ಆಧುನಿಕತೆಯ ಅಬ್ಬರದ ಮಧ್ಯೆಯೂ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ಸಂಸ್ಕೃತಿ ಉಳಿಸುವಲ್ಲಿ ಸಹಕಾರಿಯಾಗಿವೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸಾಂವಸಗಿ ಗ್ರಾಮದಲ್ಲಿ ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಚಿಂತನಾಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
“ಪ್ರತಿಯೊಬ್ಬರೂ ಮಾನವ ಧರ್ಮದ ನೆಲೆಗಟ್ಟಿನ ಮೇಲೆ ಬದುಕು ಸಾಗಿಸುತ್ತಿದ್ದಾರೆ. ವಿವಿಧ ಧರ್ಮಗಳು ನಾಡಿನಲ್ಲಿದ್ದರೂ ಕೊನೆಗೆ ಐಕ್ಯಸ್ಥಾನ ಮಾತ್ರ ಒಂದೇ ಆಗಿದೆ. ನೊಂದ ಜೀವಗಳನ್ನು ಹಸನು ಮಾಡುವ ಶಕ್ತಿಯುಳ್ಳ ನಮ್ಮ ಸಂಸ್ಕೃತಿ ಅರ್ಥೈಸಿಕೊಳ್ಳಲು ವಿದೇಶಿಗರು ಒಲವು ತೋರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಜತೆಗೆ ಧರ್ಮದ ಜಾಗೃತಿ, ಮೌಲ್ಯ ಉಳಿಸಿ ಬೆಳೆಸಿಕೊಂಡು, ಬದುಕಿಗೆ ಅರ್ಥ ತಂದುಕೊಡುವಲ್ಲಿ ಪ್ರತಿಯೊಬ್ಬರೂ ಗಮನ ಹರಿಸಬೇಕಿದೆ” ಎಂದು ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಅಕ್ಕಿಆಲೂರಿನ ಮುತ್ತಿನಕಂತಿಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, “ಪ್ರಸ್ತುತ ಅಪಾರ ಸಂಖ್ಯೆಯ ಯುವಕರು ದುಶ್ಚಟಗಳಿಗೆ ಮಾರು ಹೋಗಿ ಅಮೂಲ್ಯ ಜೀವನ ನಾಶಪಡಿಸಿಕೊಳ್ಳುತ್ತಿದ್ದು, ಯುವಕರಿಗೆ ಬುದ್ದಿ ಹೇಳುವ ಮೂಲಕ ಅವರನ್ನು ಮತ್ತೆ ಸರಿದಾರಿಗೆ ಕರೆತರುವ ಅಗತ್ಯವಿದೆ. ಒಳ್ಳೆಯ ಮಾರ್ಗದಲ್ಲಿ ಮುನ್ನಡೆದರೆ ಜೀವನ ಅರ್ಥಪೂರ್ಣ ಎನಿಸಲಿದೆ. ಗಳಿಸಿದ್ದನ್ನು ಹಿತಮಿತವಾಗಿ ಬಳಸಿಕೊಂಡು ಪರೋಪಕಾರಿಯಾಗಿ ಸಂತೋಷ, ನೆಮ್ಮದಿಯ ಜೀವನ ನಡೆಸಲು ಸಂಕಲ್ಪಿಸಬೇಕಿದೆ. ಪ್ರತಿಯೊಬ್ಬರೂ ಕೂಡ ಧರ್ಮ ಮಾರ್ಗದಲ್ಲಿ ಮುನ್ನಡೆಯುವ ಮೂಲಕ ಸಚ್ಚಾರಿತ್ರ್ಯದ ಜೀವನ ಸಾಗಿಸುವಲ್ಲಿ ಮುಂದಾಗಬೇಕಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಬೇಸಿಗೆಯಲ್ಲಿ ಮನರೇಗಾ ಕಾರ್ಮಿಕರಿಗೆ ನಿರಂತರ ಕೆಲಸ, ಕೂಲಿ ಹೆಚ್ಚಳ: ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್
ಪ್ರಮುಖರಾದ ಜಿ ಕೆ ಪಾಟೀಲ, ಬಸವರಾಜ ಅಗಸನಹಳ್ಳಿ, ಎಂ ಎಸ್ ಬಡಿಗೇರ, ಎಫ್ ಬಿ ಈಳಿಗೇರ, ಹನುಮಂತಪ್ಪ ಈಳಿಗೇರ, ಮಹ್ಮದ್ ಹನೀಫ್ ಕಾಲೇಬಾಗ ಸೇರಿದಂತೆ ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.