ಯಕ್ರಮವನ್ನು ಮುಸ್ಲೀಮರು ಹೆಚ್ಚಾಗಿ ಮಾಡಿ ಸಮಾಜವನ್ನು ಜಾಗೃತಗೊಳಿಸಬೇಕು ಎಂದು ಅಬ್ದುಲ್ ಇಸಾಮದಿ ಹೇಳಿದರು.
ವಿಜಯಕುಮಾರ್ ಲುಂಜಾಲ ಮಾತನಾಡಿ, ಏಸುಕ್ರಿಸ್ತರು ನಿನ್ನ ನೆರೆಯವರನ್ನು ಪ್ರೀತಿಸು ಎಂದು ಹೇಳಿದ್ದಾರೆ. ಹಾಗೆ ನಾವೂ ಇರಬೇಕಾಗಿದೆ. ನಾನು 40 ವರ್ಷಗಳಿಂದ ಹಕವಾರು ಧಾರ್ಮಿಕ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಆದರೆ ಹೀಗೆ ಎಲ್ಲ ಧರ್ಮದ ಪ್ರತಿನಿಧಿಗಳು ಒಂದೆಡೆ ಸೇರಿ ಚರ್ಚೆ ಮಾಡಿದ್ದನ್ನು ನೋಡಿರುವುದು ಇದೇ ಪ್ರಥಮ ಎಂದು ಹರ್ಷಗೊಂಡರು.
ಸೋಮಶೇಖರ್ ಸಾಕೀನ ಡಾ.ಬಾಬಾಸಾಹೇಬ ಅಂಬೇಡ್ಕರ್ ಕುರಿತು ಒಂದು ಕವನವನ್ನು ಹೇಳಿದರು. ಚಾಂಗದೇವ್ ಸಾವಂತರು ಸಂತ ತುಕಾರಾಮರ ಅಭಂಗವನ್ನು ಹಾಡಿದರು. ಸಾದಿಕ್ ಪಠಾಣ ಪೈಗಂಬರ್’ರ ಕುರಿತ ಒಂದು ಪದ್ಯ ಹಾಡಿದರು. ಇಂದು ದೇಶದಲ್ಲಿ ಧರ್ಮ ಧರ್ಮಗಳ ಮಧ್ಯೆ, ಜನರಲ್ಲಿ ದ್ವೇಶವನ್ನು ಬಿತ್ತಲಾಗುತ್ತಿದೆ. ಇದು ನಿಲ್ಲಬೇಕಾದರೆ ಇಂಥ ಕಾರ್ಯಕ್ರಮ ಹೆಚ್ಚಾಗಬೇಕೆಂದು ಭಾಗವಹಿಸಿದ ಹನಿಫ್ ಹಿರೂರ್, ಮಹಬೂಬ್, ನದೀಮ್, ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ಫಲಹಾರ ಸೇವಿಸಿ ಅಂದಿನ ರೋಜಾ ಮುಗಿಸಿದರು.