ಅಸ್ಸಾಂನಲ್ಲಿ ರಾಜ್ಯ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ಒಂಟಿ ತಂದೆಗಳಿಗೆ ಮಕ್ಕಳ ಆರೈಕೆಗಾಗಿ ರಜೆ ನೀಡಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಶರ್ಮಾ, “ಕೆಲವೊಮ್ಮೆ ಜೀವನವು ಅನಿರೀಕ್ಷಿತ ತಿರುವುಗಳನ್ನು ಪಡೆಯಬಹುದು. ಒಬ್ಬ ಪುರುಷನು ಮಗುವಿನ ಆರೈಕೆದಾರನಾಗಬೇಕಾಗಬಹುದು. ನಮ್ಮ ರಾಜ್ಯ ಸರ್ಕಾರಿ ನೌಕರರಿಗೆ ಅಂತಹ ಸನ್ನಿವೇಶ ಎಂದಾದರೂ ಉದ್ಭವಿಸಿದರೆ, ನಾವು ನಿಮಗೆ ರಕ್ಷಣೆ ನೀಡುತ್ತೇವೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಅಸ್ಸಾಂ ಬ್ಯಾಂಕ್ ಸಂಬಂಧಿತ ಹಗರಣದಲ್ಲಿ ಸಿಎಂ ಹೆಸರು: ವರದಿ ಮಾಡಿದ್ದ ಪತ್ರಕರ್ತನ ಬಂಧನ
“ಇಂದಿನಿಂದ, ನಾವು ಒಂಟಿ ತಂದೆಗೆ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಮಕ್ಕಳ ಆರೈಕೆ ರಜೆಯನ್ನು ನೀಡುತ್ತೇವೆ” ಎಂದಿದ್ದಾರೆ.
ಶಿಶುಪಾಲನಾ ರಜೆ (ಸಿಸಿಎಲ್) ಪಡೆಯುವ ನೌಕರರು ವೇತನ ಕಡಿತ ಅಥವಾ ಉದ್ಯೋಗ ಭದ್ರತೆಯ ಬಗ್ಗೆ ಚಿಂತಿಸದೆ ತಮ್ಮ ಮಕ್ಕಳನ್ನು ನೋಡಿಕೊಳ್ಳಬಹುದೆಂದು ಖಚಿತಪಡಿಸಿಕೊಳ್ಳಲು ನೀಡಲಾದ ಪ್ರಮುಖ ನಿಬಂಧನೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಅಸ್ಸಾಂನಲ್ಲಿ, ಭಾರತದ ಇತರ ರಾಜ್ಯಗಳಂತೆ, ಮಹಿಳಾ ಸರ್ಕಾರಿ ನೌಕರರು ಅನಾರೋಗ್ಯ, ಇತರ ಅಗತ್ಯಗಳಂತ ನಿರ್ಣಾಯಕ ಅವಧಿಗಳಲ್ಲಿ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಈ ರಜೆಯನ್ನು ಪಡೆಯಬಹುದು.
ಅಸ್ಸಾಂನಲ್ಲಿ ಮಕ್ಕಳ ಆರೈಕೆ ರಜೆಯನ್ನು ಪ್ರಾಥಮಿಕವಾಗಿ ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ ನೀಡಲಾಗಿದೆ. ಇತ್ತೀಚಿನ ಸರ್ಕಾರಿ ನಿರ್ದೇಶನದ ಪ್ರಕಾರ, ಒಂಟಿ ಪೋಷಕರಾಗಿರುವ ಪುರುಷ ಸರ್ಕಾರಿ ನೌಕರರು (ವಿಧುರರು, ವಿಚ್ಛೇದಿತರು ಅಥವಾ ಅವಿವಾಹಿತ ತಂದೆ) ಸಹ ಈ ರಜೆಗೆ ಅರ್ಹರಾಗಿದ್ದಾರೆ.
