ಒಳಮೀಸಲಾತಿಗೆ ಅಗತ್ಯವಾದ ವೈಜ್ಞಾನಿಕ ಸಮೀಕ್ಷೆಯನ್ನು ನಿಗದಿತ ಗಡುವಿನಲ್ಲಿ ಪೂರ್ಣಗೊಳಿಸಬೇಕು ಮತ್ತು ಅಲ್ಲಿಯವರೆಗೆ ಪರಿಶಿಷ್ಟ ಜಾತಿಗಳಿಗೆ ಅನ್ಯಾಯವಾಗದಂತೆ ನೇಮಕಾತಿಗಳನ್ನು ತಡೆಹಿಡಿಯಬೇಕೆಂದು ಸಿಪಿಐ(ಎಂ) ಕಾರ್ಯದರ್ಶಿ ಮಂಡಳಿ ಸದಸ್ಯೆ ಮತ್ತು ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಎಂದು ಆಗ್ರಹಿಸಿದ್ದಾರೆ.
ʼಪರಿಶಿಷ್ಟ ಜಾತಿಗಳ ವೈಜ್ಞಾನಿಕ ವರ್ಗೀಕರಣಕ್ಕೆ ಹೊಸ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸಲು ಮಾಡಿರುವ ಶಿಫಾರಸ್ಸು ಮುಂದಿನ ದಿನಗಳಲ್ಲಿ ಒಳಮೀಸಲಾತಿಯ ವಿವಿಧ ಪ್ರಶ್ನೆಗಳ ಮೇಲೆ ಕೋರ್ಟ್ ಮೆಟ್ಟಿಲೇರುವುದನ್ನು ತಡೆಗಟ್ಟಲು ಅಗತ್ಯವಾಗಿದೆ. ಸುಪ್ರೀಂ ಕೋರ್ಟಿನ ತೀರ್ಪು ಬಹಳ ಮುಖ್ಯವಾಗಿ ಈ ಅಂಶವನ್ನು ಆಧರಿಸಿದೆ. ಆದ್ದರಿಂದ ಆಯೋಗವು ಅಭಿಪ್ರಾಯಪಟ್ಟಿರುವ ಹಾಗೆ ಆಧುನಿಕ ಸಾಧನಗಳನ್ನು ಬಳಸಿ, ಸರ್ಕಾರವು ನಿಗದಿಪಡಿಸಿದ 60 ದಿನಗಳೊಳಗೆ, ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಬೇಕಾಗಿದೆʼ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ಸಂಬಂಧಿಸಿ ನಾಗಮೋಹನ ದಾಸ್ ಆಯೋಗವು ಮಧ್ಯಂತರ ವರದಿಯನ್ನು ನೀಡಿದೆ. ಸಮಿತಿಯು ಪ್ರಧಾನವಾಗಿ ನಾಲ್ಕು ಶಿಫಾರಸ್ಸುಗಳನ್ನು ನೀಡಿದೆ. ಈ ಶಿಫಾರಸ್ಸುಗಳನ್ನು ರಾಜ್ಯ ಸಚಿವ ಸಂಪುಟವು ಅಂಗೀಕರಿಸಿದೆ. ಆಯೋಗವು ಶಿಫಾರಸ್ಸು ಮಾಡಿರುವ ಹಾಗೇ ಮುಂದಿನ ನೇಮಕಾತಿಗಳಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯವಾಗದ ಹಾಗೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು. ಅದಕ್ಕಾಗಿ ಎರಡು ತಿಂಗಳ ಅವಧಿಗೆ ಪರಿಶಿಷ್ಟ ಜಾತಿಗಳ ಮೀಸಲು ನೇಮಕಾತಿಯನ್ನು ಮುಂದೂಡುವುದು ಅಗತ್ಯವಾಗಿದೆʼ ಎಂದು ಅಭಿಪ್ರಾಯಪಟ್ಟರು.
ʼಒಳ ಮೀಸಲಾತಿ ವಿಚಾರವು ಪ್ರಮುಖ ಹಾಗೂ ಅತ್ಯಂತ ಸಂಕೀರ್ಣವಾದ ಪ್ರಶ್ನೆಯಾಗಿದೆ. ಒಮ್ಮೆ ಜಾರಿಗೊಳಿಸಿದ ನಂತರ, ಸೂಕ್ತ ದತ್ತಾಂಶಗಳ ಕೊರತೆ ಅಥವಾ ಅವೈಜ್ಞಾನಿಕ ಸಮೀಕ್ಷೆ ಇತ್ಯಾದಿ ಕಾರಣಗಳಿಗಾಗಿ ಕೋರ್ಟಿನಲ್ಲಿ ನಕಾರಾತ್ಮಕ ಪರಿಣಾಮ ಉಂಟಾಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ಎರಡು ತಿಂಗಳ ಸಮಯದಲ್ಲಿ, ಒಳ ಮೀಸಲಾತಿ ತೀರ್ಮಾನವು ಯಾವುದೇ ಕಾನೂನಿನ ತೊಡಕುಗಳಿಗೆ ಸಿಕ್ಕಿ ತೊಳಲಾಡದಂತೆ ಮಾಡುವ ದೃಷ್ಟಿಯಿಂದ, ವೈಜ್ಞಾನಿಕ ಸಮೀಕ್ಷೆ ಮೂಲಕ ದತ್ತಾಂಶ ಸಂಗ್ರಹ ಮಾಡಲು ಎಲ್ಲ ಶಕ್ತಿಗಳು ಸಹಕಾರ ನೀಡಬೇಕುʼ ಎಂದು ಹೇಳಿದ್ದಾರೆ.